ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್ಗೆ ಕಾಂಗ್ರೆಸ್ ನಾಯಕರಿಂದ ಬುಲಾವ್, ಸಿಗುತ್ತಾ ಸೂಕ್ತ ಹುದ್ದೆ?
ಈ ಬಾರಿ ಚುನಾವಣೆ ಸೋತು ನಿರಾಸೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬೆಂಗಳೂರಿಗೆ ಬರುವಂತೆ ಕಾಂಗ್ರೆಸ್ ನಾಯಕರು ಬುಲಾವ್ ನೀಡಿದ್ದಾರೆ.
ಬೆಂಗಳೂರು/ಹುಬ್ಬಳ್ಳಿ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ನಾಯಕ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೋಲು ಕಂಡಿದ್ದಾರೆ. ಸುಮಾರು 34,053 ಮತಗಳ ಅಂತರದಿಂದ ಮೊದಲ ಬಾರಿಗೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋತಿದ್ದಾರೆ. ಇದರಿಂದ ಜಗದೀಶ್ ಶೆಟ್ಟರ್ಗೆ ತೀವ್ರ ಮುಖಭಂಗವಾಗಿದೆ. ಈ ಫಲಿತಾಂಶ ಕಾಂಗ್ರೆಸ್ ಪಾಳಯದಲ್ಲಿ ಅಚ್ಚರಿ ಉಂಟುಮಾಡಿದ್ದು, ಕೂಡಲೇ ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್ಗೆ ಕಾಂಗ್ರೆಸ್ ನಾಯಕರು ಬುಲಾವ್ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದ ಎಐಸಿಸಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರು ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್ಗೆ ಬುಲಾವ್ ನೀಡಿದ್ದಾರೆ. ಅದಂತೆ ಈಗ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಿಂದ ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಕಾಂಗ್ರೆಸ್ ಅಲೆ ಇದ್ದರೂ ಜಗದೀಶ್ ಶೆಟ್ಟರ್ ಸೋಲಿನ ಬಗ್ಗೆ ಹಿರಿಯ ನಾಯಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ಇಂದು ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್ಗೆ ಬುಲಾವ್ ನೀಡಿದ್ದಾರೆ. ಹಾಗೇ ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಮಧ್ಯೆ ಶೆಟ್ಟರ್ಗೆ ಬುಲಾವ್ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಹೌದು…ಮಾಜಿ ಮುಖ್ಯಮಂತ್ರಿ ಎನ್ನುವುದಕ್ಕಿಂತ ಲಿಂಗಾಯತ ಸಮುದಾಯ ಪ್ರಬಲ ನಾಯಕರಾಗಿದ್ದಾರೆ. ಬೆಳಗಾವಿ ಭಾಗದಲ್ಲಿ ತಮ್ಮದೇ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಇನ್ನು ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಬಂದಿದ್ದರಿಂದ ಪಕ್ಷಕ್ಕೆ ಕೊಂಚ ಬಲ ತಂದುಕೊಟ್ಟಂತಾಗಿದೆ. ಹೀಗಾಗಿ ಸೋಲುಕಂಡಿರುವ ಜಗದೀಶ್ ಶೆಟ್ಟರ್ಗೆ ಕಾಂಗ್ರೆಸ್ ಮಹತ್ವದ ಹುದ್ದೆ ನೀಡುವ ಸಾಧ್ಯತೆಗಳಿವೆ. ಆದ್ರೆ, ಈಗಾಗಲೇ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್, ಹೈಕಮಾಂಡ್ ಯಾವುದಾದರೂ ಹುದ್ದೆ ನೀಡಿದರೆ ಸ್ವೀಕರಿಸುತ್ತಾರೋ ಅಥವಾ ನಿರಾಕರಿಸುತ್ತಾರೋ ಎನ್ನುವುದು ಕಾದುನೋಡಬೇಕಿದೆ. ಇನ್ನು ಜಗದೀಶ್ ಶೆಟ್ಟರ್ ಅವರು ಇನ್ಮುಂದೆ ಚುನಾವಣೆ ಸ್ಪರ್ಧಿಸದಿರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಶೆಟ್ಟರ್ ಕ್ಷೇತ್ರದಿಂದ ಸತತ ಏಳನೇ ಬಾರಿಗೆ ಗೆಲುವಿನ ಗುರಿ ಹೊಂದಿದ್ದರು. ಆದರೆ, ಮತದಾರರು ಬಿಜೆಪಿಯ ಬೆನ್ನಿಗೆ ಗಟ್ಟಿಯಾಗಿ ನಿಂತರು, ಕ್ಷೇತ್ರದ ಇತಿಹಾಸದಲ್ಲಿ ದಾಖಲೆಯ ಗರಿಷ್ಠ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. 1994 ರಿಂದ ಗೆದ್ದು ಬರುತ್ತಿದ್ದ ಶೆಟ್ಟರ್ ಅವರ ಸ್ವಂತ ನೆಲದಲ್ಲಿನ ಸೋಲು ಅವರಿಗೆ ಭಾರಿ ಹಿನ್ನಡೆಯಾಗಿದೆ. ಪಕ್ಷ ಬದಲಾಯಿಸುವ ಅವರ ಆಲೋಚನೆ ಮತದಾರರಿಗೆ ಖಂಡಿತವಾಗಿಯೂ ಹಿಡಿಸಿಲ್ಲ.
ಕೆಲವು ಆರಂಭಿಕ ಚುನಾವಣೆಗಳನ್ನು ಹೊರತುಪಡಿಸಿ ಕ್ಷೇತ್ರವು ಹೆಚ್ಚಾಗಿ ಬಿಜೆಪಿಯ ಭದ್ರಕೋಟೆಯಾಗಿದೆ. ಒಟ್ಟು 15 ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಉಳಿದ 10 ಸ್ಥಾನಗಳನ್ನು ಜೆಡಿಎಸ್ (ಮೂರು) ಮತ್ತು ಬಿಜೆಪಿ (ಏಳು) ಹಂಚಿಕೊಂಡಿವೆ. ಈ ಕ್ಷೇತ್ರವು 1990 ರ ದಶಕದ ಆರಂಭದಲ್ಲಿ ಈದ್ಗಾ ಮೈದಾನದ ಚಳುವಳಿಯನ್ನು ಕೈಗೆತ್ತಿಕೊಂಡ ನಂತರ ಮತ್ತು 1994 ರಲ್ಲಿ ಮೊದಲ ಬಾರಿಗೆ ಗೆದ್ದ ನಂತರ ಕೇಸರಿ ಪಕ್ಷದ ಭದ್ರಕೋಟೆಯಾಗಿದೆ.
ಒಟ್ಟಿನಲ್ಲಿ ಸದ್ಯಕ್ಕೆ ಜಗದೀಶ್ ಶೆಟ್ಟರ್ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.