ಕರ್ನಾಟಕ ವಿಧಾನಸಭೆಗೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳು ರಂಣರಂಗಕ್ಕೆ ಕಂಕಣ ಕಟ್ಟಿಕೊಂಡು ಇಳಿದಿವೆ. ಮೂರು ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಒಳ ಒಳಗೆ ವೈಮನಸ್ಸು ಏರ್ಪಟ್ಟಿದೆ. ಕಾಂಗ್ರೆಸ್ ಈಗಾಗಲೆ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2ನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ತಮಗೆ ಟಿಕೆಟ್ ಸಿಗಲಿಲ್ಲವೆಂದು ರಾಜ್ಯದ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಜೆಡಿಎಸ್ 2ನೇ ಪಟ್ಟಿ ಬಿಡುಗಡೆ ಮಾಡಬೇಕಿದ್ದು, ಬಂಡಾಯವೆದ್ದ 2 ರಾಷ್ಟ್ರೀಯ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನ್ನು ತನ್ನತ್ತ ಸೆಳೆದುಕೊಂಡು ಪಕ್ಷದ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿ ಅಳಿದು, ತೂಗಿ ಟಿಕೆಟ್ ನೀಡುತ್ತಿದ್ದು, ರಾಜ್ಯ ನಾಯಕರು ಹೈಕಮಾಂಡ್ ಜೊತೆ 2 ದಿನಗಳ ಕಾಲ ಮೀಟಿಂಗ್ ಮಾಡಿದ್ದು, ಪಟ್ಟಿ ಬಿಡುಗಡೆಯಾಗುವುದು ಬಾಕಿ ಇದೆ. ಇದರ ಜೊತೆಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
ಚಿಕ್ಕಮಗಳೂರು: ಪಕ್ಷೇತರ ಅಭ್ಯರ್ಥಿಯಾಗಿ ವೈಎಸ್ವಿ ದತ್ತಾ ಘೋಷಣೆ ವಿಚಾರವಾಗಿ ಮಾತನಾಡಿದ ಕಡೂರು ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಆನಂದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದತ್ತಾ ಜೊತೆಗೆ ಮಾತನಾಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಜಾತ್ಯತೀತ ಮತಗಳು ವಿಭಜನೆಯಾಗದಂತೆ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು. ಕಾಂಗ್ರೆಸ್ ಸೇರ್ಪಡೆ ಸಮಯದಲ್ಲಿ ಅವಕಾಶ ಸಿಕ್ಕಿದರೆ ಟಿಕೆಟ್ ಕೊಡುವಂತೆ ಕೇಳಿದ್ದರು. ಟಿಕೆಟ್ ಕೊಡದೆ ಇದ್ದರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವುದಾಗಿ ದತ್ತಾ ಹೇಳಿದ್ದರು. ದತ್ತಾರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಇನ್ನು ಸಮಯವಿದೆ ದತ್ತಾ ಜೊತೆ ಮಾತನಾಡಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ದೆಹಲಿ: ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾಗೊಂಡಿದ್ದ ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದೆಹಲಿಯಲ್ಲಿರುವ ನಿವಾಸದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಲಘಟಗಿ ಕಾಂಗ್ರೆಸ್ ಟಿಕೆಟ್ ತನಗೆ ನೀಡದೆ ಸಂತೋಷ್ ಲಾಡ್ಗೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಛಬ್ಬಿ, ಇದೀಗ ಅದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಹಾಸನ: ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರಧಾನಿ ಮೋದಿ ಬರುತ್ತಿದ್ದಾರೆ. ಅವರು ರಾಜ್ಯಕ್ಕೆ ಎಷ್ಟು ಬಾರಿ ಬಂದರೂ ಏನೂ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಬಂಡಾಯ ಅಭ್ಯರ್ಥಿಗಳನ್ನು JDSಗೆ ಸೇರಿಸಿಕೊಳ್ಳುವುದೇ ಕುಮಾರಸ್ವಾಮಿ ಕೆಲಸವಾಗಿದೆ. ಟಿಕೆಟ್ ಸಿಗದವರನ್ನು ಕರೆಸಿ JDS ಟಿಕೆಟ್ ಕೊಡುವುದೇ ಅವರ ಕೆಲಸ, ಬಿಜೆಪಿಯನವರೂ ಕಾಯುತ್ತಿದ್ದಾರೆಂದು ಲೇವಡಿ ಮಾಡಿದರು. ಎಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೋ ಅಲ್ಲಿ ಬಂಡಾಯ ಸಹಜವಾಗಿದೆ. ಒಂದೊಂದು ಕ್ಷೇತ್ರದಲ್ಲಿ 15ರಿಂದ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಎಲ್ಲರಿಗೂ ಟಿಕೆಟ್ ನೀಡಲು ಆಗುವುದಿಲ್ಲ, ಎಲ್ಲರ ಜತೆ ಮಾತಾಡುತ್ತೇವೆ. ನನಗೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದರೆ ಸ್ಪರ್ಧಿಸುತ್ತೇನೆ ಎಂದರು.
ರಾಯಚೂರು: ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ವಿರುದ್ಧ ಜೆಡಿಎಸ್ ದೂರು ನೀಡಿದೆ. ಶಾಸಕರ ವೈರಲ್ ಆಡಿಯೋ ಆಧರಿಸಿ ರಾಯಚೂರು ನಗರದ ಪಶ್ಚಿಮ ಠಾಣೆಗೆ ಜೆಡಿಎಸ್ ದೂರು ನೀಡಿದೆ. ಅಲ್ಲದೆ, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಪೋಸ್ಟ್ ಮಾಡಿದ್ದ ಆರೋಪದಡಿ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಿದಂತೆ ಶಾಸಕ ಶಿವರಾಜ್ ಪಾಟೀಲ್ರನ್ನು ಬಂಧಿಸಬೇಕು ಎಂದು ಜೆಡಿಎಸ್ ಮನವಿ ಮಾಡಿದೆ.
ಹಾವೇರಿ: ಶಿಗ್ಗಾಂವಿ ಕ್ಷೇತ್ರದಿಂದ ಸಲೀಂ ಅಹ್ಮದ್ ಸ್ಪರ್ಧೆಗೆ ಒತ್ತಡ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನಮ್ಮ ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಶಿಗ್ಗಾಂವಿ ಕ್ಷೇತ್ರದ ‘ಕೈ’ ಟಿಕೆಟ್ಗೆ 14 ಮಂದಿ ಅರ್ಜಿ ಹಾಕಿದ್ದರು. ಅದರಲ್ಲಿ 8 ಜನರ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿದ್ದೆವು. ನಾವು ಕಳಿಸಿದ ಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಹೆಸರು ಇರಲಿಲ್ಲ. ಆದರೆ ಕುಲಕರ್ಣಿ ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಿತ್ತು. 2-3 ದಿನ ಕಾದು ನೋಡಿ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ಜನರು ತೀರ್ಮಾನಿಸಿದ್ದಾರೆ ಎಂದರು.
ಮಂಗಳೂರು: 40% ಸರ್ಕಾರವನ್ನು ತೆಗೆಯಲು ರಾಜ್ಯದ ಜನರು ಕಾಯುತ್ತಿದ್ದಾರೆ. ಸಂಪೂರ್ಣ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮೇ 10ರ ನಂತರ ಕರ್ನಾಟಕದಲ್ಲಿ ಹೊಸ ಶಕೆ ಆರಂಭವಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಎಲ್ಎನ್ ಹನುಮಂತಯ್ಯ ಹೇಳಿದರು. 2-3 ದಿನಗಳಲ್ಲಿ ಇನ್ನುಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಬಿಜೆಪಿಗೆ ಮೊದಲ ಪಟ್ಟಿಯನ್ನೂ ಬಿಡುಗಡೆ ಮಾಡದಂತಹ ಸ್ಥಿತಿ ಇದೆ. ಅನೈತಿಕ ಮಾರ್ಗದ ಮೂಲಕ ಗೆಲ್ಲಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಸಾವಿರಾರು ಐಟಿ ಅಧಿಕಾರಿಗಳು ರಾಜ್ಯಕ್ಕೆ ಬಂದಿರುವ ಮಾಹಿತಿ ಇದೆ. ಅಕ್ರಮವಾಗಿ ವಿಧಾನಸಭೆ ಚುನಾವಣೆ ಗೆಲ್ಲಬೇಕೆಂಬ ಆಸೆ ಬಿಜೆಪಿಗಿದೆ ಎಂದರು.
ಬೆಳಗಾವಿ: ಅಥಣಿ ಕ್ಷೇತ್ರದ ಟಿಕೆಟ್ಗೆ ಲಕ್ಷ್ಮಣ ಸವದಿ, ಮಹೇಶ್ ಕುಮಟಳ್ಳಿ ನಡುವೆ ಫೈಟ್ ವಿಚಾರವಾಗಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶಿನೋಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ. ಶ್ರೀಮಂತ ಪಾಟೀಲ್ ಸೇರಿದಂತೆ ಬಿಜೆಪಿ ಸೇರಿದ ಎಲ್ಲರಿಗೂ ಟಿಕೆಟ್ ಸಿಗುತ್ತದೆ. ಬಿಜೆಪಿ ಸೇರಿದ ಎಲ್ಲರಿಗೂ ಹೈಕಮಾಂಡ್ ಆಶೀರ್ವಾದ ಮಾಡುತ್ತದೆ. ಲಕ್ಷ್ಮಣ ಸವದಿ ಏಕೆ ಹತಾಶರಾಗಿ ಮಾತಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ನಾನು ಹಾಗೂ ಎಂಎಲ್ಸಿ ಲಕ್ಷ್ಮಣ ಸವದಿ ಸಣ್ಣ ಗಿಡ. ರಾಷ್ಟ್ರೀಯ ನಾಯಕರು ಹೆಮ್ಮರ, ಅವರು ನಿರ್ಣಯ ಮಾಡುತ್ತಾರೆ. ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣ, ಆರಾಮವಾಗಿರು ಎಂದರು.
ತುಮಕೂರು: ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ಕೈಯಲ್ಲಿ ಕಂತೆಕಂತೆ ನೋಟು ಪತ್ತೆಯಾಗಿದೆ. ಮಧುಗಿರಿ ತಾಲೂಕಿನ ಕೈಮರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಾರ್ಯಕರ್ತನಿಗೆ ಹಣ ನೀಡಲು ಮುಂದಾಗಿದ್ದಾರೆ. 500 ರೂ. ಮುಖಬೆಲೆಯ ನೋಟುಗಳನ್ನು ತೆಗೆದಾಗ ಕ್ಯಾಮರಾ ನೋಡಿದ ಕುಮಾರಸ್ವಾಮಿ ಕಾರ್ಯಕರ್ತನನ್ನು ವಾಪಸ್ ಕಳುಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೊಂಡವಾಡಿ ಚಂದ್ರಶೇಖರ್ ಅವರು ತಮ್ಮ ಬೆಂಬಲಿಗರ ಜತೆ ಜೆಡಿಎಸ್ ಸೇರಿದರು. ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದಿದ ಹಿನ್ನೆಲೆ ಜೆಡಿಎಸ್ ಸೇರಿದ್ದಾರೆ.
ಹುಬ್ಬಳ್ಳಿ: ಇವತ್ತು ರಾತ್ರಿ ಬಜೆಪಿ ಪಟ್ಟಿ ಬಿಡುಗಡೆ ಆಗಬಹುದು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮಾದ್ಯಮ ಕೇಂದ್ರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಇವತ್ತು ಸಾಯಂಕಾಲ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ. ಇವತ್ತು ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು ಅನ್ನೋ ಮಾಹಿತಿ ಇದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಮ್ಮ ಲಿಸ್ಟ್ ಬಿಡುಗಡೆ ಆಗಿದೆ. ಹಿಂದಿನ ಚುನಾವಣೆಯಲ್ಲೂ ಇದೇ ತರಹ ಆಗಿದೆ. ಹೀಗಾಗಿ ವಿಳಂಬ ಅನ್ನೋ ಪ್ರಶ್ನೆ ಬರಲ್ಲ ಎಂದರು. ಕಾಂಗ್ರೆಸ್ ಒಂದು ತಿಂಗಳ ಮುಂಚೆ 224 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡುತ್ತೇವೆ ಅಂದಿದ್ದರು. ಆದರೆ ಹಂತಹಂತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಜೆಡಿಎಸ್ ಇನ್ನೂ ಎರಡನೇ ಪಟ್ಟಿ ಬಿಡುಗಡೆ ಮಾಡಿಯೇ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲವೂ ಫೈನಲ್ ಆಗಿ ಇಂದು ರಾತ್ರಿ ಬಿಡುಗಡೆ ಆಗಬಹುದು ಎಂದರು.
ಬಳ್ಳಾರಿ: ಜಿಲ್ಲೆಯಲ್ಲಿ ಆಪರೇಷನ್ ಕೆಆರ್ಪಿಪಿ ಶುರವಾಗಿದೆ. ಗಾಲಿ ಜನಾರ್ದನ ರೆಡ್ಡಿಯವರು ಈ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಸೇರ್ಪಡೆಯಾಗಿದ್ದಾರೆ. ಪಾಲಿಕೆಯ ಮಾಜಿ ಮೇಯರ್ ವೆಂಕಟರಮಣ, ಮಾಜಿ ಸದಸ್ಯೆ ಪರ್ವಿನ್ ಬಾನು, ಕಾಂಗ್ರೆಸ್ ಮುಖಂಡರಾದ ಶಾಸಾಬ್, ವಿ.ಎಸ್. ಮರಿದೇವಯ್ಯ, ರಾಮುಡು ಕೆಆರ್ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಮೇಯರ್ ವೆಂಕಟರಮಣ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕ್ಷಾಂಕಿಯಾಗಿದ್ದರು. ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಇವರೆಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಋಏ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಸುನ್ನಿ ಉಲ್ಲಾ ಬೋರ್ಡ್, ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದೆ. ಕಾಂಗ್ರೆಸ್ ಆಯ್ಕೆ ಸಮಿತಿಯಲ್ಲಿ ಒಬ್ಬ ಮುಸ್ಲಿಂ ಮುಖಂಡ ಇಲ್ಲದಿರುವುದು ಬೇಸರ ತರಿಸಿದೆ. ಕೇವಲ 11 ಮುಸ್ಲಿಂ ನಾಯಕರಿಗೆ ಮಾತ್ರ ಟಿಕೆಟ್ ಕೊಟ್ಟಿರುವ ಬಗ್ಗೆ ಅಸಮಾಧಾನ ತಂದಿದೆ. 21 ಮುಸ್ಲಿಂ ನಾಯಕರಿಗೆ ಚುನಾವಣಾ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಟಿಕೆಟ್ ಕೊಡುವುದು ಮಾತ್ರವಲ್ಲ, ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಶ್ರಮಿಸಬೇಕು. ಶಿಗ್ಗಾಂವ್, ಚಿಕ್ಕಪೇಟೆ, ಮಂಗಳೂರು, ದಾವಣಗೆರೆ, ಹುಮುನಬಾದ್ನಲ್ಲಿ ಮುಸ್ಲಿಂ ಅಭ್ಯರ್ಥಿಯ ಗೆಲುವು ಖಚಿತ. ಆದರೆ ಆ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಿಲ್ಲ. ಕೆಜಿಎಫ್ ಬಾಬುಗೆ ಯಾಕೆ ಟಿಕೆಟ್ ನೀಡಿಲ್ಲ? ಚಿಕ್ಕಪೇಟೆಯಲ್ಲಿ ಕೆಜಿಎಫ್ ಬಾಬುಗೆ ಟಿಕೆಟ್ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಮುಸ್ಲಿಮರು ಕೇವಲ ಮತ ಹಾಕಲು ಇರೋದಾ? ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೇವಲ ಮುಸ್ಲಿಂರನ್ನು ವೋಟ್ ಬ್ಯಾಂಕ್ ಆಗಿ ಬಳಸುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.
ಬೆಂಗಳೂರು: ಬಂಡೀಪುರ ಅಭಯಾರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವುದು ಇಡೀ ದೇಶದ ಜನತೆಗೆ ಖುಷಿ ತಂದಿದೆ. ಆದರೆ ಡಿಕೆ ಶಿವಕುಮಾರ್ ಮತ್ತು ಹೆಚ್ಡಿ ಕುಮಾರಸ್ವಾಮಿ ಖಂಡಿಸುತ್ತಿದ್ದಾರೆ. ಇವರಿಬ್ಬರೂ ಸಣ್ಣ ಮನಸಿನ ನಾಯಕರು ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ಮನಸಿನ ನಾಯಕರು ಯಾವತ್ತೂ ದೊಡ್ಡವರಾಗಲ್ಲ ಎಂದರು. ಹುಲಿಗಳ ಸಂಖ್ಯೆ ಕಡಿಮೆ ಆಗ್ತಿತ್ತು. ಹುಲಿಗಳ ಸಂರಕ್ಷಣೆಗೆ ಮಧ್ಯಪ್ರದೇಶದಲ್ಲಿ ಹುಲಿ ಸಂರಕ್ಷಣೆ ಯೋಜನೆಯನ್ನು ಕೇಂದ್ರ ತಂದಿತು. ಹುಲಿಗಳ ಸಂತತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಜಗತ್ತಿಗೆ ಗೊತ್ತಾಗುತ್ತಿದೆ. ವನ್ಯಜೀವಿಗಳ ರಕ್ಷಣೆಯಲ್ಲಿ ಪ್ರಧಾನಿಗಳ ಕಾಳಜಿ ಮೆಚ್ಚುವಂತಹದ್ದು ಎಂದರು.
ಬೆಳಗಾವಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರದ ಗಡಿ ಗ್ರಾಮದಲ್ಲಿ ಸಭೆ ನಡೆಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಬಲಿಗರ ಜತೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶಿನೋಳಿ ಗ್ರಾಮದ ಖಾಸಗಿ ಕಾರ್ಖಾನೆಯ ಕಟ್ಟಡದಲ್ಲಿ ಜಾರಕಿಹೊಳಿ ಸಭೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಗೇಟ್ ಮೇಲೆ ಹತ್ತಿದ ಬೆಂಬಿಗರು ವಿಡಿಯೋ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದರು. ಬಳಿಕ ಮಾಧ್ಯಮಗಳನ್ನು ಕಂಡು ಹೊರಗೆ ಬಂದ ರಮೇಶ್ ಜಾರಕಿಹೊಳಿ, ನಾಗೇಶ್ ಮನ್ನೋಳಕರ್ ಸಂಬಂಧಿ ಕಾರ್ಖಾನೆಯ ಪೂಜೆಗೆ ಆಗಮಿಸಿದ್ದಾಗಿ ಸಬೂಬು ನೀಡಿದರು.
ತುಮಕೂರು: ನೀತಿ ಸಂಹಿತಿ ಉಲ್ಲಂಘನೆ ಆರೋಪ ಸಂಬಂಧ ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ಧ ಜೆಡಿಎಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚುನಾವಣಾ ಪ್ರಚಾರಕ್ಕೆ ಡಿಸಿಸಿ ಬ್ಯಾಂಕ್ ನೌಕರರ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ರಾಜ್ಯ ವಕ್ತಾರ ಪ್ರದೀಪ್ ಕುಮಾರ್ ಈ ದೂರನ್ನು ನೀಡಿದ್ದಾರೆ. ಅಲ್ಲದೆ, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾಗಿರುವ ಕೆ.ಎನ್ ರಾಜಣ್ಣ ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಪ್ರಚಾರ ನಡೆಸುತ್ತಿರುವ ಪೋಟೋ, ವಿಡಿಯೋ ವೈರಲ್ ಹಿನ್ನೆಲೆ ದೂರು ನೀಡಿದ್ದಾರೆ.
ಬೆಂಗಳೂರು: ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಬಯಸಿದರೆ ಮುಖ್ಯಮಂತ್ರಿ ಸ್ಥಾನ ಬಿಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್, ಕಾಂಗ್ರೆಸ್ನಲ್ಲಿ ಚುನಾವಣೆಗೂ ಮುನ್ನ ಸಿಎಂ ಘೋಷಣೆ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಂಪೂರ್ಣ ಬೆಂಬಲವಿದೆ. ಮುಖ್ಯಮಂತ್ರಿ ಆಯ್ಕೆಗೆ ತನ್ನದೇ ಆದ ಪ್ರಕ್ರಿಯೆ ಇದೆ. ರಾಜ್ಯದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಮೊದಲ ಗುರಿ. ನಂತರ ಶಾಸಕರ ಅಭಿಪ್ರಾಯ ಪರಿಗಣಿಸಿ ಸಿಎಂ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕೆಆರ್ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ರೆಡ್ಡಿ ಜಿಲ್ಲೆಯಲ್ಲಿ ಆಪರೇಷನ್ ಕಾಂಗ್ರೆಸ್ ಶುರು ಮಾಡಿದ್ದಾರೆ. ಮಾಜಿ ಸದಸ್ಯೆ ಪರ್ವಿನ್ ಬಾನು. ಕಾಂಗ್ರೆಸ್ ಮುಖಂಡರಾದ ಶಾಸಾಬ್, ವಿ.ಎಸ್. ಮರಿದೇವಯ್ಯ, ರಾಮುಡು ಕೆಆರ್ ಪಿ ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೊತೆಗೆ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕ್ಷಾಂಕಿಯಾಗಿದ್ದ ಮಾಜಿ ಮೇಯರ್ ವೆಂಕಟರಮಣ ಅವರು ಕೂಡ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಕೆಆರ್ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ
ಬೆಳಗಾವಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ, ಮಹಾರಾಷ್ಟ್ರದ ಗಡಿ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಬಲಿಗರ ಜತೆ ಶಾಸಕ ರಮೇಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶಿನೋಳಿ ಗ್ರಾಮದ ಖಾಸಗಿ ಕಾರ್ಖಾನೆಯ ಕಟ್ಟಡದಲ್ಲಿ ಮಾಧ್ಯಮದವರನ್ನು ಹೊರಗಿಟ್ಟು ಮೀಟಿಂಗ್ ನಡೆಸಿದ್ದಾರೆ. ಹೌದು ರಮೇಶ್ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಚಿತ್ರೀಕರಣಕ್ಕೆ ಬೆಂಬಲಿಗರ ಅಡ್ಡಿಪಡಿಸಿದ್ದು, ಬಳಿಕ ಮಾಧ್ಯಮಗಳನ್ನು ಕಂಡು ಹೊರಗೆ ಬಂದ ರಮೇಶ್ ಜಾರಕಿಹೊಳಿ, ನಾಗೇಶ್ ಮನ್ನೋಳಕರ್ ಸಂಬಂಧಿ ಕಾರ್ಖಾನೆಯ ಪೂಜೆಗೆ ಆಗಮಿಸಿದ್ದಾಗಿ ಸಬೂಬು ನೀಡಿದ್ದಾರೆ.
ಭಾರತದಲ್ಲಿ ಚೀತಾಗಳ ಸಂತತಿ ನಶಿಸಿ ಹೋಗಿತ್ತು. ನಾವು ದಕ್ಷಿಣ ಆಪ್ರಿಕಾದಿಂದ ಚೀತಾಗಳನ್ನು ತಂದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟಿದ್ದೇವೆ. ಈಗ ಅವುಗಳ ಸಂತತಿ ಬೆಳೆಯುತ್ತಿದೆ. ವನ್ಯಜೀವಿಗಳ ಸಂರಕ್ಷಣೆ ಅತಿ ಮುಖ್ಯವಾಗಿದೆ.
ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ‘ನಾಳೆ(ಏ.10) ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಹಾಗೂ ಏಪ್ರಿಲ್ 13ರಂದು ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಇನ್ನು ಇದೇ ವೇಳೆ ಹೊಸಬರಿಗೆ ಹೆಚ್ಚು ಟಿಕೆಟ್ ಸಿಗಲಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕಾದು ನೋಡಿ ಎಂದಿದ್ದಾರೆ.
ಬಂಡೀಪುರ ಮೋದಿ ಸಫಾರಿ ಬಗ್ಗೆ ಹೆಚ್ಡಿಕೆ ವ್ಯಂಗ್ಯ ವಿಚಾರವಾಗಿ ‘ಅರಣ್ಯ ವೀಕ್ಷಣೆಗೆ ಹೋದಾಗ ಯಾವ ರೀತಿಯ ಡ್ರೆಸ್ ಹಾಕಬೇಕು, ನಾಡಿಗೆ ಬಂದಾಗ ಯಾವ ಬಟ್ಟೆ ಧರಿಸಬೇಕೆಂಬುದು ಗೊತ್ತಿರಬೇಕು. ಆದರೆ ಕುಮಾರಸ್ವಾಮಿಗೆ ಇವರೆಡೂ ಗೊತ್ತಿಲ್ಲ. ಪ್ರಧಾನಿ ಮೋದಿ ಯಾವ ಸ್ಥಳ, ಪ್ರದೇಶಕ್ಕೆ ಭೇಟಿ ನೀಡುತ್ತಾರೋ, ಆ ಸ್ಥಳಕ್ಕೆ ಸೂಕ್ತವಾಗುವಂತಹ ಬಟ್ಟೆಯನ್ನು ಮೋದಿ ಧರಿಸುತ್ತಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಡಾ.ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ‘ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನಕ್ಕೆ ನಾಯಕ ಅವರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು. ಬಂದರು, ಏರ್ ಪೋರ್ಟ್ ನುಂಗಿದ ಅದಾನಿ ಗುಜರಾತ್ ನವರು. ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ ನರೇಂದ್ರ ಮೋದಿಯವರೇ?. ಗುಜರಾತ್ ರಾಜ್ಯದ ಅಮುಲ್ ಪ್ರವೇಶದಿಂದ ನಂದಿನಿಯ ಬೇಡಿಕೆ ಇನ್ನಷ್ಟು ಕುಸಿದು ಕೆಎಂಎಫ್ ಹಾಲಿನ ಸಂಗ್ರಹ ಕಡಿಮೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರ ಪ್ರಮುಖ ಆದಾಯದ ಮೂಲವಾದ ಹೈನುಗಾರಿಕೆಗೆ ಯಾಕೆ ಕಲ್ಲು ಹಾಕುತ್ತಿದ್ದೀರಾ ಎಂದು ಮೋದಿ ವಿರುದ್ದ ಟ್ವೀಟ್ ಮೂಲಕ ಸಿದ್ದರಾಮಯ್ಯ ಕೀಡಿಕಾರಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿ ಬಂಡೀಪುರ ಫಾರೆಸ್ಟ್ ಸಫಾರಿ ಹಿನ್ನೆಲೆ ‘ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ಓಟು ಒತ್ತು ಬಿಡ್ತಾರ. ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ. ಇವತ್ತು ಸಫಾರಿ ಹಾಕೊಂಡು ಸಫಾರಿ ಮಾಡಲು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡೀಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ, ಆದರೆ ಮಾನವರ ರಕ್ಷಣೆಯನ್ನು ಮಾಡಬೇಕಲ್ವ, ವನ್ಯಜೀವಿಗಳಿಂದ ಎಷ್ಟು ದಾಳಿ ಆಗಿದೆ, ಎಷ್ಟು ಜೀವ ಹಾನಿ ಆಗಿದೆ. ಯಾವುದಾದರೂ ಒಂದು ಕುಟುಂಬಕ್ಕೆ ಭೇಟಿ ಕೊಟ್ಟಿದ್ದಾರಾ. ವನ್ಯಜೀವಿ ದಾಳಿಗೆ ಒಳಗಾದ ಕುಟುಂಬ ಪರಿಸ್ಥಿತಿ ಏನಾಗಿದೆ?, ಕೂಲಿಂಗ್ ಗ್ಲಾಸ್ , ಸೂಟು ಬೂಟು ಹಾಕೊಂಡು ಬಂದ್ರೆ ಆಗುತ್ತಾ. ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಅಂತ ವರದಿ ನೀಡಿದ್ದಾರೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಆಗಲ್ಲ. ನಾಡಿನ ಜನತೆ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದು, ‘ಚುನಾವಣೆ ಇದೆ ಎಂದು ಪದೇ ಪದೇ ನೆಪ ಮಾಡಿಕೊಂಡು ಪ್ರಧಾನಿ ಮೋದಿ ಬರುತ್ತಿದ್ದಾರೆ, ಬರಲಿ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಮೋದಿ ಸರ್ ಪ್ರಜಾಪ್ರಭುತ್ವ ನಮ್ಮಿಂದನೇ ಬಂತು ಅಂತ ಹೇಳ್ತಾರೆ, ಅರವತ್ತು ವರ್ಷದಲ್ಲಿ ಕಾಂಗ್ರೆಸ್ ಕೊಡುಗೆ ತೆಗೆದುಹಾಕೋದು ಅವರ ಉದ್ದೇಶವಾಗಿದೆ. ಹಲವು ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ. ಕಾಡಿಗೆ ಅವರು ಹುಲಿಯನ್ನಾದರೂ ಬಿಡಲಿ, ಸಿಂಹವಾದರೂ ಬಿಡಲಿ ಎನ್ನುವ ಮೂಲಕ ಪ್ರಧಾನಿ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮೂರನೇ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು‘ ಬಿಜೆಪಿಯವರ ಪಟ್ಟಿ ಮೊದಲು ರಿಲೀಸ್ ಆಗಲಿ, ಅವರನ್ನು ಕೇಳಿ ಯಾವಾಗ ಪಟ್ಟಿ ಪ್ರಕಟ ಅಂತ? ಅವರ ಪಟ್ಟಿ ಬಂದ ಮೇಲೆ ನೋಡೋಣ ಎಂದರು
ಕೊಪ್ಪಳ: ಪ್ರಚಾರಕ್ಕೆ ತೆರಳಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್ರನ್ನು ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ಪ್ರಚಾರಕ್ಕೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಬಹದ್ದೂರಬಂಡಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಶಾಸಕರ ಕಾರನ್ನು ಅಡ್ಡಗಟ್ಟಿ ಗ್ರಾಮಸ್ಥರು, ನೀವು ಎಂಎಲ್ಎ ಆಗಿ 10 ವರ್ಷ ಆಯಿತು. ಕೇವಲ ಚುನಾವಣೆ ಇದ್ದಾಗ ಮಾತ್ರ ನಮ್ಮ ಊರಿಗೆ ಬರುತ್ತೀರಿ. ನಮ್ಮ ಊರಿಗೆ ಏನು ಮಾಡಿದ್ದೀರಿ. ಗಟಾರು, ಕುಡಿಯಲು ನೀರು ಯಾವುದೇ ಮೂಲಸೌಕರ್ಯ ಇಲ್ಲ. ದನ-ಕರುಗಳು ಸಾಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Published On - 10:32 am, Sun, 9 April 23