ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್(JDS) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್(Congress) ಮತ್ತು ಬಿಜೆಪಿಗೂ(BJP) ಮುನ್ನವೇ 93 ಹುರಿಯಾಳುಗಳನ್ನ ಕಣಕ್ಕಿಳಿಸಿರುವ ಜೆಡಿಎಸ್ ಇಂದು(ಏಪ್ರಿಲ್ 03) ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ (JDS Candidate List) ಬಿಡುಗಡೆಯಾಗಲಿದೆ. ಆದ್ರೆ, 2ನೇ ಲಿಸ್ಟ್ನಲ್ಲೂ ಹಾಸನ ಟಿಕೆಟ್ ಅಭ್ಯರ್ಥಿ ಘೋಷಣೆಯಾಗುವುದು ಅನುಮಾನ. ಇದನ್ನ ಸ್ವತಃ ಹೆಚ್ಡಿ ಕುಮಾರಸ್ವಾಮಿಯೇ(HD Kumaraswamy) ಸ್ಪಷ್ಟಪಡಿಸಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ಬಗೆಹರಿದಿಲ್ಲ ಎಂದು ಕುಮಾರಸ್ವಾಮಿಯೇ ಸ್ಪಷ್ಟಪಡಿಸಿದ್ದಾರೆ. ಪತ್ನಿ ಭವಾನಿಗೇ ಹಾಸನ ಟಿಕೆಟ್ (Hassan Ticket) ಕೊಡಿಸಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಪರವೇ ಬ್ಯಾಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ಫೈನಲ್ ಮಾಡಲಾಗುತ್ತಿಲ್ಲ. ಅಂತಿಮವಾಗಿ ಅಣ್ತಮಾಸ್ ಮುಸುಕಿನ ಗುದ್ದಾಟದ ಮಧ್ಯೆ ಹೆಚ್ಡಿ ದೇವೇಗೌಡ (HD Devegowda) ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿ, ಇಲ್ಲಿದೆ ಸಂಭವನೀಯ ಅಭ್ಯರ್ಥಿಗಳ 2ನೇ ಪಟ್ಟಿ
ಪರಿಸ್ಥಿತಿ ಕೈಮೀರುವ ಮುನ್ನವೇ ಎಚ್ಚೆತ್ತಿರುವ ದೇವೇಗೌಡ್ರು ನಿನ್ನೆ(ಏಪ್ರಿಲ್ 02) ಪದ್ಮನಾಭನಗರದ ನಿವಾಸದಲ್ಲಿ ಫ್ಯಾಮಿಟಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಕುಟುಂಬಸ ಸದಸ್ಯರು ಭಾಗಿಯಾಗಿದ್ದು, ಹಾಸನ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಭವಾನಿಗೇ ಟಿಕೆಟ್ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಟಿಕೆಟ್ ಯಾರಿಗೆ ಎಂದು ಹೇಳದ ಗೌಡರು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ. ಈ ವೇಳೆ ಗೌಡರ ಮಾತಿಗೆ ಮರುತ್ತರ ನೀಡದ ಭವಾನಿ ಸಭೆಯ ಮಧ್ಯೆದಲ್ಲೇ ಎದ್ದು ಹೊರನಡೆದಿದ್ದು, ನಿನ್ನೆ ನಡೆದ ಸಭೆಯಲ್ಲೂ ಹಾಸನ ಜೆಡಿಎಸ್ ಟಿಕೆಟ್ ಫೈನಲ್ ಆಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ,
ಸಭೆ ಆರಂಭವಾದ ಕೇವಲ 15 ನಿಮಿಷದಲ್ಲೇ ಭವಾನಿ ಹೊರಟಿದ್ದು, ಮಾಧ್ಯಮಗಳಿಗೆ ಏನು ಪ್ರತಿಕ್ರಿಯೆ ನೀಡದೇ ಇರುವುದು ಒಳಬೇಗುದಿಯನ್ನ ಸ್ಪಷ್ಟವಾಗಿ ತೆರೆದಿಡುತ್ತಿದೆ. ಕುಮಾರಸ್ವಾಮಿಯನ್ನ ಮತ್ತೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಆಶಯ. ಟಿಕೆಟ್ ಬಗ್ಗೆ ದೇವೇಗೌಡರ ಮಾತೇ ಅಂತಿಮ ಅನ್ನುತ್ತಿರುವ ರೇವಣ್ಣ, ಕೊನೆ ಕ್ಷಣದವರೆಗೂ ಟಿಕೆಟ್ಗಾಗಿ ಫೈಟ್ ಮಾಡುತ್ತೇನೆ ಎನ್ನುವ ಸಂದೇಶವನ್ನ ರವಾನೆ ಮಾಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಘೋಷಣೆ ಮಾಡದಂತೆ ದೇವೇಗೌಡರಿಂದ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಹಾಸನ ಟಿಕೆಟ್ ಕೈ ಬಿಟ್ಟು ಎರಡನೇ ಪಟ್ಟಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅರಸೀಕೆರೆಯ ಶಿವಲಿಂಗೇಗೌಡರನ್ನುಈಗಾಗಲೇ ಕಾಂಗ್ರೆಸ್ ಸೆಳೆದಿದ್ದು, ಶಿವಲಿಂಗೇಗೌಡ ಕಾಂಗ್ರೆಸ್ ಸೇರೋದು ಬಹುತೇಕ ನಿಶ್ಚಿತವಾಗಿದೆ. ಇನ್ನು ಅರಕಲಗೂಡು ಎಟಿ ರಾಮಸ್ವಾಮಿ ಸಹ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಕೆ ಪೈಪೋಟಿ ನೀಡಲು ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಅಲ್ಲದೇ ಅರಕಲಗೂಡು ಕ್ಷೇತ್ರಕ್ಕೆ ಮಾಜಿ ಸಚಿವ ಎ.ಮಂಜು ಅವರನ್ನು ಅಂತಿಮಗೊಳಿಸಲಾಗಿದೆ. ಇನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲೂ ಅಭ್ಯರ್ಥಿ ಹುಡುಕಾಟ ನಡೆದಿದೆ. ಇಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹಾಲಿ ಸಚಿವ ಕೆ. ಗೋಪಾಲಯ್ಯ ವಿರುದ್ದ ಕಣಕ್ಕಿಳಿಯಲು ಸಮರ್ಥ ಅಭ್ಯರ್ಥಿ ಯಾರು ಎಂಬುದು ಇಂದು ತಿಳಿಯಲಿದೆ.
ಒಟ್ಟಿನಲ್ಲಿ ಹಾಸನ ಜೆಡಿಎಸ್ ಟಿಕೆಟ್ ಗೊಂದಲ ಜೆಡಿಎಸ್ ಮನೆಯಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು, ಅಂತಿಮವಾಗಿ ಹಾಸನದ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ಹಾಗೆ ಉಳಿದುಕೊಂಡಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:49 am, Mon, 3 April 23