ಮುಳಬಾಗಿಲಿನಿಂದ ಜೆಡಿಎಸ್​ ರಥಯಾತ್ರೆ ಆರಂಭ: ವಿಧಾನಸಭಾ ಚುನಾವಣೆ ರಣಕಹಳೆ ಮೊಳಗಿಸಿದ ಎಚ್​ಡಿ ಕುಮಾರಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 01, 2022 | 10:22 AM

ಪಂಚರತ್ನ ರಥಯಾತ್ರೆಯ ಮೂಲಕ ರಾಜ್ಯಾದ್ಯಂತ ಜೆಡಿಎಸ್ ಸಂಘಟನೆ ಚುರುಕುಗೊಳಿಸಲು ಎಚ್​.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಮುಳಬಾಗಿಲಿನಿಂದ ಜೆಡಿಎಸ್​ ರಥಯಾತ್ರೆ ಆರಂಭ: ವಿಧಾನಸಭಾ ಚುನಾವಣೆ ರಣಕಹಳೆ ಮೊಳಗಿಸಿದ ಎಚ್​ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us on

ಕೋಲಾರ: ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಚುರುಕುಗೊಳಿಸಿವೆ. ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್, ಜನಸಂಕಲ್ಪ ಯಾತ್ರೆ ಮತ್ತು ಜಾತಿವಾರು ಸಮಾವೇಶಗಳ ಮೂಲಕ ಬಿಜೆಪಿ ಜನರನ್ನು ಓಲೈಸಲು ಯತ್ನಿಸುತ್ತಿವೆ. ಇತ್ತೀಚೆಗಷ್ಟೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ, ಅವರ ನೂತನ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್) ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಇದೀಗ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗಷ್ಟೇ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್​.ಡಿ.ದೇವೇಗೌಡ ಅವರು ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸುವ ಪ್ರಯತ್ನ ಆರಂಭಿಸಿದ್ದರು. ಜಿ.ಟಿ.ದೇವೇಗೌಡರ ಭೇಟಿಯ ಬೆನ್ನಲ್ಲೇ ಪಕ್ಷದ ಉಮೇದುವಾರರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿತ್ತು. ಇದೀಗ ರಾಜ್ಯಾದ್ಯಂತ ಪಕ್ಷದ ಸಂಘಟನೆ ಚುರುಕುಗೊಳಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಮುಳಬಾಗಲು ತಾಲ್ಲೂಕು ಕುರುಡುಮಲೆ ಕ್ಷೇತ್ರದ ಗಣಪತಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬಹುನಿರೀಕ್ಷಿತ ‘ಪಂಚರತ್ನ ಕಾರ್ಯಕ್ರಮ’ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕರ್ನಾಟಕದ ಜನರಿಗಾಗಿ ಈ ಕಾರ್ಯಕ್ರಮ ರೂಪಿಸಿದ್ದೇನೆ. ರಾಜ್ಯದ 22 ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 40 ಹಳ್ಳಿಗಳಿಗೆ ನಮ್ಮ ಕಾರ್ಯಕ್ರಮಗಳ ವಿವರಗಳನ್ನು ಒದಗಿಸುತ್ತೇವೆ’ ಎಂದು ಕುಮಾರಸ್ವಾಮಿ ಘೋಷಿಸಿದರು.

‘ರಥಯಾತ್ರೆಗಾಗಿ ಆಕರ್ಷಕ ಟ್ಯಾಬ್ಲೋಗಳನ್ನು ರೂಪಿಸಲಾಗಿದೆ. ಉಚಿತ ಶಿಕ್ಷಣ, ಉಚಿತ ಆರೋಗ್ಯ, ರೈತರಿಗೆ ರೈತ ಚೈತನ್ಯ ಕಾರ್ಯಕ್ರಮ, ಕೃಷಿಯಲ್ಲಿ ರೈತ ಸಾಲಗಾರ ಆಗದಂತೆ ಕಾರ್ಯಕ್ರಮ, ಪ್ರತಿ ಕುಟುಂಬಕ್ಕೆ ಉದ್ಯೋಗ ಭರವಸೆ, ಹಿರಿಯ ನಾಗರಿಕರಿಗೆ ಗೌರವ ಧನ, ವಿಕಲಚೇತನರು, ವಿಧವೆಯರಿಗೆ ಗೌರವಧನ ವ್ಯವಸ್ಥೆ ಸೇರಿದಂತೆ ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ನಾವು ಅಧಿಕಾರಕ್ಕೆ ಬಂದರೆ ಜನರಿಗೆ ಕೊಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

‘ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಹಣದ ಅಬ್ಬರ ಇದೆ. ಇದಕ್ಕೆ ಜನರು ತಕ್ಕ ಉತ್ತರ ಕೊಡುತ್ತಾರೆ. ಜೆಡಿಎಸ್ ಮುಗಿದು ಹೋಗಿದೆ ಎನ್ನುವವರಿಗೆ ಇಲ್ಲಿಂದಲೇ ಉತ್ತರ ಕೊಡುತ್ತೇವೆ. ಇಂದಿನಿಂದ ಒಂದು ತಿಂಗಳು ಮೊದಲ ಹಂತದ ರಥಯಾತ್ರೆ ನಡೆಸಲಿದ್ದೇವೆ. ಮಿಷನ್ 123 ನಮ್ಮ ಗುರಿಯಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೇರಿದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ’ ಎಂದು ಅವರು ಘೋಷಿಸಿದರು.

ಜೆಡಿಎಸ್​ ಪಂಚರತ್ನ ರಥಯಾತ್ರೆಯು ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ ಜಿಲ್ಲೆಗಳಲ್ಲಿ 35 ದಿನಗಳ ಕಾಲ ಸಂಚರಿಸಲಿದೆ. ಡಿ 6 ರಂದು ಆನೇಕಲ್‌ನಲ್ಲಿ ಮೊದಲ‌ ಹಂತದ ರಥಯಾತ್ರೆ ಮುಕ್ತಾಯವಾಗಲಿದೆ. ರಥಯಾತ್ರೆ ವೇಳೆ ವಿವಿಧ ವರ್ಗಗಳ ಜೊತೆ ಕುಮಾರಸ್ವಾಮಿ ಸಂವಾದ ನಡೆಸಲಿದ್ದಾರೆ. ಆ ಭಾಗದ ಸ್ಥಳೀಯ ಮುಖಂಡರು, ಪಕ್ಷದ ನಾಯಕರ ಜೊತೆ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಶಮನಕ್ಕೂ ರಥಯಾತ್ರೆಯನ್ನು ಎಚ್​ಡಿಕೆ ವೇದಿಕೆಯಾಗಿಸಿಕೊಂಡಿದ್ದಾರೆ. ಪ್ರತಿದಿನದ ಅಂತ್ಯಕ್ಕೆ ಯಾತ್ರೆ ಮುಕ್ತಾಯವಾಗುವ ಗ್ರಾಮದಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಪಂಚರತ್ನ ರಥಯಾತ್ರೆಗೆ ಚಾಲನೆ ಸಿಕ್ಕ ನಂತರ ಕೋಲಾರ ಜಿಲ್ಲೆಯ ಮುಳಬಾಗಿಲಿನ ಬೈಪಾಸ್​ ಬಳಿ ಜೆಡಿಎಸ್ ಸಮಾವೇಶವನ್ನು ಆಯೋಜಿಸಿದೆ. ಸಮಾವೇಶದಲ್ಲಿ ಜೆಡಿಎಸ್​ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅವರು ಬಿಡುಗಡೆ ಮಾಡಲಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್​​​ನ ಬಹುತೇಕ ನಾಯಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 2 ಲಕ್ಷ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ.

Published On - 10:22 am, Tue, 1 November 22