ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆ ಕಾಣುತ್ತಿದೆ: ಅಣ್ಣಾಮಲೈ
ಚುನಾವಣೆ ಸಮಯದಲ್ಲಿ ಹತಾಶೆಯಿಂದ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಆದರೆ ಕರ್ನಾಟಕ ಜನರು ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮಯದಲ್ಲಿ ಹತಾಶೆಯಿಂದ ಕಾಂಗ್ರೆಸ್ (Congress) ಪಕ್ಷ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಆದರೆ ಕರ್ನಾಟಕ ಜನರು ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ (Annamalai) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಹತಾಶೆಯಿಂದ ತಳವಿಲ್ಲದ ಆರೋಪ ಮಾಡುತ್ತಿದೆ. ಕ್ಷೇತ್ರದಲ್ಲಿ ನಮಗೆ ಜನ ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮೂರೂವರೆ ವರ್ಷ ಕೆಲಸ ಮಾಡಿದ್ದೇವೆ. ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆ ಕಾಣುತ್ತಿದೆ. ಹೀಗಾಗಿ ಕರ್ನಾಟಕ ಜನ ಈ ಬಾರಿ ಬಿಜೆಪಿಗೆ (BJP) ಬಹುಮತ ನೀಡಲು ನಿರ್ಧಾರ ಮಾಡಿದ್ದಾರೆ ಎಂದರು.
ಕೆಲವರ ಮಕ್ಕಳಿಗೆ ಟಿಕೆಟ್ ನೀಡಿದ್ದೇವೆ ಅಂದರೆ ಕಾರ್ಯಕರ್ತರಷ್ಟೇ: ಅಣ್ಣಾಮಲೈ
ನಮ್ಮಲ್ಲಿ ಒಂದೇ ಕುಟುಂಬ ರಾಜಕೀಯ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದ ಅಣ್ಣಾಮಲೈ, ಕೆಲವರ ಮಕ್ಕಳಿಗೆ ಟಿಕೆಟ್ ನೀಡಿದ್ದೇವೆ ಅಂದರೆ ಕಾರ್ಯಕರ್ತರಷ್ಟೇ ನೀಡಿದ್ದೇವೆ. ಅಜ್ಜ, ಅಜ್ಜಿ, ಮಗ, ಮೊಮ್ಮಗ ಅಂತಾ ಟಿಕೆಟ್ ನೀಡಿಲ್ಲ ಎಂದರು. ಕರ್ನಾಟಕ ಜನ ತುಂಬಾ ವಿಶಾಲ ಹೃದಯದವರು. ಯಾರೇ ಬಂದರೂ ಸ್ವಾಗತ ಮಾಡುತ್ತಾರೆ. ಬೇರೆ ಬೇರೆ ರಾಜ್ಯದಿಂದ ಬಂದು ಇಲ್ಲಿ ಸೆಟಲ್ ಆಗಿದ್ದಾರೆ. ನಾನು ತಮಿಳುನಾಡಿನಿಂದ ಬಂದವನು. ಇಲ್ಲಿ ತಮಿಳುನಾಡಿನಿಂದ ಬಂದವರು ಅನೇಕರು ಇಲ್ಲಿ ಸೆಟಲ್ ಆಗಿದ್ದಾರೆ. ಬಂದವರನ್ನು ಇಲ್ಲಿನ ಜನ ನಮ್ಮವರು ಅಂತ ನೀಡುತ್ತಾರೆ. ಆದರೆ ಬೇರೆಲ್ಲೂ ಈ ರೀತಿಯ ವಾತಾವರಣ ನೋಡಲು ಸಾಧ್ಯವಿಲ್ಲ. ಇಲ್ಲಿ ಹೊರರಾಜ್ಯದಿಂದ ಬಂದವರ ಮೇಲೆ ಯಾವುದೇ ಅಭದ್ರತೆ ಇಲ್ಲ ಎಂದರು.
ಮೇಕೆದಾಟು ಬಗ್ಗೆ ಅಣ್ಣಾಮಲೈ ಹೇಳಿದ್ದೇನು ಗೊತ್ತಾ?
ಸುದ್ದಿಗೋಷ್ಠಿಯಲ್ಲಿ ಮೇಕದಾಟು ಯೋಜನೆಯ ಬಗ್ಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕೇಂದ್ರದ ತೀರ್ಮಾನದಂತೆ ನಡೆಯುತ್ತೇವೆ. ಕೇಂದ್ರ ಏನು ತೀರ್ಮಾನ ಮಾಡುತ್ತದೆಯೋ ಅದೇ ನಮ್ಮ ನಿಲುವಾಗಲಿದೆ. ಇದರಲ್ಲಿ ಅಂತರಾಜ್ಯ ವಿವಾದ ಇದೆ. ಹೀಗಾಗಿ ಸಂಸತ್ತಿನಲ್ಲಿ ಕೇಂದ್ರ ಏನು ಉತ್ತರ ನೀಡಿದೆಯೋ ಅದೇ ಉತ್ತರವನ್ನು ಇಲ್ಲಿರುವ ಲೀಡರ್ಸ್ ಕೂಡ ಒಪ್ಪಿದ್ದಾರೆ, ತಮಿಳುನಾಡು ಕೂಡ ಒಪ್ಪಿದ್ದಾರೆ. ಇದು ಪ್ರಜಾಪ್ರಭುತ್ವ ಇರುವ ದೇಶ. ಏನೇ ಮಾಡುವಾಗಲೂ ಒಂದು ನಿಯಮ ಇರುತ್ತದೆ. ಆ ನಿಯಮವನ್ನು ತಮಿಳುನಾಡು, ಕರ್ನಾಟಕ ಯಾರೇ ಇರಲಿ ಫಾಲೋ ಮಾಡಬೇಕಾಗುತ್ತದೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Mon, 24 April 23