Karnataka election: ಕೇವಲ ಆರು ದಿನಗಳಲ್ಲಿ 12-15 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ
ಏಪ್ರಿಲ್ 28ರಿಂದ ಮೇ 7ರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ರಾಜ್ಯಕ್ಕೆ ಆಗಮಿಸಲಿದ್ದು, 12-15 ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಗಣನೆ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿ ಪರವಾಗಿ ಕೇಂದ್ರ ನಾಯಕರಿಂದ ಪ್ರಚಾರ ತೀವ್ರಗೊಂಡಿದೆ. ಏಪ್ರಿಲ್ 28ರಿಂದ ಮೇ 7ರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ಬಾರಿ ರಾಜ್ಯಕ್ಕೆ ಆಗಮಿಸಲಿದ್ದು, 12-15 ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇವಲ 6 ದಿನಗಳ ಅವಧಿಯಲ್ಲಿ ಹತ್ತಾರು ರೋಡ್ ಶೋ, ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.
ಮೋದಿ ರಾಜ್ಯ ಭೇಟಿಯ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಅವರು ಎರಡು ರಾತ್ರಿ ಕರ್ನಾಟಕದಲ್ಲೇ ತಂಗುವ ಸಾಧ್ಯತೆ ಇದೆ. ಏಪ್ರಿಲ್ 28, 29, ಮೇ 3, 4, 5, 6ರಂದು ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಮೋದಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅನೇಕ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಗಾಗಲೇ ಕರ್ನಾಟಕದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿದ್ದರಿಂದ ನಷ್ಟವಾಗಲ್ಲ, ಬಿಜೆಪಿಯೇ ಗೆಲ್ಲಲಿದೆ; ಹುಬ್ಬಳ್ಳಿಯಲ್ಲಿ ಅಮಿತ್ ಶಾ
ಏಪ್ರಿಲ್ 26ರಂದು ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸಲಿದ್ದು, ಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ. ಯೋಗಿ ಆದಿತ್ಯನಾಥ್ ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 26ರ ಮಧ್ಯಾಹ್ನ 2.30ಕ್ಕೆ ಬಸವನಬಾಗೇವಾಡಿಗೆ ಆಗಮಿಸಲಿರುವ ಯೋಗಿ ಆದಿತ್ಯನಾಥ್, 2.40ಕ್ಕೆ ಮೂಲನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಜೈನಾಪುರ ರಸ್ತೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಪರ ಮತಯಾಚನೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಅದೇ ದಿನ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರವಾಸ ಕೈಗೊಳ್ಳಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 26ರಂದು ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ