ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ಈ ಮಧ್ಯೆ ಎಕ್ಸಿಟ್ ಪೋಲ್ಗಳು ಅತಂತ್ರ ವಿಧಾನಸಭೆಯ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ‘ಆಪರೇಷನ್ ಹಸ್ತ’ದ ಬಗ್ಗೆ ಗಂಭೀರ ಪ್ಲ್ಯಾನಿಂಗ್ ನಡೆಸುತ್ತಿದ್ದಾರೆ. ಒಂದು ವೇಳೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತಕ್ಕೆ ಬೇಕಾದ ಸ್ಥಾನಗಳು ದೊರೆಯದಿದ್ದಲ್ಲಿ ಹೇಗೆ ಸರ್ಕಾರ ರಚಿಸಬಹುದು ಎಂಬ ಬಗ್ಗೆ ಖುದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ.
ಫಲಿತಾಂಶ ಬರುವ ವೇಳೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರವಾಗಿ ಸುರ್ಜೇವಾಲ ಅವರು ಸಿದ್ದರಾಮಯ್ಯ ಜೊತೆಗೂ ಮಾತುಕತೆ ನಡೆಸಿದ್ದಾರೆ. ಫಲಿತಾಂಶ ಬಂದ ಬಳಿಕ ಗೊಂದಲ ಮೂಡುವುದು ಬೇಡ. ಫಲಿತಾಂಶ ಬರುವ ವೇಳೆಗೆ ಎಲ್ಲ ಸಿದ್ದತೆಗಳು ಆಗಿರಬೇಕು ಎಂದು ಕೆಲವು ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಆಪರೇಶನ್ ಕಮಲ ನಡೆದು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರದಂತೆ ಮಾಡುವ ಬಗ್ಗೆಯೂ ಸಮಾಲೋಚನೆ ನಡೆದಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪ್ಲಾನ್ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಅತಂತ್ರ ಫಲಿತಾಂಶದ ಭಯ: ಆಯ್ಕೆಯಾದ ಕೈ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಇಂದು ತಡರಾತ್ರಿ ಮೆಗಾ ಪ್ಲಾನ್
ಅತಂತ್ರ ಫಲಿತಾಂಶದ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾದ ಕಾಂಗ್ರೆಸ್, ಇಂದು ತಡರಾತ್ರಿ ಝೂಮ್ ಮೀಟಿಂಗ್ ಮಾಡಲಿದೆ. ಈ ಆನ್ಲೈನ್ ಸಭೆಯಲ್ಲಿ 224 ಅಭ್ಯರ್ಥಿಗಳ ಜೊತೆಗೂ ಮಾತುಕತೆ ನಡೆಸಲಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರಿಗೂ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ