ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ನಡೆಯುತ್ತಿದ್ದು, ಹಲವು ಘಟಾನುಘಟಿ ನಾಯಕರು ಹಿನ್ನಡೆ, ಮುನ್ನಡೆ ಸಾಧಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯಲು ಕಾಂಗ್ರೆಸ್ ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಆಡಳಿತರೂಢ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಜನಪ್ರಿಯ ಘೋಷಣೆಗಳನ್ನು ಮಾಡಿದ್ದು, ಚುನಾವಣೆಯಲ್ಲಿ ವರ್ಕೌಟ್ ಆಗಿತ್ತಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ರಿಸಲ್ಟ್ಗೂ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಲೇಬೇಕೆಂಬ ಶಪಥದೊಂದಿಗೆ ಅಖಾಡಕ್ಕಿಳಿದಿರೋ ಬಿಜೆಪಿ ಮತ್ತು ಕಾಂಗ್ರೆಸ್ ಹಲವು ಅಸ್ತ್ರಗಳನ್ನು ಪ್ರಯೋಗಿಸಿದ್ವು. ಆರಂಭದಿಂದಲ್ಲೂ ಸರಣಿ ಅಜೆಂಡಾಗಳನ್ನು ಇಟ್ಟುಕೊಂಡು ಅಖಾಡಕ್ಕಿಳಿದಿದ್ವು. ಎದುರಾಳಿ ಮದಗಜಗಳ ಕುಂಭಸ್ಥಳವನ್ನೇ ಕುಟ್ಟಿ ಪುಡಿ ಮಾಡುವ ಉತ್ಸಾಹ ತೋರಿಸಿದ್ವು. ಪ್ರಧಾನಿ ಮೋದಿ ಬ್ರಹ್ಮಾಸ್ತ್ರ ಮಾಡಿಕೊಂಡಿದ್ದ ಕಮಲ ಪಾಳಯ ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು.
ಚುನಾವಣೆ ಆರಂಭವಾಗಿದ್ದಲೂ ಕಾಂಗ್ರೆಸ್ ಪಾಲಿಗೆ ಎಲ್ಲವೂ ಸುಸೂತ್ರವಾಗಿ ನಡೀತಿತ್ತು.. ಪ್ರಚಾರಗಳಲ್ಲೂ ಅಬ್ಬರಿಸ್ತಿದ್ರು.. ಬಿಜೆಪಿ ಮೇಲೆ ಭ್ರಷ್ಟಾಚಾರ ಬಾಣ ಬಿಡ್ತಿದ್ರು.. ಆದ್ರೆ, ವರುಣದಲ್ಲೇ ಪ್ರಚಾರದ ವೇಳೆ ಟಿವಿ9ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ದಿಢೀರ್ ಕಂಪನ ಎಬ್ಬಿಸಿತ್ತು. ಸಿದ್ದು ಆಡಿದ್ದ ಲಿಂಗಾಯತ ಸಿಎಂ ಭ್ರಷ್ಟ ಅನ್ನೋ ಮಾತು ಬಿಜೆಪಿ ಬಾಯಿಗೆ ಆಹಾರವಾಗಿತ್ತು..
ಸಿದ್ದರಾಮಯ್ಯ ಕೊಟ್ಟ ಲಿಂಗಾಯತ ಸಿಎಂ ಭ್ರಷ್ಟ ಅನ್ನೋ ಹೇಳಿಕೆ ಇನ್ನೂ ಹಸಿಯಾಗಿಯೇ ಇತ್ತು. ಆದ್ರೆ, ವಾರ ಕಳೆಯುವ ಮುನ್ನವೇ ಮತ್ತೊಂದು ವಿವಾದ ಕಾಂಗ್ರೆಸ್ ಹೆಗಲೇರಿತ್ತು.. ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಬಳಸಿದ ವಿಷಸರ್ಪ ಪದ ಬಿಜೆಪಿ ದಂಡಿನ ದಾಳಿಗೆ ಕಾರಣವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಮೋದಿ ವಿಷಸರ್ಪ ಎನ್ನುತ್ತಲೇ ಒಂದೇ ದಿನಕ್ಕೆ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ರು. ಆದ್ರೆ, ಪ್ರಿಯಾಂಕ್ ಖರ್ಗೆ ಹೇಳಿದ ನಾಲಾಯಕ್ ಮಗ ಪದ ಕೇಸರಿ ಪಡೆ ಕೆಂಗಣ್ಣಿಗೆ ಗುರಿಯಾಗಿತ್ತು..
ಸೀನಿಯರ್ ನಾಯಕರ ಮಾತುಗಳೇ ಕಾಂಗ್ರೆಸ್‌ಗೆ ದುಬಾರಿಯಾಗಿತ್ತು. ಅದರ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಸ್ ಕೂಡಾ ಮಾಡ್ತಿದ್ರು.. ಆದ್ರೆ, ಅಷ್ಟರಲ್ಲೇ ಕಾಂಗ್ರೆಸ್ ರಿಲೀಸ್ ಮಾಡಿದ ಪ್ರಣಾಳಿಕೆ, ಬಿಜೆಪಿಗೆ ಮತ್ತೊಂದು ಪ್ರಬಲ ಅಸ್ತ್ರವನ್ನೇ ಕೊಟ್ಟಿತ್ತು.. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್ ಅಂತಾ ಹೇಳಿ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಕೋಪಕ್ಕೆ ತುತ್ತಾಗಿದೆ.
ಅತ್ತ ಬಿಜೆಪಿ ಒಂದೊಂದೇ ಬಾಣ ಬಿಡ್ತಿದ್ರೆ ಇತ್ತ ಕಾಂಗ್ರೆಸ್ ನಾಯಕರೂ ಕೂಡ ತಂತ್ರಗಾರಿಕೆ ಮಾಡಿದ್ರು.
ಅದೇನು ಅನ್ನೋದನ್ನ ಎಳೆ ಎಳೆಯಾಗಿ ತೋರಿಸ್ತೀವಿ ನೋಡಿ.. ಗುತ್ತಿಗೆದಾರರ ಸಂಘ ಪ್ರಧಾನಿಗೆ ಬರೆದಿದ್ದ ದೂರಿನ ಪತ್ರವನ್ನೇ ಬಂಡವಾಳ ಮಾಡಿಕೊಂಡಿದ್ದ ಕಾಂಗ್ರೆಸ್ ಬಿಜೆಪಿ 40 ಪರ್ಸೆಂಟ್ ಸರ್ಕಾರ ಅಂತಾ ಆರೋಪಿಸಿತ್ತು. ಮತದಾನದವರೆಗೂ ಇದೇ ವಿಷಯವನ್ನ ಜೀವಂತವಾಗಿರಿಸಲು ಪಯತ್ನಿಸಿತ್ತು.
ಚುನಾವಣಾ ಅಖಾಡ ರಂಗೇರ್ತಿದ್ದಂತೆ ಕಾಂಗ್ರೆಸ್ ಒಂದೊಂದೇ ಗ್ಯಾರಂಟಿಗಳನ್ನ ಘೋಷಿಸಿತ್ತು. 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಭತ್ಯೆ, ಗೃಹಿಣಿಯರಿಗೆ 2 ಸಾವಿರ.. ಹೀಗೆ 5 ಗ್ಯಾರಂಟಿಗಳನ್ನು ಘೋಷಿಸಿ ಮತಬ್ಯಾಂಕ್ಗೆ ಗಾಳ ಹಾಕಿತ್ತು. ಜೊತೆಗೆ ಪ್ರಣಾಳಿಕೆಯಲ್ಲೂಹಲವು ಭರವಸೆ ನೀಡುವ ಮೂಲಕ ಮತದಾರರಿಗೆ ಗಾಳ ಹಾಕಿತ್ತು.
ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಯನ್ನು ಕಾಂಗ್ರೆಸ್ ಪಕ್ಷ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಲಿಂಗಾಯತ ಮತಬುಟ್ಟಿಗೆ ಗಾಳ ಹಾಕಿತ್ತು. ಬಂಡಾಯ ನಾಯಕರಿಂದಲೇ ಬಿಜೆಪಿ ವಿರುದ್ಧ ಮಾತಿನ ದಾಳಿ ಮಾಡಿಸಿತ್ತು.
ಇನ್ನೂ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಆಡಿಯೋದಲ್ಲಿ ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ ಅನ್ನೋ ಮಾತನ್ನೇ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡು ಬಿಜೆಪಿ ವಿರುದ್ಧ ಸರಣಿ ಆರೋಪಗಳನ್ನ ಮಾಡಿತ್ತು. ಹೀಗೆ ತಮ್ಮದೇ ಅಜೆಂಡಾಗಳ ಮೂಲಕ ಕಾಂಗ್ರೆಸ್, ಬಿಜೆಪಿ ಈ ಬಾರಿ ಚುನಾವಣೆಯನ್ನು ಎದುರಿಸಿವೆ. ಈಗಾಗಲೇ ಕರುನಾಡಿನ ಮತದಾರ ಪ್ರಭು ಎರಡೂ ಪಕ್ಷಗಳ ಹಣೆಬರಹವನ್ನು ಬರೆದಿದ್ದಾನೆ. ರಾಜ್ಯದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಅನ್ನೋದು ಇಂದು ಗೊತ್ತಾಗಲಿದೆ.
Published On - 9:20 am, Sat, 13 May 23