ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Eelctions 2023) ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯ 224 ಕ್ಷೇತ್ರಗಳಿಗೆ ಇದೇ ಮೇ 10ರಂದು ಮತದಾನ(Voting) ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಮತದಾನದ ದಿನದಂದು ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಫೋಟೋ ಇರುವ ಗುರುತಿನ ಚೀಟಿಯನ್ನು(identity card) ತೋರಿಸಬೇಕು. ಇನ್ನು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದು, ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಸಹ ನೀವು ಮತದಾನ ಮಾಡಬಹುದು. ಈ ಕೆಳಗಿನ ಯಾವುದಾದರೊಂದು ದಾಖಲೆ ಇದ್ದರೆ ನೀವು ಮತ ಚಲಾಯಿಸಬಹುದು.
1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) ಪಾನ್ ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, 12) ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.
ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯಲ್ಲಿ(ಎಲೆಕ್ಷನ್ ಕಾರ್ಡ್) ದೋಷಗಳಿದ್ದರೆ, ಇಲ್ಲವೆ ಗುರುತಿನ ಚೀಟಿ ತರದಿದ್ದ ಸಂದರ್ಭದಲ್ಲಿ ಭಾರತ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು. ಒಂದು ಪಕ್ಷ ಮತದಾರರ ಗುರುತಿನ ಚೀಟಿಯಲ್ಲಿ ದೋಷವಿದ್ದರೆ, ಇಲ್ಲವೆ ಮತದಾರರ ಗುರುತಿನ ಚೀಟಿಯಲ್ಲಿರುವ ವ್ಯಕ್ತಿಯ ಭಾವಚಿತ್ರ ಹೊಂದಾಣಿಕೆ ಆಗದಿದ್ದ ಪಕ್ಷದಲ್ಲೂ 12 ದಾಖಲಾತಿಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದು.
Published On - 7:56 am, Wed, 3 May 23