ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ಆರಂಭವಾಗುತ್ತದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಈಗಾಗಲೆ 2ನೇ ಪಟ್ಟಿಯ ಬಿಡುಗಡೆ ಮಾಡಿದ್ದು, ಜೆಡಿಎಸ್ 1 ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ ಇಂದು (ಏ.14) 50 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆ ನಿನ್ನೆ (ಏ.13) ರಿಂದ ಆರಂಭವಾಗಿದ್ದು ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಂಡಯಾದ ಬಿಸಿ ಸುಡುತ್ತಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
ಬೆಂಗಳೂರು: ಎಂ.ಪಿ.ಕುಮಾರಸ್ವಾಮಿ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಶೇಷಾದ್ರಿಪುರಂನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಅವರು ಸೇರ್ಪಡೆ ಆಗಿದ್ದಾರೆ.
ಬೆಂಗಳೂರು: ಹಾಸನ ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ಬೇಸರವಿಲ್ಲ. ನಮಗೆ ಹೆಚ್.ಡಿ.ದೇವೇಗೌಡರ ಆರೋಗ್ಯ ಮುಖ್ಯ. ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದಂತೆ ನಾವು ಕೇಳುತ್ತೇವೆ. ಹೆಚ್‌ಡಿಡಿ ಹೇಳಿದ್ರೆ ಹಾಸನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಬೆಂಗಳೂರು: ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ದೇವೇಗೌಡರಿಂದಲೇ ತೀರ್ಮಾನ ಮಾಡಲಾಗಿದೆ ಎಂದು ಹೆಚ್.ಡಿ.ರೇವಣ್ಣ ಹೇಳಿದರು. ಹಾಸನ ಕ್ಷೇತ್ರದಲ್ಲಿ ಭವಾನಿ ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತಿದ್ದ. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.
ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.
ಕುಡಚಿ-ಆನಂದ ಮಾಳಗಿ
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ್ ಚೋಪ್ರಾ
ಅಥಣಿ-ಶಶಿಕಾಂತ್ ಪಡಸಲಗಿ
ಯಲ್ಲಾಪುರ-ಡಾ.ನಾಗೇಶ್ ನಾಯ್ಕ್
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ- ಕಡಬೂರು ಮಂಜುನಾಥ್
ಯಲಹಂಕ-ಮುನೇಗೌಡ
ಯಶವಂತಪುರ-ಜವರಾಯಿಗೌಡ
ತಿಪಟೂರು-ಶಾಂತಕುಮಾರ್
ಶಿರಾ-ಆರ್.ಉಗ್ರೇಶ್
ಹಾನಗಲ್-ಮನೋಹರ ತಹಶೀಲ್ದಾರ್
ಹಾನಗಲ್-ಮನೋಹರ ತಹಶೀಲ್ದಾರ್
ಸಿಂದಗಿ-ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್.ಆರ್.ಚನ್ನಕೇಶವ
ಜೇವರ್ಗಿ-ದೊಡ್ಡಪ್ಪಗೌಡ
ಬೆಂಗಳೂರು: ಹೆಚ್.ಪಿ.ಸ್ವರೂಪ್ಗೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಶುಕ್ರವಾರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಸಿ.ಎಂ.ಇಬ್ರಾಹಿಂ, ಹೆಚ್.ಡಿ.ರೇವಣ್ಣ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉಪಸ್ಥಿತರಿದ್ದರು.
ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ ನಾಯ್ಕ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಲಾಗಿದೆ. ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಅನುಮತಿ ಪಡೆಯದೆ ಕಾಂಗ್ರೆಸ್ ಬೈಕ್ ರ‍್ಯಾಲಿ ಮಾಡಿದ್ದಾರೆ. ಹಾಗಾಗಿ 20 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಮಹತ್ವದ ಸಭೆ ಮಾಡಿದ್ದಾರೆ. JDS ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೂ ಮುನ್ನ ಮಾತುಕತೆ ನಡೆಸಿದ್ದಾರೆ. ಪತ್ನಿ ಭವಾನಿ ಟಿಕೆಟ್ಗಾಗಿ ರೇವಣ್ಣರಿಂದ ಕೊನೆ ಹಂತದ ಕಸರತ್ತು ನಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು: ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ರಾಹುಲ್ ಗಾಂಧಿರನ್ನು ಭೇಟಿಯಾಗುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ (Laxman Savadi) ಸವದಿ ಹೇಳಿದರು. ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ನೆಲಮಂಗಲ: ನೀವು ಯಾರು ನಿಮ್ಮ ಮತವನ್ನು ಮಾರಾಟ ಮಾಡಿಕೊಳ್ಳಬೇಡಿ. ಬೆಲೆ ಏರಿಕೆ ಗಗನದಲ್ಲಿ ಆದಾಯ ಪಾತಾಳದಲ್ಲಿದೆ. ನಾವೆಲ್ಲ ಸೇರಿ ನಿಮಗೆ ನಾಲ್ಕು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜೂನ್ ತಿಂಗಳಿನಿಂದ ಈ ಎಲ್ಲಾ ಯೋಜನೆಗಳು ಜಾರಿಯಾಗಲಿವೆ. ಸಂವಿಧಾನದ ಮುಖಾಂತರ ನಮಗೆಲ್ಲ ರಕ್ಷಣೆ ಸಿಗುತ್ತಿದೆ. ಸಂವಿಧಾನ, ರಾಷ್ಟ್ರ ಧ್ವಜ ಕಾಂಗ್ರೆಸ್ ಕೊಟ್ಟ ಕೊಡುಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಪ್ರಧಾನಿ ಮೋದಿ ಎದುರು ಬಂದರೆ ಅವರಿಗೆ ನಮಸ್ಕಾರ ಮಾಡುತ್ತೇವೆ. ನಮ್ಮನ್ನು ಯಾರಾದರೂ ಭೇಟಿಯಾದರೆ ಗೌರವವಾಗಿ ಸ್ವಾಗತಿಸುತ್ತೇವೆ. ಹಾಗೆಯೇ ಲಕ್ಷ್ಮಣ ಸವದಿ ನಮ್ಮನ್ನು ಭೇಟಿಯಾಗಿದ್ದಾರೆ. ನಾವು ಹಿರಿಯ ನಾಯಕರಿಗೆ ಗೌರವ ನೀಡುತ್ತೇವೆ. ಕಾಂಗ್ರೆಸ್ಗೆ ಯಾರೇ ಬರಲಿ ನಾವು ಅವರನ್ನು ಗೌರವಿಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸಂಸ್ಕಾರ ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದರು.
ಮಂಡ್ಯ: ಪಕ್ಷ ಸೂಚಿಸುವ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಮಾತನಾಡಿದ ಅವರು, ಟಿಕೆಟ್ ಸಿಗದೆ ಅಸಮಾಧಾನಗೊಂಡವರ ಜತೆ ನಾಯಕರು ಚರ್ಚೆ ನಡೆಸಿ ಸಮಾಧಾನ ಮಾಡುತ್ತಾರೆ. ಕೇಂದ್ರದ ನಾಯಕರು ಟಿಕೆಟ್ ಹಂಚಿಕೆ ಮಾಡಿದ್ದಾರೆ. ಹತ್ತಾರಿ ಬಾರಿ ಯೋಚಿಸಿಯೇ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು: ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಇಂದು ಸಂಜೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಆಪ್ತ ಸಹಾಯಕನ ಮೂಲಕ ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ, ಪಕ್ಷದ ಕೋರ್ ಕಮಿಟಿ ಸದಸ್ಯ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಎಂಎಲ್‌ಸಿ ಆಯನೂರು ಮಂಜುನಾಥ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದಿಂದ ರಾಜ್ಯ ಬಿಜೆಪಿ ಘಟಕಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲುಗೆ ಆಯನೂರು ಮಂಜುನಾಥ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ಅಧ್ಯಕ್ಷ ಟಿ.ಡಿ.ಮೇಘರಾಜ್ರಿಂದ ಪತ್ರ ಬರೆಯಲಾಗಿದೆ.
ಬೆಂಗಳೂರು: ಕೆಲವೇ ಹೊತ್ತಿನಲ್ಲಿ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ 2ನೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಹಾಸನ ಜಿಲ್ಲೆಯ ಅಭ್ಯರ್ಥಿಗಳ ಹೆಸರು ಬಿಟ್ಟು ಪಟ್ಟಿ ಪ್ರಕಟ ಸಾಧ್ಯತೆ ಇದೆ.
ಕೊಪ್ಪಳ: ಬಿಜೆಪಿ ದೊಡ್ಡ ನಾಯಕನನ್ನ ಆಪರೇಷನ್ ಮಾಡೋದಲ್ಲದೇ ತಮ್ಮ ಗೆಲುವನ್ನ ಸುಲಭ ಮಾಡಿಕೊಂಡರಾ ಮಾಜಿ ಸಚಿವ ಬಸವರಾಜ ರಾಯರೆಡ್ಡಿ. ಹೌದು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಹಿಂದೆ ರಾಯರೆಡ್ಡಿ ಗೆಲುವಿನ ತಂತ್ರ ಅಡಗಿರುವ ಮಾತು ಕೇಳಿ ಬರುತ್ತಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಗಾಣಿಗ ಸಮುದಾಯ 40 ಸಾವಿರ ಮತಗಳಿವೆ. ಹಿಗಾಗೇ ಸವದಿ ಬಂದ್ರೆ ತಮ್ಮ ಗೆಲುವು ಸುಲಭ ಎಂದು ಆಪರೇಷನ್ ಮಾಡಿದ್ರಾ ರಾಯರೆಡ್ಡಿ ಎನ್ನುವ ಮಾತು ಕೇಳಿಬಂದಿದೆ.
ಬೆಂಗಳೂರು: ‘ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಏನೂ ನಷ್ಟ ಆಗಲ್ಲ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಹೋಗುವವರು ದುಡುಕಿನ ನಿರ್ಧಾರ ತಗೊಂಡು ಹೋಗಿದ್ದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ.
ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲು 20 ವರ್ಷವಾಗಬಹುದು. 10 ವರ್ಷವಾದ್ರೂ ರಾಹುಲ್ ಮುಖ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ ಎನ್ನುವ ಮೂಲಕ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು: ‘ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ನಾನಿಟ್ಟಿರೋದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕ್ಷೇತ್ರದಲ್ಲಿ ಬಾಕಿಯಿರುವ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು, ನನ್ನ ಶಕ್ತಿ ಮೀರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲೂ ನನ್ನನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ. ನಾನು ಅಥಣಿಯಿಂದ ಟಿಕೆಟ್ ಕೇಳಿದ್ದು, ಅದಕ್ಕೆ ಒಪ್ಪಿಗೆಯಾಗಿದೆ. ಸತೀಶ್ ಜಾರಕಿಹೊಳಿ ಜೊತೆಯೂ ಮಾತನಾಡುತ್ತೇನೆ. ನಮ್ಮಲ್ಲಿ ಲಿಂಗಾಯತ, ವಾಲ್ಮೀಕಿ ಅನ್ನೋದು ಇಲ್ಲ, ನಾನು ಜಾತ್ಯತೀತ ನಾಯಕ. ಒಂದು ಜಾತಿಗೆ ಸೀಮಿತ ಮಾಡಬೇಡಿ. ಎಲ್ಲಾ ಜಾತಿ ಧರ್ಮದ ಜೊತೆ ಸಹಬಾಳ್ವೆಯಿಂದ ಬದುಕ್ಕಿದ್ದೇವೆ ಎಂದಿದ್ದಾರೆ.
ಬೆಂಗಳೂರು: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರ ‘ಈಗ ಅವರು ಜಗಳಗಂಟ ಪಕ್ಷಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನಲ್ಲಿ ಅವರಿಗೆ ಭವಿಷ್ಯ ಇಲ್ಲ,
ಇಷ್ಟು ವರ್ಷ ಅವರು ಬಿಜೆಪಿಯಲ್ಲಿ ಇದ್ದವರು. ಕಾಂಗ್ರೆಸ್ ಗೆ ಸೇರುವ ನಿರ್ಧಾರ ಮಾಡಬಾರದಿತ್ತು. ಲಕ್ಷ್ಮಣ ಸವದಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ.
ಅವರು ಕಾಂಗ್ರೆಸ್ ಗೆ ಹೋದ ಮೇಲೆ ಪಶ್ಚಾತ್ತಾಪ ಪಡುತ್ತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಸವದಿ ಚುನಾವಣೆ ಸೋತ ನಂತರ ಕೂಡ ಅವರನ್ನು ಎಂಎಲ್‌ಸಿ, ಡಿಸಿಎಂ ಮಾಡಲಾಯಿತು. ಆದರೆ ಸವದಿ ಕಾಂಗ್ರೆಸ್ಗೆ ಹೋಗಿರುವುದು, ನಮ್ಮ ಕಾರ್ಯಕರ್ತರಿಗೆ ನೋವಾಗಿದೆ ಎಂದರು.
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಕಾಂಗ್ರೆಸ್ ಪಕ್ಷ (Congress) ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ನಾಯಕರೆಲ್ಲರೂ ಸ್ವಾಗತಿಸುತ್ತೇವೆ. ಲಕ್ಷ್ಮಣ ಸವದಿ ಜೊತೆ ನಾವು ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಸಂಜೆ 4 ಗಂಟೆಗೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಿದರು.
ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಬಂಡಾಯದ ಬಾವುಟ ಹಾರುತ್ತಿರುವ ಹಿನ್ನೆಲೆ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಎಲ್ಲಾ ಅಭ್ಯರ್ಥಿಗಳ ತುರ್ತು ಸಭೆ ಕರೆದಿದ್ದು, ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಲಿದ್ದಾರೆ. ಅಸಮಾಧಾನಿತರನ್ನು ಸಮಾಧಾನಿಸಲಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಘಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಧ್ಯಾಹ್ನ 2 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಒಂದೇ ಕಾರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಆಗಮಿಸಿದ್ದಾರೆ.
ರಾಮನಗರ: ಅಪರೇಷನ್ ಹಸ್ತಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ. ತವರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಪ್ರಯತ್ನಿಸುತ್ತುದ್ದು, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅರಿಗೆ ಗಾಳ ಹಾಕಲು ಮುಂದಾಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉದಯ್ ಗೌಡ ಮೂಲಕ ಸಿಪಿ ಯೋಗೇಶ್ವರ್ ಅವರನ್ನು ಸೆಳೆಯಲು ಪ್ಲಾನ್ ಮಾಡಿದ್ದಾರೆ.
ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿಗೆ ಆಗಮಿಸಿದ್ದು, ಹೆಚ್ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಕಾಗವಾಡ, ರಾಮದುರ್ಗ, ಅಥಣಿ, ಸವದತ್ತಿ ಚುನಾವಣೆ ಉಸ್ತುವಾರಿ ನೀಡುವಂತೆ ಲಕ್ಷ್ಮಣ ಸವದಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹಾವೇರಿ ಶಾಸಕ ಓಲೇಕಾರ್ ಬೆಂಗಳೂರಿನ ಕುಮಾರಕೃಪಾ ರಸ್ತೆಯ ‘ಕಾವೇರಿ’ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ನೆಹರು ಓಲೇಕಾರ್, ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದಾರೆ.
ಮೈಸೂರು: ವಸತಿ ಸಚಿವ ವಿ. ಸೋಮಣ್ಣ ಅವರು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗ ಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವಿ. ಸೋಮಣ್ಣ ನಿನ್ನ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ ಎಂದು ಕಾಪು ಸಿದ್ದಲಿಂಗಸ್ವಾಮಿ ಅವರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
ಉತ್ತರ ಕನ್ನಡ: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರು: ಇಂದು ಸಂಜೆ 4ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಭೇಟಿಯಾಗಿ, ರಾಜೀನಾಮೆ ಸಲ್ಲಿಸುವೆ. ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವೆ. ಬಿಜೆಪಿ ತೊರೆಯಲು ನಿನ್ನೆಯೇ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಬಿಜೆಪಿಯ ಯಾವುದೇ ನಾಯಕರನ್ನು ಭೇಟಿಯಾಗಲ್ಲ. ನಾನು ಇನ್ನೂ ಬಿಜೆಪಿ ಮನೆಯಲ್ಲೇ ಇದ್ದೇನೆ, ಬೇರೆ ಮಾತಾಡಲ್ಲ. ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ನಂತರ ಬೇರೆ ವಿಚಾರದ ಚರ್ಚೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ತೊಡೆ ತಟ್ಟಿ ಅಖಾಡಕ್ಕಿಳಿಯಲಿದ್ದಾರೆ. ಕಾಂಗ್ರೆಸ್ಗೆ ಪಂಥಾಹ್ವಾನ ನೀಡಿದ ಬೆನ್ನಲ್ಲೇ ತಾಲೀಮು ಆರಂಭಿಸಿದ ಬೊಮ್ಮಾಯಿ, ನಾಳೆ (ಏ.15) ಶಿಗ್ಗಾಂವಿಯಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಮೈಸೂರು: ವಸತಿ ಸಚಿವ ವಿ. ಸೋಮಣ್ಣ ಇಂದು (ಏ.14) ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಮೊದಲ ದಿನವೇ ಬಂಡಾಯದ ಬಿಸಿ ತಾಗಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ವರುಣದಿಂದ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು, ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಸೋಮಣ್ಣ ಅವರಿಗೆ ವರುಣಾ ಟಿಕೆಟ್ ನೀಡಿದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಳಗಾವಿ: ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಂಡಾಯವೆದ್ದ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಇಂದು (ಏ.14) ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಜತೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ವಿಶೇಷ ವಿಮಾನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೆಸರಿನಲ್ಲಿ ಬುಕ್ ಆಗುವ ಸಾಧ್ಯತೆ ಇದೆ. ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ.
Published On - 8:53 am, Fri, 14 April 23