ನನ್ನ ಮುಂದಿನ ನಡೆ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ
ನಾನು ಯಾವುದೇ ಗೊಂದಲದಲ್ಲಿ ಇಲ್ಲ, ಫೆ.12ರಂದು ಅರಸೀಕೆರೆಯಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿ ಏನು ತೀರ್ಮಾನ ಆಗುತ್ತೋ ಅದರ ಮೇಲೆ ನಾನು ನಿರ್ಧಾರ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಬೆಂಗಳೂರು: ಯಾವ ಪಕ್ಷಕ್ಕೆ ಸೇರಬೇಕು ಅಥವಾ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೇ ಎಂಬುದು ಫೆ.12ರಂದು ನಡೆಯುವ ಸಮಾವೇಶದ ನಂತರ ನಿರ್ಧಾರ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ (K.M.Shivalingegowda) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಗೊಂದಲದಲ್ಲಿ ಇಲ್ಲ. ಫೆ.12ರಂದು ಅರಸೀಕೆರೆಯಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರ ಆಧಾರದ ಮೇಲೆ ನಾನು ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ಗೆ ಹೋಗಿ ಅಂತಾ ನನ್ನ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಕ್ಷೇತ್ರದ ಜನರು ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳಿದರೆ ಅದಕ್ಕೂ ಸಿದ್ಧ ಎಂದರು.
ನನ್ನ ವಿರುದ್ಧ ಅಭ್ಯರ್ಥಿ ಕರೆತಂದು ಸಮಾವೇಶ ಮಾಡಿದರೆ ನಾನ್ಯಾಕೆ ಹೋಗಲಿ ಎಂದು ಪ್ರಶ್ನಿಸಿದ ಶಿವಲಿಂಗೇಗೌಡ, ಬೇರೆ ಪಕ್ಷ ಸೇರುವ ಬಗ್ಗೆ ಯಾರ ಜೊತೆಗೂ ನಾನು ಚರ್ಚೆ ಮಾಡಿಲ್ಲ. ನನಗೆ ಯಾಕೆ ಅಸಮಾಧಾನ ಇದೆ ಅಂತಾ ಕ್ಷೇತ್ರದ ಜನರಿಗೆ ಗೊತ್ತು. ನಾನು ಬಿಜೆಪಿಗೆ ಸೇರಲ್ಲ, ನಾನು ಇನ್ನೂ ಜೆಡಿಎಸ್ನಲ್ಲೇ ಇದ್ದೇನೆ. ನನ್ನ ವಿರುದ್ಧ ಕ್ಯಾಂಡಿಡೇಟ್ ಮಾಡಿದರೆ ಹೋಗೋಕೆ ಆಗುತ್ತಾ? ನಾನೊಬ್ಬ ಶಾಸಕ, ನನ್ನ ನಾಯಕತ್ವದಲ್ಲಿ ಸಮಾವೇಶ ಆಗಬೇಕು. ನಾನು ಫೆಬ್ರವರಿ 12ರವರೆಗೆ ನೋಡುತ್ತೇನೆ, ಅವರ ಸಮಾವೇಶ ನೋಡುತ್ತೇನೆ, ನಂತರ ಸಮಾವೇಶ ಮಾಡಿ ನಿರ್ಧರಿಸುತ್ತೇನೆ. ಈ ಅಧಿವೇಶನದೊಳಗೆ ನಾನು ನಿರ್ಧರಿಸುತ್ತೇನೆ ಎಂದರು.
ಇದನ್ನೂ ಓದಿ: ಹಾಸನ ಜೆಡಿಎಸ್ ಟಿಕೆಟ್ ಫೈಟ್ ಮಧ್ಯೆ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ.ರೇವಣ್ಣ
ಯಾವುದೋ ಒಂದು ಘಟನೆ ನಡೆಯಿತು. ಆಗಿನಿಂದ ನಾನು ಸೈಲೆಂಟಾಗಿದ್ದೇನೆ. ಇದು ನಮ್ಮ ವರಿಷ್ಠರಿಗೂ ಗೊತ್ತಿದೆ. ನನ್ನನ್ನ ಬಿಟ್ಟು ಸಮಾವೇಶ ಮಾಡುತ್ತಿದ್ದಾರೆ. ಇವರು ಸಮಾವೇಶವನ್ನ ಮಾಡಲಿ. ಆದರೆ ನಾನು ಮತದಾರರ ನಿರ್ಧಾರದ ಮೇಲೆ ಇದ್ದೇನೆ. ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಲ್ಲ, ನಾನು ಕ್ಷೇತ್ರದ ಮತದಾರರ ನಿರ್ಧಾರಕ್ಕೆ ಬದ್ಧನಾದವನು. ನಾನು ಜನರನ್ನ ಕೇಳುವ ಪ್ರಯತ್ನ ನಡೆಸಿದ್ದೆ, ಅಷ್ಟರೊಳಗೆ ಇವರು ಸಮಾವೇಶ ಮಾಡುತ್ತಿದ್ದಾರೆ ಎಂದರು.
ಒಬ್ಬ ವ್ಯಕ್ತಿ ನನಗೆ ಟಿಕೆಟ್ ಅಂತ ಹೇಳುತ್ತಾ ಓಡಾಡುತ್ತಿದ್ದಾರೆ. ಇದನ್ನ ನೋಡಿದರೆ ನಾಮಕಾವಸ್ತೆಗೆ ಕರೆಯುತ್ತಿದ್ದಾರೆ ಅನ್ನಿಸುತ್ತದೆ. ಮಾತಿಗೆ ಮಾತ್ರ ಜೆಡಿಎಸ್ನಲ್ಲೇ ಉಳಿಯಿರಿ ಅಂತಾರೆ, ಕೊನೆ ಗಳಿಗೆಯಲ್ಲಿ ಏನಾದರು ಯಡವಟ್ಟಾದರೆ ಹೇಗೆ? ಎಂದರು. ಇನ್ನು ತಮ್ಮ ಆಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಆಡು ಭಾಷೆಯಲ್ಲಿ ಮಾತಾಡುತ್ತೇನೆ, ರೆಕಾರ್ಡ್ ಮಾಡಿ ವೈರಲ್ ಮಾಡುತ್ತಾರೆ. ಒಂದು ವರ್ಷದ ಹಿಂದೆ ಮಾತನಾಡಿದ್ದನ್ನು ಈಗ ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 10 February 23