Karnataka Assembly Election 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಬಿಜೆಪಿಯ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೀಗೆ ಹಲವು ನಾಯಕರು ಮತಯಾಚಿಸುತ್ತಿದ್ದಾರೆ. ಇದಲ್ಲದೆ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟಿದ್ದು, ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಾಳಯದಲ್ಲೂ ಅಬ್ಬರದ ಪ್ರಚಾರ ನಡೆಯುತ್ತಿದ್ದೆ. ಕೇಂದ್ರ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಾಜ್ಯ ಸುತ್ತುತ್ತಿದ್ದಾರೆ. ಇನ್ನು ಹೈವೋಲ್ಟೆಜ್ ಕ್ಷೇತ್ರವಾದ ವರುಣಾದಲ್ಲಿ ಚಲನಚಿತ್ರ ಸ್ಟಾರ್ಗಳೇ ಅಖಾಡಕ್ಕೆ ಇಳಿದಿದ್ದಾರೆ. ನಟರಾದ ಶಿವರಾಜ್ ಕುಮಾರ್, ದುನಿಯಾ ವಿಜಯ ಹಾಗೇ ನಟಿ ಕಮ್ ರಾಜಕಾರಣಿ ರಮ್ಯ ವಿಪಕ್ಷನಾಯಕ ಸಿದ್ದರಾಮಯ್ಯ ಪರ ಮತಬೇಟೆ ಶುರುಮಾಡಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
ನಾಳೆ ಶೃಂಗೇರಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ. ಡಿ.ಎನ್.ಜೀವರಾಜ್ ಪರ ಪ್ರಚಾರ ನಡೆಸಿದ ನಂತರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಪುತ್ತೂರಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರ, ರೋಡ್ ಶೋ ನಡೆಸಲಿದ್ದಾರೆ. ನಂತರ ಬಂಟ್ವಾಳದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಳೆ ಹುಬ್ಬಳ್ಳಿಯಲ್ಲಿ ನಾಳೆ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಸಂಜೆ 5.30ಕ್ಕೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸೋನಿಯಾ ಗಾಂಧಿ ಜೊತೆ ರಾಹುಲ್ ಗಾಂಧಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ರಾಮನಗರ ಕ್ಷೇತ್ರದ ಸುಗ್ಗನಹಳ್ಳಿಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಚುನಾವಣಾ ಪ್ರಚಾರ ಭಾಷಣ ವೇಳೆ ಭಾವುಕರಾದ ಹೆಚ್.ಡಿ.ದೇವೇಗೌಡ, ಎಲ್ಲಾ ಕಡೆ ಸುತ್ತಾಡಿ ಈ ಊರಿಗೆ ಬಂದಾಗ ನನಗೆ ಊಟ ಹಾಕಿದ್ದೀರಿ. ಈ ಮಣ್ಣಿನ ಅನ್ನದ ಋಣ ನನ್ನ ಮೇಲಿದೆ, ಕೈಚಾಚಲು ಬಂದಿದ್ದೇನೆ. ಮಂಡ್ಯದಲ್ಲಿ ನಿಖಿಲ್ನನ್ನು ಮೋಸ, ಕುತಂತ್ರದಿಂದ ಸೋಲಿಸಿದ್ದರು. ರಾಮನಗರದ ಜನತೆ ನಿಖಿಲ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಮುದುಕ ಬಂದು ಮತ ಕೇಳುತ್ತಿದ್ದಾನೆಂದು ವ್ಯಂಗ್ಯ ಮಾಡಿದ್ರು. ಬಿಜೆಪಿಯವರು ಹಿಂದಿನ ಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ. ಕಾಂಗ್ರೆಸ್ನವರ ಕೈಯಲ್ಲಿ ಯಾವುದೇ ಅಭಿವೃದ್ಧಿ ಮಾಡಲು ಆಗಲಿಲ್ಲ. ನೀವು ನಮ್ಮನ್ನು ಉಳಿಸಿದ್ರಿ, ಪ್ರಧಾನಮಂತ್ರಿಯನ್ನೂ ಮಾಡಿದ್ದೀರಿ. ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ, ದಯವಿಟ್ಟು ನಿಖಿಲ್ ಗೆಲ್ಲಿಸಿ. 90ನೇ ವಯಸ್ಸಿನಲ್ಲಿ ನಿಮ್ಮ ಮುಂದೆ ನಾನು ಕೈಚಾಚಿ ಕೇಳುತ್ತಿದ್ದೇನೆ. ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಮುಂದಿನ ದಿನಗಳಲ್ಲಿ ನಿಖಿಲ್ ಶ್ರೇಷ್ಠ ನಾಯಕನಾಗುತ್ತಾನೆ. ಕುಮಾರಸ್ವಾಮಿ ಸಿಎಂ ಆಗೋದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ ಎಂದು ದೇವೇಗೌಡ ಹೇಳಿದರು.
ವರುಣ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಓಲೈಕೆಗೆ ಸಿದ್ದರಾಮಯ್ಯ ಕಸರತ್ತು ಮುಂದುವರಿದೆ. ನಾಳೆ ವರುಣ ವೀರಶೈವ ಲಿಂಗಾಯತ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸಭೆ ಕರೆಯಲಾಗಿದೆ. ವರುಣ ಕ್ಷೇತ್ರದ ಹದಿನಾರು ಗ್ರಾಮಗಳಲ್ಲಿ ಸಭೆ ನಡೆಯಲಿದೆ. ಎಂ ಬಿ ಪಾಟೀಲ್ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಡಾ ಯತೀಂದ್ರ ಸಿದ್ದರಾಮಯ್ಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ವೀರಶೈವ ಲಿಂಗಾಯತ ಮತಗಳ ಕ್ರೋಢಿಕರಣಕ್ಕೆ ರಣತಂತ್ರ ರೂಪಿಸಲು ಸಭೆ ಕರೆಯಲಾಗಿದೆ ಎನ್ನಲಾಗಿದೆ.
ನಾಳೆ ಯಾದಗಿರಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತಯಾಚನೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಲಿರುವ ಸ್ಮೃತಿ ಇರಾನಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಪರ ಪ್ರಚಾರ ನಡೆಸಲಿದ್ದಾರೆ. ಯಾದಗಿರಿ ನಗರದ ಎನ್‌ವಿಎಂ ಹೋಟೆಲ್ ಮುಂದೆ ಸಮಾವೇಶ ನಡೆಯಲಿದೆ.
ಮೂಡಿಗೆರೆಯಲ್ಲಿ ಚುನಾವಣಾ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಲಿಕಾಪ್ಟರ್ ತಪಾಸಣೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಗೆ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಪರ ಪ್ರಚಾರಕ್ಕೆ ಆಗಮನ ಡಿಕೆಶಿ ಆಗಮಿಸಿದರು. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ‘ಕೈ’ ಅಭ್ಯರ್ಥಿ ನಯನಾ ಮೋಟಮ್ಮ ಪರ ಪ್ರಚಾರಕ್ಕೆ ಹೊನ್ನಾಳಿ, ಚನ್ನಗಿರಿ ಪ್ರವಾಸ ಮುಗಿಸಿ ಅವರು ಆಗಮಿಸಿದರು.
ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಪಕ್ಷವನ್ನು ಬಲಪಡಿಸಿ ಎಂದು ಪ್ರಧಾನಿ ಮೋದಿ ಹೇಳಿದರು. ಸಮಾವೇಶದಲ್ಲಿ ನನ್ನದೊಂದು ಸಣ್ಣ ಕೆಲಸ ಮಾಡುವಂತೆ ನೆರೆದ ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದರು.‘ಪ್ರತಿ ಮನೆ ಮನೆಗೆ ಭೇಟಿ ನೀಡಿ ನನ್ನ ನಮಸ್ಕಾರಗಳನ್ನು ತಿಳಿಸಿ’ ‘ಮೋದಿ ತುಮಕೂರಿಗೆ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ’ ಪ್ರತಿ ಮನೆಗೆ ಭೇಟಿ ನೀಡಿ ನನ್ನ ನಮಸ್ಕಾರ, ಪ್ರಣಾಮಗಳನ್ನು ತಿಳಿಸಿ. ಅವರೆಲ್ಲರ ಆಶೀರ್ವಾದದಿಂದ ಸೇವೆ ಮಾಡಲು ಹೆಚ್ಚಿನ ಶಕ್ತಿ ಸಿಗಲಿದೆ ಎಂದರು.
ತುಮಕೂರು: 85% ಕಮಿಷನ್ ಪಡೆಯುವ ಕಾಂಗ್ರೆಸ್ಸಿಗರೇ ಸರಿಯಾಗಿ ಕೇಳಿಸಿಕೊಳ್ಳಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೆಹಲಿಯಿಂದ 1 ರೂಪಾಯಿ ಕಳಿಸಿದರೆ 15 ಪೈಸೆ ತಲುಪುತ್ತಿತ್ತು. ಇದನ್ನು ಕಾಂಗ್ರೆಸ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ಇತ್ತೆಂದು ಗೊತ್ತಾಗುತ್ತಿದೆ. ಕಾಂಗ್ರೆಸ್ನ 85% ಕಮಿಷನ್ ದಂಧೆಯಿಂದ ಅಭಿವೃದ್ಧಿ ಆಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ತುಮಕೂರು: ಕಾಂಗ್ರೆಸ್ ಅವಧಿಯಲ್ಲಿ ಹೆಚ್ಎಎಲ್ ಸಂಪೂರ್ಣ ನಷ್ಟದಲ್ಲಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಧುನಿಕ ಶಸ್ತ್ರಾಸ್ತ್ರ ತಯಾರಿ ಮಾಡಲಾಗತ್ತಿದೆ. ಆ ಮೂಲಕ ದೇಶದ ನಮ್ಮ ಸೇನೆಯನ್ನು ಸಂಪೂರ್ಣವಾಗಿ ಬಲಪಡಿಸಿದ್ದೇವೆ ಎಂದು ಮೋದಿ ಹೇಳಿದರು. ಮೂಲಸೌಕರ್ಯ ಅಭಿವೃದ್ಧಿಗೊಳಿಸದಿದರೆ ರೈತರ ಅಭಿವೃದ್ಧಿಯಾಗಲ್ಲ. ಈ ದೃಷ್ಟಿಯಿಂದ ಮೂಲಸೌಕರ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದೇವೆ ಎಂದರು.
ತುಮಕೂರು: ಬಡವರ ಮಕ್ಕಳು ಉದ್ದಾರವಾಗಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್‌ನವರು ಬಡವರ ಮಕ್ಕಳ ಉದ್ಧಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಯುವಕರ ಭವಿಷ್ಯಕ್ಕೆ ತಡೆಯುತ್ತಿವೆ. ಕರ್ನಾಟಕದ ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರದೃಷ್ಟಿ ಇಲ್ಲ. ಕಾಂಗ್ರೆಸ್ 85% ಕಮಿಷನ್ ಪಡೆದು ದೇಶವನ್ನು ಹಾಳು ಮಾಡಿದೆ ಎಂದರು.
ತುಮಕೂರು: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದ ಮೋದಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್, ಜೆಡಿಎಸ್ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನಾವು 5 ಸಾವಿರ ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟಿದ್ದೇವೆ ಎಂದರು. ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕದ ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ಆಧುನಿಕ ಶಿಕ್ಷಣ ನೀತಿ ಜಾರಿಗೊಳಿಸಿದೆ. ಆ ಮೂಲಕ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶ ಮಾಡಿಕೊಡಲಾಗಿದೆ. ದೇಶದ ರೈತರ ಮಕ್ಕಳು ಕೂಡ ವೈದ್ಯ, ಇಂಜಿನಿಯರ್ ಆಗಬೇಕು. ಆದರೆ ಕಾಂಗ್ರೆಸ್ ನಾಯಕರು ತಾವು ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದುಹಾಕುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ದೇಶದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ, ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆ ತಂದಿದೆ ಎಂದು ಪ್ರಧಾನಿ ಮೋದಿ ತುಮಕೂರಿನಲ್ಲಿ ಹೇಳಿದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ವೇಗ ಹೆಚ್ಚಿದೆ ಎಂದು ಹೇಳಿದ ಮೋದಿ, 3 ಕೋಟಿಗೂ ಹೆಚ್ಚು ಮನೆಗಳು ಮಹಿಳೆಯರ ಹೆಸರಿನಲ್ಲಿವೆ. ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಮಾಡತ್ತಿದ್ದೇವೆ, ತುಮಕೂರು ಜಿಲ್ಲೆಯ 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸಿದ್ದೇವೆ ಎಂದರು.
ತುಮಕೂರು: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಕೇಂದ್ರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದೇವೆ. ಯಾವುದೇ ಹಣ ಸೋರಿಕೆಯಾಗದೇ ಫಲಾನುಭವಿಗಳಿಗೆ ತಲುಪಿಸಿದ್ದೇವೆ. ತುಮಕೂರು ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿದೇಶದಿಂದ 50 ರೂ. ನೀಡಿ ಯೂರಿಯಾ ಗೊಬ್ಬರ ಖರೀದಿಸುತ್ತೇವೆ. ಸರ್ಕಾರ ರೈತರಿಗೆ ಕೇವಲ 5 ರೂ.ಗೆ ಯೂರಿಯಾ ಗೊಬ್ಬರ ವಿತರಿಸುತ್ತಿದೆ ಎಂದರು.
ತುಮಕೂರು: ಪವಿತ್ರ ಭೂಮಿ ಸಿದ್ಧಗಂಗಾ ಶ್ರೀಗಳ ಸಾನಿಧ್ಯಕ್ಕೆ ಬಂದಿದ್ದೇನೆ ಎಂದು ಹೇಳಿದ ಮೋದಿ, ಬಿಜೆಪಿ ಅನ್ನ, ಅಕ್ಷರ, ಆದಾಯ 7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ ಎಂದರು. ತುಮಕೂರಿನಲ್ಲಿ ಅನೇಕ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಗತಿ ನೀಡಿದೆ ಎಂದರು.
ತುಮಕೂರ: ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ತುಷ್ಟೀಕರಣದ ಗುಲಾಮ ಆಗಿ ಪರಿವರ್ತನೆಗೊಂಡಿದೆ ಎಂದರು. ಕರ್ನಾಟಕವನ್ನು ಜೆಡಿಎಸ್, ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ಮಾತ್ರ ಕರ್ನಾಟಕ ಜೊತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ತುಮಕೂರು: ಲ್ಪತರು ನಾಡಿಗೆ ಕನ್ನಡದಲ್ಲೇ ನಮಸ್ಕರಿಸಿದ ಮೋದಿ, ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠದ ಶ್ರೀಗಳನ್ನು ಸ್ಮರಿಸಿದರು. ಸಾಧುಸಂತರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು. ರೋಡ್ಶೋ ಹಾಗೂ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದಾಗಲೇ ಬಿಜೆಪಿ ಸರ್ಕಾರ ಖಚಿತ ಎಂಬುದನ್ನು ತೋರಿಸತ್ತದೆ ಎಂದರು.
ತುಮಕೂರು: ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರವ ಬಿಜೆಪಿ ಸಮಾವೇಶದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಸೇರಿದ ಜನರಿಗೆ ಮೋದಿಯವರು ನಮಸ್ಕರಿಸಿದರು. ಇದೇ ವೇಳೆ ಸ್ವಾಗತ ಕೋರಿ ಬೃಹತ್ ಹಾರ ಹಾಕಲಾಯಿತು.
ತಮಕೂರು: ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮಕೂರಿಗೆ ಆಗಮಿಸಿದ್ದಾರೆ. ವಿವಿ ಹೆಲಿಪ್ಯಾಡ್‌ನಿಂದ ಸಮಾವೇಶಕ್ಕೆ ತೆರಳುವ ದಾರಿಯುದ್ದಕ್ಕೂ ಮೋದಿ ರೋಡ್ ಶೋ ನಡೆಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಹೋವಿನ ಮಳೆ ಸುರಿಯತ್ತಿದ್ದಾರೆ.
ಬಳ್ಳಾರಿಯಿಂದ ಪ್ರಧಾನಿ ಮೋದಿ ತುಮಕೂರು ವಿವಿ ಹೆಲಿಪ್ಯಾಡ್ಗೆ ಆಗಮಿಸಿದರು. ಐಎಎಫ್ನ MI-17 ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಪ್ರಧಾನಿಯನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು. ಕೆಲವೇ ಕ್ಷಣಗಳಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ. ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ.
ಹಳೇ ಮೈಸೂರು ಭಾಗದ ಟಿ.ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ಹಾಗೂ
ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಬಿಜೆಪಿಯನ್ನು ಗೆಲ್ಲಿಸಲು ಜನ ನಿರ್ಧಾರ ಮಾಡಿದ್ದಾರೆ. ವಿ.ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ ಎಂದು ಅರ್ಥ. ಸೋಮಣ್ಣಗೆ ಜನರ ಸೇವೆ ಮಾಡೋದು ಬಿಟ್ಟು ಬೇರೆ ಗೊತ್ತಿಲ್ಲ. ಗೋವಿಂದರಾಜನಗರದ ಅಭಿವೃದ್ಧಿ ವರುಣಗೆ ಬೇಕೋ ಬೇಡವೋ? ಟಿ.ನರಸೀಪುರ ಕ್ಷೇತ್ರಕ್ಕೆ ಡಾ.ರೇವಣ್ಣ ಸೇವೆ ಬೇಕೋ ಬೇಡವೋ? ಈ ಬಾರಿ ಟಿ.ನರಸೀಪುರ, ವರುಣ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.
ಕೊಪ್ಪಳ ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿದರು. ಮಸಬಹಂಚಿನಾಳ ಗ್ರಾಮದ ಹೆಲಿಪ್ಯಾಡ್ ಗೆ ಆಗಮಿಸಿದ ನಡ್ಡಾ, ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಕುಕನೂರು ಪಟ್ಟಣದಲ್ಲಿ ಪ್ರಚಾರ ನಡೆಸಲಿದ್ದಾರೆ. ಜೆ ಪಿ ನಡ್ಡಾ ಜೊತೆಗೆ ಕೇಂದ್ರ ಸಚಿವ ಭಗವಂತ ಖೂಬಾ, ಗೋವಿಂದ ಕಾರಜೋಳ ಆಗಮಿಸಿದರು. ಅವರನ್ನು ಸ್ಥಳೀಯ ಬಿಜೆಪಿ ಮುಖಂಡರು ಸ್ವಾಗತಿಸಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮೆಲ್ಲಹಳ್ಳಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರ ವ್ಯಾಪ್ತಿಯ ಮೆಲ್ಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಈ ಹಿಂದೆ ವರುಣ ಕ್ಷೇತ್ರದಲ್ಲಿ ನನ್ನನ್ನು ಎರಡು ಬಾರಿ ಗೆಲ್ಲಿಸಿದ್ರಿ. ಒಮ್ಮೆ ವಿರೋಧ ಪಕ್ಷದ ನಾಯಕ, ಇನ್ನೊಮ್ಮೆ ಸಿಎಂ ಆಗಿದ್ದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಇದೆ. ಮತ್ತೆ ಮತ ನೀಡಿ, ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ನಾನು ಮಾತು ಕೊಟ್ಟ ಮೇಲೆ ತಪ್ಪಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಗದಗ ಜಿಲ್ಲೆಯ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಗದಗ ಕ್ಷೇತ್ರದಲ್ಲಿ ಒಂದು ಸ್ಥಾನ ಕಳೆದುಕೊಂಡಿದ್ದೇವೆ. ಗದಗ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಗೆಲ್ಲಲಿದೆ. ಶಾಸಕ ಎಚ್ಕೆ ಪಾಟೀಲ್ ಐದು ವರ್ಷದ ಕ್ಷೇತ್ರದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಅಂತ ಜನ್ರಿಗೆ ಗೊತ್ತಿದೆ. ಗದಗ ಕ್ಷೇತ್ರದ ಜನರಿಗೆ ಕುಡಿಯಲು ನೀರು ಸಿಗುತ್ತಾ ಇಲ್ಲ. ಆ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಅಂತ ಕಿಡಿ ಕಾರಿದರು. ರಾಜ್ಯದಲ್ಲಿ, ಗದಗನಲ್ಲಿ ಬಿಜೆಪಿ ಪರ ದೊಡ್ಡ ಅಲೆ ಇದೆ. ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಗೆಲ್ತಾರೆ. ಎಚ್ ಕೆ ಪಾಟೀಲ್ರು ತಮ್ಮ ಜೀವನದ ಮೂರನೇ ಸೋಲು ಅನುಭವಿಸ್ತಾರೆ. ಒಮ್ಮೆ ಎಂಎಲ್ಸಿ, ಮತ್ತೊಮ್ಮೆ ಎಂಎಲ್ ಎ ಸ್ಥಾನಕ್ಕೆ ನಿಂತು ಸೋತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ಗೆಲುವು ಶತಸಿದ್ಧಿ ಎಂದು ಜೋಶಿ ಹೇಳಿದರು.
ಬಳ್ಳಾರಿ ಸಮಾವೇಶದ ವೇದಿಕೆಯಿಂದ ನಿರ್ಗಮಿಸಿದ ಪ್ರಧಾನಿ ಮೋದಿ, ಸಮಾವೇಶದ ವೇದಿಕೆಯಿಂದ ಹೆಲಿಪ್ಯಾಡ್ಗೆ ತೆರಳಿದರು. ಬಳಿಕ ಸೇನಾ ಹೆಲಿಕಾಪ್ಟರ್ನಲ್ಲಿ ತುಮಕೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಸುಡಾನ್ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ಸುಡಾನ್ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ‘ಆಪರೇಷನ್ ಕಾವೇರಿ’ ಮೂಲಕ ಸ್ವದೇಶಕ್ಕೆ ಕರೆತಂದಿದ್ದೇವೆ
ಎಂತಹ ಕಠಿಣ ಸಂದರ್ಭದಲ್ಲೂ ಸುರಕ್ಷಿತವಾಗಿ ಕರೆತಂದಿದ್ದೇವೆ. ಎಂತಹ ಸಂದರ್ಭದಲ್ಲೂ ಮೋದಿ ಸರ್ಕಾರ ನಿಮ್ಮ ರಕ್ಷಣೆಗೆ ಇದೆ ಎಂದು ಮೋದಿ ಹೇಳಿದರು. ಜತೆಗೆ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆಯೂ ಪ್ರಸ್ತಾಪಿಸಿದರು. ಪಾಕಿಸ್ತಾನದಿಂದ ಸುರಕ್ಷಿತವಾಗಿ ಅಭಿನಂದನ್ರನ್ನು ಕರೆತಂದಿದ್ದೇವೆ. ಸಾವಿರಾರು ವಿದ್ಯಾರ್ಥಿಗಳನ್ನು ಉಕ್ರೇನ್ನಿಂದ ಕರೆತರಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು, ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ನಾವು ಕರೆತಂದಿದ್ದೇವೆ ಎಂದು ಮೋದಿ ಹೇಳಿದರು.
ಬಳ್ಳಾರಿಯ ನಿಮ್ಮ ಪ್ರೀತಿ, ಉತ್ಸಾಹ ನಾನು ಎಂದೂ ಮರೆಯುವುದಿಲ್ಲ ಎಂದು ಬಿಜೆಪಿ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಬಿಜೆಪಿ ಬುಡಕಟ್ಟು ಸಮುದಾಯವನ್ನು ಸಶಕ್ತೀಕರಣಗೊಳಿಸಿದೆ. ಕಾಂಗ್ರೆಸ್ ಬುಡಕಟ್ಟು ಸಮುದಾಯಕ್ಕೆ ಅವಮಾನ ಮಾಡ್ತಿದೆ. ಸಮಾಜದ ವಂಚಿತ ಜನರ ಅಭಿವೃದ್ಧಿಯನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ. ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ರೆ ಅಪಮಾನಿಸುತ್ತಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿ ಆದ್ರೆ ಕಾಂಗ್ರೆಸ್ನವರಿಗೆ ಹೊಟ್ಟೆಕಿಚ್ಚು. ಹಿಂದುಳಿದವರ ಅಭಿವೃದ್ಧಿ ಕಾಂಗ್ರೆಸ್ ಪಕ್ಷ ಎಂದೂ ಸಹಿಸುವುದಿಲ್ಲ ಎಂದು ಮೋದಿ ಟೀಕಿಸಿದರು.
ಸ್ವಾತಂತ್ರ್ಯದ ಬಳಿಕ ದೇಶದ ವ್ಯವಸ್ಥೆಯನ್ನು ಕಾಂಗ್ರೆಸ್ ಭ್ರಷ್ಟ ಮಾಡಿತ್ತು. ಭ್ರಷ್ಟಾಚಾರವನ್ನು ಮಾಡಿ ದೇಶದ ಜನರನ್ನು ಮೋಸ ಮಾಡಿದೆ. ಸುಳ್ಳು ಸರ್ವೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸುಳ್ಳು ಸರ್ವೆ ಮಾಡಿಸಿದೆ. ಹಣ ಬಲದ ಜೊತೆಗೆ ಸುಳ್ಳು ಸರ್ವೆ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡುತ್ತೇವೆ. ಬಿಜೆಪಿ ಪ್ರಣಾಳಿಕೆಯನ್ನು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಸುಳ್ಳು ಮೂಟೆಯ ಪ್ರಣಾಳಿಕೆಯನ್ನು ಹೊರಡಿಸಿದೆ. ಪ್ರಣಾಳಿಕೆಯಲ್ಲಿ ಬಜರಂಗಳ ನಿಷೇಧ ಮಾಡುವುದಾಗಿ ಘೋಷಿಸಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿ ದೇಶದ ಜನರನ್ನು ಮೋಸ ಮಾಡಿದೆ. ಸುಳ್ಳು ಸರ್ವೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸುಳ್ಳು ಸರ್ವೆ ಮಾಡಿಸಿದೆ. ಹಣ ಬಲದ ಜೊತೆಗೆ ಸುಳ್ಳು ಸರ್ವೆ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ನವ ಕರ್ನಾಟಕ ಸಂಕಲ್ಪ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದು, ಬಳ್ಳಾರಿಯ ನನ್ನ ಸಹೋದರ. ಸಹೋದರಿಯರೇ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕನಕದುರ್ಗಮ್ಮ. ಕುಮಾರಸ್ವಾಮಿ ದೇವಾಲಯಕ್ಕೆ ನನ್ನ ನಮಸ್ಕಾರಗಳು. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಆರ್ಶಿವಾದ ಮಾಡಲು ಆಗಮಿಸಿದ್ದೀರಾ. ನಿಮ್ಮಗೆ ನನ್ನ ನಮಸ್ಕಾರಗಳು. ನಿನ್ನೆ ರಾತ್ರಿ ಮಳೆ ಬಂದ್ರೂ ದೊಡ್ಡ ಸಂಖ್ಯೆಯಲ್ಲಿ ಎಲ್ಲರೂ ಬಂದಿದ್ದೀರಾ. ಇದೇ ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಮೋದಿ ಹೇಳಿದರು.
ಬಳ್ಳಾರಿ: ಸಮಾವೇಶದಲ್ಲಿ ಪ್ರಧಾನಿ ಮೋದಿಯವರನ್ನ ಬಿಜೆಪಿ ಮುಖಂಡರು ಸನ್ಮಾನಿಸಿದ್ದು, ಈ ವೇಳೆ ಕನ್ನಡದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು.
ಬಳ್ಳಾರಿ: ಹೊರವಲಯದ ಸತ್ಯಂ ಕಾಲೇಜು ಬಳಿ ನಡೆಯುತ್ತಿರುವ ಬಿಜೆಪಿ ಸಮಾವೇಶಕ್ಕೆ ಇದೀಗ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಸಮಾವೇಶದ ವೇದಿಕೆಗೆ ಆಗಮಿಸಿದ್ದಾರೆ. ಸಮಾವೇಶದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಅಭ್ಯರ್ಥಿಗಳಾದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಉಪಸ್ಥಿತರಿದ್ದಾರೆ.
ಬಳ್ಳಾರಿ: ಬಳ್ಳಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಬಿಜೆಪಿ ಮುಖಂಡರು ಸ್ವಾಗತಿಸಿದರು.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಡಿಆರ್ ಡಿಓ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದಾರೆ. ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ಪ್ರಯಾಣ ಬೆಳಸಿದ್ದಾರೆ.
ಚಾಮರಾಜನಗರ: ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ನಟ ಸುದೀಪ್ ಅವರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದದ್ದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ನಗರದ ಸಂತೇಮರಹಳ್ಳಿ ವೃತ್ತದ ಬಳಿ ನಡೆದಿದೆ.
ಅಲ್ಲದೇ ಕಾರಿನ ಮೇಲೆ ಸುದೀಪ್ ಜೊತೆ ಕಾರಿನ ಮೇಲೆ ನಿಂತು ವಿ ಸೋಮಣ್ಣ ಜನರತ್ತ ಕೈ ಬೀಸುತ್ತಿದ್ದರು. ಈ ವೇಳೆ ಸುದೀಪ್ ಬಳಿ ತೆರಳಲು ಕಾರಿನ ಮೇಲೆ ಹತ್ತಿದ ಅಭಿಮಾನಿ, ಆಯತಪ್ಪಿ ಸೋಮಣ್ಣರನ್ನು ಎಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಕಾರಿನ ಟಾಟ್ನಿಂದ ಕೆಳಗೆ ಬೀಳದಂತೆ ಸೋಮಣ್ಣರನ್ನ ಬೌನ್ಸರ್ ಹಿಡಿದುಕೊಂಡಿದ್ದಾರೆ.
ಹುಬ್ಬಳ್ಳಿ: ಬಜರಂಗದಳ ಬ್ಯಾನ್ ವಿಚಾರವಾಗಿ ಕಾಂಗ್ರೆಸ್ನಲ್ಲಿಯೇ ಗೊಂದಲವಿದೆ. ನಾವು ಬಜರಂಗದಳವನ್ನು ಬ್ಯಾನ್ ಮಾಡುವುದಿಲ್ಲ ಎಂದು ವೀರಪ್ಪ ಮೊಹ್ಲಿ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾವು ಬ್ಯಾನ್ ಮಾಡಿಯೇ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಜರಂಗದಳ ಭಯ ಎಷ್ಟ ಇದೆ ಎನ್ನುವುದನ್ನು ಕಾಂಗ್ರೆಸ್‌ನವರು ನೋಡಿಕೊಳ್ಳಿ. ಶ್ರೀ ಲಂಕಾದಲ್ಲಿ ರಾಮ ಭಕ್ತ ಹನುಮಂತ ಹೋಗಿ ಬಾಲಕ್ಕೆ ಬೆಂಕಿ ಹಚ್ಚಿ ಲಂಕಾವನ್ನು ಸುಟ್ಟು ಭಸ್ಮ ಮಾಡಿದ. ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟ ಬೂದಿಯಾಗಲಿದೆ. ಬಜರಂಗದಳ ನಿಷೇಧ ಮಾಡುವುದದ ಬಗ್ಗೆ ಜಗದೀಶ್ ಶೆಟ್ಟರ್ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕೆಂದು ನಾನು ವಿನಂತಿ ಮಾಡುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ
ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಯಾಂಡಲ್‌ವುಡ್ ನಟರು ವರುಣಾದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ನಟ ದುನಿಯಾ ವಿಜಯ್, ಲೂಸ್ ಮಾದ ಖ್ಯಾತಿಯ ಯೋಗಿ, ನಟಿ ನಿಶ್ವಿಕ ನಾಯ್ಡು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ಮೈಸೂರು: ವರುಣಾ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದು ವಿರೋಧ ಪಕ್ಷ ನಾಯಕನಾದೆ. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದೆ. ಈಗ ಮತ್ತೊಂದು ಅವಕಾಶ ಇದೆ ಪ್ರಚಾರದ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಗೆಲ್ಲುವುದು ಅಷ್ಟೇ ಸತ್ಯ ಎಂದು ವರುಣಾ ಕ್ಷೇತ್ರದ ಚಿಕ್ಕಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ: ನಮ್ಮ ಪ್ರಧಾನಿ ಕಾಂಗ್ರೆಸ್ನ ಪ್ರಧಾನಿ ರೀತಿ ಇರಬೇಕು ಅಂತೇನಿಲ್ಲ. ಹಳ್ಳಿಗೆ ಹೋದರೇ ಪ್ರಧಾನಿ ಅಲ್ಲ ಅನ್ನೋದು ಕಾಂಗ್ರೆಸ್ ವಿಚಾರಧಾರೆ. ಸಿದ್ದರಾಮಯ್ಯ ಸಹ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಪರಿಹಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಆತ್ಮಹತ್ಯೆಗಳಾಗಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಬಂದಿದ್ರಾ? ಕಾಂಗ್ರೆಸ್ಸಿಗರು ಎಲ್ಲಿಯವರೆಗೆ PFI, SDPI ಸಂತೋಷ ಪಡಿಸುತ್ತಾರೋ, ಅಲ್ಲಿಯವರೆಗೆ ಬಜರಂಗದಳದ ವಿಚಾರ ಜನರ ಮಧ್ಯೆ ಇರುತ್ತದೆ. ‘ಕೈ’ ಪ್ರಣಾಳಿಕೆ ನೋಡಿ ಬಿಜೆಪಿ ಹೆದರಿದೆ ಅನ್ನೋದು ಹಾಸ್ಯಾಸ್ಪದ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸೋಕೆ ನಮ್ಮ ಭಾಗದಲ್ಲಿ ನಾನು ಮತ್ತು ಡಾ. ಅಶ್ವಥ್ ನಾರಾಯಣ ಉತ್ಸುಕರಾಗಿದ್ದೇವೆ. ನನ್ನ ಕ್ಷೇತ್ರದಲ್ಲಿ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ನಾವು ಪಾಂಡವರು, ಪ್ರಧಾನಿ ಮೋದಿ ನಮಗೆ ಕ್ರಷ್ಣ ಪರಮಾತ್ಮ ಆಗಿದ್ದಾರೆ. ಈ ಬಾರಿ ಇನ್ನಷ್ಟು ಅಂತರದ ಮತಗಳಿಂದ ಗೆಲ್ಲುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಬೆಂಗಳೂರು: ಮೇ 6 ಮತ್ತು 7ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ರೋಡ್ಶೋ ವೇಳೆ ಕಾಂಗ್ರೆಸ್ ಷಡ್ಯಂತ್ರ ಮಾಡಲು ಸಂಚು ರೂಪಿಸಿದೆ. ರೋಡ್ಶೋ ವೇಳೆ ಆಂಬುಲೆನ್ಸ್ ಕಳಿಸಲು ಸಂಚು ರೂಪಿಸಿದೆ. ಆಂಬುಲೆನ್ಸ್ ಸಂಚಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಆಂಬುಲೆನ್ಸ್ಗಳಲ್ಲಿ ರೋಗಿ ಇರುವ ಬಗ್ಗೆ ಪರಿಶೀಲನೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದಾಗ, ಮಲ್ಲಿಕಾರ್ಜುನ್ ಖರ್ಗೆ ಅವರ ಜೀವನ ಸಾಧನೆ ಮಣ್ಣುಪಾಲಾಯ್ತು. ಇನ್ನು ಪುತ್ರ, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಪ್ರಧಾನಿ ಮೋದಿಯವರ ಬಗ್ಗೆ ಮಾತಿನಾಡಿದ್ದಾರೆ. ಇದು ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ ಖರ್ಗೆ ಮಾತನಾಡಿದ ಹಾಗೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಳ್ಳಾರಿ ಮತ್ತು ತುಮಕೂರಿನ ಸಮಾವೇಶದ ನಂತರ ಸಾಯಂಕಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಇಂದು ಸಾಯಂಕಾಲ 5.30ರಿಂದ ರಾತ್ರಿ 7 ಗಂಟೆ ವರೆಗೆ ಈ ಕೆಳಕಂಡ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಮೇಲಿನ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂದಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಧಾರವಾಡ: ಜಗದೀಶ ಶೆಟ್ಟರ್ ಪರ ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಚಾರಕ್ಕಿಳಿಯಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜಗದೀಶ್ ಶೇಟ್ಟೆಎ ಸಂಬಂಧಿಯೂ ಆಗಿದ್ದಾರೆ.
ಕೊಪ್ಪಳ: ಇಂದು ಜಿಲ್ಲೆಯಲ್ಲಿ ನಿಗದಿಯಾಗಿದ್ದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ರದ್ದಾದ ಬೆನ್ನಲ್ಲೆ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ ಸಚಿವ, ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3:40 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಜಿಲ್ಲೆಗೆ ಆಗಮಿಸುತ್ತಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ (ಮೇ.7)ರಂದು ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ನಗರದ ಸುರಂಜನ್ ದಾಸ್ ಸರ್ಕಲ್ನಿಂದ ಟ್ರಿನಿಟಿ ಸರ್ಕಲ್ವರೆಗೆ 4 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ ದಿನಾಂಕ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ (ಮೇ.6) ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ 26ಕಿಮೀ ರೋಡ್ ಶೋ ನಡೆಸಲಿದ್ದಾರೆ.
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂದು (ಮೇ.05) ಮಧ್ಯಾಹ್ನ ನಟ ಕಿಚ್ಚ ಸುದೀಪ್ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಪರ ಮತಯಾಚಿಸಲಿದ್ದಾರೆ. ಸುದೀಪ್ ಆಗಮನ ಹಿನ್ನಲೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಮಾಲೂರು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗೇ ಮೈಸೂರಿನ ಟಿ ನರಸೀಪುರ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಟಿ ನರಸೀಪುರ ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ ಪರ ಮಧ್ಯಾಹ್ನ 3.45 ರಿಂದ ಸಂಜೆ 4.45ರವರೆಗೆ ಮತಯಾಚಿಸಲಿದ್ದಾರೆ. ಸಂಜೆ 5.30 ರಿಂದ 6.30ರವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ಬಿಜೆಪಿ ಅಭ್ಯರ್ಥಿ ಕವೀಶ್ ಗೌಡ ಪರ ಪ್ರಚಾರ ಮಾಡುತ್ತಾರೆ.
ಮೈಸೂರು: ಇಂದು (ಮೇ.05) ಕೂಡ ಸ್ವಕ್ಷೇತ್ರ ವರುಣಾದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಮತಯಾಚಿಸಲಿದ್ದಾರೆ. ಸಿದ್ದರಾಮಯ್ಯ ಪರ ಸ್ಟಾರ್ ನಟ, ನಟಿಯರು ರೋಡ್ಶೋ ನಡೆಸಲಿದ್ದಾರೆ. ವರುಣಾ ಕ್ಷೇತ್ರದ 23 ಗ್ರಾಮಗಳಲ್ಲಿ ನಟರಾದ ಶಿವರಾಜ್ಕುಮಾರ್, ದುನಿಯಾ ವಿಜಯ್, ಮಾಜಿ ಸಂಸದೆ, ನಟಿ ರಮ್ಯಾ ಸೇರಿದಂತೆ ಹಲವರು ಪ್ರಚಾರ ಮಾಡುತ್ತಾರೆ.
ಬೆಳಿಗ್ಗೆ 9:00ಕ್ಕೆ ಚಿಕ್ಕಳ್ಳಿ , 9:30ಕ್ಕೆ ಭುಗತಗಳ್ಳಿ, 10:00ಕ್ಕೆ ವಾಜಮಂಗಲ, 10:30ಕ್ಕೆ ಮೆಲ್ಲಹಳ್ಳಿ, ಮಧ್ಯಾಹ್ನ 12:00 ಕ್ಕೆ ಹಾರೋಹಳ್ಳಿ, 1:00 ಕ್ಕೆ ಮಾದೇಗೌಡನ ಹುಂಡಿ, 1:30ಕ್ಕೆ ರಂಗನಾಥಪುರ, 2:00 ಕ್ಕೆ ರಂಗಾಚಾರಿ ಹುಂಡಿ, 2:30 ಕ್ಕೆ ರಂಗಸಮುದ್ರ, 3:00 ಕ್ಕೆ ಇಟ್ಟುವಳ್ಳಿ, 3:30 ಕ್ಕೆ ಕುಪ್ಪೆ ಗ್ರಾಮದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಸಂಜೆ 4:00 ಕ್ಕೆ ತುಂಬಲ, 4:30ಕ್ಕೆ ಮುತ್ತತ್ತಿ, 5:00ಕ್ಕೆ RP ಹುಂಡಿ, 5:30 ಕ್ಕೆ ಎಡತೊರೆ, 6:00 ಕ್ಕೆ ಗರ್ಗೇಶ್ವರಿ, 6:30 ಕ್ಕೆ ಹಳೆ ತಿರುಮಕೂಡಲ ಸರ್ಕಲ್, ರಾತ್ರಿ 7:00ಕ್ಕೆ ಹೊಸ ತಿರುಮಕೂಡಲ ಸರ್ಕಲ್, 7:30 ಕ್ಕೆ ಭೈರಾಪುರ ಬಾಬೂ ಜಗಜೀವನ ರಾಮ್ ಪುತ್ಥಳಿ, 8:00 ಕ್ಕೆ ಟಿ. ನರಸೀಪುರ – ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮೂಲಕ ಬಸ್ ಸ್ಟಾಂಡ್, 8:30 ಕ್ಕೆ ಟಿ ನರಸೀಪುರ ಬೃಂದಾವನ ಹಾಸ್ಪಿಟಲ್ ಎದುರುಗಡೆ ಅಂಬೇಡ್ಕರ್ ಫೋಟೋಗೆ ಪುಷ್ಪಾರ್ಚನೆ, 9:00 ಕ್ಕೆ ವಿವೇಕ ನಗರದ ಮೂಲಕ ಹೆಳವರಹುಂಡಿ ಸರ್ಕಲ್, 9.30 ಕ್ಕೆ ಕೆಎಚ್‌ಬಿ ಸರ್ಕಲ್ ಮೂಲಕ ವಿದ್ಯೋದಯ ಸರ್ಕಲ್ ಆಲುಗೂಡುನಲ್ಲಿ ಮತಯಾಚಿಸಿ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ.
ಕಲಬುರಗಿ: ಇಂದು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಲಿದ್ದಾರೆ. ಸಂಜೆ 5.30 ಕ್ಕೆ ಸೇಡಂ ಆಗಮಿಸುವ ಜೆಪಿ ನಡ್ಡಾ, ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ್ ಪರ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಪಟ್ಟಣದಲ್ಲಿ ವಿವಿಧ ಮಠಾದೀಶರೊಂದಿಗೆ ಜೊತೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ರಾತ್ರಿ ಕಲಬುರಗಿ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಬ್ಬರದ ಪ್ರಚಾರ ನಡೆಸಿದ್ದಾರೆ. ಈಗಾಗಲೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು ವಾರದಲ್ಲಿ 2 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಇಂದು (ಮೇ.5) ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ಬಳ್ಳಾರಿ ಮತ್ತು ತುಮಕೂರಿನಲ್ಲಿ ಮತಯಾಚಿಸಲಿದ್ದಾರೆ.
Published On - 6:55 am, Fri, 5 May 23