ಕರ್ನಾಟಕ ಚುನಾವಣಾ ಫಲಿತಾಂಶಗಳಿಗಾಗಿ ಕಾಯುತ್ತಿರುವಾಗ ಮತದಾನ (Karnataka Assembly Election) ನಡೆದ ದಿನ (ಮೇ.10)ಸಂಭವಿಸಿದ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ. ಕಾರೊಂದಕ್ಕೆ ಸುತ್ತುವರಿದ ಜನರ ಗುಂಪ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (EVM) ನಾಶಪಡಿಸುತ್ತಿರುವ ವಿಡಿಯೊ ಇದಾಗಿದೆ. ವಿಡಿಯೊವನ್ನು ಶೇರ್ ಮಾಡಿದ ವ್ಯಕ್ತಿಯೊಬ್ಬರು, ಬಿಜೆಪಿ ನಾಯಕರ ಕಾರಿನಲ್ಲಿ ಇವಿಎಂ ಪತ್ತೆಯಾದ ನಂತರ ಸ್ಥಳೀಯರು ಗಲಾಟೆ ಮಾಡಿದ್ದಾರೆ ಎಂದು #Karnataka Elections ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ಇದೇ ರೀತಿಯ ವಾದದೊಂದಿಗೆ ವಿಡಿಯೊ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಕಾಂಗ್ರೆಸ್‌ನ ಹಿತೇಂದ್ರ ಪಿತಾಡಿಯಾ ಅವರು ಟ್ವಿಟರ್‌ನಲ್ಲಿ ವಿಡಿಯೊ ಶೇರ್ ಮಾಡಿದ್ದು, ಬಿಜೆಪಿ ನಾಯಕನ ಕಾರಿನಲ್ಲಿ ಇವಿಎಂಗಳು ಪತ್ತೆಯಾದ ನಂತರ ಸ್ಥಳೀಯರು ಗದ್ದಲ ಸೃಷ್ಟಿಸಿದರು ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂಯೋಜಕ ಪ್ರಶಾಂತ್ ಆನಂದ್ ಕೂಡ ಈ ವಿಡಿಯೊವನ್ನು ಹಂಚಿಕೊಂಡು ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ: ನೋಡಿ, ಬಿಜೆಪಿ ನಾಯಕರ ಕಾರಿನಲ್ಲಿ ಇವಿಎಂ ಪತ್ತೆಯಾದ ತಕ್ಷಣ ಸಾರ್ವಜನಿಕ ಆಕ್ರೋಶ. ಮೋದಿಯವರ ಸುಳ್ಳುಗಳಿಂದ ಜನರು ಎಷ್ಟು ವಿಚಲಿತರಾಗಿದ್ದಾರೆಂದರೆ ಅವರು ಬಿಜೆಪಿಯನ್ನು ತೊಲಗಿಸುವ ನಿಲುವು ತಳೆದಿದ್ದಾರೆ. 2024 ರ ಟ್ರೈಲರ್‌ನಂತೆ ಕಾಣುತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್..ಕರ್ನಾಟದಲ್ಲಿ ಬಿಜೆಪಿ ನಾಯಕನ ಕಾರಿನಿಂದ ಇವಿಎಂ ಪತ್ತೆಮಾಡಿದ ಗ್ರಾಮಸ್ಥರು ಎಂದು ಮಲಯಾಳಂ ಬರಹದೊಂದಿಗೆ ಇದೇ ವಿಡಿಯೊ ಕೇರಳದಲ್ಲಿ ಹರಿದಾಡಿದೆ.
ಈ ವಿಡಿಯೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ, ಈ ವೈರಲ್ ವಿಡಿಯೊ ಸುಳ್ಳಿನ ಬರಹಗಳೊಂದಿಗೆ ಶೇರ್ ಆಗುತ್ತಿದೆ ಎಂದು ಹೇಳಿದೆ. ಈ ಕಾರು ಬಿಜೆಪಿ ನಾಯಕನಿಗೆ ಸೇರಿದ್ದಲ್ಲ. ಈ ಕಾರು ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗೆ ಸೇರಿದ್ದು. ಈ ಬಗ್ಗೆ ಟಿವಿ9 ವರದಿ ಇಲ್ಲಿದೆ.
ಈ ವೈರಲ್ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ, “ಇದು ಸುಳ್ಳು. ವಾಸ್ತವವಾಗಿ. ಸೆಕ್ಟರ್ ಆಫೀಸರ್ ವಾಹನದಲ್ಲಿ ಸಾಗಿಸುತ್ತಿದ್ದ ರಿಸರ್ವ್ ಇವಿಎಂಗಳನ್ನು ಗ್ರಾಮಸ್ಥರು ತಡೆದು ಇವಿಎಂಗಳನ್ನು ಹಾನಿಗೊಳಿಸಿದರು. ಪ್ರಕರಣ ದಾಖಲಾಗಿದ್ದು, 24 ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
The incident took place at Masibinal, Bagewadi Constituency. A group of people obstructed the officials on poll duty carrying reserve EVMs, VVPATs & damaged them along with the vehicle. FIR has been registered and further legal action is being taken. https://t.co/rvLt7TG0x7
— SP Vijayapura H.D.Ananda Kumar IPS (@VIJAYAPURPOLICE) May 10, 2023
ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಕೂಡ ಇದೇ ಮಾಹಿತಿಯನ್ನು ಟ್ವೀಟ್ ಮಾಡಿ, ಈ ಘಟನೆಯಲ್ಲಿ ಬಿಜೆಪಿ ನಾಯಕರ ಕೈವಾಡ ಇಲ್ಲ ಎಂದಿದ್ದಾರೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Fri, 12 May 23