ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಾಗಿದೆ. ಚುನಾವಣೆ ಅಖಾಡ ರಂಗೇರುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು ಪ್ರಚಾರ ಶುರು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಬಸವಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್ ಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಬಳಿಕ ತುಮಕೂರು, ಹಾಸನ ಜಿಲ್ಲೆಗೆ ಎಂಟ್ರಿಯಾಗಲಿದ್ದಾರೆ. ಇದಕ್ಕಾಗಿ ವಾಹನವೂ ಸಿದ್ದಗೊಂಡಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಲಂಗ್ಸ್ ಇನ್ಫೆಕ್ಷನ್, ಡಸ್ಟ್ ಅಲರ್ಜಿ ಜೊತೆ ಜ್ವರ ಕಾಣಿಸಿಕೊಂಡಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬನ್ನಿ ಇಂದಿನ ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ನಲ್ಲಿ ಪಡೆಯಿರಿ.
ಹಾವೇರಿ: ಸಿಎಂ ಬೊಮ್ಮಾಯಿ ಸಿಎಂ ಆದ ಮೇಲೆ ಅವರ ನಿಲುವು ನಿರ್ಧಾರಗಳು ಬದಲಾಗಿವೆ. ಇದು ಭಗವಂತನ ಇಚ್ಚೆ, ದೇವರೆ ಅವರಿಗೆ ಪಾಠ ಕಲಿಸಬೇಕು. ಇದು ಬಹಳಷ್ಟು ದಿನ ಉಳಿಯುವದಿಲ್ಲ ಈ ರೀತಿ ಮೋಸ ಮಾಡುವಂತದು. ಅನ್ಯಾಯ ಮಾಡುವಂತದಕ್ಕೆ ದೇವರು ಪಾಠ ಕಲಿಸುತ್ತಾನೆ. ಮಾಜಿ ಸಿಎಂ ಯಡಿಯೂರಪ್ಪ, ನಳೀನಕುಮಾರ ಕಟೀಲಾಗಲಿ ನನ್ನ ಜೊತೆ ಇದುವರೆಗೂ ಮಾತನಾಡಿಲ್ಲ ಎಂದು ನೆಹರು ಓಲೇಕಾರ ಕಿಡಿಕಾರಿದರು.
ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಭ್ರಷ್ಟರು, ಸಿಎಂ ಆಗಿದ್ದ ಲಿಂಗಾಯತರೆಲ್ಲರೂ ಭ್ರಷ್ಟರಲ್ಲ ಎಂದು ತಮ್ಮ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎಂದು ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಸಿಎಂ ಬಗ್ಗೆ ಹೊಸದಾಗಿ ಆಯ್ಕೆಯಾದ ಶಾಸಕರು, ವರಿಷ್ಠರು ನಿರ್ಧರಿಸುತ್ತಾರೆ. ಇಂಥವರೇ ಸಿಎಂ ಆಗುತ್ತಾರೆಂದು ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ಬೆಳಗಾವಿ: ಬಿಎಸ್‌ವೈ, ಸಿಎಂ ಬೊಮ್ಮಾಯಿ ತಮ್ಮ ಕಾಲಾವಧಿಯಲ್ಲಿ ಬಹಳಷ್ಟು ಒಳ್ಳೆಯ ಕಾರ್ಯ ಮಾಡಿ ರಾಜ್ಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಆ ಸಮಾಜ ಇಟ್ಟುಕೊಂಡು ಈ ರೀತಿ ಹೇಳೋದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದನ್ನ ನೋಡಬೇಕು. ನಮ್ಮ ಸಮುದಾಯದ ಎಲ್ಲರೂ ಅವರ ಹೇಳಿಕೆ ವಿರೋಧ ಮಾಡ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನಮ್ಮ ಲಿಂಗಾಯತ ಸಮುದಾಯದ ಜನ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಖಂಡಿಸಿದರು.
ಮೈಸೂರು: ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತದೆ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿ ನಿಲ್ಲಿಸಿಕೊಂಡು ಗುಡುಗಿದ್ದರು. ಮೋದಿ ಮುಳುಗಿಹೋದರು ಅನ್ನೋ ಹಾಗೇ ಗುಡುಗಿದ್ದರು ಎಂದು ಕಿಡಿಕಾರಿದ್ದಾರೆ.
ವಿಜಯಪುರ: ಈ ಸಲ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯಲ್ಲ. ಯಾಕಂದ್ರೆ ಕಾಂಗ್ರೆಸ್ ಪಕ್ಷ 150 ಸೀಟ್ ಗೆಲ್ಲುತ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ನಗರದ ಕನಕದಾಸ ವೃತ್ತದಲ್ಲಿ ಭಾಷಣ ಮಾಡಿದ ಅವರು, ಬಿಜೆಪಿಯವರು ನನ್ನ ಸರ್ಕಾರಿ ನಿವಾಸವನ್ನು ಕಸಿದುಕೊಂಡರು. ನೂರಾರು ಜನರು ತಮ್ಮ ಮನೆ ತಗೊಳ್ಳಿ ಎಂದು ಹೇಳಿದರು. ನನ್ನ ಮನೆ ಕಸಿದುಕೊಂಡಿದ್ದು ಒಳ್ಳೆಯದೇ ಆಗಿದೆ ಎಂದರು.
ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕದಿಂದ ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಲಿಂಗಾಯತ ಯುವ ವೇದಿಕೆ ಮುಖಂಡ ಬಸವರಾಜ್ ಎನ್ನುವವರು ದೂರು ದಾಖಲಿಸಿದ್ದಾರೆ.
ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು
ಉಡುಪಿ: ಕನಕಪುರ ಕ್ಷೇತ್ರದಲ್ಲಿ ಎಷ್ಟು ಬೇಕಾದರೂ ಪ್ರಚಾರ ಮಾಡಲಿ. ಬಿಜೆಪಿಯವರು ಜನರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ. ಬಿಜೆಪಿ ಅಭ್ಯರ್ಥಿ ಅಶೋಕ್ಗೆ ಯಾವುದೇ ಅಡಚಣೆ ಮಾಡಲ್ಲ. ಕಾಂಗ್ರೆಸ್ ಕಾರ್ಯಕರ್ತರು ಗೌರವದಿಂದ ನಡೆದುಕೊಳ್ಳಬೇಕು ಎಂದು ಬೈಂದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ಸಂಚು ರೂಪಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನು ನೋಡಿದಾಗ ‘ಹಾವಿನ ಹೆಡೆಯ ಮೇಲಿನ ಕಪ್ಪೆ ಹಾರುವ ನೊಣಕ್ಕೆ ಆಶಿಸಿದಂತೆ’
ಜಗಜ್ಯೋತಿ ಬಸವೇಶ್ವರರ ವಚನ ನೆನಪಾಗುತ್ತಿದೆ. ರಾಜಕೀಯವಾಗಿ ತಮ್ಮನ್ನು ಮುಗಿಸಲು ಆರ್ಎಸ್ಎಸ್ ಸಂಚು ರೂಪಿಸಿದೆ ಎಂದು ಹೇಳಿದರು.
ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೋಡ್‌ಶೋ ಆರಂಭವಾಗಿದೆ. ನಗರದ ಶಿವಾಜಿ ವೃತ್ತದಿಂದ ಕನಕದಾಸ ವೃತ್ತದವರೆಗೂ ನಡೆಯಲಿರುವ ಬೃಹತ್ ರೋಡ್ ಶೋ ನಡೆಯುತ್ತಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿ ಹಲವರು ಭಾಗಿಯಾಗಿದ್ದಾರೆ.
ರಾಮನಗರ: ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಫೈಟ್ ಕಾಣಿಸುತ್ತಿಲ್ಲ ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಒಳ ಒಪ್ಪಂದವೋ ಅಥವಾ ಹೊರ ಒಪ್ಪಂದವೋ ಏನೋ ಗೊತ್ತಿಲ್ಲ. ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಬಲವಾಗಿಲ್ಲ. ಡಿಕೆಶಿಗೆ ಫೈಟ್ ಕೊಡೋದು ಅಶೋಕ್ ಅಂತಾ ಜನರಿಗೆ ಅನ್ನಿಸಿದೆ. ಡಿ.ಕೆ.ಶಿವಕುಮಾರ್ ಹುಟ್ಟೂರಿನಲ್ಲೂ ನನಗೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂದರು.
ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೋಡ್ ಶೋಗೆ ಕ್ಷಣ ಗಣನೆ ಶುರುವಾಗಿದ್ದು, ನಗರದ ಶಿವಾಜಿ ವೃತ್ತದಿಂದ ಕನಕದಾಸ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ರಾಹುಲ್ ಗಾಂಧಿ ರೋಡ್ ಶೋ ಹಾಗೂ ವೀಕ್ಷಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬ್ಯಾರೇಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಉಡುಪಿ: ನಮ್ಮ ಪಕ್ಷ ನಮ್ಮ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಕೋಟಿ ನಮಸ್ಕಾರ. ಕೇಸರಿ ಧ್ವಜ ಹಿಡಿದು ಬಂದವರಿಗೆ ನಮಸ್ತೆ. ಹಿಂದೂತ್ವ ಯಾರ ಆಸ್ತಿ ಅಲ್ಲಾ, ನಾನು ಶಿವನ ಕುಮಾರ್ ಶಿವಕುಮಾರ್. ನಾವೇಲ್ಲರೂ ಹಿಂದೂಗಳೆ, ನಾನು ಎಲ್ಲಾ ದೇವಸ್ಥಾನ ಸುತ್ತಿ ಬಂದಿದ್ದೇನೆ. ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುತ್ತೇನೆ. ಬೈಂದೂರುನ ಶಕ್ತಿ ಶಾಲಿ ಯುವ ಸಮೂಹ ನೋಡಿ ಖುಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬಾಗಲಕೋಟೆ: ಲಿಂಗಾಯತ ಸಿಎಂಗಳ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ತೀವ್ರ ವಿವಾದ ಉಂಟು ಮಾಡಿದ್ದು, ಈ ಹಿನ್ನೆಲ್ಲೆ ಸಿದ್ದರಾಮಯ್ಯಗೆ ಭಾಷಣ ಅವಕಾಶ ತಪ್ಪಿದೆ. ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಈ ವೇಳೆ ಇಬ್ಬರು ಸ್ವಾಮೀಜಿ ಹಾಗೂ ರಾಹುಲ್ ಗಾಂಧಿ ಅವರಿಗೆ ಮಾತ್ರ ಭಾಷಣಕ್ಕೆ ಅವಕಾಶ ನೀಡಲಾಗಿದೆ.
ಉಡುಪಿ: ಬೈಂದೂರು ಬಿಜೆಪಿ ಮುಖಂಡ ಬಾಬು ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಜಿಲ್ಲೆಯ ಬೈಂದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಮುಖಂಡ ಶಂಕರ ಪೂಜಾರಿ, ವೆಂಕಟ ಪೂಜಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮೈಸೂರು: ಸಿದ್ದರಾಮಯ್ಯ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯವರು ಯಾವಾಗ ಸತ್ಯ ಹೇಳುತ್ತಾರೆ ಎಂದು ಹೆಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾವಾಗಲೂ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತಾಡ್ತಾರೆ. ಗಾಳಿ ಸುದ್ದಿ ಹರಡಿ ಜನರ ಮನಸು ಕೆಡಿಸುವುದೇ ಬಿಜೆಪಿಯ ಉದ್ದೇಶ ಎಂದರು.
ಬೆಂಗಳೂರು: ಪ್ರಧಾನಿ ಮೋದಿ, ಸಿಎಂ ಯೋಗಿ ಪ್ರಚಾರದಿಂದ JDSಗೆ ಯಾವುದೇ ಎಫೆಕ್ಟ್ ಆಗಲ್ಲ ಎಂದು
ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಬೀದರ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂದಿದ್ದಾರೆ. ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಕಳೆದ 40 ವರ್ಷಗಳಿಂದ ಹಾಸನದಲ್ಲಿ ಮತ ಹಾಕಿದರೂ ಪದ್ಮನಾಭನಗರದಲ್ಲೇ ಇದ್ದೇನೆ ಎಂದು ಹೇಳಿದರು.
ಬೆಳಗಾವಿ: ಬಸವ ಜಯಂತಿ ದಿನದಂದೇ ಬಸವಣ್ಣನವರಿಗೆ ಅವಮಾನಿಸಿದ್ದೀರಿ. ಇದರ ಪರಿಣಾಮ ಮುಂಬರುವ ಚುನಾವಣೆಯಲ್ಲಿ ಎದುರಿಸುತ್ತೀರಿ. ಸಿದ್ದರಾಮಯ್ಯ ಅಷ್ಟೇ ಅಲ್ಲ, ಕಾಂಗ್ರೆಸ್ ಸಹ ಪರಿಣಾಮ ಎದುರಿಸುತ್ತೆ. ಸಿದ್ದರಾಮಯ್ಯಗೆ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಹೈಕಮಾಂಡ್ ತಣ್ಣೀರೆರಚಿದೆ ಎಂದು ಟಿವಿ9ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮಂಡ್ಯ: ಮದ್ದೂರಿನ ಕೊಪ್ಪ ಭಾಗದ ಜೆಡಿಎಸ್ ಪ್ರಮುಖ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೆ.ಎಂ.ಎಫ್ನ ಮಾಜಿ ಅಧ್ಯಕ್ಷ ತಮ್ಮಯ್ಯ, ಒಕ್ಕಲಿಗ ಸಂಘದ ನಿರ್ದೇಶಕ ಚಂದ್ರು, ಮಾಜಿ ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ಜಯರಾಮ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ಭಾನುವಾರ ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಆ ಮೂಲಕ ಜೆಡಿಎಸ್ ಮೂಲ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕಿದೆ.
ಗದಗ: ರಾಹುಲ್ ಗಾಂಧಿ ಶಕ್ತಿಯನ್ನ ಸಿಸಿ ಪಾಟೀಲ್ ಸಾಹೇಬರಿಗೆ ಗೊತ್ತಿಲ್ಲ. ಎಲ್ಲೆಲ್ಲಿ ರಾಹುಲ್ ಗಾಂಧಿ ಬರ್ತಾರೆ ಅಲ್ಲೆಲ್ಲ ನೆನಪಿಟ್ಟುಕೊಳ್ಳಿ ದೊಡ್ಡಮಟ್ಟದಲ್ಲಿ ಗೆಲ್ಲುತ್ತೇವೆ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುತ್ತೇನೆ ಎಂದು ಸಿಸಿ ಪಾಟೀಲ್ಗೆ ನಲಪಾಡ್ ಸವಾಲ್ ಹಾಕಿದ್ದಾರೆ.
ಗದಗ: ರಾಹುಲ್ ಗಾಂಧಿ ಬಂದು ಹೋಗುವುದರಿಂದ ನಮ್ಮ ಬಲ ಹೆಚ್ಚುತ್ತದೆ. ನಮ್ಮ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಬಂದು ಹೋದ ಮೇಲೆ ಹಲವಾರು ಗೆಲುವು ಆಗಿವೆ. ಈ ರೀತಿ ಅಪಪ್ರಚಾರ ಮಾಡುತ್ತಿರುವ ಕೆಲವು ಶಕ್ತಿಗಳು ಇವೆ. ಆ ಶಕ್ತಿಗಳಿಗೆ ಬರುವ ದಿವಸದಲ್ಲಿ ನಿರಾಶೆ ಉಂಟಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್ಕೆ ಪಾಟೀಲ್ ಹೇಳಿದರು.
ರಾಮನಗರ ಜಿಲ್ಲೆ ಕನಕಪುರದ ಟಿ.ಬೇಕುಪ್ಪೆ ಸರ್ಕಲ್ನಲ್ಲಿ ಆರ್.ಅಶೋಕ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತನ ವಿರೋಧ ವ್ಯಕ್ತಪಡಿಸಿದರು. ಕನಕಪುರ ಕಾಂಗ್ರೆಸ್ಸಿಗರ ಮನೆ, ಇಲ್ಲಿ ಡಿಕೆಶಿ ಬಗ್ಗೆ ಮಾತನಾಡಬೇಡಿ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನೇ ಕಿತ್ತುಕೊಂಡ್ರಿ. ಮಾತೆತ್ತಿದ್ರೆ ಸಂವಿಧಾನ ಬದಲಾವಣೆ ಮಾಡ್ತೀವಿ ಎಂದು ಹೇಳ್ತೀರಿ ಎಂದು ಕಾರ್ಯಕರ್ತ ಕಿಡಿಕಾರಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಇಂದು ಕೂಡಲಸಂಗಮಕ್ಕೆ ಬಂದಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ಸಂಸತ್ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ. ಬಸವಣ್ಣನವರ ಬಗ್ಗೆ ಸಿದ್ದರಾಮ ಸ್ವಾಮೀಜಿ ಚೆನ್ನಾಗಿ ಮಾತನಾಡಿದರು. ಬಸವಣ್ಣ ಇಡೀ ಜೀವನದಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ. ಬಸವಣ್ಣನವರು ಎಂದೂ ಹಿಂಜರಿಯಲಿಲ್ಲ, ಸತ್ಯಕ್ಕಾಗಿ ಮುನ್ನಡೆದರು. ಸಿದ್ದರಾಮ ಸ್ವಾಮೀಜಿ ಮಾತು ಕೇಳಿ ನನಗೆ ಅತೀವ ಸಂತಸವಾಯಿತು. ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿರಿ ಎಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೇಳಿದರು.
ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದುರಹಂಕಾರಿ ಸಿದ್ದರಾಮಯ್ಯಗೆ ವರುಣ ಜನ ಪಾಠ ಕಲಿಸಬೇಕು ಎಂದು ವರುಣ ಕ್ಷೇತ್ರ ವ್ಯಾಪ್ತಿಯ ಭುಗತಗಳ್ಳಿಯಲ್ಲಿ ಪ್ರತಾಪ್ ಸಿಂಹ ಗುಡುಗಿದ್ದಾರೆ. ಅವರಿಗೆ ಸೋಲಿನ ಭಯವಿದೆ, ಅದಕ್ಕೆ ಏನೇನೋ ಮಾತಾಡ್ತಿದ್ದಾರೆ. ಸಿಎಂ ಬೊಮ್ಮಾಯಿ ಬಗ್ಗೆ ಭ್ರಷ್ಟಾಚಾರ ಹೊರಿಸಿ ಮಾತನಾಡುತ್ತಿದ್ದಾರೆ. ಬಸವಾನುಯಾಯಿಗಳ ಬಗ್ಗೆ ತುಚ್ಛವಾಗಿ ಮಾತಾಡಲು ಶುರುಮಾಡಿದ್ದಾರೆ. ಹನುಮ ಜಯಂತಿಗೆ ಹೋದರೆ ಹನುಮ ಎಲ್ಲಿ ಹುಟ್ಟಿದ್ದ ಅಂತ ಕೇಳ್ತಾರೆ? ಮತ್ತೊಂದು ದಸರಾ ಹುಟ್ಟುಹಾಕಿದ ವ್ಯಕ್ತಿಗೆ ಪಾಠ ಕಲಿಸುವ ಕಾಲ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಆಗಿದೆ ಎಂದು ದಾವಣಗೆರೆ ಜಿಲ್ಲೆ ಹರಿಹರ ಕಾಂಗ್ರೆಸ್ ಶಾಸಕ ರಾಮಪ್ಪ ಬೇಸರ ಹೊರ ಹಾಕಿದ್ದಾರೆ. ಆಪರೇಷನ್ ಕಮಲದ ವೇಳೆ ನೋಟಿನ ಕಂತೆಗಳನ್ನು ತಂದಿದ್ದರು. ಆಗ ನಾನು ದುಡ್ಡು, ಅಧಿಕಾರಕ್ಕೆ ಆಸೆ ಪಡಲಿಲ್ಲ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದ ವ್ಯಕ್ತಿ, ವರಿಷ್ಠರು ಚಿಂತಿಸಬೇಕಿತ್ತು. ಪಕ್ಷಕ್ಕೆ ಅನ್ಯಾಯ ಮಾಡಲ್ಲ, ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಅವರು ಪ್ರಚಾರ ಆರಂಭಿಸಿದ್ದಾರೆ. ಕನಕಪುರ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡು ಎಂದು ಮೋದಿ ಕಳುಹಿಸಿದ್ದಾರೆ. ಇಡೀ ಕನಕಪುರ ಕ್ಷೇತ್ರದ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅಶೋಕ್ ನಮ್ಮವನು ಎಂದು ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ. ‘ಕೈ’ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಗಾಂಧಿ ಬೀದಿಗೆ ಬಂದಿದ್ದಾರೆ, ಮನೆ ಖಾಲಿ ಮಾಡಿಸಿದ್ದಾರೆ. ರಾಹುಲ್ ಗಾಂಧಿಗೆ ಆದ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಬರಲಿದೆ. ಕೇಂದ್ರ ಕೊಟ್ಟ ಅನುದಾನದಲ್ಲಿ ಕನಕಪುರ ಕ್ಷೇತ್ರ ಅಭಿವೃದ್ಧಿ ಆಗಿದೆ ಎಂದು ಆರ್.ಅಶೋಕ್ ಪ್ರಚಾರ ಮಾಡಿದರು.
ಚುನಾವಣಾಧಿಕಾರಿಗಳು ರಾಹುಲ್ ಗಾಂಧಿ ಅವರು ಆಗಮಿಸಿದ ಹೆಲಿಕಾಪ್ಟರ್ ಪರಿಶೀಲಿಸಿದ್ದಾರೆ. ಕೂಡಲಸಂಗಮ ಬಸವ ಭವನದ ಬಳಿಯ ಹೆಲಿಪ್ಯಾಡ್ನಲ್ಲಿ ತಪಾಸಣೆ ನಡೆಸಿದ್ದಾರೆ. ಹುಬ್ಬಳ್ಳಿಯಿಂದ ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಅಧಿಕಾರಿಗಳು ತಪಾಸಣೆ ಮಾಡಿ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಸಂಗಮನಾಥನ ದರ್ಶನ ಮಾಡಿದ್ದಾರೆ. ರಾಹುಲ್ ಗಾಂಧಿಗೆ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ.
ಧಾರವಾಡದಲ್ಲಿ ಬಿಜೆಪಿ ನಾಯಕ ತವನಪ್ಪ ಅಷ್ಟಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಧಾರವಾಡ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನ ಗೆಲ್ಲಲಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ರು. ಕಾರ್ಯಕರ್ತರ ಸ್ಫೂರ್ತಿ, ದೇವರ ಅನುಗ್ರಹದಿಂದ ಹೊಸ ಶಕ್ತಿ ಬಂದಿದೆ. ಬಿಜೆಪಿಯವರು ಮಾಜಿ ಸಿಎಂ ಬಿಎಸ್‌ವೈ ಕಣ್ಣಲ್ಲಿ ನೀರು ಹಾಕಿಸಿದ್ರು. ವರುಣ ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗುತ್ತೇನೆ, ಟೈಂ ಫಿಕ್ಸ್ ಆಗಿಲ್ಲ. ವರುಣ ಅಷ್ಟೇ ಅಲ್ಲ, ಯಾರೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ. ಖರ್ಗೆ, ರಾಹುಲ್, ಪ್ರಿಯಾಂಕಾ ಎಲ್ಲರೂ ಪ್ರಚಾರ ಮಾಡುತ್ತಾರೆ. ಜನಸೇವೆಗೆ ಅವಕಾಶ ನೀಡುವಂತೆ ಬೇಡಿಕೊಂಡಿದ್ದೇನೆ ಎಂದು ಶೃಂಗೇರಿಯಲ್ಲಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ಗೆ ಬಂಧನ ಭೀತಿ ಎದುರಾಗಿದೆ. ಬೆಂಗಳೂರಿನ ಶ್ರೀನಿವಾಸ್ ಮನೆಗೆ ಅಸ್ಸಾಂ ಪೊಲೀಸರು ಆಗಮಿಸಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ಅಸ್ಸಾಂನ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಗಾಗಿ ಎಸ್ಪಿ ಪ್ರತೀಕ್ ತುಬೆ ನೇತೃತ್ವದಲ್ಲಿ ಪೊಲೀಸರ ತಂಡ ಆಗಮಿಸಿದೆ.
ಹಲವು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿದ್ದೇವೆ ಎಂದು ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಲಿಂಗಾಯತ ಸಮುದಾಯ ವಿಚಾರದ ಬಗ್ಗೆಯೂ ಚರ್ಚೆ ಆಗಿದೆ. ಹುಬ್ಬಳ್ಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರಬಹುದು. ನಾಳೆ ಹಾನಗಲ್ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ, ನಾನು ಹೋಗ್ತೇನೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಅವಿಭಾಜ್ಯ ಅಂಗ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಪರ ಮತಯಾಚನೆ ವೇಳೆ ಹೇಳಿದರು. ಕಾಂಗ್ರೆಸ್ ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ ವಿಸಿಟಿಂಗ್ ಕಾರ್ಡ್ ಇದ್ದಂತೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಉಪ್ಪಿನಕಾಯಿ ಹಾಕಬೇಕು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ. ವಿಶ್ವನಾಥ್ ಬಿಡಿಎ ಅಧ್ಯಕ್ಷರಾಗಿ ಹೊಸ ಲೇಔಟ್ ನಿರ್ಮಿಸಿದ್ದಾರೆ. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಿಕೊಂಡಿದ್ದಾರೆ ಎಂದು ವಿಶ್ವನಾಥ್ ಪರ ಮತಯಾಚನೆ ಮಾಡಿದರು.
ನಾಳೆ ಚಿಕ್ಕಮಗಳೂರಿಗೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದು 5 ಕ್ಷೇತ್ರಗಳಲ್ಲಿ ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಚಿಕ್ಕಮಗಳೂರಿನ ಆಶ್ರಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಆಶ್ರಯ ಮೈದಾನದಲ್ಲಿ ಮೂರು ಕ್ಷೇತ್ರಗಳ ಕಾಂಗ್ರೆಸ್ ಸಮಾವೇಶದಲ್ಲಿ ಖರ್ಗೆ ಭಾಗಿಯಾಗಲಿದ್ದಾರೆ.
ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಲಿಂಗಾಯತ ಸಮುದಾಯದ ನಾಯಕರನ್ನು ಹೊರಹಾಕಿದ್ದು ನಾವಲ್ಲ. ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ರನ್ನು ಹೊರಹಾಕಿದ್ದು ನಾವಲ್ಲ. ಲಿಂಗಾಯತ ಮಾಜಿ ಸಿಎಂ, ಡಿಸಿಎಂಗೆ ಅವಮಾನ ಮಾಡಿದ್ದು ನಾವಲ್ಲ. ಬಿಜೆಪಿ ಯಾಕೆ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಮತ್ತು ದಾವಣಗೆರೆ ಎಸ್ಪಿ ರಿಷ್ಯಾಂತ್ ವರ್ಗಾವಣೆ ಮಾಡಲಾಗಿದೆ. ವೈಟ್ ಫೀಲ್ಡ್ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ನೂತನ ಡಿಸಿಪಿ. ಅರೂಣ್ ಕೆ ದಾವಣಗೆರೆ ನೂತನ ಡಿಸಿಪಿ.
ಲಿಂಗಾಯತರಿಗೆ ಕಾಂಗ್ರೆಸ್ ಮಾಡಿದಷ್ಟು ದ್ರೋಹ ಯಾರೂ ಮಾಡಿಲ್ಲ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ. ಲಿಂಗಾಯತ ಸಮುದಾಯವನ್ನು ಒಡೆದು ಛಿದ್ರ ಛಿದ್ರ ಮಾಡಿದರು. ಅವರ ಶಾಪಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಕಳೆದುಕೊಂಡರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವನ್ನೂ ಸಹ ಕಳೆದುಕೊಂಡಿತು. ಈಗಲೂ ಲಿಂಗಾಯತ ಸಮಾಜ ಟೀಕಿಸಲು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಮಾಡಿದ ತಪ್ಪನ್ನು ವರುಣದಲ್ಲಿ ಅನುಭವಿಸುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳುತ್ತದೆ. ರಾಜ್ಯದ ಜನ ಜಾತಿ ರಾಜಕಾರಣಕ್ಕೆ ಬೆಲೆ ಕೊಡುವುದಿಲ್ಲ ಎಂದರು.
ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಪ್ರಚಾರ ತಡೆಯಲು ಯತ್ನ ನಡೆದಿದೆ. ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ವಿ.ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಇನ್ನು ಮತ್ತೊಂದೆಡೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸೋಮಣ್ಣ ಭಾಷಣ ಮಾಡಿದ್ದಿ ಭಾಷಣದ ಮಧ್ಯೆ ಯುವಕ ಪ್ರಶ್ನೆ ಮಾಡಲು ಮುಂದಾಗಿದ್ದ. ಆಗ ಭಾಷಣ ಮುಗಿಯುವವರೆಗೂ ಕಾಯುವಂತೆ ವಿ.ಸೋಮಣ್ಣ ಮನವಿ ಮಾಡಿದರು. ಸೋಮಣ್ಣ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಲಾಯಿತು. ಮತ್ತೊಂದು ಯುವಕರ ಗುಂಪಿನಿಂದ ಸೋಮಣ್ಣ, ಬಿಜೆಪಿ ಪರ ಘೋಷಣೆ ಕೂಗಲಾಯಿತು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಭ್ರಷ್ಟ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಲಿಂಗಾಯತ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ನಿಜಲಿಂಗಪ್ಪ, ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್ ಶ್ರೇಷ್ಠ ನಾಯಕರು. ಲಿಂಗಾಯತರ ಬಗ್ಗೆ ಗೌರವವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಹೇಳಿಕೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ನಗರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ನಾಮಪತ್ರ ತಿರಸ್ಕೃತಗೊಂಡಿದೆ. ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿದೆ. ಅಬ್ದುಲ್ ಜಾಫರ್ ಇತ್ತೀಚಿಗೆ ವಿದೇಶದಿಂದ ಬೆಂಗಳೂರಿಗೆ ಹಿಂದಿರುಗಿದ್ದರು. ಯಾವುದೇ ಕ್ಷೇತ್ರದಲ್ಲೂ ವೋಟರ್ ಐಡಿಯಲ್ಲಿ ಅಲಿ ಹೆಸರಿರಲಿಲ್ಲ. ಹೀಗಾಗಿ ಚುನಾವಣಾಧಿಕಾರಿಗಳು ಅಬ್ದುಲ್ ನಾಮಪತ್ರ ತಿರಸ್ಕರಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ರಾತ್ರಿ 9.30ಕ್ಕೆ ಹೈದರಾಬಾದ್ನಿಂದ ಬೆಂಗಳೂರಿಗೆ ಆಗಮಿಸಿ ರಾತ್ರಿ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8.55ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿ ನಾಳೆ ಬೆಳಗ್ಗೆ 10.30ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಮಾಡಲಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಗೆ ಭೇಟಿ ನೀಡಿ ಅಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 2.25ಕ್ಕೆ ಹಾಸನ ಜಿಲ್ಲೆ ಆಲೂರಿನಲ್ಲಿ ಶಾ ರೋಡ್‌ಶೋ ನಡೆಸಿ ನಾಳೆ ಸಂಜೆ 4.40ಕ್ಕೆ ಹುಬ್ಬಳ್ಳಿಗೆ ತೆರಳಲಿದ್ದಾರೆ.
ತುಮಕೂರು: ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಕೆ ವೇಳೆ ಪೇದೆಗೆ ಕಲ್ಲು ಎಸೆದಿದ್ದ ಆರೋಪಿಯನ್ನು ಕೊರಟಗೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದ ರಂಗಧಾಮಯ್ಯ ಬಂಧಿತ ಆರೋಪಿ. ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ರಂಗಧಾಮಯ್ಯ ಘಟನೆ ನಂತರ ಕಳೆದ ಮೂರು-ನಾಲ್ಕು ದಿನದಿಂದ ತಲೆಮರೆಸಿಕೊಂಡಿದ್ದನು.
ಕಾಂಗ್ರೆಸ್ ಪ್ರಭಾವಿ ನಾಯಕ ಎಸ್ಎಸ್ ಮಲ್ಲಿಕಾರ್ಜುನ ಎದುರು ಬಿಜೆಪಿ ರೈತ ಮುಖಂಡನಿಗೆ ಟಿಕೆಟ್ ಸಿಕ್ಕಿದೆ. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹೀಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಟ ಆರಂಭಿಸಿದ್ದಾರೆ. ಪತ್ನಿ ಲತಾಳೊಂದಿಗೆ ದಾವಣಗೆರೆ ತಾಲೂಕಿನ ಕಾಡಜ್ಜಿ, ನಾಗರಕಟ್ಟೆ ಸೇರುದಂತೆ ಹತ್ತಾರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ್ದಾರೆ. ಬಸವ ಜಯಂತಿ ಹಿನ್ನೆಲೆ ಸಿಎಂ ಬೊಮ್ಮಾಯಿರಿಂದ ಪುಷ್ಪನಮನ ಸಲ್ಲಿಸಲಾಗಿದೆ. ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿಯಾಗಿದ್ದರು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
ಕಾಯಕ ಮತ್ತು ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ಅಣ್ಣ ಬಸವಣ್ಣನವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಮಾಡೋಣ. pic.twitter.com/6T9hhjuIOT
— Basavaraj S Bommai (@BSBommai) April 23, 2023
ಏ.29 ಅಥವಾ 30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೋಲಾರಕ್ಕೆ ಆಗಮಿಸಲಿದ್ದಾರೆ. ಮೋದಿಜೀ ಅವರು ಬರುತ್ತಿರುವುದು ನಮ್ಮೆಲ್ಲರ ಭಾಗ್ಯ. ಇತಿಹಾಸ ಪುಟಗಳಲ್ಲಿ ನಿಲ್ಲಲ್ಲಿದೆ ಎಂದು ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಪ್ರಚಾರಕ್ಕೆ ಮೋದಿ ಅವರು ಆಗಮಿಸುತ್ತಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಒಳಗೊಂಡ 2 ಲಕ್ಷ ಜನ್ರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 50 ಎಕರೆ ಪ್ರದೇಶದಲ್ಲಿ ಸಿದ್ದತೆ ನಡೆದಿದೆ. ಕಳೆದ ಮೂರು ದಿನಗಳಿಂದ ಸಿದ್ದತೆ ಕಾರ್ಯ ನಡೆಯುತ್ತಿದೆ. ದೇವ ಮೂಲೆಯಿಂದ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈಗಲೇ ನಮ್ಮ ಕ್ಷೇತ್ರಕ್ಕೆ ಬರೋದು ಬೇಡ ಎಂದು ಬಿಜೆಪಿ ಅಭ್ಯರ್ಥಿಗಳು ಡಿಮ್ಯಾಂಡ್ ಇಟ್ಟಿದ್ದಾರೆ. ಮೇ 1 ರ ಮೇಲೆಯೇ ನಮ್ಮಲ್ಲಿಗೆ ಯಡಿಯೂರಪ್ಪ ಬರಬೇಕು ಎಂದು ಪಕ್ಷದ ಮುಂದೆ ಬಿಜೆಪಿ ಅಭ್ಯರ್ಥಿಗಳು ಡಿಮ್ಯಾಂಡ್ ಮಾಡಿದ್ದಾರೆ. ಈಗಲೇ ಯಡಿಯೂರಪ್ಪ ಬಂದು ಹೋದರೆ ಮತ್ತೊಮ್ಮೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಪ್ರಚಾರದ ಕೊನೆಯ ದಿನಗಳ ಬಿಸಿ ಇರುವಾಗಲೇ ನಮ್ಮಲ್ಲಿಗೆ ಯಡಿಯೂರಪ್ಪ ಬರಬೇಕು. ಈಗಲೇ ಬಂದು ಹೋದರೆ ಕಾಂಗ್ರೆಸ್ ನವರು ಕೌಂಟರ್ ಸ್ಟ್ರಾಟಜಿ ಮಾಡಿಬಿಡುತ್ತಾರೆ. ಅದಕ್ಕಾಗಿ ನಮ್ಮ ಕ್ಷೇತ್ರಗಳಿಗೆ ಮೇ 1 ರ ಬಳಿಕವೇ ಯಡಿಯೂರಪ್ಪ ಬರಬೇಕು ಎಂದಿದ್ದಾರೆ.
ಲಿಂಗಾಯತ ಸಿಎಂ ರಾಜ್ಯವನ್ನು ಹಾಳು ಮಾಡಿದ್ದಾರೆಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಸಮುದಾಯದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಹೇಳಿಕೆಯಿಂದ ನೋವಾಗಿದೆ. ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ಗೌರವ, ಘನತೆಗೆ ತಕ್ಕುದ್ದಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಜನರೇ ಉತ್ತರ ನೀಡುತ್ತಾರೆ ಎಂದರು.
ಲಿಂಗಾಯತ ಸಿಎಂ ರಾಜ್ಯವನ್ನು ಹಾಳು ಮಾಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ
ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕರ್ನಾಟಕದ ಏಳು ಕೋಟಿ ಜನರಿಗೆ ಮಾಡಿರುವ ಅವಮಾನ. ಇಡೀ ಲಿಂಗಾಯತ ಸಮಾಜಕ್ಕೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದೀಗ ಸಿದ್ದರಾಮಯ್ಯರ ಒಂದು ಮುಖ ಬಯಲಾದಂತಾಗಿದೆ. ಈ ಹಿಂದೆ ವೀರಶೈವ-ಲಿಂಗಾಯತ ಸಮುದಾಯ ಒಡೆಯಲು ಯತ್ನ ಮಾಡಿದ್ದರು. ಲಿಂಗಾಯತರ ಮೇಲೆ ಸಿದ್ದರಾಮಯ್ಯಗೆ ಇರುವ ಭಾವನೆ ವ್ಯಕ್ತವಾಗಿದೆ. ಮೋದಿ ಸಮುದಾಯ ಅವಮಾನಿಸಿ ರಾಹುಲ್ ಶಿಕ್ಷೆಗೊಳಗಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯಗೂ ಶಿಕ್ಷೆಯಾಗಬೇಕು ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಕಟೀಲು ಹೇಳಿದರು.
ಹಕ್ಕುಪತ್ರ ನೀಡುವಲ್ಲಿ ವಿಳಂಬ ಹಿನ್ನೆಲೆ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಜನ ಮನೆಗಳಿಲ್ಲದೇ ಗುಡಿಸಲಿನಲ್ಲಿವಾಸವಿದ್ದಾರೆ. ಮನೆ ಕಟ್ಟಿಕೊಳ್ಳಲು ವಾಸವಿರುವ ಜಾಗಕ್ಕೆ ಹಕ್ಕು ಪತ್ರ ನೀಡಿಲ್ಲ. ಇದೇ ಕಾರಣಕ್ಕೆ ನಾವು ಈ ಸಲ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ತಾಲೂಕಾ ಆಡಳಿತಕ್ಕೆ ಗ್ರಾಮಸ್ಥರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಇಂದಿನಿಂದ 5 ದಿನ ವರುಣ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಭೂಗತಗಳ್ಳಿ, ವಾಜಮಂಗಲ, ಹಲಗಯ್ಯನಹುಂಡಿ, ವರುಣ, ದಂಡಿಕೆರೆ, ಪಿಲ್ಲಹಳ್ಳಿ, ಚಿಕ್ಕಳ್ಳಿ, ಚೋರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ವರುಣ ಕ್ಷೇತ್ರದಲ್ಲಿ ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪ್ರಚಾರ ಮಾಡಿದ್ದರು. ವಿ.ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಸಾಥ್ ನೀಡಲಿದ್ದಾರೆ.
15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಡಿಕೆ ಶಿವಕುಮಾರ್ ಅವರಿಂದ ಚಂಡಿಕಾಯಾಗ ನಡೆಯಲಿದೆ. ಉಡುಪಿಯ ಜ್ಯೋತಿಷಿ ಸಿ.ಎಸ್.ದ್ವಾರಕನಾಥ್ ಸಲಹೆಯಂತೆ ಡಿಕೆ ಶಿವಕುಮಾರ್ ನಿನ್ನೆ ಸಂಜೆಯೇ ಚಂಡಿಕಾಯಾಗದ ಸಂಕಲ್ಪ ಮಾಡಿದ್ದಾರೆ. ಶತ್ರು ನಾಶ, ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಚಂಡಿಕಾಯಾಗ ನಡೆಸಲಾಗುತ್ತೆ. ಸದ್ಯ ಶೃಂಗೇರಿ ಮಠದ ಗೆಸ್ಟ್ ಹೌಸ್ನಲ್ಲಿ ಡಿಕೆಶಿ ದಂಪತಿ ವಾಸ್ತವ್ಯ ಹೂಡಿದ್ದಾರೆ.
ಇಂದು ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಿದ್ದಾರೆ. ಬೆಳಗ್ಗೆ 7.20ಕ್ಕೆ ದೆಹಲಿಯಿಂದ ರಾಹುಲ್ ಗಾಂಧಿ ಪ್ರಯಾಣ ಬೆಳೆಸಲಿದ್ದು ದೆಹಲಿಯಿಂದ ಹೈದರಾಬಾದ್ ಮೂಲಕ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೈದರಾಬಾದ್ನಿಂದ ಹುಬ್ಬಳ್ಳಿಗೆ ಪ್ರಯಾಣಿಸಿ ಬೆಳಗ್ಗೆ 10.50ಕ್ಕೆ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಾರೆ. ಬೆಳಗ್ಗೆ 11.40ಕ್ಕೆ ಕೂಡಲಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಮಧ್ಯಾಹ್ನ 12.10ರವರೆಗೆ ಕೂಡಲಸಂಗಮ ದೇವಸ್ಥಾನ, ಬಸವಣ್ಣನವರ ಐಕ್ಯ ಮಂಟಪದಲ್ಲಿ ಕಾರ್ಯಕ್ರಮ ನಡೆಸಲಿದ್ದಾರೆ.
ಏಪ್ರಿಲ್ 25ರಂದು ರಾತ್ರಿ ಹುಬ್ಬಳ್ಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಲಿದ್ದಾರೆ. ಮಂಗಳವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದು ಬುಧವಾರ ಬೆಳಗ್ಗೆ 9.10ಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳಿ ಶಿರಸಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಏ.26ರಂದು ಬೆಳಗ್ಗೆ 11ಕ್ಕೆ ಶಿರಸಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಮಧ್ಯಾಹ್ನ 1.30ಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಪ್ರಚಾರ ಸಭೆ ಮಾಡಲಿದ್ದಾರೆ. ಏ.26ರಂದು ಸಂಜೆ 4ಕ್ಕೆ ಮೂಡಿಗೆರೆಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ಮಾಡಿ ರಾತ್ರಿ 7.30ಕ್ಕೆ ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ಮುಖಂಡರ ಸಭೆ ನಡೆಸಲಿದ್ದಾರೆ.
Published On - 9:57 am, Sun, 23 April 23