ನಾನು ಸೋತರೆ ಊರು ಬಿಡಿಸ್ತಾರೆ, ನನ್ನ ಕೈ ಬಿಡಬೇಡಿ; ಭಾವನಾತ್ಮಕವಾಗಿ ಮತಭೇಟೆಗಿಳಿದ ಪ್ರೀತಂಗೌಡ

|

Updated on: Apr 24, 2023 | 8:24 AM

ನನ್ನ ಹೇಳುವವರು, ಕೇಳುವವರು ಯಾರೂ ಇಲ್ಲವೆಂದು ನನ್ನನ್ನ ಮುಗಿಸಿ ಎಂದು ಹೇಳಿದ್ದಾರೆ. ನಾನೇನಾದ್ರು ಸೋತರೆ ನನ್ನ ಊರು ಬಿಡಿಸ್ತಾರೆ, ನಾನು ನಿಮ್ಮೊಟ್ಟಿಗೆ ಇರಬೇಕು ಅಂದ್ರೆ, ನನ್ನ ಗೆಲ್ಲಿಸಿ ಎಂದು ಕೈ ಮುಗಿದು ಬೇಡಿಕೊಳ್ಳುವ ಮೂಲಕ ಪ್ರೀತಂಗೌಡ ಭಾವನಾತ್ಮಕ ಮತ ಭೇಟೆಗಿಳಿದಿದ್ದಾರೆ.

ನಾನು ಸೋತರೆ ಊರು ಬಿಡಿಸ್ತಾರೆ, ನನ್ನ ಕೈ ಬಿಡಬೇಡಿ; ಭಾವನಾತ್ಮಕವಾಗಿ ಮತಭೇಟೆಗಿಳಿದ ಪ್ರೀತಂಗೌಡ
ಜೆಡಿಎಸ್​, ಪ್ರೀತಂಗೌಡ
Follow us on

ಹಾಸನ: ಕ್ಷೇತ್ರದ ಚುನಾವಣಾ ರಣಕಣ ರಂಗೇರಿದೆ, ಜೆಡಿಎಸ್(JDS) ಟಿಕೆಟ್ ಹಂಚಿಕೆ ವಿಚಾರಕ್ಕೆ ದೊಡ್ಡ ಸದ್ದು ಮಾಡಿದ್ದ ಕ್ಷೇತ್ರದಲ್ಲೀಗ ದಳಪತಿಗಳು ಒಂದಾಗಿ ಬಿಜೆಪಿ ವಿರುದ್ದ ಸಮರ ಸಾರಿದ್ದಾರೆ. ಹಾಸನದ ಮೊದಲ ಭೇಟಿಯಲ್ಲೇ ದೊಡ್ಡಗೌಡರು ಇಲ್ಲಿನ ಶಾಸಕ ಪ್ರೀತಂಗೌಡ(Preethamgowda) ಜಿಲ್ಲೆಯ ಅಭಿವೃದ್ದಿಗೆ ಕಂಟಕವಾಗಿದ್ದಾರೆ, ಅವರನ್ನ ಸೋಲಿಸಲೇ ಬೇಕೆಂದು ಗುಡುಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ(H. D. Kumaraswamy)ಕೂಡ ಪ್ರೀತಂ ವಿರುದ್ದ ಬೆಂಕಿಯುಗುಳಿ ಹೋಗಿದ್ದಾರೆ. ದಳಪತಿಗಳ ಟೀಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಪ್ರೀತಂ ಮತ ಶಿಕಾರಿಗೆ ಇಳಿದಿದ್ದು ನನ್ನ ಹೇಳುವವರು, ಕೇಳುವವರು ಯಾರೂ ಇಲ್ಲವೆಂದು ನನ್ನನ್ನ ಮುಗಿಸಿ ಎಂದು ಹೇಳಿದ್ದಾರೆ. ನಾನೇನಾದ್ರು ಸೋತರೆ ನನ್ನ ಊರು ಬಿಡಿಸ್ತಾರೆ, ನಾನು ನಿಮ್ಮೊಟ್ಟಿಗೆ ಇರಬೇಕು ಅಂದ್ರೆ, ನನ್ನ ಗೆಲ್ಲಿಸಿ ಎಂದು ಕೈ ಮುಗಿದು ಬೇಡಿಕೊಳ್ಳುವ ಮೂಲಕ ಪ್ರೀತಂ ಭಾವನಾತ್ಮಕ ಮತ ಭೇಟೆಗಿಳಿದಿದ್ದಾರೆ.

ಹೌದು ರಾಜ್ಯ ರಾಜಕಾರಣದಲ್ಲಿ ಚುನಾವಣಾ ರಂಗು, ಎರುವ ಮೊದಲೇ ಇಡೀ ರಾಜ್ಯಕ್ಕೆ ಚುನಾವಣೆಯ ಹುಚ್ಚು ಹಿಡಿಸಿದ ಹಾಸನ ಕ್ಷೇತ್ರದಲ್ಲಿ ಜಿದ್ದಾ ಜಿದ್ದಿನ ಸಮರ ಶುರುವಾಗಿದೆ. ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ದೊಡ್ಡ ಸದ್ದುಮಾಡಿದ ಕ್ಷೇತ್ರದಲ್ಲಿ ಈಗ ಹಾಲಿ ಶಾಸಕರ ಊರು ಬಿಡುವ ವಿಚಾರ ಚರ್ಚೆಗೆ ಬಂದಿದೆ. ಏಪ್ರಿಲ್ 20ರಂದು ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದ ದಳಪತಿಗಳು ಹಾಸನ ಜೆಡಿಎಸ್ ಭದ್ರಕೋಟೆಯಲ್ಲಿ ನಮ್ಮದೇ ಹವಾ ಎಂದು ಆರ್ಭಟಿಸಿದ್ರು, ಈ ವೇಳೆ ದೊಡ್ಡಗೌಡರು ಗುಟುರು ಹಾಕಿ ಹಾಸನದ ಶಾಸಕ ಪ್ರೀತಂಗೌಡ ಜಿಲ್ಲೆಯ ಅಭಿವೃದ್ದಿಗೆ ಕಂಟಕವಾಗಿದ್ದಾರೆ, ಅವರನ್ನ ತೆಗೆಯಲೇ ಬೇಕೆಂದು ಹೇಳಿದ್ದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ಶಾಸಕ ಸಂಪಾದನೆ ಮಾಡಿರೋ ಅಕ್ರಮ ಹಣ ಊಹಿಸೋದು ಕಷ್ಟ, ಇಂತಹ ವ್ಯಕ್ತಿಯನ್ನ ಸೋಲಿಸಿ ಎಂದು ಕರೆ ನೀಡಿದ್ದರು.

ಇದನ್ನೂ ಓದಿ:Karnataka Assembly Polls 2023: ಜೆಡಿಎಸ್​ಗೆ ಆರಂಭಿಕ ಆಘಾತ: ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಇದೀಗ ದಳಪತಿಗಳ ಈ ಟೀಕೆಯನ್ನೇ ಆಸ್ತ್ರಮಾಡಿಕೊಂಡಿರೋ ಪ್ರೀತಂಗೌಡ, ಈ ಕ್ಷೇತ್ರದಲ್ಲಿ ನಾನು ಯಾರೆಂದು ಗೊತ್ತೆ ಇಲ್ಲದಿರುವಾಗ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ರಿ, ಈಗ ಬಲಾಡ್ಯರು ನನಗೆ ಹೇಳೋರು ಕೇಳೋರು ಯಾರು ಇಲ್ಲವೆಂದು ನನ್ನ ಮುಗಿಸಿ ಬಿಡಿ ಅಂತಿದಾರೆ, ಹಾಗಾಗಿಯೇ ನಾನು ನಿಮ್ಮ ಬಳಿ ಬಂದಿದ್ದೀನಿ, ಅಕಸ್ಮಾತ್ ನಾನೇನಾದ್ರು ಸೋತರೆ ಅವರು ಊರು ಬಿಡಿಸ್ತಾರೆ, ನಾನು ನಿಮ್ಮೊಟ್ಟಿಗೆ ಇರಬೇಕು ಅಂದ್ರೆ, ಮತ್ತಷ್ಟು ಅಭಿವೃದ್ದಿ ಆಗಬೇಕು ಅಂದ್ರೆ ನನ್ನ ಕೈ ಬಿಡಬೇಡಿ ಎಂದು ವಿರೋದಿಗಳ ಟೀಕೆಗೆ ಟಾಂಗ್ ಕೊಡುತ್ತಲೆ, ಜನರ ಮುಂದೆ ಭಾವನಾತ್ಮಕವಾಗಿ ಮಾತನಾಡುತ್ತಾ ಮತ ಶಿಕಾರಿ ನಡೆಸುತ್ತಿದ್ದಾರೆ.

ನಾನು ಅಭಿವೃದ್ದಿ ಮಾಡಿದ್ರೆ, ನನಗೆ ಡಬಲ್ ಕೂಲಿ ಕೊಡಿ, ನನಗೆ ಮತ್ತೊಂದು ಅವಕಾಶ ನೀಡಿ. ನಾನು ಸೋತ್ರೆ ಊರು ಬಿಡಿಸ್ತೀನಿ ಎಂದು ಹೇಳಿರೋ ದೊಡ್ಡೋರಿಗೆ ನಾವಿದ್ದೇವೆ ಎಂದು ಹೇಳಿ ಎಂದು ಅಬ್ಬರಿಸಿದ್ದಾರೆ. ಇಂದು (ಏ.23) ಹಾಸನ ಕ್ಷೇತ್ರದ ಗ್ರಾಮೀಣ ಭಾಗದ ಗೇಕರವಳ್ಳಿ, ಕಸ್ತೂರವಳ್ಳಿ, ಬುಸ್ತೇನಹಳ್ಳಿ ಭಾಗದಲ್ಲಿ ಪ್ರಚಾರ ಮಾಡಿ ಮಾತನಾಡಿದ ಪ್ರೀತಂಗೌಡ, ಐದಾರು ಬಾರಿ ಶಾಸಕರಾಗಿದ್ದವರು ಒಮ್ಮೆಯೂ ನಿಮ್ಮೂರಿಗೆ ಬಂದಿಲ್ಲ. ಏನೂ ಅಭಿವೃದ್ದಿ ಮಾಡಲಿಲ್ಲ ಎಂದು ಕುಟುಕುತ್ತಾ, ಈಗಿರೋ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳನ್ನ ನೀವು ನೋಡೇ ಇಲ್ಲ, ಹಾಗಾಗಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಆರು ಕ್ಷೇತ್ರದ ಆಫರ್ ಕೊಟ್ಟ ಕಾಂಗ್ರೆಸ್, ಬಿಜೆಪಿ-ಜೆಡಿಎಸ್​ನಿಂದಲೂ ರಮ್ಯಾಗೆ ಬುಲಾವ್

ಸತತ ಮೂರು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆಯಲ್ಲಿರುವ ಹಾಸನ ಕ್ಷೇತ್ರ ಈಗಲೂ ಕೂಡ ಬಿಜೆಪಿ ಜೆಡಿಎಸ್ ನಡುವಿನ ನೇರಾ ನೇರ ಸಮರದ ಕಾರಣಕ್ಕೆ ಸುದ್ದಿಯಲ್ಲಿದೆ. ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ ಹಾಗೂ ಬಿಜೆಪಿಯ ಪ್ರೀತಂಗೌಡ ನಡುವೆ ನೇರಾ ನೇರ ಹಣಾ ಹಣಿ ಇದೆ. ಕಾಂಗ್ರೆಸ್ ಕೂಡ ಗೆಲ್ಲೋ ಪ್ರಯತ್ನದಲ್ಲಿದೆಯಾದ್ರು, ತೀವೃ ಪೈಪೋಟಿ ಜೆಡಿಎಸ್ ಬಿಜೆಪಿ ನಡುವೆಯೇ ನಡೆಯುತ್ತಿದೆ. ಜೆಡಿಎಸ್ ನಾಯಕರ ವಿರುದ್ದ ತೀವೃ ವಾಗ್ದಾಳಿ ನಡೆಸುತ್ತಿದ್ದ ಪ್ರೀತಂಗೌಡ ಈಗ ಸ್ವಲ್ಪ ಸಾಫ್ಟ್ ಆಗಿದ್ದರೂ, ಪರೋಕ್ಷವಾಗಿ ವಿರೋಧಿಗಳಿಗೆ ತಿರುಗೇಟು ಕೊಡುತ್ತಿದ್ದಾರೆ.

ಇತ್ತ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಕೂಡ ಸಾಂಪ್ರದಾಯಿಕವಾಗಿ ಬಿಜೆಪಿ ವಿರೋಧಿ ಮತಗಳನ್ನ ಟಾರ್ಗೆಟ್ ಮಾಡಿದ್ದು, ರಂಜಾನ್ ಹಿನ್ನೆಯಲ್ಲಿ ಎಲ್ಲೆಡೆ ಮುಸ್ಲಿಂ ಏರಿಯಾಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ್ದರು. ಜೊತೆಗೆ ನಿನ್ನೆ(ಏ.23) ಭಾನುವಾರವಾದ್ದರಿಂದ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಮಾಡಿದ್ರು, ಹಾಸನದ ಸಂತ ಅಥೋಣಿ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿನ ಫಾದರ್ ಫೆಟ್ರಿಕ್ ಜೊನೆಸ್ ರನ್ನ ಭೇಟಿಯಾಗಿ ಆಶೀರ್ವಾದ ಪಡೆದು ಮತ ಯಾಚನೆ ಮಾಡಿದರು.

ಇದನ್ನೂ ಓದಿ:ತುಮಕೂರಿನಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ; ಹಲವರಿಗೆ ಗಾಯ

ಇನ್ನು ಇದೇ ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧೆ ಮಾಡಿ ನಾಲ್ಕು ಬಾರಿ ಶಾಸಕರಾಗಿದ್ದ ತಂದೆ ಎಚ್.ಎಸ್. ಪ್ರಕಾಶ್ ರವರ ಅಭಿವೃದ್ದಿ ಕಾರ್ಯಗಳ ಜೊತೆಗೆ ಜೆಡಿಎಸ್ ಪಂಚರತ್ನ ಯಾತ್ರೆಯ ಯೋಜನೆಗಳನ್ನ ಜನರ ಮುಂದಿಡುತ್ತಾ ಪ್ರಚಾರ ಮಾಡುತ್ತಿದ್ದೇವೆ, ಹಾಸನದಲ್ಲಿ ಕಾಂಗ್ರೆಸ್​ಗೆ ನೆಲೆಯಿಲ್ಲ. ಇಲ್ಲೇನಿದ್ದರು ನೇರಾ ನೇರ ಬಿಜೆಪಿ ವರ್ಸಸ್ ಜೆಡಿಎಸ್ ನಡುವೆಯೇ ಕದನ ಎನ್ನುವ ಮೂಲಕ ಇದು ಸ್ಟ್ರೈಟ್ ಫೈಟ್ ಎಂದು ಸ್ವರೂಪ್ ಸ್ಪಷ್ಟಪಡಿಸಿದ್ದು, ಈಬಾರಿ ಗೆಲುವು ನಮ್ಮದೇ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ತೀವೃ ಕುತೂಹಲ ಮೂಡಿಸಿರುವ ಹಾಸನ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳುತ್ತಾ, ಇಲ್ಲ ಕಳೆದುಕೊಂಡ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಭಾವುಟ ಹಾರುತ್ತಾ ಎನ್ನುವ ಕಾತರ ಎಲ್ಲರಲ್ಲೂ ಇದ್ದು, ಮತಬೇಟೆಯ ಸಮರದ ರಣೋತ್ಸಾಹ ನಿಧಾನವಾಗಿ ಏರುತ್ತಿದೆ.

ವರದಿ: ಮಂಜುನಾಥ್ ಕೆಬಿ ಟಿವಿ9 ಹಾಸನ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ