ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ(Karnataka Assembly Elections 2023) ಎಫೆಕ್ಟ್ ಬ್ಲಡ್ ಬ್ಯಾಂಕ್ಗಳ(Blood Banks) ಮೇಲೂ ತಟ್ಟಿದೆ. ರಕ್ತದಾನಿಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ರಕ್ತಕ್ಕೆ ಬೇಡಿಕೆ ಹೆಚ್ಚಾಗಿದೆ. ಬ್ಲಡ್ ಬ್ಯಾಂಕ್ನಲ್ಲಿಯೂ ಸಮಯಕ್ಕೆ ಸರಿಯಾಗಿ ಬ್ಲಡ್ ಸಿಗದೆ ರೋಗಿಗಳು ಪರದಾಡುವಂತಾಗಿದೆ. ರಕ್ತಕ್ಕಾಗಿ ಬ್ಲಡ್ ಬ್ಯಾಂಕ್ಗಳಿಗೆ ಅಲೆಯುವಂತಾಗಿದೆ.
ಹೌದು.. ಚುನಾವಣೆ ನೀತಿ ಸಂಹಿತೆ ಜಾರಿಯಾದಗಿನಿಂದ ಹೆಚ್ಚಿನ ರಕ್ತದಾನ ಶಿಬರಗಳೇ ನಡೆದಿಲ್ಲ. ರಾಜಕೀಯ ನಾಯಕರು, ಗಣ್ಯರು ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲು ಕೆಲ ಕಾರ್ಯಕ್ರಮದ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದರು. ಈಗ ಈ ನೀತಿ ಸಂಹಿತೆಯಿಂದಾಗಿ ಕಾರ್ಯಕ್ರಮಕ್ಕೆ ತಡೆಬಿದ್ದಿದ್ದು, ರಕ್ತದಾನ ಶಿಬಿರ ಆಯೋಜನೆಗೆ ನೀತಿ ಸಂಹಿತೆ ಅಡ್ಡಿಪಡಿಸಿದೆ. ಇದರಿಂದ ರೋಗಿಗಳು ರಕ್ತ ಸಿಗದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಿಳಿದ ಮಹಾರಾಷ್ಟ್ರ ಡಿಸಿಎಂ: ಗಡಿ ವಿವಾದದ ಬಗ್ಗೆ ಸಾಫ್ಟ್ ಕಾರ್ನರ್
ಇನ್ನು ಸಿನಿಮಾ ನಟ-ನಟಿಯರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ, ಸಂಘ-ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿ೦ದ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ಬೆಂಗಳೂರಿನ ರಾಷ್ಟೋತ್ಥಾನ ಸಂಸ್ಥೆಯ ರಕ್ತ ನಿಧಿಯಲ್ಲಿ ತಿಂಗಳಿಗೆ ಸರಾಸರಿ 2 ಸಾವಿರಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗುತ್ತಿತ್ತು, ಕಳೆದ ಒಂದು ತಿಂಗಳಿನಲ್ಲಿ ಈ ಸಂಖ್ಯೆ ಅರ್ಧಕ್ಕೆ ಅರ್ಧ ಕುಸಿದಿದೆ. ಕೇವಲ 900 ಯೂನಿಟ್ ರಕ್ತ ಸಂಗ್ರಹವಾಗಿದೆಯಂತೆ. ಅಲ್ಲದೆ ತಿಂಗಳಿಗೆ 30 ರಿಂದ 40 ಶಿಬಿರ ಮಾಡ್ತಿದ್ದ ಸಂಸ್ಥೆ ಈ ತಿಂಗಳು 15ನ್ನೂ ಮುಟ್ಟಿಲ್ಲಂತೆ. ಆಸ್ಪತ್ರೆಯಿಂದ ಬರ್ತಿರುವ ಬೇಡಿಕೆಯನ್ನ ಪೂರೈಸಲು ಕಷ್ಟವಾಗ್ತಿದೆ ಅಂತ ರಾಷ್ಟೋತ್ಥಾನ ಸಂಸ್ಥೆಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ನಿತ್ಯ 2,500 ಯುನಿಟ್‌ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ 300 ರಿಂದ 400 ಯುನಿಟ್ ಮಾತ್ರ ರಕ್ತ ಸಂಗ್ರಹವಿದೆ. ಕೆಂಪು ರಕ್ತಕಣಕ್ಕೆ ಬೇಡಿಕೆ ಇದೆ. ಅಲ್ಲದೆ, ನೆಗೆಟಿವ್ ಗ್ರೂಪ್ ರಕ್ತವೇ ಇಲ್ಲದಂತಾಗಿದೆಯಂತೆ. ಹೀಗಾಗಿ ರೋಗಿಗಳು ರಕ್ತಕ್ಕಾಗಿ ಅಲೆಯುವಂತಾಗಿದೆ. ಒಟ್ನಲ್ಲಿ, ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಕಾರಣ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತದ ಅಗತ್ಯತೆ ಹೆಚ್ಚಿದೆ. ಹೀಗಾಗಿ ಜನ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಅಮಾಯಕರ ಪ್ರಾಣ ಉಳಿಸಬೇಕಿದೆ.
ವರದಿ: ಪೂರ್ಣಿಮಾ ಟಿವಿ9, ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ