ಹಾಸನ: ಜಿಲ್ಲೆಯ ಅರಸೀಕೆರೆ ಹಾಗೂ ಹಾಸನ(Hassan) ಕ್ಷೇತ್ರಗಳ ವಿಧಾನಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ದಳಪತಿಗಳ ಮಧ್ಯೆ ನಡೆಯುತ್ತಿರುವ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಂದು(ಫಬ್ರವರಿ 12) ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹಾಸನ ಜಿಲ್ಲಾ ಪ್ರವಾಸ ಕೈಗೊಂಡು ಎಲ್ಲಾ ಗೊಂದಲಗಳಿಗೆ ತೆರೆಳೆದಿದ್ದಾರೆ. ಹಾಸನ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದ ರೇವಣ್ಣ ಕುಟುಂಬ ಶಾಂತವಾಗಿದ್ದು, ಅಂತಿಮವಾಗಿ ಕುಮಾರಸ್ವಾಮಿ ನಿರ್ಧಾರಕ್ಕೆ ಬದ್ಧವಾಗಿದೆ. ಇನ್ನು ಕುಮಾರಸ್ವಾಮಿ ಪರೋಕ್ಷವಾಗಿ ಅರಸೀಕೆರೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಅರಸೀಕೆರೆ ಕಣದ ಟಿಕೆಟ್ ಗೊಂದಲಕ್ಕೆ ಅಂತ್ಯ ಹಾಡಿದ್ದಾರೆ. ಆದ್ರೆ, ಹಾಸನ ಟಿಕೆಟ್ ಮಾತ್ರ ಇನ್ನೂ ನಿಗೂಢವಾಗಿ ಇಟ್ಟಿದ್ದಾರೆ.
ಇದನ್ನೂ ಓದಿ: ನನ್ನ ಮುಂದಿನ ನಡೆ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ
ಹೌದು…ಹಾಸನ ಹಾಗೂ ಅರಸೀಕೆರೆ ವಿಧಾನಸಭೆ ಟಿಕೆಟ್ ಫೈಟ್ ಜೋರಾದ ಹಿನ್ನೆಲೆಯಲ್ಲಿ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರು ಇಂದು (ಫೆಬ್ರವರಿ 12) ಹಾಸನ ಜಿಲ್ಲಾ ಪ್ರವಾಸ ಕೈಗೊಂಡು, ಅರಸೀಕೆರೆಯಲ್ಲಿ ಬೃಹತ್ ಸಮಾವೇಶ ಮಾಡಿದರು. ಈ ಮೂಲಕ ಶಕ್ತಿ ಪ್ರದರ್ಶನ ಮಾಡಿ ಸ್ವಪಕ್ಷದ ಹಾಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಸಮರ ಸಾರಿದರು. ಅಲ್ಲದೇ ಈ ಸಮಾವೇಶದಲ್ಲಿ ಬಾಣಾವರ ಅಶೋಕ್ ಅವರನ್ನು ಪರೋಕ್ಷವಾಗಿ ಅರಸೀಕೆರೆ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರು. ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದಾಗ ತಮ್ಮ ಪಕ್ಕದಲ್ಲಿ ನಿಂತಿದ್ದ ಅಶೋಕ್ ರತ್ತ ತಿರುಗಿ ಲಕ್ ಹೊಡೆಯುತ್ತಾ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ಗೆ ಟಿಕೆಟ್ ಎಂದರು. ಇದರೊಂದಿಗೆ ಹಾಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೆ ಶಾಕ್ ಕೊಟ್ಟು ಅರಸೀಕೆರೆ ಟಿಕೆಟ್ ಗೊಂದಲಗಳಿಗೆ ಹೆಚ್ಡಿಕೆ ಪೂರ್ಣವಿರಾಮ ಇಟ್ಟರು.
ಪರೋಕ್ಷವಾಗಿ ಅಶೋಕ್ ಅರಸೀಕೆರೆ ಅಭ್ಯರ್ಥಿ ಎಂದು ಹೆಚ್ಡಿಕೆ ಘೋಷಣೆ ಮಾಡಿದ್ದು, ಇದೀಗ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರ್ತಾರಾ? ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರಾ? ಎನ್ನುವುದೇ ಕಾದುನೋಡಬೇಕಿದೆ. ಮೂಲಗಳ ಪ್ರಕಾರ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, 3 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಅಲ್ಟರ್ನೇಟಿವ್ ನಾವು ಮಾಡಲೇ ಬೇಕಲ್ಲ. ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಪಕ್ಷದ ಚಿಹ್ನೆ ಅಡಿ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ.ಹೀಗಾಗಿ ಹೆಸರು ಘೋಷಿಸೋ ಅವಶ್ಯಕತೆಯೇ ಇಲ್ಲ. ಈಗಾಗಲೇ ಎಲ್ಲರಿಗೂ ಗೊತ್ತಿರೋ ವಿಚಾರ ಆಗಿದೆ ಎಂದು ಸ್ಪಷ್ಟಪಡಿಸಿದರು.
Published On - 6:46 pm, Sun, 12 February 23