ಒಕ್ಕಲಿಗ, ಕುರುಬ, ದಲಿತರ ಬೇಡಿಕೆ ಆಯ್ತು; ಲಿಂಗಾಯತ ಸ್ವಾಮೀಜಿಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ
ಇದೀಗ ಲಿಂಗಾಯತ ಸ್ವಾಮೀಜಿಯೊಬ್ಬರೂ ತಮ್ಮ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ.
ಬೆಳಗಾವಿ: ತಮ್ಮ ಸಮುದಾಯದವರಿಗೇ ಮುಖ್ಯಮಂತ್ರಿ ಹುದ್ದೆ (CM Of Karnataka) ನೀಡಬೇಕು ಎಂಬ ಆಗ್ರಹ ರಾಜ್ಯದ ವಿವಿಧ ಸಮುದಾಯಗಳಿಂದ ವ್ಯಕ್ತವಾಗುತ್ತಿದೆ. ಈಗಾಗಲೇ ಒಕ್ಕಲಿಗ, ಕುರುಬ ಸಮುದಾಯದವರು ಸಿಎಂ ಹುದ್ದೆ ತಮ್ಮ ಸಮುದಾಯದ ನಾಯಕರಿಗೆ ನೀಡುವಂತೆ ಆಗ್ರಹಿಸಿದ್ದರೆ ಮತ್ತೊಂದೆಡೆ ದಲಿತರೂ ಅದೇ ರೀತಿಯ ಬೇಡಿಕೆ ಮುಂದಿಟ್ಟಿದ್ದಾರೆ. ಇದೀಗ ಲಿಂಗಾಯತ ಸ್ವಾಮೀಜಿಯೊಬ್ಬರೂ ತಮ್ಮ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ.
ಎಂಬಿ ಪಾಟೀಲ್ ಪರ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಸುಮಾರು 34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಜನಸಂಖ್ಯೆ, ಸಂಖ್ಯಾಬಲ ದೃಷ್ಟಿಯಿಂದ ಲಿಂಗಾಯತರಿಗೆ ಸಿಎಂ ಹುದ್ದೆ ನೀಡಬೇಕು ಎಂಬುದು ನಮ ಬೇಡಿಕೆ ಎಂದಿದ್ದಾರೆ.
ಎಂಬಿ ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೀಡಿದ ಹಲವು ಹುದ್ದೆಗಳನ್ನು ಎಂಬಿ ಪಾಟೀಲ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರಿಗೆ ಸಿಎಂ ಹುದ್ದೆ ನೀಡುವುದರಿಂದ ಕಾಂಗ್ರೆಸ್‌ಗೆ ಲಿಂಗಾಯತರ ಬೆಂಬಲ ಸದಾ ಇರಲಿದೆ. ಇದು ನಮ್ಮ ಆಶಯವೂ ಆಗಿದೆ ಎಂದು ವಿಡಿಯೋದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ: Protest For Dalit CM: ಚಿಕ್ಕಮಗಳೂರು; ಕಾಫಿನಾಡಲ್ಲಿ ಹೆಚ್ಚಾದ ದಲಿತ ಸಿಎಂ ಕೂಗು
ಇದಕ್ಕೂ ಮುನ್ನ, ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. 70 ವರ್ಷದಲ್ಲಿ ಕಾಂಗ್ರೆಸ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಈ ಬಾರಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ನಲ್ಲಿ ದಲಿತರು ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ