ಹಳೇ ಮೈಸೂರು ಮೇಲೆ ಬಿಜೆಪಿ ಕಣ್ಣು: ಪ್ರಚಾರದ ಕಣಕ್ಕಿಳಿದ ದೇವೇಗೌಡ, ಕುಮಾರಸ್ವಾಮಿ; ಅಪ್ಪ-ಮಗನ ‍ಒಗ್ಗಟ್ಟಿನ ಶಕ್ತಿ ಪ್ರದರ್ಶನ

|

Updated on: Apr 25, 2023 | 11:10 AM

ಬಿಜೆಪಿ ಪ್ಲಾನ್​​ಗೆ ‍ಒಗ್ಗಟ್ಟಿನ ಶಕ್ತಿ ಪ್ರದರ್ಶನದ ಮೂಲಕ ದೇವೇಗೌಡರ ಕೌಂಟರ್ ಪ್ಲಾನ್. ಇಂದಿನಿಂದ (ಏ.25) ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್​​ ನಾಯಕ ಹೆಚ್​ ಡಿ ದೇವೇಗೌಡ, ಹೆಚ್​.ಡಿ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಹಳೇ ಮೈಸೂರು ಮೇಲೆ ಬಿಜೆಪಿ ಕಣ್ಣು: ಪ್ರಚಾರದ ಕಣಕ್ಕಿಳಿದ ದೇವೇಗೌಡ, ಕುಮಾರಸ್ವಾಮಿ; ಅಪ್ಪ-ಮಗನ ‍ಒಗ್ಗಟ್ಟಿನ ಶಕ್ತಿ ಪ್ರದರ್ಶನ
ಹೆಚ್​.ಡಿ ಕುಮಾರಸ್ವಾಮಿ, ಹೆಚ್​ ಡಿ ದೇವೇಗೌಡ
Follow us on

ಮೈಸೂರು: ಈ ಬಾರಿ ಬಿಜೆಪಿ (BJP) ಹಳೇ ಮೈಸೂರಿನಲ್ಲಿ (Old Mysore) ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ನಿರ್ಧರಿಸಿದ್ದು, “ಮಿಷನ್​ ಹಳೇ ಮೈಸೂರು” ಎಂಬ ಯೋಜನೆ ರೂಪಿಸಿದೆ. ಈ ಮೂಲಕ ಜೆಡಿಎಸ್​​​ನ (JDS) ಭದ್ರಕೋಟೆಯಾಗಿರುವ ಹಳೇ ಮೈಸೂರಿನ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೈಕಮಾಂಡ್​​ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದು ಜೆಡಿಎಸ್​​ ಅನ್ನು ವಿಚಲಿತಗೊಳಿಸಿದೆ. ಹೀಗಾಗಿ ಪ್ರಚಾರದ ಕಣಕ್ಕೆ ಸ್ವತಃ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು (HD Devegowda) ಇಳಿದಿದ್ದು, ಕಮಲ ಅರಳದಂತೆ ಕಸರತ್ತು ನಡೆಸಿದ್ದಾರೆ. ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ತಂದೆ ಹೆಚ್​ ಡಿ ದೇವೇಗೌಡ ಮತ್ತು ಮಗ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumarswamy) ಇಬ್ಬರೂ ಪ್ರತ್ಯೇಕ ಪ್ರಚಾರ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಈ ಸಂಬಂಧ ತಳಮಟ್ಟದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ನಿರಂತರ ಸಭೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಮತ್ತೆ ಜೆಡಿಎಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಇಂದಿನಿಂದ (ಏ.25) ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್​​ ನಾಯಕ ಹೆಚ್​ ಡಿ ದೇವೇಗೌಡ, ಹೆಚ್​.ಡಿ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಜೆಡಿಎಸ್ ಅಭ್ಯರ್ಥಿ, ಪಕ್ಷದಿಂದ ಉಚ್ಚಾಟನೆಗೆ ತೀರ್ಮಾನ

ಕೆ.ಆರ್​.ನಗರ, ಪಿರಿಯಾಪಟ್ಟಣ‌ ಕ್ಷೇತ್ರದಲ್ಲಿ ದೇವೇಗೌಡರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರೇ, ಕೃಷ್ಣರಾಜ, ಚಾಮರಾಜ, ವರುಣಾ, ಟಿ ನರಸೀಪುರದಲ್ಲಿ ಹೆಚ್​ ಡಿ ಕುಮಾರಸ್ವಾಮಿ ಅವರು ಮತಯಾಚನೆ ಮಾಡಲಿದ್ದಾರೆ. ಚುನಾವಣೆ ಮುಗಿಯುವವರೆಗೂ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮತ್ತು ಸಭೆಗಳನ್ನು ನಡೆಸಲು ತೀರ್ಮಾನ ಮಾಡಿದ್ದಾರೆ. ‍ಒಗ್ಗಟ್ಟಿನ ಶಕ್ತಿ ಪ್ರದರ್ಶನದ ಮೂಲಕ ಬಿಜೆಪಿ ಪ್ಲಾನ್​ಗೆ ದೇವೇಗೌಡರು ಕೌಂಟರ್ ಪ್ಲಾನ್ ರೂಪಿಸಿದ್ದಾರೆ.

ಹೆಚ್​ ಡಿ ದೇವೇಗೌಡರ ಪ್ರವಾಸ

ಬೆಳಗ್ಗೆ 11 ಗಂಟೆಗೆ ಪಿರಿಯಾಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ತೆರಳಲಿದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಗೆ ಕೆ. ಆರ್ ನಗರಕ್ಕೆ ಬಂದು, ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಪರ‌ ಹೊಸೂರು, ಸಾಲಿಗ್ರಾಮ, ಮಿರ್ಲೆ ಗ್ರಾಮದಲ್ಲಿ ಪ್ರಚಾರ ಮಾಡಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ ಪ್ರಚಾರ

ಬೆಳಗ್ಗೆ 11 ಗಂಟೆಗೆ ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಮಾಡಿ, ನಂತರ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ‌ಮಂಟಪದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಬಳಿಕ ಜೆಡಿಎಸ್ ಅಭ್ಯರ್ಥಿ ಕೆ.ವಿ ಮಲ್ಲೇಶ್ ಪರ ಮತಯಾಚಿಸಲಿದ್ದಾರೆ.

ಇದಾದ ನಂತರ ಮಧ್ಯಾಹ್ನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ಪರ ಮತಬೇಟೆ ಮಾಡಿ, ಬಳಿಕ ಟಿ ನರಸೀಪುರ ಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಸಭೆ ನಡೆಸಲಿದ್ದಾರೆ.
ಮೇ 10 ರಂದು ಚುನಾವಣೆ ಇದೆ. ಮೇ 8 ರವರೆಗೂ ನಿರಂತರ ಕಾರ್ಯಕ್ರಮಗಳಿವೆ. ಪ್ರತಿ ದಿನವೂ ಮೂರು ಕ್ಷೇತ್ರಗಳಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಹೆಚ್​.ಡಿ ಕುಮಾರಸ್ವಾಮಿಯವರು ನಿನ್ನೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಪಂಚರತ್ನ ಯೋಜನೆ ಸೇರಿದಂತೆ ವಿನೂತನ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯದ 40-50 ಕಡೆ ಅವರು ಪ್ರಚಾರ ಮಾಡುತ್ತಾರೆ. 42 ಕಡೆ ನಾನು ಪ್ರವಾಸ ಮಾಡುತ್ತೇನೆ. ನಮಗೆ ಹಣದ ಬಲವಿಲ್ಲ, ಜನರ ಬಲವಿದೆ. ಜನರ ಆಶೀರ್ವಾದದಿಂದ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​ ಡಿ ಕುಮಾರಸ್ವಾಮಿಯವರು ಕೊಟ್ಟ ಮಾತನ್ನು 2 ಬಾರಿಯೂ ಉಳಿಸಿಕೊಂಡಿದ್ದಾರೆ. ಈ ಬಾರಿ ಕುಮಾರಸ್ವಾಮಿ ಜನ ಬೆಂಬಲ ಕೊಡುತ್ತಾರೆ. ಯಾರು ಎಷ್ಟೆ ಲಘುವಾಗಿ ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಜೆಡಿಎಸ್​ ಕಾಂಗ್ರೆಸ್​ನ ಬಿ ಟೀಂ ಎಂದು ಅಮಿತ್ ಶಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಹೇಳುವ ಭಾವನೆಯಿದೆ. ಅಮಿತ್ ಶಾ ಮಾತನಾಡಿದ್ದಕ್ಕೆಲ್ಲ ನಾನು ಪ್ರತಿಕ್ರಿಯೆ ಕೊಡಬೇಕಿಲ್ಲ. ಚುನಾವಣೆ ಮುಗಿಯುವವರೆಗೂ ಕಾಯೋಣ. ಚುನಾವಣೆ ವೇಳೆ ಫಲಿತಾಂಶ ಕೊಡೋದು ರಾಜ್ಯದ ಜನರು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Tue, 25 April 23