
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೆಲವೇ ದಿನಗಳು ಬಾಕಿ ಇದ್ದು ರಾಜಕೀಯ ನಾಯಕರು ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಪ್ರಣಾಳಿಕೆ ಬಿಡುಗಡೆ ಮೂಲಕ ಮತದಾರರಿಗೆ ನಾನಾ ಭರವಸೆಗಳನ್ನು ಕೊಟ್ಟು ಮತ ಸೆಳೆಯುವ ಯತ್ನ ನಡೆಯುತ್ತಿದೆ. ಸದ್ಯ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು ಕಾಂಗ್ರೆಸ್, ಬಿಜೆಪಿ ರಾಷ್ಟ್ರ ನಾಯಕರು ತಮ್ಮ ಎಲ್ಲಾ ಕೆಲಸಗಳನ್ನೂ ಬಿಟ್ಟು ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ. ಕರ್ನಾಟಕದಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಪ್ರಚಾರ, ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ಹಾಗೂ ಪ್ರಚಾರದ ವೇಳೆ ಆರೋಪ-ಪ್ರತ್ಯಾರೋಪಗಳು, ವಾಗ್ದಾಳಿಗಳು ನಡೆಯುತ್ತಿವೆ. ಇಂದು ಯಾವ ಯಾವ ನಾಯಕರ ಪ್ರಚಾರ ಎಲ್ಲಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 29 ಮತ್ತು 30ರಂದು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿ ಧೂಳೆಬ್ಬಿಸಿ ಹೋಗಿದ್ದರು. ಇಂದು ಪುನಹ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಂದು, ನಾಳೆ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 10.25ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು ಬೆಳಗ್ಗೆ 11 ಗಂಟೆಗೆ ಚಳ್ಳಕೆರೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 2.45ಕ್ಕೆ ಸಿಂಧನೂರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಕಲಬುರಗಿಯಲ್ಲಿ ರೋಡ್ಶೋ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಸುಮಾರು 45 ನಿಮಿಷ ರೋಡ್ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಇಂದು ರಾತ್ರಿ ಕಲಬುರಗಿಯಲ್ಲೇ ತಂಗಲಿದ್ದಾರೆ.
ಇನ್ನು ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಕಲಬುರಗಿಯಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಿ ಡಿಸಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ. ನಾಳೆ ಮಧ್ಯಾಹ್ನ 12ರವರೆಗೆ ಡ್ರೋನ್ ಕ್ಯಾಮರಾ ಹಾರಾಟ ನಿಷೇಧ ಹೇರಲಾಗಿದೆ.
ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ. ಹನೂರು, ಕೊಳ್ಳೇಗಾಲ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಲಿದ್ದಾರೆ. ಹನೂರಿನ ಆರ್.ಎಸ್.ದೊಡ್ಡಿ ಬಳಿಯ ಮೈದಾನದಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹನೂರು ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೊಳ್ಳೇಗಾಲ ಕ್ಷೇತ್ರದ ಸಂತೇಮರಹಳ್ಳಿಯಲ್ಲಿ ಕೊಳ್ಳೇಗಾಲ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚಿಸಲಿದ್ದಾರೆ. ಹಾಗೂ ಸಿದ್ದರಾಮಯ್ಯ ಮಣಿಸಲು ಕೇಂದ್ರ ಸಚಿವ ಅಮಿತ್ ಶಾ ರಣತಂತ್ರ ಹೆಣೆದಿದ್ದು ಬೆಳಗ್ಗೆ 11 ಗಂಟೆಗೆ ವರುಣ ಕ್ಷೇತ್ರದ ಹೊಸಕೋಟೆ ಬಳಿ ಸಮಾವೇಶ ನಡೆಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭಾಗಿಯಾಗಲಿದ್ದಾರೆ.
ಆಡುಗೋಡಿ ಸಿಗ್ನಲ್‌ನಿಂದ ಆರಂಭವಾಗಿ ಹೊಸೂರು ರಸ್ತೆಯ ಟೋಟಲ್ ಮಾಲ್‌ವರೆಗೂ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಸುಗಮ ಸಂಚಾರಕ್ಕೆ ವಾಹನಗಳ ಮಾರ್ಗ ಬದಲಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳ ಅಭ್ಯರ್ಥಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ. ಹೆಚ್.ಡಿ.ತಮ್ಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್ ವೆರೆಗೂ ರೋಡ್ ಶೋ ನಡೆಸಿ ಆಜಾದ್ ಪಾರ್ಕ್ ನಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ಶೋ ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರ ಮತಯಾಚನೆ ಮಾಡಲಿದ್ದಾರೆ.
ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11.10ಕ್ಕೆ ಬೀದರ್ ಏರ್ಪೋರ್ಟ್ಗೆ ಆಗಮಿಸುವ ಖರ್ಗೆ, ಬೆಳಗ್ಗೆ 11.50ಕ್ಕೆ ಭಾಲ್ಕಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಬಸವಕಲ್ಯಾಣ, ಹುಮ್ನಾಬಾದ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಬಳಿಕ ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಪರ ಡಿಕೆ ಶಿವಕುಮಾರ್ ಪ್ರಚಾರ ಮಾಡಲಿದ್ದಾರೆ.
ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪ್ರಧಾನಿ ದೇವೇಗೌಡರು ಮತಯಾಚನೆ ಮಾಡಲಿದ್ದಾರೆ. ಚಿಕ್ಕನಾಯಕನಹಳ್ಳಿ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು, ಗುಬ್ಬಿ ಅಭ್ಯರ್ಥಿ ಬಿಎಸ್ ನಾಗರಾಜು ಪರ ಮತಯಾಚನೆ ಮಾಡಲಿದ್ದಾರೆ.
ರಾಮನಗರ ಕ್ಷೇತ್ರದ ಚುನಾವಣಾ ರಣಕಣ ರಂಗೇರಿದೆ. ರಾಮನಗರ ಚುನಾವಣಾ ಅಖಾಡಕ್ಕೆ ಸಂಸದೆ ಸುಮಲತಾ ಎಂಟ್ರಿ ಕೊಟ್ಟಿದ್ದು ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಮತಬೇಟೆಗೆ ಇಳಿಯಲಿದ್ದಾರೆ. ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸುಮಲತಾ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಪರ ಮತಯಾಚನೆ ಮಾಡಲಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅಖಾಡಕ್ಕಿಳಿಯಲಿದ್ದಾರೆ. ಬೆಳಿಗ್ಗೆ 11ಕ್ಕೆ ಗಂಗಾವತಿಯಲ್ಲಿ ಕೈ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಾಗೂ ಸಂಜೆ ಐದು ಗಂಟೆಗೆ ಕೊಪ್ಪಳದಲಿ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಪರ ಮಾಜಿ ಸಿಎಂಗಳಿಬ್ಬರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:20 am, Tue, 2 May 23