ಹಾಸನ: ಭಾರೀ ಜನಸ್ತೋಮದ ಎದುರು ಜೆಡಿಎಸ್ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಭಾನುವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಕೆ.ಎಂ ಶಿವಲಿಂಗೇಗೌಡ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನನಗೆ ಸಚಿವ ಸ್ಥಾನ ನೀಡಿ ಎಂದು ಪರೋಕ್ಷವಾಗಿ ಮನವಿ ಮಾಡಿದರು. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಸೇರಿದ್ದೇನೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಮಡಿಲಿಗೆ ಬಂದಿದ್ದೇನೆ. ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಅರಸೀಕೆರೆ ಸೇರಿಸಿದ್ದು ಸಿದ್ದರಾಮಯ್ಯ. ಕ್ಷೇತ್ರದ ಮನೆಮನೆಗೆ ನೀರು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಡಿ.ಕೆ ಸುರೇಶ್ರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ನನಗೂ 65 ವರ್ಷ ಆಗಿದೆ. ಹಾಲಲ್ಲಾದರು ಹಾಕಿ ನೀರಲ್ಲಾದ್ರು ಹಾಕಿ. ಆಗ ಪಕ್ಷದ ಮತಗಳು ಎಷ್ಟಿದ್ದವು, ಈಗ 95 ಸಾವಿರಕ್ಕೆ ಮುಟ್ಟಿಸಿದ್ದೇನೆ ಎಂದು ಜೆಡಿಎಸ್ ವಿರುದ್ದ ಗುಡುಗಿದರು. ಸಿದ್ದರಾಮಯ್ಯರನ್ನ ಹೊಗಳಿದ್ದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಕೆಲಸ ಮಾಡಲು ಸಿದ್ಧ: ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಡಿಕೆ ಶಿವಕುಮಾರ್
ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರಕ್ಕೆ ಇಳಿದಿದೆ. ರಾಜಕಾರಣಿಗಳ ಮಾನ ಮಾರ್ಯಾದೆಯನ್ನು ಬೀದಿಯಲ್ಲಿ ಹರಾಜಿಗೆ ಇಟ್ಟಿದ್ದಾರೆ. ನಿಮ್ಮಂಥ ನೀತಿಗೆಟ್ಟ ಮಾನಗೆಟ್ಟ ಸರ್ಕಾರ ನೋಡಿಲ್ಲ. ಬಿಜೆಪಿಯವರು ಊರೂರಿಗೆ ಬಾರ್ ಕೊಟ್ಟಿದ್ದೇ ಸಾಧನೆ. ಗ್ಯಾಸ್ ಬೆಲೆ 1200 ಆಗಿದೆಯಲ್ಲಾ ನಿಮಗೆ ಮಾನಾ ಮಾರ್ಯಾದೆ ಇದೆಯಾ. ಜನ ಗ್ಯಾಸ್ ನಂಬಿ ಓಲೆ ಕಿತ್ತು ಹಾಕಿದ್ದಾರೆ. ಈಗ ಗ್ಯಾಸ್ ಬೆಲೆ ಏರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅದಾನಿ ಪರವಾಗಿ ಇರುವ ಪಕ್ಷ. ನಿಮಗೆ ಬಹಳ ಕಾಲ ಉಳಿಗಾಲ ಇಲ್ಲಾ ಎಂದು ಕಿಡಿಕಾರಿದರು.
ಜಲದಾರೆ ಕಾರ್ಯಕ್ರಮಕ್ಕೆ ಹೋಗದೆ ಅರಸೀಕೆರೆ ಕ್ಷೇತ್ರಕ್ಕೆ ಎಂಎಲ್ಸಿ ಕೊಡಿ ಎಂದು ಕೇಳಿದ್ದೆ ಕೊಡಲಿಲ್ಲ. ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿ ಎಂದು ಹೋರಾಟ ಮಾಡಿದರೆ ನಾಟಕ ಮಾಡಿದ್ದಾ ಅಂತಾರೆ. ದೊಡ್ಡ ಗೌಡರ ಬಾಯಲ್ಲಿ ಇಂತಹ ಮಾತು ಬಂದ ಮೇಲೆ ಈ ಪಕ್ಷದಲ್ಲಿ ಇರ ಕೂಡದು ಎಂದು ತೀರ್ಮಾನ ಮಾಡಿದ್ದೆ. ರಾಜಕೀಯವೇ ಬೇಡ ಎಂದು ಕೊಂಡಿದ್ದೆ, ಆದರೆ ಜನರು ಬಿಡಲಿಲ್ಲ ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections: ಕಲಘಟಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆ
ಡಿ.ಕೆ.ಶಿವಕುಮಾರ್ ಮಾತನಾಡಿ, ಅಧಿಕಾರ ನಶ್ವರ, ಶಿವಲಿಂಗೇಗೌಡ್ರು ಮಾಡಿರುವ ಅಭಿವೃದ್ಧಿ ಕೆಲಸ ಅಜರಾಮರ, ಮತದಾರರೇ ಈಶ್ವರ. ಶಿವಲಿಂಗೇಗೌಡ್ರಿಗೆ ತುಂಬು ಹೃದಯದ ಸ್ವಾಗತವನ್ನು ಬಯಸುತ್ತೇನೆ. ಇವತ್ತು ಶಿವಲಿಂಗೇಗೌಡ್ರನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿದ್ದೇವೆ. ಶಿವಲಿಂಗೇಗೌಡ್ರಿಗೆ ಕಳೆದು ಹತ್ತು ವರ್ಷದಿಂದ ಗಾಳ ಹಾಕುತ್ತಿದೆ. ಆದರೆ ನಮ್ಮ ಗಾಳಕ್ಕೆ ಬಿದ್ದೇ ಇರಲಿಲ್ಲ. ಅವರು ನನ್ನ ಗಾಳಕ್ಕೂ ಬಿದ್ದಿರಲಿಲ್ಲ, ಸಿದ್ದರಾಮಯ್ಯನವರ ಗಾಳಕ್ಕೂ ಬಿದ್ದಿರಲಿಲ್ಲ. ಅವರು ಈ ಕ್ಷೇತ್ರದ ಜನರ ಗಾಳಕ್ಕೆ ಬಿದ್ದಿದ್ದಾರೆ. ನಮ್ಮ ಕಷ್ಟಕಾಲದಲ್ಲಿ ನೀವು ಧ್ವಜ ಹಿಡಿದಿದ್ದೀರಾ. ರಾಜಕಾರಣದಲ್ಲಿ ವೈಷಮ್ಯಗಳು ಇದ್ದೇ ಇರುತ್ತವೆ. ನಮಗೆ ನಿಮಗೆ ಎಲ್ಲರಿಗೂ ಒಂದೇ ಗುರಿ ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Sun, 9 April 23