ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಮಾಜಿ ಸಿಎಂ, ಜಗದೀಶ್ ಶೆಟ್ಟರ್ ಗೆಲುವಿಗೆ ಲಿಂಗಾಯತ ಮುಖಂಡರು ಶಪಥ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ತಮ್ಮನ್ನು ಸೋಲಿಸಲು ಲಿಂಗಾಯತರ ಸಭೆಯಲ್ಲಿ ಕರೆ ಕೊಟ್ಟಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಜಗದೀಶ್ ಶೆಟ್ಟರ್ ಶಾಕ್ ಕೊಟ್ಟಿದ್ದಾರೆ.
ಹುಬ್ಬಳ್ಳಿ: ಕಾಂಗ್ರೆಸ್ (Congress) ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish shettar) ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ(BJP) ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲುವಿಗೆ ರಾಜ್ಯ ಹಾಗೂ ಕೇಂದ್ರ ನಾಯಕರು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಾಲದಕ್ಕೆ ಜಗದೀಶ್ ಶೆಟ್ಟರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೂಲಕ ಲಿಂಗಾಯತ ಅಸ್ತ್ರ ಪ್ರಯೋಗಿಸಿದೆ. ಅದರಂತೆ ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ ಇದೀಗ ಶೆಟ್ಟರ್ ಕೂಡ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದು, ಶೆಟ್ಟರ್ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿದ್ದ ಎಲ್ಲರೂ ಶಪಥ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ. ಅಲ್ಲದೇ ಜಗದೀಶ್ ಶೆಟ್ಟರ್ ಅವರು ಬಿಜೆಪಿ ನಾಯಕರಿಗೆ ಚೆಕ್ ಮೆಟ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ ಜಗದೀಶ್ ಶೆಟ್ಟರ್, ತಮಗೆ ಬಿಜೆಪಿಯಲ್ಲಿ ಆದ ಅಪಮಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಆ ಪಕ್ಷ ತೊರೆದಿದ್ದೇನೆ. ಇದೀಗ ಕಾಂಗ್ರೆಸ್ ಸೇರಿದ್ದೇನೆ. ಈ ಹಿಂದೆಯೂ ನೀವು ನನಗೆ ಬೆಂಬಲಿಸಿದ್ದೀರಿ. ಈಗಲೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಮೂಲಕ ಜಗದೀಶ್ ಶೆಟ್ಟರ್‌ಗೆ ಬೆಂಬಲ ಸೂಚಿಸಿದರು.
ಈ ವೇಳೆ ಬಂಗಾರೇಶ ಹಿರೇಮಠ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೆಟ್ಟರ್ ಮತ್ತೆ ಅತ್ಯುನ್ನತ ಸ್ಥಾನ ಅಲಂಕರಿಸುವ ಅವಕಾಶವಿದೆ. ಕಾರಣ ನಾವೆಲ್ಲರೂ ನಾವೇ ಅಭ್ಯರ್ಥಿ ಎಂದು ಕೆಲಸ ಮಾಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸೋಣ. ಅಲ್ಲಿವರೆಗೂ ವಿಶ್ರಮಿಸುವುದು ಬೇಡ ಎಂದು ಮನವಿ ಮಾಡಿದರು.
ಇನ್ನು ರಾಜಶೇಖರ ಮೆಣಸಿನಕಾಯಿ ಮಾತನಾಡಿ, 1994ರ ಚುನಾವಣೆಯಲ್ಲಿನ ಒಗ್ಗಟ್ಟು ಈ ಚುನಾವಣೆಯಲ್ಲಿ ಕಂಡು ಬರುತ್ತಿದೆ. ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡದೆ ನಾವೆಲ್ಲರೂ ಶೆಟ್ಟರ್ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.
ಎಲ್ಲರ ಭಾಷಣದ ಬಳಿ ಯಾರೂ ನಮ್ಮ ಜೊತೆ ಇರ್ತಾರೆ ಅವರನ್ನು ಬೆಂಬಲಿಸೋಣ. ನಮ್ಮ ನೋವಿಗೆ ಸ್ಪಂದಿಸುವವರಿಗೆ ಮತ ಹಾಕೋಣ ಎಂದು ಸಭೆಯಲ್ಲಿದ್ದ ಸುಮಾರು 200 ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮುಖಂಡರು ಕೈ ಎತ್ತಿ ಗೆಲ್ಲಿಸುವ ಶಪಥ ಮಾಡಿದರು. ಇದರೊಂದಿಗೆ ಜಗದೀಶ್ ಶೆಟ್ಟರ್ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಈ ವೇಳೆ ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ನೀಲಕಂಠ ಅಸೂಟಿ, ಗಂಗಾಧರ ದೊಡ್ಡವಾಡ, ಮಲ್ಲಿಕಾರ್ಜುನ ಸಾವಕಾರ, ಬಾಪೂಗೌಡ ಪಾಟೀಲ, ಶಿವಪುತ್ರಪ್ಪ ಕಮತರ , ಸದಾಶಿವಯ್ಯ ಹಿರೇಮಠ , ಕಲ್ಲಪ್ಪ ಯಲಿವಾಳ , ಆರ್.ಕೆ.ಪಾಟೀಲ್, ಎಂ.ಎಸ್.ಪಾಟೀಲ್, ಸುನೀಲ್ ಮಠಪತಿ, ಸರೋಜಾ ಹೂಗಾರ, ಸುನಿತಾ ಹುರಕಡ್ಲಿ ಸೇರಿದಂತೆ ಮತ್ತಿತರರು ಇದ್ದರು.
ಯಡಿಯೂರಪ್ಪ ಹೇಳಿದ್ದೇನು?
ಯಾವುದೇ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ. ನಾಳೆ ರಾಲಿ ಏರ್ಪಡಿಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ. ರಾಜಕೀಯ ದೊಂಬರಾಟ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ. ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ ಪಕ್ಷಾಂತರಿಗಳಿಗೆ ಕ್ಷಮಿಸುವುದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹೋಗಬೇಕು. ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರು ಕೆಲಸ ಬದಿಗೊತ್ತಿ ಎಲ್ಲ ಮುಖಂಡರು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ. ಜಗದೀಶ್ ಶೆಟ್ಟರ್ ಕಂಪನಿಗೆ ಪಾಠ ಕಲಿಸಬೇಕು. ಶೆಟ್ಟರ್ ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಸಭೆಯಲ್ಲಿ ಹೇಳಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Sun, 30 April 23