ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ, ಆದರೆ ನನಗೆ ಟಿಕೆಟ್ ಮುಖ್ಯ ಅಲ್ಲ, ದೊಡ್ಡಗೌಡರ ಆರೋಗ್ಯ ಮುಖ್ಯ – ಭವಾನಿ ರೇವಣ್ಣ

| Updated By: ಸಾಧು ಶ್ರೀನಾಥ್​

Updated on: Apr 20, 2023 | 1:37 PM

ಇವತ್ತು ನಮ್ಮ ಕುಟುಂಬಕ್ಕೆ ಊಟ ಕೊಡುತ್ತಿರುವುದು ಜೆಡಿಎಸ್ ಪಕ್ಷ. ಜೆಡಿಎಸ್ ವರಿಷ್ಠರಾದ ದೇವೇಗೌಡರು ನಮ್ಮ ಜಿಲ್ಲೆಗಷ್ಟೇ ಅಲ್ಲ; ಇಡೀ ರಾಜ್ಯಕ್ಕೆ ತಂದೆ ಸ್ಥಾನದಲ್ಲಿ ಇರುವವರು. ದೇವೇಗೌಡರ ಆರೋಗ್ಯ ಮುಖ್ಯ. ಅವರು ಆರೋಗ್ಯವಾಗಿದ್ದರೆ ನನ್ನಂತಹ ಸಾವಿರಾರು ಭವಾನಿಗಳನ್ನು ಹುಟ್ಟುಹಾಕುತ್ತಾರೆ -ಭವಾನಿ ರೇವಣ್ಣ

ಹಾಸನ: ಹಾಸನ ಅಸೆಂಬ್ಲಿ ಟಿಕೆಟ್ ವಂಚಿತೆ ಭವಾನಿ ರೇವಣ್ಣ ಅವರು ಟಿವಿ 9 ಜೊತೆ ಮಾತನಾಡಿದ್ದಾರೆ. ಜೆಡಿಎಸ್ ವರಿಷ್ಠರೂ ಆದ ಭಾವ ಹೆಚ್​ ಡಿ ಕುಮಾರಸ್ವಾಮಿ ಅವರ ಮಾತೇ ಫೈನಲ್​ ಆಗಿ, ಹಾಸನ ಟಿಕೆಟ್​​ ಸ್ಥಳೀಯ ಕಾರ್ಯಕರ್ತ ಸ್ವರೂಪ್ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಕುಟುಂಬದ ದೊಡ್ಡಗೌಡರ (ಹೆಚ್​ಡಿ ದೇವೇಗೌಡ) ಬಗ್ಗೆಯೂ ಭವಾನಿ ಮಾತನಾಡಿದ್ದಾರೆ. ಮುಖ್ಯವಾಗಿ, ಮಾವ ಹೆಚ್​ಡಿ ದೇವೇಗೌಡ ಅವರ ಆರೋಗ್ಯದ ಹಿತದೃಷ್ಟಿಯಿಂದ ತಾವು ಟಿಕೆಟ್​​ ಬೇಡಿಕೆಯಿಂದ ಹಿಂದೆ ಸರಿದಿದ್ದಾಗಿ ಭವಾನಿ ಹೇಳಿದ್ದಾರೆ. ಭವಾನಿ ರೇವಣ್ಣ ಜೊತೆಗಿನ ಚಿಟ್ ಚಾಟ್ ಅಂಶಗಳು ಇಲ್ಲಿವೆ.

ಹೊಳೆನರಸೀಪುರದಲ್ಲಿ ರೇವಣ್ಣ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ಶಾಸಕ ಪ್ರೀತಂಗೌಡ ವರ್ತನೆ ಸರಿಯಿಲ್ಲ. ಮಹಿಳೆ ಅನ್ನೋದನ್ನು ಲೆಕ್ಕಿಸದೇ ಪ್ರೀತಂಗೌಡ ಸವಾಲು ಹಾಕಿದ್ದರು. ಬೇರೆಯವರಿಗೆ ಚಾಲೆಂಜ್ ಹಾಕುವ ಸಂಸ್ಕಾರ ನಮಗೆ ಇಲ್ಲ. ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಸಿಂಹಾಸನ ಗೆಲ್ಲಲು ಅಖಾಡಕ್ಕಿಳಿದ ದಳಪತಿಗಳು: ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ

ನಮ್ಮ ಕುಟುಂಬದಲ್ಲಿ ಯಾವತ್ತೂ ಬಿರುಕು ಮೂಡಲು ಸಾಧ್ಯವಿಲ್ಲ. ಹೆಚ್​​.ಡಿ. ದೇವೇಗೌಡರ ಕುಟುಂಬ ಒಗ್ಗಟ್ಟಿನಿಂದ ಇದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆಲ್ಲಬೇಕು. ಈಗ ಜೆಡಿಎಸ್​ ಪಕ್ಷದಿಂದ ಟಿಕೆಟ್ ಸ್ವರೂಪ್ ಗೆ ಆಗಿದೆ. ಹೀಗಾಗಿ ನಾನು ಸ್ವರೂಪ್ ಪರ ಕೆಲಸ ಮಾಡುತ್ತೇನೆ. ಅದೇ ನನಗೆ ಟಿಕೆಟ್ ಆಗಿದ್ದರೆ ನನ್ನ ಪರ ಸ್ವರೂಪ್ ಕೆಲಸ ಮಾಡುತ್ತಿದ್ದರು. ದೇವೇಗೌಡರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಕುಟುಂಬದಲ್ಲಿ ಬಿರುಕು, ಕಲಹ ಅನ್ನೋ ಸುದ್ದಿಗಳನ್ನು ನೋಡಿ ನಾನು ನಗುತ್ತಿದ್ದೆ. ನಮ್ಮ ಕುಟುಂಬದಲ್ಲಿ ಯಾವುದೇ ಬಿರುಕು ಕಲಹ ಇಲ್ಲ. ಈ ಹಿಂದೆಯೂ ಇಲ್ಲ ಇನ್ನು ಮುಂದೆಯೂ ಇರೋದಿಲ್ಲ ಎಂದು ಭವಾನಿ ಹೇಳಿದ್ದಾರೆ.

ಇವತ್ತು ನಮ್ಮ ಕುಟುಂಬಕ್ಕೆ ಊಟ ಕೊಡುತ್ತಿರುವುದು ಜೆಡಿಎಸ್ ಪಕ್ಷ. ಜೆಡಿಎಸ್ ವರಿಷ್ಠರಾದ ದೇವೇಗೌಡರು ನಮ್ಮ ಜಿಲ್ಲೆಗಷ್ಟೇ ಅಲ್ಲ; ಇಡೀ ರಾಜ್ಯಕ್ಕೆ ತಂದೆ ಸ್ಥಾನದಲ್ಲಿ ಇರುವವರು. ಅವರ ಮಾತನ್ನು ನಾವು ಯಾವತ್ತೂ ಮೀರೋಲ್ಲ. ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಯಿತು. ಅವರು ಆರೋಗ್ಯವಾಗಿದ್ದರೆ ಪಕ್ಷ ಇರುತ್ತದೆ. ಅಷ್ಟೇ ಅಲ್ಲ ಅವರು ಆರೋಗ್ಯವಾಗಿದ್ದರೆ ನನ್ನಂತಹ ಸಾವಿರಾರು ಭವಾನಿಗಳನ್ನು ಹುಟ್ಟುಹಾಕುತ್ತಾರೆ. ಹಾಗಾಗಿ ಇಲ್ಲಿ ​​ನಮ್ಮ ಪಕ್ಷದ ಗೆಲುವು ಮುಖ್ಯ. ಸ್ವರೂಪ್​ ರನ್ನು ಗೆಲ್ಲಿಸಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭವಾನಿ ಹೇಳಿದರು.

ಹಾಸನಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:33 pm, Thu, 20 April 23