ರಾಮನಗರ: ಪಂಚರತ್ನ ಯೋಜನೆಗಳು ರಾಜ್ಯದ ಜನರಿಗೆ ಇಷ್ಟವಾಗಿಲ್ಲ ಅನ್ಸುತ್ತೆ. ಕಾಂಗ್ರೆಸ್ನ (Congress) ಗ್ಯಾರಂಟಿಗಳನ್ನು ನಂಬಿ ರಾಜ್ಯದ ಜನ ಮತ ಹಾಕಿದ್ದಾರೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ (HD Kumaraswamy) ಹೇಳಿದರು. ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಹೀನಾಯ ಸೋಲು ವಿಚಾರವಾಗಿ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹೆಚ್ಡಿ ದೇವೇಗೌಡ 2 ಬಾರಿ ಸೋತ ಬಳಿಕವೂ JDS ಅಧಿಕಾರಕ್ಕೆ ಬಂದಿತ್ತು. ಮುಂದಿನ ದಿನಗಳಲ್ಲಿ ಜನ ಮತ್ತೆ JDS ಬೇಕು ಅಂತಾ ಬಯಸುತ್ತಾರೆ ಎಂದು ಹೇಳಿದರು.
ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಗಿದೆ, ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ಮುಂದಿನ ದಿನಗಳಲ್ಲಿ ನಾವು ಕಾರ್ಯಕರ್ತರ ಜೊತೆ ನಿಲ್ಲುತ್ತೇವೆ ಎಂದರು.
ಇದನ್ನೂ ಓದಿ: DK Shivakumar; ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದು ನಮ್ಮ ಬದ್ಧತೆ ಮತ್ತು ಆದ್ಯತೆಯಾಗಿದೆ: ಡಿಕೆ ಶಿವಕುಮಾರ್
ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲು ವಿಚಾರವಾಗಿ ಮಾತನಾಡಿ, ಅದು ಮುಗಿದ ಅಧ್ಯಾಯ, ಅದರ ಬಗ್ಗೆ ಚರ್ಚೆ ಬೇಡ. ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋತಿದ್ದಾರೆ. ವಾಜಪೇಯಿ, ಕೆಸಿಆರ್ ಮೊದಲನೇ ಚುನಾವಣೆಯಲ್ಲಿ ಸೋತಿದ್ದಾರೆ. ಇಂದು ಸೋತಿರಬಹುದು, ಮುಂದಿನ ದಿನಗಳಲ್ಲಿ ಅವರನ್ನು ಬೆಳೆಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳು ಕೊಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ. ಎಲ್ಲಾ ಲೆಕ್ಕಾಚಾರ ಮಾಡೇ ಸ್ಕೀಂ ಮಾಡಿರುತ್ತಾರೆ. ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕುತ್ತಿದ್ದಾರೆ. ನೋಡೊಣ ಮುಂದೆ ಏನ್ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಆಯ್ಕೆ ಬಳಿಕ ಖಾತೆ ಕ್ಯಾತೆ ಶುರು: ಮತ್ತೆ ದಿಲ್ಲಿಗೆ ಡಿಕೆ ಶಿವಕುಮಾರ್-ಸಿದ್ದರಾಮಯ್ಯ
ಸಿದ್ದರಾಮಯ್ಯಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಡಿಸಿಎಂ ಸ್ಥಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಸೇರಿ ಈ ಬಗ್ಗೆ ತೀರ್ಮಾನ ಮಾಡಿದ್ದಾರೆ. ಇಂದು ಚನ್ನಪಟ್ಟಣ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಅದರ ಬಗ್ಗೆ ನಾನೇನೂ ಮಾತನಾಡಲ್ಲ. 5 ಗ್ಯಾರಂಟಿಗಳನ್ನು ಹೇಗೆ ಅನುಷ್ಠಾನಕ್ಕೆ ತರುತ್ತಾರೋ ನೋಡಬೇಕು ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಒಕ್ಕಲಿಗ ಶ್ರೀಗಳ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕು ಅಂತಾ ಹೇಳಿದ್ದಾರೆ. ಸಿಎಂ ಸ್ಥಾನ ಕೇಳಿದ್ದರಲ್ಲಿ ತಪ್ಪೇನು ಇಲ್ಲ. ಯಾರೇ ಸಿಎಂ ಆದರೂ ಒಂದು ಸಮುದಾಯದ ಸಿಎಂ ಆಗಬಾರದು. ಇಡೀ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಿಎಂ ಆಗಬೇಕು ಎಂದು ಹೇಳಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.