ರಾಜೀನಾಮೆ ಪತ್ರ ಹಿಡಿದು ಬಂದ ಜಗದೀಶ್ ಶೆಟ್ಟರ್ ಮನವೊಲಿಕೆಗೆ ಸ್ಪೀಕರ್​ ಕಚೇರಿಯಲ್ಲಿ ಅಂತಿಮ ಕಸರತ್ತು: ಬಗ್ಗದ ಮಾಜಿ ಸಿಎಂ

|

Updated on: Apr 16, 2023 | 1:48 PM

ಜಗದೀಶ್ ಶೆಟ್ಟರ್ ಅವರು ಅಧಿಕೃತವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಗೂ ಮುನ್ನ ಸ್ಪೀಕರ್​ ಕಚೇರಿಯಲ್ಲಿಜಗದೀಶ್ ಶೆಟ್ಟರ್ ಮನವೊಲಿಕೆಗೆ ಅಂತಿಮ ಕಸರತ್ತು ನಡೆಯಿತು.

ರಾಜೀನಾಮೆ ಪತ್ರ ಹಿಡಿದು ಬಂದ ಜಗದೀಶ್ ಶೆಟ್ಟರ್ ಮನವೊಲಿಕೆಗೆ ಸ್ಪೀಕರ್​ ಕಚೇರಿಯಲ್ಲಿ ಅಂತಿಮ ಕಸರತ್ತು: ಬಗ್ಗದ ಮಾಜಿ ಸಿಎಂ
ಶಾಸಕ ಸ್ಥಾನಕ್ಕೆ​ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್
Follow us on

ಶಿರಸಿ: ಮಾಜಿ ಮುಖ್ಯಮಂತ್ರಿ ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಅದರಂತೆ ಇಂದು(ಏಪ್ರಿಲ್ 16) ಶಿರಸಿಯಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಭೇಟಿ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಗೂ ಮುನ್ನ ಸ್ಪೀಕರ್​ ಕಚೇರಿಯಲ್ಲಿ ಜಗದೀಶ್ ಶೆಟ್ಟರ್​ ಮನವೊಲಿಕೆಗೆ ಅಂತಿಮ ಸಂಧಾನ ಸರ್ಕಸ್ ನಡೆಯಿತು. ರಾಜೀನಾಮೆ ಪತ್ರ ಹಿಡಿದು ಶಿರಸಿಯಲ್ಲಿರುವ ಕಚೇರಿಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಮನವೊಲಿಸುವ ಅಂತಿಮ ಪ್ರಯತ್ನ ಮಾಡಲಾಯ್ತು. ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಮಿತ್ ಶಾಗೆ ದೂರವಾಣಿ ಕರೆ ಮಾಡಿ ಶೆಟ್ಟರ್​ ಜೊತೆ ಮಾತನಾಡಿಸಿದರು. ಈ ಮೂಲಕ ಪಕ್ಷದಲ್ಲೇ ಉಳಿಸಿಕೊಳ್ಳಲು ಖುದ್ದು ಕಾಗೇರಿ, ಅಮಿತ್ ಶಾ ಮೂಲಕ ಜಗದೀಶ್​ ಶೆಟ್ಟರ್​ ಮನವೊಲಿಕೆಗೆ ಶತಪ್ರಯತ್ನ ಮಾಡಿದರು. ಆದರೂ ಸಹ ಇದಕ್ಕೆ ಬಗ್ಗದ ಶೆಟ್ಟರ್,  ರಾಜೀನಾಮೆ ಪತ್ರವನ್ನು ಸ್ಪೀಕರ್​ಗೆ  ನೀಡಿ ಕಚೇರಿಯಿಂದ ಆಚೆ ಬಂದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ ಕಾಂಗ್ರೆಸ್​ ಸೇರ್ಪಡೆ ಫಿಕ್ಸ್? ಬೆಂಗಳೂರಿಗೆ ಕರೆತರಲು ಡಿಕೆ ಶಿವಕುಮಾರ್​ ಆಪ್ತನ ಹೆಸರಲ್ಲಿ 2 ಹೆಲಿಕಾಪ್ಟರ್​ ಬುಕ್​


ಇನ್ನು ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಅಧಿಕಾರದ ಆಸೆಗಾಗಿ ನಾನು ರಾಜಕಾರಣಕ್ಕೆ ಬಂದವನಲ್ಲ. ಜನರ ಅಪೇಕ್ಷೆ ಮೇರೆಗೆ ಶಾಸಕನಾಗಿ ಕೆಲಸ ಮಾಡುವ ಆಸೆ ನಾನು ರೌಡಿಶೀಟರ್​ ಅಲ್ಲ, ನನ್ನದು ಯಾವುದೇ ಸಿಡಿ ಇಲ್ಲ. ಬಿಎಸ್​ವೈ, ಅನಂತಕುಮಾರ್ ನೇತೃತ್ವದ ವೇಳೆ ಪಕ್ಷ ಸಂಘಟನೆ ಮಾಡಿದ್ದೇನೆ. ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ. ಆದರೆ ಈಗ ನಮ್ಮ ಪಕ್ಷದಿಂದ ನಮ್ಮನ್ನೇ ಹೊರಹಾಕುತ್ತಿದ್ದಾರೆ ಎಂದು ಬಿಜೆಪಿಯ ಕೆಲ ನಾಯಕರ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜಗದೀಶ್​ ಶೆಟ್ಟರ್ ಪ್ರತಿಕ್ರಿಯಿಸಿದ್ದು, ನಾನು ಈವರೆಗೂ ಯಾವುದೇ ನಾಯಕರ ಜತೆ ಚರ್ಚೆ ಮಾಡಿಲ್ಲ.  ಈಗ ಹುಬ್ಬಳ್ಳಿಗೆ ಹೋಗುತ್ತಿದ್ದು,  ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.


ಇನ್ನೊಂದೆಡೆ ಜಗದೀಶ್​ ಶೆಟ್ಟರ್​ ಅವರನ್ನು ಸೆಳೆಯಲು ಕಾಂಗ್ರೆಸ್ ಕಸರತ್ತು ನಡೆಸಿದ್ದು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ದೂರವಾಣಿ ಕರೆ ಮಾಡಿ ಕಾಂಗ್ರೆಸ್​ಗೆ ಆಹ್ವಾನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಈ ಬಗ್ಗೆ ಈಗಲೇ ಶೆಟ್ಟರ್​ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಬದಲಾಗಿ ಮತ್ತೊಂದು ಸುತ್ತಿನ ಬೆಂಗಲಿಗರ ಸಭೆಯಲ್ಲಿ ಚರ್ಚಿಸಿ ಮುಂದಿನ ನಡೆ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶೆಟ್ಟರ್​ ಹೇಳಿದರು.​

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಕರ್ನಾಟಕ ವಿಧಾನಸಭೆ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Sun, 16 April 23