ಉಳ್ಳಾಲದಲ್ಲಿ ಸಿನಿಮೀಯ ಬೆಳವಣಿಗೆ; ಬಲವಂತವಾಗಿ ಜೆಡಿಎಸ್​ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ಹಿಂತೆಗೆಸಿದ ಕಾಂಗ್ರೆಸ್!

|

Updated on: Apr 24, 2023 | 4:31 PM

ಕಾಂಗ್ರೆಸ್​​ನವರು ಧಮ್ಕಿ ಹಾಕಿ ನಾಮಪತ್ರ ವಾಪಸ್​ ಪಡೆಸಿದರು ಎಂದು ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

ಉಳ್ಳಾಲದಲ್ಲಿ ಸಿನಿಮೀಯ ಬೆಳವಣಿಗೆ; ಬಲವಂತವಾಗಿ ಜೆಡಿಎಸ್​ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ಹಿಂತೆಗೆಸಿದ ಕಾಂಗ್ರೆಸ್!
ಅಲ್ತಾಫ್ ಕುಂಪಲ ನಾಮಪತ್ರ ಸಲ್ಲಿಸಿದ ಸಂದರ್ಭದ ಸಂಗ್ರಹ ಚಿತ್ರ
Follow us on

ಮಂಗಳೂರು: ಕಾಂಗ್ರೆಸ್​​ನವರು ಧಮ್ಕಿ ಹಾಕಿ ನಾಮಪತ್ರ ವಾಪಸ್​ ಪಡೆಸಿದರು ಎಂದು ಉಳ್ಳಾಲದ (Ullal) ಜೆಡಿಎಸ್ (JDS) ಅಭ್ಯರ್ಥಿ ಅಲ್ತಾಫ್ ಕುಂಪಲ (Altaf Kumpala) ಆರೋಪಿಸಿದ್ದಾರೆ. ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರುತ್ತಿದ್ದೆ. ಆ ಸಂದರ್ಭ ಕಾಂಗ್ರೆಸ್​ನ ಉಸ್ಮಾನ್ ಕಲ್ಲಾಪು ಸೇರಿದಂತೆ ಹಲವರು ನನ್ನನ್ನು ಕರೆದುಕೊಂಡು ಹೋದರು. ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯುವಂತೆ ಸಹಿ ಹಾಕಿಸಿಕೊಂಡಿದ್ದರು. ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ, ಕೇವಲ ಒತ್ತಡದಿಂದ ನಾಮಪತ್ರ ವಾಪಸ್ ಪಡೆದಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ಅಲ್ತಾಫ್ ಕುಂಪಲ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ

ಅಲ್ತಾಫ್ ಕುಂಪಲ ನಾಮಪತ್ರ ಹಿಂಪಡೆದಿರುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ನಾವು ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ನಮ್ಮ ಎಂಟೂ ನಾಮಪತ್ರಗಳು ಸಿಂಧುವಾಗಿ ಸ್ವೀಕಾರವಾಗಿದೆ. ಮಂಗಳೂರು ಉತ್ತರದಲ್ಲಿ ಪ್ರಭಾವಿ ನಾಯಕ ಮೊಯಿದ್ದೀನ್ ಬಾವಾ ಸ್ಪರ್ಧೆ ಮಾಡಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ಅಲ್ತಾಫ್ ಎಂಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೆವು. ಜನಸಾಮಾನ್ಯರಿಗೆ ಬೇಕಾದ ಸಾಮಾಜಿಕ ಕಳಕಳಿಯ ವ್ಯಕ್ತಿ ಅವರು. ಅವರಿಗೆ ಜನರ ಪ್ರೀತಿ, ವಿಶ್ವಾಸ ಇದೆ, ಉತ್ತಮ ನಾಯಕ ಅವರು ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ‌.ಬಿ.ಸದಾಶಿವ ಹೇಳಿದ್ದಾರೆ.

ಅಲ್ತಾಫ್ ಏಪ್ರಿಲ್ 20ರಂದು ಉಳ್ಳಾಲದಲ್ಲಿ ನಾಮಪತ್ರ ಸಲ್ಲಿಸಿದ್ದರು. ಮುಂದೆ ಅವರ ಹಬ್ಬದ ದಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರ ಬರುತ್ತಿದ್ದಾಗ ಯಾರೋ ಅವರನ್ನು ಕರೆದುಕೊಂಡು ಹೋಗಿ ಪತ್ರಕ್ಕೆ ಸಹಿ ಹಾಕಿಸಿ ಚುನಾವಣಾಧಿಕಾರಿ ಎದುರು ನಿಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ. ಸಜ್ಜನ ವ್ಯಕ್ತಿ ಬೆದರಿಕೆಗೆ ಒಳಗಾಗಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಂಥಹ ಘಟನೆ ಇಡೀ ಜಿಲ್ಲೆಗೆ ಒಂದು ಕಪ್ಪು ಚುಕ್ಕೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನು ಸೋತರೆ ಊರು ಬಿಡಿಸ್ತಾರೆ, ನನ್ನ ಕೈ ಬಿಡಬೇಡಿ; ಭಾವನಾತ್ಮಕವಾಗಿ ಮತಭೇಟೆಗಿಳಿದ ಪ್ರೀತಂಗೌಡ

ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಎದುರಿಸಲಾಗದವರು ಎಂಥ ನಾಯಕ? ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ, ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಈ ಬಗ್ಗೆ ಪೊಲೀಸ್ ಕಮಿಷನರ್ ಹಾಗೂ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ. ಒಬ್ಬ ಪ್ರಭಾವಿ ಮತ್ತು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಷಡ್ಯಂತ್ರ ಇದು. ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ಎದುರಿಸಲು ಆಗಿಲ್ಲ. ಇಂಥ ಹುನ್ನಾರಕ್ಕೆ ಖಂಡನೆ ಇದೆ, ಸಂಬಂಧಪಟ್ಟವರಿಂದ ತನಿಖೆ ಆಗಲಿ ಎಂದು ಅವರು ಆಗ್ರಹಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ