ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ, ಶ್ರೀರಾಮ ಸೇನೆ ಸಂಘಟನೆಯೊಳಗೆ ಭುಗಿಲೆದ್ದ ಭಿನ್ನಮತ
ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸಂಘಟನೆಯೊಳಗೆ ಭಿನ್ನಮತ ಭುಗಿಲೆದ್ದಿದ್ದು, ಪ್ರಮೋದ್ ಮುತಾಲಿಕ್ಗೆ ಬೆಂಬಲ ಇಲ್ಲ ಎಂದು ಶ್ರೀರಾಮ ಸೇನೆ ಮಂಗಳೂರು ವಿಭಾಗೀಯ ಅಧ್ಯಕ್ಷ ಘೋಷಣೆ ಮಾಡಿದ್ದಾರೆ.
ಉಡುಪಿ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಅಲ್ಲದೇ ಕಾರ್ಕಳದಲ್ಲಿ ಚುನಾವಣೆ ಪ್ರಚಾರದ ಕಚೇರಿಯನ್ನು ಸಹ ತೆರೆದಿದ್ದಾರೆ. ಆದ್ರೆ, ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುತ್ತಿರುವುದಕ್ಕೆ ಶ್ರೀರಾಮ ಸೇನೆ ಸಂಘಟನೆಯೊಳಗೆ ಭಿನ್ನಮತ ಭುಗಿಲೆದ್ದಿದೆ. ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆಗೆ ಶ್ರೀರಾಮಸೇನೆ ಮಂಗಳೂರು ವಿಭಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ್ ಭಟ್ ಆಗ್ರಹಿಸಿದ್ದಾರೆ.
ಇದನ್ನೂ ಒದಿ: ಕಟುಕರಿಗೆ ದನ ಕೊಡಬಾರದು: ಕಾರ್ಕಳದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಮಾತಾನಾಡಿದ ಪ್ರಮೋದ್ ಮುತಾಲಿಕ್
ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ. ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ? ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರೋಧಿಗಳು ಮುತಾಲಿಕ್ ರನ್ನು ಬಲಿಕೊಡುತ್ತಿದ್ದಾರೆ. ಬಿಜೆಪಿ ಸಂಘ ಪರಿವಾರದ ಜೊತೆ ಮಾತನಾಡಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸಬೇಕು. ಪ್ರಮೋದ್ ಮುತಾಲಿಕ್ ರಿಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮ ಸೇನ ಸಂಘಟನೆಯಿಂದ ಪ್ರತ್ಯೇಕಗೊಂಡು ಬೇಕಾದರೆ ಸ್ಪರ್ಧಿಸಲಿ. ಪ್ರಮೋದ್ ಮುತಾಲಿಕ್ ನಮ್ಮ ಗುರುಗಳು ಅವರು ಸೋಲುವುದನ್ನು ನಾವು ಬಯಸುವುದಿಲ್ಲ. ಫೆಬ್ರವರಿ 20ರಂದು ಈ ಕುರಿತು ಚರ್ಚಿಸಲು ಕಾರ್ಯಕರ್ತರ ಬೈಠಕ್ ಕರೆಯಲಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯಬೇಕೆಂದು ಮೋಹನ್ ಭಟ್ ಒತ್ತಾಯಿಸಿದರು.
ಮುತಾಲಿಕರಿಗೆ ಗೌರವ ಪೂರಕ ಸ್ಥಾನ ಮಾನ ಸಿಕ್ಕಿದರೆ ಓಕೆ. ಮುತಾಲಿಕ್ ನನಗೆ ಇನ್ನು ಮುಂದೆ ರಾಜಕೀಯ ಬೇಡ ಎನ್ನುತ್ತಿದ್ದರು. ಕೇವಲ ಸಂಘಟನೆ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದರು. ಈ ಬಾರಿ ವಿಧಾನಸೌಧ ಮೆಟ್ಟಿಲು ಏರಬೇಕು ಅನ್ನೋದು ನಮಗೂ ಆಸೆ ಇದೆ. ಆದರೆ ಕಾರ್ಕಳದಿಂದ ಸ್ಪರ್ಧಿಸಿ ಸಂಘಟನೆಯಲ್ಲಿ ಗೊಂದಲ ಉಂಟು ಮಾಡಿದ್ದಾರೆ. 20 ವರ್ಷ ಕಷ್ಟಪಟ್ಟು ಸಂಘಟನೆ ಕಟ್ಟಿದ್ದೇವೆ. ಸಂಘಟನೆ ಕಟ್ಟುತ್ತಾ ಬಂದಂತೆ ಕೆಲವರು ಹೊಡೆಯುತ್ತಾ ಹೋಗುತ್ತಾರೆ. ಮುತಾಲಿಕ್ ಸ್ಪರ್ಧೆಯಿಂದ ಕಾರ್ಯಕರ್ತರ ಒಳಗೆ ಗೊಂದಲ ಉಂಟಾಗಿದೆ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎಂದು ನಂಬಿದ್ದೇವೆ. ಕಾರ್ಕಳದಲ್ಲಿ ಮುತಾಲಿಕ್ ನಿಂತು ಕಾಂಗ್ರೆಸ್ಸಿಗೆ ಲಾಭ ಆಗೋದು ಬೇಡ. ಬಿಜೆಪಿ ಸಂಘ ಪರಿವಾರ ಇವರಿಗೆ ಸ್ಥಾನಮಾನ ಕೊಡಲು ಸಿದ್ಧವಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕಿತ್ತು. ಕಾರ್ಯಕರ್ತರ ಜೊತೆ ಬೈಟಕ್ ಮಾಡದೆ ನಿರ್ಧಾರ ಕೈಗೊಂಡಿದ್ದಾರೆ. ಇವರು ಕಾರ್ಕಳದಲ್ಲಿ ಏನು ಸರ್ವೇ ಮಾಡಿದ್ದಾರೆ ? ಕಾರ್ಕಳದ ಬಗ್ಗೆ ಏನು ಗೊತ್ತು? ಎಂದು ಪ್ರಶ್ನಿಸಿದರು.
ಸುನಿಲ್ ಗೆ ಆಗದ ವ್ಯಕ್ತಿಗಳು ಮುತಾಲಿಕರನ್ನು ಎತ್ತಿ ಕಟ್ಟಿದ್ದಾರೆ. ಕಾರ್ಯಕರ್ತರನ್ನು ಬಿಟ್ಟರೆ ಮುತಾಲಿಕ್ ಜೊತೆ ಯಾರಿದ್ದಾರೆ. ನಾಳಿನ ದಿನ ಇವರ ಹಿಂದೆ ಹೋದವರ ಗತಿ ಏನು? ಸಂಘಟನೆ ಮಾಡಿದಷ್ಟು ರಾಜಕೀಯ ಸುಲಭ ಅಲ್ಲ. ದುಡ್ಡು ಹಣ ವ್ಯವಸ್ಥೆ ಇದ್ದರೆ ಮಾತ್ರ ರಾಜಕೀಯ. ಸುನಿಲ್ ಕುಮಾರ್ ಅವರ ಪ್ರಭಾವದಿಂದ ನಾವು ಈ ರೀತಿ ಹೇಳುತ್ತಿಲ್ಲ. ಮಂಗಳೂರು ವಿಭಾಗ ನನ್ನ ಜವಾಬ್ದಾರಿ. ಉಡುಪಿ, ಮಂಗಳೂರು ಉತ್ತರ ಕನ್ನಡ ಸಹಿತ ನಾಲ್ಕು ಜಿಲ್ಲೆ ನನ್ನ ಜವಾಬ್ದಾರಿ. ನನಗೆ ಬಿಜೆಪಿಯ ಚಿಂತೆ ಇಲ್ಲ. ನನ್ನ ಕಾರ್ಯಕರ್ತರ ಚಿಂತೆ ಇದೆ. ನಮ್ಮ ಕಾರ್ಯಕರ್ತರು ಬೀದಿಗೆ ಬೀಳದಂತೆ ನಾನು ಎಚ್ಚರಿಕೆವಹಿಸಬೇಕಾಗಿದೆ ಎಂದರು.
ಸಂಘ ಪರಿವಾರಕ್ಕೆ ಮನವಿ ಕೊಟ್ಟು ಮಾತನಾಡೋಣ. ಮುತಾಲಿಕರಿಗೆ ಈಗ 68 ವರ್ಷ ವಯಸ್ಸು. ಈಗ ಸೋತರೆ ಅದಕ್ಕಿಂತ ದೊಡ್ಡ ಅವಮಾನ ಉಂಟಾ? ಇಷ್ಟರವರೆಗೆ ಸಂಪಾದಿಸಿದ ಹೆಸರು ಸಂಘಟನೆ ಎಲ್ಲಾ ಮುರಿದು ಬೀಳುತ್ತೆ. ಕಾರ್ಯಕರ್ತರು ಕೈ ಬಿಟ್ಟು ಹೋಗುತ್ತಾರೆ ಯಾವ ಪುರುಷಾರ್ಥಕ್ಕೆ ಈ ಸ್ಪರ್ಧೆ? ಒಬ್ಬ ಉದ್ಯಮಿ ಮತ್ತು ವಕೀಲಗೆ ಸುನಿಲ್ ಕುಮಾರ್ ವಿರುದ್ಧ ವೈಯಕ್ತಿಕ ದ್ವೇಷ ಇದೆ. ಅವರ ದ್ವೇಶ ಸಾಧನೆಗೋಸ್ಕರ ಮುತಾಲಿಕ್ ಅವರನ್ನು ಬಲಿಕೊಡುತ್ತಿದ್ದಾರೆ. ಯಾರು, ದ್ವೇಷ ಸಾಧನೆ ಮಾಡುತ್ತಿದ್ದಾರೋ ಅವರೇ ಚುನಾವಣೆಗೆ ನಿಲ್ಲಬಹುದಿತ್ತಲ್ಲ? ಕಾರ್ಕಳದ ಇಬ್ಬರು ವ್ಯಕ್ತಿಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ಮುತಾಲಿಕರನ್ನು ಎತ್ತಿ ಕಟ್ಟಿದ್ದಾರೆ. ಈ ಬಗ್ಗೆ ಎರಡು ತಿಂಗಳ ಹಿಂದೆ ನನ್ನ ಮನೆಯಲ್ಲಿ ಚರ್ಚೆಯಾಗಿತ್ತು. ಹಲವು ಹಿಂದೂ ಸಂಘಟನೆಗಳ ಪ್ರಮುಖರು ಕೂಡ ಬಂದಿದ್ದರು. ಆ ವ್ಯಕ್ತಿಗಳ ಜೊತೆ ಸೇರಬೇಡಿ ಎಂದು ಎಲ್ಲರೂ ಬುದ್ಧಿವಾದ ಹೇಳಿದ್ದರು. ಈಗ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ. ಹಾಗಾದರೆ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಬೇಡವಾ? ಎಂದು ಪ್ರಶ್ನಿಸಿದರು.
ಶ್ರೀರಾಮ ಸೇನೆಗೆ ಒಳ್ಳೆ ಹೆಸರಿದೆ. ಕಾರ್ಯಕರ್ತರು ಸಹ ಇದ್ದಾರೆ. ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಕಾರ್ಕಳ ಸ್ಥಾನವನ್ನು ಬಿಜೆಪಿಯವರು ಮುತಾಲಿಕರಿಗೆ ಬಿಟ್ಟುಕೊಟ್ಟರೆ ಸಹಮತ ಇದೆ. ಮುತಾಲಕರಿಗೆ ಆಗುವ ಅವಮಾನ ನೋಡುವ ಶಕ್ತಿ ನಮಗಿಲ್ಲ. ನಮ್ಮ ಊರಿನಲ್ಲಿ ಮುತಾಲಿಕ್ ಬೀದಿಪಾಲಾಗುವುದು ಬೇಡ ಎಂದು ಹೇಳಿದರು.