New Voter ID Card: ವೋಟರ್ ಐಡಿ ಕಳೆದು ಹೋದರೆ ಡುಪ್ಲಿಕೇಟ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Karnataka Election 2023: ವೋಟರ್ ಐಡಿ ಕಳೆದುಹೋದ ಸಂದರ್ಭದಲ್ಲಿ ಡುಪ್ಲಿಕೇಟ್ ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಸಾಂದರ್ಭಿಕ ಚಿತ್ರ
Follow us on
ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಿದ್ದರೆ ಚುನಾವಣಾ ಆಯೋಗ (Election Commission) ನಮಗೆ ನೀಡಿರುವ ವೋಟರ್ ಐಡಿ (Voter ID) ಬಹಳ ಮುಖ್ಯ. ವೋಟರ್ ಐಡಿ ಆಧಾರದಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಹಾಗಿದ್ದರೂ ವೋಟರ್ ಐಡಿ ಕಳೆದುಹೋಗಿದ್ದಲ್ಲಿ ಪರ್ಯಾಯ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶವಿದೆ. ಆದರೆ, ಮತದಾರರ ಪಟ್ಟಿಯಲ್ಲಿ ಹೆಸರು ಇರಲೇಬೇಕು. ವೋಟರ್ ಐಡಿ ಕಳೆದುಹೋದ ಸಂದರ್ಭದಲ್ಲಿ ಡುಪ್ಲಿಕೇಟ್ ವೋಟರ್ ಐಡಿಗೆ (Duplicate Voter ID) ಅರ್ಜಿ ಸಲ್ಲಿಸುವುದು ಹೇಗೆ? ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಡುಪ್ಲಿಕೇಟ್ ವೋಟರ್ ಐಡಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಚೀಫ್ ಎಲೆಕಟ್ಟೋರಲ್ ಆಫೀಸರ್ಸ್ ವೆಬ್‌ಸೈಟ್‌ನಿಂದ ಫಾರ್ಮ್ EPIC-002 ಅನ್ನು ಡೌನ್ಲೋಡ್ ಮಾಡಿ. ಇದು ಡುಪ್ಲಿಕೇಟ್ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಇರುವ ಅರ್ಜಿ ನಮೂನೆ ಆಗಿದೆ.
ನಿಮ್ಮ ಹೆಸರು, ಸಂಬಂಧಿಕರ ಹೆಸರು, ವಸತಿ ವಿಳಾಸ, ಪ್ರದೇಶ ಇತ್ಯಾದಿ ಅಗತ್ಯ ವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ.
ಸರಿಯಾಗಿ ಸಹಿ ಮಾಡಿದ ಅರ್ಜಿ ಮತ್ತು ವೋಟರ್ ಐಡಿ ಕಳೆದುಹೋಗಿರುವ ಬಗ್ಗೆ ದೂರು ನೀಡಿದ್ದಕ್ಕೆ ಸಂಬಂಧಿಸಿದ ಎಫ್ಐಆರ್ನ ಪ್ರತಿ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಲು ನಿಮ್ಮ ಹತ್ತಿರದ ಚುನಾವಣಾ ಕಚೇರಿಗೆ ಭೇಟಿ ನೀಡಿ.
ಅರ್ಜಿಯನ್ನು ಸಲ್ಲಿಸಿದ ಬಳಿಕ ರೆಫರೆನ್ಸ್ ಐಡಿ ಸಂಖ್ಯೆ ನೀಡುತ್ತಾರೆ. ಅರ್ಜಿಯ ಸ್ಥಿತಿಗತಿ ತಿಳಿಯುವುದಕ್ಕೆ ಇದು ಅಗತ್ಯ. ಅರ್ಜಿ ಸ್ವೀಕೃತಗೊಂಡ ನಂತರ ಡುಪ್ಲಿಕೇಟ್ ವೋಟರ್ ಐಡಿ ಸ್ವೀಕರಿಸಲು ಚುನಾವಣಾ ಕಚೇರಿಯಿಂದ ನಿಮಗೆ ಸಂದೇಶ ಬರುತ್ತದೆ.
ಡುಪ್ಲಿಕೇಟ್ ವೋಟರ್ ಐಡಿಗಾಗಿ ಆಫ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಸಮೀಪದ ಚುನಾವಣಾ ಕಚೇರಿಗೆ ಭೇಟಿ ನೀಡಿ
ಫಾರ್ಮ್ EPIC-002 ನೀಡುವಂತೆ ಕೇಳಿ
ನಿಮ್ಮ ಹೆಸರು, ಮೂಲ ಮತದಾರರ ಗುರುತಿನ ಚೀಟಿ ಸಂಖ್ಯೆ, ಲಿಂಗ ಮತ್ತು ವಯಸ್ಸು, ಮನೆಯ ವಿಳಾಸ, ವಾಸಸ್ಥಳದ ಪ್ರದೇಶ, ಪೊಲೀಸ್ ಠಾಣೆ ಇತ್ಯಾದಿ ವಿಚಾರಗಳನ್ನು ನಮೂದಿಸಿ. ಜತೆಗೆ, ಹಾನಿಗೊಳಗಾದ ಮತದಾರರ ಗುರುತಿನ ಚೀಟಿಯನ್ನು ಹಿಂದಿರುಗಿಸಲು ಮತ್ತು ಕಳೆದುಹೋದ ಮತದಾರರ ಗುರುತಿನ ಚೀಟಿಯನ್ನು ಮರಳಿ ಪಡೆದ ನಂತರ ಡುಪ್ಲಿಕೇಟ್ ಐಡಿಯನ್ನು ಹಿಂದಿರುಗಿಸುವುದಕ್ಕೆ ಸಂಬಂಧಿಸಿದ ಆಯ್ಕೆಗಳಿಗೆ ಬಲ ಬದಿಗೆ ಟಿಕ್ ಮಾರ್ಕ್ ಮಾಡಿ.
ಅದನ್ನು ಚುನಾವಣಾ ಕಚೇರಿಯಲ್ಲಿ ಆಧಾರ್ ಕಾರ್ಡ್ ಎಫ್‌ಐಆರ್ ಪ್ರತಿ, ಯುಟಿಲಿಟಿ ಬಿಲ್‌ಗಳು ಮುಂತಾದ ಸಂಬಂಧಿತ ದಾಖಲೆಗಳ ಜತೆ ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸಿದ ಬಳಿಕ ರೆಫರೆನ್ಸ್ ಐಡಿ ಸಂಖ್ಯೆ ನೀಡುತ್ತಾರೆ. ಅರ್ಜಿಯ ಸ್ಥಿತಿಗತಿ ತಿಳಿಯುವುದಕ್ಕೆ ಇದು ಅಗತ್ಯ. ಅರ್ಜಿ ಸ್ವೀಕೃತಗೊಂಡ ನಂತರ ಡುಪ್ಲಿಕೇಟ್ ವೋಟರ್ ಐಡಿ ನಿಮಗೆ ನೀಡಲಾಗುತ್ತದೆ.
ಡುಪ್ಲಿಕೇಟ್ ವೋಟರ್ ಐಡಿ ಪಡೆಯಲು ಏನೆಲ್ಲ ದಾಖಲೆಗಳು ಬೇಕು?
ವೋಟರ್ ಐಡಿ ಕಳೆದುಹೋಗಿರುವುದಕ್ಕೆ ಸಂಬಂಧಿಸಿದ ಎಫ್ಐಆರ್ ಪ್ರತಿ
ಸಹಿ ಮಾಡಿದ ಫಾರ್ಮ್ EPIC-002
ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಗುರುತಿನ ಮತ್ತು ವಿಳಾಸ ಪುರಾವೆಗಳಾದ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವಿದ್ಯುತ್ ಬಿಲ್ ಇತ್ಯಾದಿ