ಕಾರ್ಕಳದಲ್ಲಿ ಮುಗಿಯದ ಗುರು-ಶಿಷ್ಯರ ಕಾಳಗ: ಮುತಾಲಿಕ್ ವಿರುದ್ದ ಸುನಿಲ್ ಕುಮಾರ್ ವಾಗ್ದಾಳಿ
ಕರ್ನಾಟಕ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ದಿನಗಳಾದರೂ ಕಾರ್ಕಳದಲ್ಲಿ ಮಾತ್ರ ಗುರು ಶಿಷ್ಯರ ಕಾಳಗ ನಿಂತಿಲ್ಲ. ಇಂದು ಪ್ರಮೋದ್ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ: ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಬಳಿಕವು ಕಾರ್ಕಳದಲ್ಲಿ (Karkala) ಮಾತ್ರ ಹಗ್ಗ ಜಗ್ಗಾಟ ಮುಗಿದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಮೋದ್ ಮುತಾಲಿಕ್ (Pramod Muthalik) ತಮ್ಮ ಶಿಷ್ಯ ಸುನಿಲ್ ಕುಮಾರ್ (Sunil Kumar) ಎದುರೇ ತೊಡೆ ತಟ್ಟಿದ್ದರು. ಚುನಾವಣಾ ಪ್ರಚಾರದುದ್ದಕ್ಕೂ ಸುನಿಲ್ ಕುಮಾರ್ ಅವರನ್ನು ಜರದಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಚುನಾವಣೆ ಗೆದ್ದ ಬಳಿಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ಈ ಬಾರಿ ಅತ್ಯಂತ ಕುತೂಹಲ ಮೂಡಿಸಿದ್ದ ಕ್ಷೇತ್ರಗಳಲ್ಲಿ ಒಂದು. ಇಂಧನ ಸಚಿವ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಎದುರು ಕಾಂಗ್ರೆಸ್ನ ಅಭ್ಯರ್ಥಿಯೇ ಇಲ್ಲ ಎನ್ನುವ ಕಾಲದಲ್ಲಿ ಕ್ಷೇತ್ರಕ್ಕೆ ಕಾಲಿಟ್ಟ ಪ್ರಮೋದ್ ಮುತಾಲಿಕ್ ಪಕ್ಷೇತರರಾಗಿ ಸ್ಪರ್ಧೆಗೆ ನಿಂತಿದ್ದರು. ಚುನಾವಣಾ ಪ್ರಚಾರದುದ್ದಕ್ಕೂ ಸುನಿಲ್ ಕುಮಾರ್ ವಿರುದ್ಧ ನೇರ ನೇರ ವಾಗ್ದಾಳಿ ನಡೆಸಿದ ಮುತಾಲಿಕ್, ಸುನಿಲ್ ವಿರುದ್ಧ ಹೊಸ ವಿವಾದಗಳನ್ನು ಸೃಷ್ಟಿಸಿದ್ದರು.
ಅಭಿವೃದ್ಧಿ ಹೆಸರಿನಲ್ಲಿ ಕಾರ್ಕಳದಲ್ಲಿ ಸುನಿಲ್ ಕುಮಾರ್ ಏನು ಮಾಡಿಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನಗಳನ್ನ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎನ್ನುವ ದೂರುಗಳ ಜೊತೆ ಹಿಂದೂ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ. ದುರಹಂಕಾರದ ಪ್ರವೃತ್ತಿ ಮುಂದುವರೆಸಿದ್ದಾರೆ ಎನ್ನುವ ವಿವಾದವನ್ನೇ ಹುಟ್ಟು ಹಾಕಿದ್ದರು. ಸದ್ಯ ಇದೇ ಪ್ರಮೋದ್ ಮುತಾಲಿಕ್ ತಮ್ಮ ವಿರುದ್ಧ ಶಿಷ್ಯ ಸುನೀಲ್ ಕುಮಾರ್ ಮಾಡಿದ ಆರೋಪಕ್ಕೆ ದೇವರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ; ನಳಿನ್ ಕುಮಾರ್ ಕಟೀಲ್ ತವರು ಪುತ್ತೂರಲ್ಲಿ ಮೂರನೇ ಸ್ಥಾನಕ್ಕೆ ಕುಸಿತ
ಚುನಾವಣೆ ಮುಗಿಯುವವರೆಗೂ ಪ್ರಮೋದ್ ಮುತಾಲಿಕ್ ವಿರುದ್ಧವಾಗಿ ಒಂದೇ ಒಂದು ಮಾತನಾಡದ ಸುನಿಲ್ ಕುಮಾರ್, ಕಾಲ ಬಂದಾಗ ಎಲ್ಲದಕ್ಕೂ ಉತ್ತರವನ್ನು ನೀಡಲು ಸಿದ್ಧನಿದ್ದೇನೆ. ಸದ್ಯ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ನನ್ನ ಗಮನ ಹರಿಸಿದ್ದೇನೆ ಎನ್ನುವ ರೀತಿಯಲ್ಲಿ ಉತ್ತರ ನೀಡಿದ್ದರು. ಕೊನೆಗೂ ಫಲಿತಾಂಶ ಹೊರ ಬಿದ್ದು ಸುನಿಲ್ ಕುಮಾರ್ ಪ್ರತಿಸ್ಪರ್ಧಿ ಮುನಿಯಲು ಉದಯಕುಮಾರ್ ಶೆಟ್ಟಿ ಅವರನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿದ್ದರು. ಅಲ್ಲದೆ ಸಾಕಷ್ಟು ಭರವಸೆ ಮೂಡಿಸಿದ್ದ ಪ್ರಮೋದ್ ಮುತಾಲಿಕ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ್ದರು.
ಗೆದ್ದ ಬಳಿಕ ವಿಜಯೋತ್ಸವದ ಸಂಭ್ರಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುನಿಲ್ ಮಾತನಾಡುತ್ತಾ, ಪ್ರಮೋದ್ ಮುತಾಲಿಕ್ ಅವರು ಕಾಂಗ್ರೆಸ್ನವರಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ನನ್ನ ವಿರುದ್ಧ ಸಾಕಷ್ಟು ಪ್ರತಿ ತಂತ್ರಗಳನ್ನು ಹೂಡಲಾಗಿತ್ತು. ಜನರಿಗೆ ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಾ ಜನರನ್ನು ನಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಜನ ಕೊನೆಯಲ್ಲಿ ಸರಿಯಾದ ಉತ್ತರ ನೀಡಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ. ಇತ್ತ ಸುನಿಲ್ ಆರೋಪಗಳಿಗೆ ದೇವರೇ ಉತ್ತರ ನೀಡಬೇಕು ಎಂದು ನಿಟ್ಟಿನಲ್ಲಿ ಪ್ರಮೋದ್ ಮುತಾಲಿಕ್ ದೇವರ ಮೊರೆ ಹೋಗಿರುವುದು ಸದ್ಯ ಜಿಲ್ಲೆಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.
ಒಟ್ಟಾರೆಯಾಗಿ ರಾಜ್ಯದಾದ್ಯಂತ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ನಡೆಯುತ್ತಿದ್ದರೆ ಜಿಲ್ಲೆಯಲ್ಲಿ ಮಾತ್ರ ಗುರು ಶಿಷ್ಯರ ವಾಗ್ವಾದ ತಾರಕ್ಕೇರಿದೆ. ಪ್ರಮೋದ್ ಮುತಾಲಿಕ್ ಸೋಲಿಂದ ಬೇಸರಗೊಂಡು ತಮ್ಮ ಊರಿಗೆ ತೆರಳಿದ್ದರೆ ಇತ್ತ ಸುನೀಲ್ ಕುಮಾರ್ ಚುನಾವಣೆಗೂ ಮೊದಲು ಪ್ರತಿಸ್ಪರ್ಧಿಗಳು ಆಡಿದ ಒಂದೊಂದು ಮಾತಿಗೂ ಉತ್ತರ ನೀಡುತ್ತಿದ್ದಾರೆ.
ವರದಿ: ಪ್ರಜ್ವಲ್ ಅಮಿನ್, ಟಿವಿ9 ಉಡುಪಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ