ಇಂದು ಎಂಎಲ್ಸಿ ಸ್ಥಾನಕ್ಕೆ ಲಕ್ಷ್ಮಣ ಸವದಿ ರಾಜಿನಾಮೆ, ಕಾಂಗ್ರೆಸ್ ಸೇರ್ಪಡೆ? ಬೆಳಗಾವಿ ರಾಜಕಾರಣದಲ್ಲಿ ಹೊಸ ಅಲೆ
ಇಂದು ಸಂಜೆ 4ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಭೇಟಿಯಾಗಿ, ರಾಜೀನಾಮೆ ಸಲ್ಲಿಸುವೆ. ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವೆ. ಬಿಜೆಪಿ ತೊರೆಯಲು ನಿನ್ನೆಯೇ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಬಿಜೆಪಿಯ ಯಾವುದೇ ನಾಯಕರನ್ನು ಭೇಟಿಯಾಗಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election 2023) ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿದ್ಯಮಾನಗಳು ಜರಗುತ್ತಿವೆ. ಅದರಲ್ಲಂತು ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತಿದಂತೆ ಬಂಡಾಯ ಮತ್ತು ಪಕ್ಷಾಂತರ ಜೋರಾಗಿದೆ. ಬಿಜೆಪಿ (BJP) 212 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಕೆಲವು ಆಕಾಂಕ್ಷಿಗಳಿಗೆ ಮತ್ತು ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿಲ್ಲ. ಇದರಿಂದ ಅಸಮಾಧಾನಗೊಂಡ ನಾಯಕರು ಬಂಡಾಯವೆದ್ದಿದ್ದು, ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೆ ಪಕ್ಷದ ಮೂಲಕ ಅಥವಾ ಪಕ್ಷೇತರವಾಗಿ ಕಣಕ್ಕಿಳಿಯಲು ನಿರ್ಧಿರಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅಥಣಿ (Athani) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ ಸವದಿ (Laxman Savdi) ಅವರಿಗೂ ಟಿಕೆಟ್ ಕೈ ತಪ್ಪಿದ್ದು, ಪಕ್ಷದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಈ ಹಿನ್ನೆಲೆ ಪಕ್ಷ ಹಾಗೂ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈ ಸಂಬಂಧ ಇಂದು (ಏ.14) ಕಾಂಗ್ರೆಸ್ (Congress) ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಜತೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಇಂದು ಸಂಜೆ 4ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಭೇಟಿಯಾಗಿ, ರಾಜೀನಾಮೆ ಸಲ್ಲಿಸುವೆ. ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವೆ. ಬಿಜೆಪಿ ತೊರೆಯಲು ನಿನ್ನೆಯೇ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಬಿಜೆಪಿಯ ಯಾವುದೇ ನಾಯಕರನ್ನು ಭೇಟಿಯಾಗಲ್ಲ. ನಾನು ಇನ್ನೂ ಬಿಜೆಪಿ ಮನೆಯಲ್ಲೇ ಇದ್ದೇನೆ, ಬೇರೆ ಮಾತಾಡಲ್ಲ. ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ನಂತರ ಬೇರೆ ವಿಚಾರದ ಚರ್ಚೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವರುಣ ರಣರಂಗದಲ್ಲಿ ಸೋಮಣ್ಣ ಎಂಟ್ರಿ, ಎದುರಾಗಿದೆ ನೂರೆಂಟು ಸವಾಲು
ರಾಜೀನಾಮೆ ಕೊಟ್ಟ ಬಳಿಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಭೇಟಿ ಬಗ್ಗೆ ಆಲೋಚನೆ ಮಾಡುತ್ತೇನೆ. ಚನ್ನರಾಜ ಹಟ್ಟಿಹೊಳಿ ನನ್ನ ಜೊತೆ ಬಂದಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭೇಟಿಯಾಗೋಣ ಅಂತಾ ಅವರೇ ಹೇಳುತ್ತಿದ್ದಾರೆ. ರಾಜೀನಾಮೆ ಬಳಿಕ ಕೆಲವು ವಿಚಾರ ಅವರ ಜೊತೆ ಹಂಚಿಕೊಳ್ಳುತ್ತೇನೆ. ಆ ವಿಚಾರಗಳಿಗೆ ಅವರು ಒಪ್ಪಿದರೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನೂ ಅವರ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು
ಸಾಧಕ, ಬಾಧಕ ಚರ್ಚೆ ಮಾಡುತ್ತೇನೆ. ಆದಮೇಲೆ ಇಂದು ಅಥವಾ ನಾಳೆ ಸಂಜೆ ವೇಳೆ ಒಂದು ನಿರ್ಣಯ ಮಾಡುತ್ತೇನೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು. ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು. ಬಳಿಕ ಏನ್ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ್ನಿಂದ ಆಹ್ವಾನ ಇದೆ. ಸಂಜೆಯ ವರಗೆ ತೀರ್ಮಾನಕ್ಕೆ ಬರುತ್ತೇನೆ. ಏಪ್ರಿಲ್ 17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ಖಾಸಗಿಯಾಗೂ ಅನೇಕರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದರೇನು, ಬಿಟ್ಟರೇನು. ನನ್ನ ಸಂಪರ್ಕಕ್ಕೆ ಬಿ.ಎಲ್ ಸಂತೋಷ ಬಹಳ ಪ್ರಯತ್ನ ಪಟ್ಟರು. ಕೆಲ ಮುಖಂಡರನ್ನು ಸಹ ಕಳಸಿದರು. ಆಜ್ಞೆಯನ್ನು ಪಾಲಿಸುವುದು ಕಷ್ಟ, ಬಿಡುವುದು ಕಷ್ಟ. ಸಂತೋಷ ನನ್ನ ಗುರು, ನನ್ನನ್ನು ಕ್ಷಮಿಸಿ ಎಂದು ಹೇಳುತ್ತೇನೆ. ಅವರಿಂದ ಯಾವುದೇ ಅನ್ಯಾಯ ಆಗಿಲ್ಲ, ಕಷ್ಟ ಕಾಲದಲ್ಲಿ ನೆರವು ಕೊಟ್ಟಿದ್ದಾರೆ. ಅಥಣಿ ಕೆಲ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿದೆ. ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಆಸೆ. ವೈಯಕ್ತಿಕ ಬೇಡಿಕೆ ಅಲ್ಲ, ನೀರಾವರಿ ಬೇಡಿಕೆ ಇಡುತ್ತೇನೆ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಹಣಿಯಲು ಸವದಿ ಅಸ್ತ್ರ
ಶಾಸಕ ರಮೇಶ್ ಜಾರಕಿಹೊಳಿ 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮೂಲಕ ಬೆಳಗಾವಿಯಲ್ಲಿ ಕಾಂಗ್ರೆಸ್ಗೆ ಮಗ್ಗಲು ಮುಳ್ಳಾಗಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದು, ಈ ಬಾರಿ ಶತಾಯಗತಾ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಲು ಟೊಂಕ್ ಕಟ್ಟಿ ನಿಂತಿದ್ದಾರೆ.
ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಲಕ್ಷ್ಮಣ ಸವದಿ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೌದು ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಇನ್ನು ಲಕ್ಷ್ಮಣ ಸವದಿ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ವೈಮನಸ್ಸು ಇದ್ದು, ಟಿಕೆಟ್ ವಂಚಿತನಾಗಲು ಇವರು ಒಬ್ಬರು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತರನ್ನು ಒಗ್ಗೂಡಿಸಿ ಮತದಾರರನ್ನು ಪಕ್ಷದತ್ತ ಸೆಳೆದುಕೊಳ್ಳುವುದು. ಸತೀಶ್ ಜಾರಕಿಹೊಳಿ ವಿರೋಧಿ ಅಲೆ ಎಬ್ಬಿಸಿ ಬೆಳಗಾವಿ ರಾಜಕಾರಣದಿಂದ ಸತೀಶ್ ಜಾರಕಿಹೊಳಿ ಹಿಂದೆ ಸರಿಯುವಂತೆ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ