ರಾಜ್ಯ ಚುನಾವಣೆಗೆ (Karnataka Election Date) ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದು ಕಾಂಗ್ರೆಸ್ನ 2ನೇ ಪಟ್ಟಿ ಬಿಡುಗಡೆಯಾಗಲಿದೆ. ಇನ್ನು ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ಪ್ರಣಾಳಿಕೆ ಸಲಹಾ ಸಮಾಲೋಚನಾ ಸಭೆ ನಡೆಯಲಿದೆ. ಸಭೆಯಲ್ಲಿ ಲೆಕ್ಕ ಪರಿಶೋಧಕರು, ಮಹಿಳಾ ಉದ್ಯಮಿಗಳು, ನಿವಾಸಿ ಕಲ್ಯಾಣ ಸಂಘ, ಪ್ರಜ್ಞಾವಂತರ ಜೊತೆ ಸಮಾಲೋಚನಾ ನಡೆಸಲಿದ್ದಾರೆ. ರಾಜಕೀಯದ ಕ್ಷಣ ಕ್ಷಣದ ಅಪ್ಡೇಟ್ಸ್ ನಿಮ್ಮ ಟಿವಿ9 ಕನ್ನಡ ಡಿಜಿಟಲ್ನಲ್ಲಿ.
ಹುಬ್ಬಳ್ಳಿ: ಎಸ್ಸಿ ಎಸ್ಟಿ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಲಿತರಿಗೆ ಅನ್ಯಾಯ, ಅಂಬೇಡ್ಕರ್ಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಮಲ್ಲಿಕಾರ್ಜುನ ಖರ್ಗೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿರುವ ಪಾರ್ಟಿ ಕಾಂಗ್ರೆಸ್ ಎಂದರು. ಅಲ್ಲದೆ, ಬಿಜೆಪಿಯವರು ಮೀಸಲಾತಿ ತೆಗೆಯುತ್ತಾರೆ ಅಂತಾ ಹೇಳುತ್ತಿದ್ದರು. ಆದರೆ ಎಲ್ಲಾ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ನಿಮಗೆ ಮೀಸಲಾತಿ ತೆಗೆಯುವವರು ಬೇಕೋ ನೀಡಿರುವವರು ಬೇಕೋ ಎಂಬುದನ್ನು ಯೋಚಿಸಿ ಎಂದರು.
ಹುಬ್ಬಳ್ಳಿ: ಕಾಂಗ್ರೆಸ್ ಒಳಮೀಸಲಾತಿ ಪರವೋ ಅಥವಾ ವಿರುದ್ಧವೋ ಎಂಬುದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಜಿಲ್ಲೆಯ ನೆಹರೂ ಮೈದಾನದಲ್ಲಿ ನಡೆದ ಎಸ್ಸಿ ಎಸ್ಟಿ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಕುರಿತು ಸರ್ವ ಪಕ್ಷ ಸಭೆ ಕರೆದಾಗ ನೀವು ಮಾಡಿ ಅಂತ ಹೇಳಿದ್ದರು. ಇದೀಗ ಹೊರಗೆ ಬಂದಾಗ ಕಾಂಗ್ರೆಸ್ ನಾಯಕರು ವರಸೆ ಬದಲಾಯಿಸಿದ್ದಾರೆ. ಒಳಗೊಂದು ಹೊರಗೊಂದು ಮಾತನಾಡುವುದು ಕಾಂಗ್ರೆಸ್ ನೀತಿಯಾಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ವಿರೋಧ ಮಾಡುತ್ತೇವೆ ಅಂತಾ ಹೇಳಲಿ ಎಂದು ಸವಾಲೆಸೆದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎಡನೇ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಹಲವು ಕಡೆಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಚಿತ್ರದುರ್ಗದಿಂದ ಕೆ.ಸಿ.ವಿರೇಂದ್ರ ಪಪ್ಪಿಗೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಕೋಟೆನಾಡಿನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಎಂಎಲ್ಸಿ ರಘು ಆಚಾರ್ ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಕಲಘಟಗಿ ಕ್ಷೇತ್ರದಲ್ಲಿ ಸಂತೋಷ್ ಲಾಡ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ನಾಗರಾಜ್ ಛಬ್ಬಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಚಿಮ್ಮನಕಟ್ಟಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಮಾಜಿ ಸಿದ್ಧರಾಮಯ್ಯನವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಬೆಂಗಳೂರು: ಮತದಾರರಿಗೆ ಸೀರೆ ಹಂಚಲು ತೆರಳುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ಶಾಸಕಿ ಸೌಮ್ಯಾ ರೆಡ್ಡಿ ಕಾರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ಸೌಮ್ಯ ರೆಡ್ಡಿ ಕಾರಿನಲ್ಲಿ, ಚುನಾವಣೆ ಹಿನ್ನೆಲೆ ಮಹಿಳಾ ಮತದಾರರಿಗೆ ಸೀರೆ ಹಂಚಲು ಕಾರಿನಲ್ಲಿ ಸೀರೆಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮಾಹಿತಿ ತಿಳಿದ ಚುನಾವಣಾಧಿಕಾರಿಗಳು ಕಾರು ತಡೆದು ತಪಾಸಣೆ ನಡೆಸಿದಾಗ ಸೀರೆಗಳು ಪತ್ತೆಯಾಗಿದ್ದು, ಕೂಡಲೇ ಕಾರನ್ನು ವಶಕ್ಕೆ ಪಡೆದು ತಿಲಕ್ನಗರ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಪೊಲೀಸರು ಕಾರಿಗೆ ಕವರ್ ಮಾಡಿ ನಿಲ್ಲಿಸಿದ್ದು, ಪ್ರಕರಣ ಕೂಡ ದಾಖಲಿಸಿದ್ದಾರೆ.
ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕಿ ಶ್ರುತಿ ಲೇವಡಿ ಮಾಡಿದ್ದು, ಬೇರೆಯವರ ವಂಶ ಅಭಿವೃದ್ಧಿ ಆಗಬೇಕೆ ಅಂದ್ರೆ ಜೆಡಿಎಸ್ಗೆ ಮತ ಹಾಕಿ. ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದ್ರೆ ಕಾಂಗ್ರೆಸ್ಗೆ ಮತ ಹಾಕಿ. ನಿಮ್ಮ ವಂಶದ ಜತೆ ದೇಶದ ಅಭಿವೃದ್ಧಿ ಆಗಬೇಕಾದ್ರೆ ಬಿಜೆಪಿಗೆ ಮತ ಹಾಕಿ ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಹೇಳಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ವಿಪಕ್ಷಗಳ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ಅದಾನಿ ಕುರಿತು ಜೆಪಿಸಿ ತನಿಖೆಗೆ ಎಲ್ಲ ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಕೇಂದ್ರ ಸರ್ಕಾರ ಈವರೆಗೂ ಜೆಪಿಸಿ ತನಿಖೆಗೆ ಆದೇಶಿಸಿಲ್ಲ. ಎರಡೂವರೆ ವರ್ಷದಲ್ಲಿ ಗೌತಮ್ ಅದಾನಿ ಸಂಪತ್ತು ಹೆಚ್ಚಾಗಿದೆ. ಕೇವಲ ಓರ್ವ ವ್ಯಾಪಾರಿಗೆ ಸರ್ಕಾರ ಎಲ್ಲಾ ಟೆಂಡರ್ ನೀಡಿದೆ. ಕೇವಲ ಭಾಷಣದಿಂದ ಯಾವುದೇ ಕೆಲಸ ನಡೆಯುವುದಿಲ್ಲ. ಜನರ ಹಣ ಕೇವಲ ಓರ್ವ ಉದ್ಯಮಿಗೆ ಯಾಕೆ ನೀಡುತ್ತಿದ್ದಾರೆ?. ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಹೇಳಿದ ಯಾವುದನ್ನೂ ಮಾಡಿ ತೋರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.
ಶಾಸಕರ ಜೊತೆ ಅಶ್ಲೀಲವಾಗಿ ಮಹಿಳೆಯ ಫೋಟೋ ವೈರಲ್ ಆಗಿತ್ತಿದೆ. ಇದಕ್ಕೆ ಸಂಬಂಧಿಸಿ ಫೋಟೋದಲ್ಲಿರೋ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಪೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆಂದು ದೂರು ನೀಡಿದ್ದು ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಪ್ರಕಾರ ಎಫ್ಐಆರ್ ದಾಖಲಾಗಿದೆ.
ಈ ಹಿಂದೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ನಿಪ್ಪಾಣಿ ಕ್ಷೇತ್ರ -ಕಾಕಾ ಸಾಹೇಬ್ ಪಾಟೀಲ್, ಗೋಕಾಕ್ ಕ್ಷೇತ್ರ-ಮಹಾಂತೇಶ್ ಕಡಾಡಿ, ಬೀಳಗಿ ಕ್ಷೇತ್ರ – ಜೆ.ಟಿ.ಪಾಟೀಲ್, ಧಾರವಾಡ – ವಿನಯ್ ಕುಲಕರ್ಣಿ, ಗುರುಮಿಠಕಲ್ ಕ್ಷೇತ್ರ – ಬಾಬುರಾವ್ ಚಿಂಚನಸೂರ್, ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್ ಬಿ.ಪಾಟೀಲ್.
ಬಂಡಾಯ ಪ್ಯಾಚಪ್‍ಗೆ ಮುಂದಾದ ಶಾಸಕ ಕುಮಾರಸ್ವಾಮಿಗೆ ಕ್ಲಾಸ್. ಕಣಚೂರು ಗ್ರಾಮದಲ್ಲಿ ಶಾಸಕ ಕುಮಾರಸ್ವಾಮಿಗೆ ಮತದಾರ ತರಾಟೆಗೆ ತೆಗೆದುಕೊಂಡಿದ್ದಾನೆ. ಹಳ್ಳಿ, ಹಳ್ಳಿ ಸುತ್ತುತ್ತಿರೋ ಕುಮಾರಸ್ವಾಮಿಗೆ ಮತದಾರ ಪ್ರಶ್ನೆಗಳ ಸುರಿಮಳೆ ಗೈದಿದ್ದಾನೆ. ಮೂಡಿಗೆರೆ ತಾಲೂಕಿನಲ್ಲಿ 94ಸಿನಲ್ಲಿ ಎಷ್ಟು ಸೈಟ್ ಮಾಡಿಕೊಟ್ಟಿದ್ದೀರಾ?. ನಾವು ಓಡಾಡಿದ್ದು ಬಿಜೆಪಿಗೆ, ನೀವು ಶಾಸಕರಾದ್ರು ನಿಮ್ಮ ಕೈನಲ್ಲಿ ಆಗ್ಲಿಲ್ಲ. ನಮ್ಮ ಶಾಸಕರು ಎಂದು ನಿಮ್ಮ ಮನೆಗೆ ಕರ್ಕೊಂಡು ಬಂದೆ, ನೀವು ಮಾಡಿದ್ದೇನು? ಎಂದು ಪ್ರಶ್ನಿಸಿದ್ದಾರೆ.
ನಟ ಸುದೀಪ್ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಟ ಸುದೀಪ್ ಪ್ರಚಾರ ವಿಚಾರಕ್ಕೆ ಕಾಂಗ್ರೆಸ್ ಲೇವಡಿ ಮಾಡುತ್ತಿದೆ. ಕಾಂಗ್ರೆಸ್ನವರಿಗೆ ತಲೆ ಕೆಟ್ಟು ಏನು ಬೇಕಾದ್ರೂ ಮಾತನಾಡ್ತಾರೆ. ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡುತ್ತೇನೆ ಅಂತ ಹೇಳಿದ್ದಾರೆ. ನಮಗೆ ಸಿಗುತ್ತಿರುವ ಬೆಂಬಲ ಕಾಂಗ್ರೆಸ್ನವರಿಗೆ ಸಹಿಸೋಕೆ ಆಗ್ತಿಲ್ಲ ಎಂದರು.
ಮಂಗಳೂರು: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಎಲೆಕ್ಷನ್ ಟೈಮ್ನಲ್ಲೇ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಮಾಡಲು ಚಿಂತನೆ ನಡೆದಿದೆ. ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆ ಗೃಹ ಪ್ರವೇಶಕ್ಕೆ ಆದೆಷ್ಟು ಬೇಗ ಡೇಟ್ ಫಿಕ್ಸ್ ಮಾಡಲು ಚಿಂತಿಸಲಾಗಿದೆ.ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆ ನಿರ್ಮಾಣವಾಗುತ್ತಿದ್ದು ಬಹುತೇಕ 90% ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೊತ್ತೂರು ಅಂಜು ಬಾಸ್ ಅಲಿಯಾಸ್ ಆಂಜನೇಯಲು ವಿರುದ್ದ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಮೀನು ವ್ಯಾಜ್ಯ ಹಿನ್ನೆಲೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಎಕರೆ ಕ್ರಯ ಮಾಡಿಸಿಕೊಂಡು 2 ಎಕರೆಗೆ ಬೇಲಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಸಂಸದ ಕರಡಿ ಸಂಗಣ್ಣ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಪಾರ್ಲಿಮೆಂಟ್ ನಿಂದ ಅಸೆಂಬ್ಲಿಗೆ ಬರೋ ಆಶಯ ಹೊಂದಿರೋ ಸಂಸದ, ಬೆಂಗಳೂರಿನಲ್ಲಿ ಬಿಡು ಬಿಟ್ಟಿದ್ದಾರೆ. ಬಿಜೆಪಿ ಟಿಕೆಟ್ ಗಾಗಿ ಸಿ.ವಿ ಚಂದ್ರಶೇಖರ್ ಹಾಗೂ ಕರಡಿ ಸಂಗಣ್ಣ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಂಗಣ್ಣ ಜಿಲ್ಲೆಯ ಇತರ ಅಭ್ಯರ್ಥಿಗಳ ಮೂಲಕ ವರಿಷ್ಠರಿಗೆ ಒತ್ತಡ ಹಾಕಿಸುತ್ತಿದ್ದಾರೆ. ಆದ್ರೆ ಈಗಾಗಲೇ ಸಂಸದರಿಗೆ ಟಿಕೆಟ್ ಇಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ. ಶತಾಯಗತಾಯವಾಗಿ ಟಿಕೆಟ್ ಪಡೆಯಲೇಬೇಕೆಂದು ಸಂಗಣ್ಣ ಪಣತೊಟ್ಟಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುವಲೆ ವಿನಾಯಕನ ದೇವಾಲಯದಲ್ಲಿ ಮಾಲೂರಿನ ಹೂಡಿ ವಿಜಯಕುಮಾರ್ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಹೂಡಿ ವಿಜಯ ಕುಮಾರ್ ಅವರಿಗೆ ಟಿಕೆಟ್ ಸಿಗಲೆಂದು ದೇವರ ಸನ್ನಿಧಾನದಲ್ಲಿ ಫೋಟೋ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಾಲೂರಿನಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಮತ್ತು ಹೂಡಿ ವಿಜಯಕುಮಾರ್ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ.
ಸಚಿವ ಮುನಿರತ್ನ ಬೆಂಬಲಿಗ ವೇಲುನಾಯ್ಕರ್ ಕೆಜಿಎಫ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂಟ್ರಿಕೊಡಲಿದ್ದಾರೆ. ಆದ್ರೆ ಇವರ ಎಂಟ್ರಿಗೆ ಜನರು ಶಾಕ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೇಲುನಾಯ್ಕರ್, ಗೋ ಬ್ಯಾಕ್ ಪೋಸ್ಟ್ ಹಾಕಲಾಗುತ್ತಿದೆ. ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಮೋಹನ್ ಕೃಷ್ಣ ಬೆಂಬಲಿಗರು ಗೋ ಬ್ಯಾಕ್ ಪೋಸ್ಟರ್ಗಳನ್ನಿ ಹರಿಬಿಟ್ಟಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ನಿನ್ನೆ ಸಚಿವ ಮುನಿರತ್ನ ಜೊತೆಗೆ ಮೇಲು ದಿಢೀರ್ ಎಂಟ್ರಿ ಕೊಟ್ಟಿದ್ದರು. ಇದರಿಂದ ಅಚ್ಚರಿಗೊಂಡ ಕ್ಷೇತ್ರದ ಜನ ಆಕ್ರೋಶ ಹೊರ ಹಾಕಿದ್ದಾರೆ. ಕ್ಷೇತ್ರದ ಬಗ್ಗೆ ಯಾವುದೇ ಪರಿಜ್ಞಾನವಿಲ್ಲದವರು, ರೌಡಿಗಳ ರೀತಿಯಲ್ಲಿ ಇಂದು ಕ್ಷೇತ್ರಕ್ಕೆ ಬಂದಿದ್ದಾರೆ. ಇವರ ಎಂಟ್ರಿಯಿಂದ ಕ್ಷೇತ್ರದ ಜನತೆ ಮತ್ತು ಮಕ್ಕಳು ಭಯಬೀತರಾಗಿದ್ದಾರೆ. ಕ್ಷೇತ್ರದ ಜನತೆಗೆ ನಿಮ್ಮ ಅವಶ್ಯಕತೆ ಇಲ್ಲ ಎಂದು ಪೋಸ್ಟ್ ಮಾಡಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದ ಲಕ್ಷಾಂತರ ಹಣ ಜಪ್ತಿ ಮಾಡಲಾಗಿದೆ. ತಿಪಟೂರು ನಗರದಲ್ಲಿ ಸಿಬ್ಬಂದಿ ಇಲ್ಲದೆ ಎಟಿಎಂ ವಾಹನದಲ್ಲಿ ದಾಖಲೆ ಇಲ್ಲದ 19 ಲಕ್ಷ ಹಣ ಸಾಗಿಸಲಾಗುತ್ತಿತ್ತು. ಸದ್ಯ ಹಣ ಹಾಗೂ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮತ್ತೊಂದೆಡೆ ಕೊರಟಗೆರೆ ತಾಲೂಕಿನಲ್ಲಿ ದಾಖಲೆ ಇಲ್ಲದ 1.50 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಕಾಟೇನಹಳ್ಳಿ ಚೆಕ್ಪೋಸ್ಟ್ ಬಳಿ ಕಾರಿನಲ್ಲಿದ್ದ ₹1.50 ಲಕ್ಷ ಜಪ್ತಿ ಮಾಡಿ ಹಣ ಸಾಗಿಸುತ್ತಿದ್ದ ರುದ್ರೇಶ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ ಬಳಿ 1.5 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ತೆರಳಿದ್ದ ಖಾಸಗಿ ಬಸ್ನಲ್ಲಿ ತಪಾಸಣೆ ವೇಳೆ ಪ್ರಯಾಣಿಕನ ಬಳಿ ಇದ್ದ 1.5 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಟಿ ಅಧಿಕಾರಿಗಳಿಗೆ ಕೇಸ್ ಹಸ್ತಾಂತರಿಸಿದ್ದಾರೆ.
ಏಪ್ರಿಲ್ 9ರಂದು ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು ಇಂದಿನಿಂದಲೇ ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರಿಗೆ ಸಫಾರಿ ನಿಷೇಧ ಹೇರಲಾಗಿದೆ. ಇಂದಿನಿಂದ ಏಪ್ರಿಲ್ 9ರವರೆಗೆ ಬಂಡೀಪುರ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ರಸ್ತೆ ನಿರ್ವಹಣೆ, ಪೂರ್ವ ಸಿದ್ಧತೆ, ಪ್ರಧಾನಿ ರಕ್ಷಣೆ ದೃಷ್ಟಿಯಿಂದ ನಿರ್ಬಂಧ ವಿಧಿಸಿ ಚಾಮರಾಜನಗರ ಡಿಸಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.
Published On - 10:10 am, Thu, 6 April 23