ರಾಜ್ಯ ವಿಧಾನಸಭೆ ಚುನಾವಣೆ (Karnataka Assembly election 2023) ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ (Election Code Of conduct) ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವುದಕ್ಕಾಗಿ ನಗದು, ಆಭರಣ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡುತ್ತಿರುವ ಪ್ರಕರಣಗಳೂ ಬಯಲಾಗುತ್ತಿವೆ. ನೀತಿ ಸಂಹಿತೆ ಜಾರಿಯಾದ ನಂತರ ಕೇವಲ ಒಂದು ವಾರದಲ್ಲಿ ಬರೋಬ್ಬರಿ 69.3 ಕೋಟಿ ಮೌಲ್ಯದ ಸ್ವತ್ತು, ನಗದನ್ನು ಚುನಾವಣಾ ಕರ್ತವ್ಯನಿರತ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯ ವಿವಿಧ ಕಡೆಗಳಲ್ಲಿ, ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ದಾಖಲೆ ಇಲ್ಲದೆ ಸಾಗಿಸುವ ನಗದು, ಆಭರಣ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ. ಹಾಗಿದ್ದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಜನರು ಎಷ್ಟು ನಗದು ಕೊಂಡೊಯ್ಯಬಹುದು? ಎಷ್ಟು ಮೌಲ್ಯದ ಉಡುಗೊರೆಗಳನ್ನು ಒಯ್ಯಬಹುದು ಎಂಬ ಪ್ರಶ್ನೆಗಳಿಗೆ ಚುನಾವಣಾ ಆಯೋಗ ನೀಡಿರುವ ಉತ್ತರ ಆಧಾರಿತ ಮಾಹಿತಿ ಇಲ್ಲಿ ನೀಡಲಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ, ಯಾರೇ ಆದರೂ 50,000 ರೂ.ವರೆಗಿನ ನಗದು ಅಥವಾ ಉಡುಗೊರೆ ಸಾಮಗ್ರಿಗಳನ್ನು ಕೊಂಡೊಯ್ಯಬಹುದಾಗಿದೆ. ಇದಕ್ಕಿಂತ ಕಡಿಮೆ ಮೊತ್ತದ ನಗದು ಅಥವಾ ಉಡುಗೊರೆ ಕೊಂಡೊಯ್ಯುವುದಾದರೆ ಅದಕ್ಕೆ ಯಾವುದೇ ದಾಖಲೆಗಳನ್ನು ಹೊಂದಿರುವ ಅಗತ್ಯವಿಲ್ಲ. ಆದರೆ, 50,000 ರೂ. ಮೇಲ್ಪಟ್ಟ ನಗದು ಅಥವಾ 10,000 ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ವಸ್ತುಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಸೂಕ್ತವಾದ ದಾಖಲೆಗಳು ಬಳಿ ಇರಬೇಕು.
50,000 ರೂ. ಮೇಲ್ಪಟ್ಟ ನಗದನ್ನು ಕೊಂಡೊಯ್ಯುವುದಾದರೆ ಅದಕ್ಕೆ ದಾಖಲೆ ನೀಡಬೇಕಾಗುತ್ತದೆ. ಹಣ ಎಲ್ಲಿಂದ ಬಂತು ಎಂಬ ಮಾಹಿತಿ ಹಾಗೂ ಅದಕ್ಕೆ ಸೂಕ್ತ ದಾಖಲೆಗಳನ್ನು (ಉದಾಹರಣೆಗೆ; ವ್ಯಾಪಾರದಿಂದ ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಪತ್ರಗಳು, ಕೃಷಿ ಆದಾಯವಾದರೆ ಕೃಷಿ ಉತ್ಪನ್ನ ಮಾರಾಟ ಮಾಡಿ ಹಣ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದ ರಶೀದಿ) ನೀಡಬೇಕಾಗುತ್ತದೆ.
ಇದನ್ನೂ ಓದಿ: Karnataka polls: ಒಂದೇ ವಾರದಲ್ಲಿ ಬರೋಬ್ಬರಿ 69.3 ಕೋಟಿ ಮೌಲ್ಯದ ಸ್ವತ್ತು, ನಗದು ವಶ
ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿ, ನಗದು ಹಿಂಪಡೆದ ಮತ್ತು ಅದನ್ನು ಸಾಗಿಸುವ ವ್ಯಕ್ತಿಗಳು ತಮ್ಮ ಪಾಸ್‌ಬುಕ್‌ಗಳನ್ನು ಪುರಾವೆಯಾಗಿ ಇಟ್ಟುಕೊಳ್ಳಬೇಕು. ಖಾಸಗಿ ವ್ಯಕ್ತಿಗಳು ಮತ್ತು ಉದ್ಯಮಿಗಳು ವ್ಯಾಪಾರದ ದಾಖಲೆಗಳು ಮಾತ್ರವಲ್ಲದೆ ಸಾಗಾಟಕ್ಕೆ ಅನುಮತಿ ಪಡೆದ ಪ್ರಮಾಣಪತ್ರವನ್ನು ಹೊಂದಿರಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಸಾಗಿಸುವ ಯಾರೇ ಆದರೂ ಅದರ ಮೂಲ ಮತ್ತು ಎಲ್ಲಿಗೆ ಸಾಗಿಸಲಾಗುತ್ತಿದೆ, ಯಾಕೆ ಕೊಂಡೊಯ್ಯಲಾಗುತ್ತದೆ ಎಂಬುದನ್ನು ವಿವರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗದ ಮಾರ್ಗಸೂಚಿ ತಿಳಿಸಿದೆ.
ಸೂಕ್ತ ವಿವರಣೆ ಇಲ್ಲದೆ ಅಥವಾ ದಾಖಲೆ ಇಲ್ಲದೆ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ 50,000 ರೂ. ಮೇಲ್ಪಟ್ಟ ನಗದನ್ನು ವಶಪಡಿಸಿಕೊಂಡಲ್ಲಿ ಅದು ಚುನಾವಣೆ ಉದ್ದೇಶಕ್ಕಲ್ಲ ಎಂಬುದು ಸಾಬೀತಾದರೆ ಅದನ್ನು ವಾರಸುದಾರರಿಗೆ ಮರಳಿಸಲು ಅವಕಾಶವಿದೆ. ಆದರೆ, ಈ ಮೊತ್ತ ತೀರಾ ಹೆಚ್ಚಿನ ಪ್ರಮಾಣದ್ದಾಗಿದ್ದರೆ ಚುನಾವಣಾ ಅಧಿಕಾರಿಗಳು ಅಥವಾ ಪೊಲೀಸರು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತಾರೆ. ಸಾಮಾನ್ಯವಾಗಿ 10 ಲಕ್ಷ ರೂ. ಮೇಲ್ಪಟ್ಟ ನಗದು ವಶಪಡಿಸಿಕೊಂಡಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.
ದಾಖಲೆ ಇಲ್ಲದೆ 10 ಲಕ್ಷ ರೂ. ಮೇಲ್ಪಟ್ಟ ನಗದು ಸಾಗಾಟದ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಲ್ಲಿ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ನಂತರ ಐಟಿ ಅಧಿಕಾರಿಗಳು ಆ ಬಗ್ಗೆ ತನಿಖೆ ನಡೆಸುತ್ತಾರೆ. ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿದರೆ ಮಾತ್ರವೇ ಜಪ್ತಿ ಮಾಡಿದ ಹಣವನ್ನು ವಾಪಸ್ ನೀಡಲಾಗುತ್ತದೆ.
50,000 ರೂ. ಮೇಲ್ಪಟ್ಟ ನಗದನ್ನು ವಶಪಡಿಸಿಕೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷದ ನಾಯಕರ ಚಲನವಲನಗಳ ಮೇಲೆ ಸೂಕ್ಷ್ಮ ನಿಗಾ ವಹಿಸುವಂತೆಯೂ ಅವರಿಗೆ ಸೇರಿದ ಹಣದ ಸಾಗಾಟದ ಬಗ್ಗೆ ಹದ್ದಿನ ಕಣ್ಣಿಡುವಂತೆಯೂ ಅಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ, ಸಾಮಾನ್ಯ ದಿನಗಳಲ್ಲಿಯೂ ಮನೆಯಲ್ಲಿ ನಗದು ಇಟ್ಟುಕೊಳ್ಳುವ ವಿಚಾರವಾಗಿ ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖವಿದೆ. ಹೆಚ್ಚು ಮೊತ್ತದ ನಗದು ಮನೆಯಲ್ಲಿ ಇದ್ದರೆ ಅದರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ದಾಖಲೆಗಳನ್ನು ಹೊಂದಿರುವುದು ಅನಿವಾರ್ಯ. ಒಂದು ವೇಳೆ ಮನೆಯಲ್ಲಿರುವ ಹಣದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ದಾಖಲೆ ಕೇಳಿದಲ್ಲಿ ಒದಗಿಸಬೇಕಾಗುತ್ತದೆ. ಎಲ್ಲ ದಾಖಲೆಗಳು ಬಳಿ ಇದ್ದರೆ ಮತ್ತು ನೀವು ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ ಆತಂಕಪಡಬೇಕಾಗಿಲ್ಲ. ಇಲ್ಲವಾದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯಂಥ ಸಂಸ್ಥೆಗಳು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ನೇರ ತೆರಿಗೆಗಳ ಕೇಂದ್ರ ಮಂಡಳಿ ಅಥವಾ ಸಿಬಿಡಿಟಿ ನಿಯಮಗಳು ಹೇಳುವ ಪ್ರಕಾರ, ಮನೆಯಲ್ಲಿರುವ ಭಾರೀ ಮೊತ್ತದ ನಗದಿನ ಮೂಲವನ್ನು ಸಂಬಂಧಪಟ್ಟ ಸಂಸ್ಥೆಗೆ ತಿಳಿಸಲು ವಿಫಲವಾದಲ್ಲಿ ಶೇ 137ರಷ್ಟು ದಂಡ ಪಾವತಿಸಬೇಕಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ