BL Santosh: ತವರು ಭಾಗದಲ್ಲಿಯೇ ಮಲ್ಲಿಕಾರ್ಜುನ ಖರ್ಗೆಗೆ ಟಕ್ಕರ್ ಕೊಡಲು ಬಿಜೆಪಿ ತಂತ್ರ -ಕಲಬುರಗಿಗೆ ಇಂದು ಬಿ.ಎಲ್. ಸಂತೋಷ್ ಎಂಟ್ರಿ

| Updated By: ಸಾಧು ಶ್ರೀನಾಥ್​

Updated on: Dec 30, 2022 | 1:17 PM

Kalyana Karnataka: ಕಲ್ಯಾಣ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಆ ಕೋಟೆಯನ್ನು ಮತ್ತಷ್ಟು ಭದ್ರಪಡಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇಂದು ಸಂತೋಷ್ ಜಿ ಅವರು ಜಿಲ್ಲೆಯ ಪ್ರಮುಖರ ಸಭೆ ಕರೆದಿದ್ದು, ಚುನಾವಣೆ ಮತ್ತು ಸಂಘಟನೆಯ ಪಾಠ ಮಾಡಲಿದ್ದಾರೆ -ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಿಜೆಪಿ ವಿಭಾಗೀಯ ಪ್ರಮುಖ

BL Santosh: ತವರು ಭಾಗದಲ್ಲಿಯೇ ಮಲ್ಲಿಕಾರ್ಜುನ ಖರ್ಗೆಗೆ ಟಕ್ಕರ್ ಕೊಡಲು ಬಿಜೆಪಿ ತಂತ್ರ -ಕಲಬುರಗಿಗೆ ಇಂದು ಬಿ.ಎಲ್. ಸಂತೋಷ್ ಎಂಟ್ರಿ
ಕಲಬುರಗಿಗೆ ಇಂದು ಬಿ.ಎಲ್. ಸಂತೋಷ್ ಎಂಟ್ರಿ
Follow us on

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಜಿಲ್ಲೆ ಕಲಬುರಗಿ. ಒಂದು ಸಮಯದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗವು ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮತ್ತೆ ಕಲ್ಯಾಣ ಕರ್ನಾಟಕದಲ್ಲಿ ಕೈ ಬಲಪಡಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷರ ತವರು ಭಾಗದಲ್ಲಿಯೇ ಕೈಗೆ ಟಕ್ಕರ್ ಕೊಡಲು ಕಮಲ ನಾಯಕರು ತಂತ್ರ ಆರಂಭಿಸಿದ್ದಾರೆ. ಅತ್ತ ಹಳೆ ಮೈಸೂರು ಭಾಗದಲ್ಲಿ ಇಂದು ಅಮಿತ್ ಶಾ ಪಕ್ಷಕ್ಕೆ ಬೂಸ್ಟ್ ನೀಡಲು ಹೋದ್ರೆ, ಇತ್ತ ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) ಕಮಲ (Karnataka BJP) ಅರಳಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ (BL Santosh) ಅವರು ಬೀದರ್ ಮತ್ತು ಕಲಬುರಗಿಗೆ ಬರ್ತಿದ್ದಾರೆ. ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಆಯೋಜಿಸಿರೋ ಬಿಜೆಪಿ ಸಂಘಟನಾ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ (Karnataka Assembly Elections 2023).

ಚುನಾವಣಾ ಪಾಠ ಮಾಡಲು ಬರ್ತಿರೋ ಬಿ.ಎಲ್. ಸಂತೋಷ್

ಕಲಬುರಗಿ ನಗರಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ (BJP general secretary -organisation) ಬಿ.ಎಲ್. ಸಂತೋಷ್ ಆಗಮನವು ಬಿಜೆಪಿ ಪಾಳಯಕ್ಕೆ ಹೊಸ ಹುರುಪು ನೀಡಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಈ ನಿಟ್ಟಿನಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲು ಕಮಲ ನಾಯಕರು ಮುಂದಾಗಿದ್ದಾರೆ.

ಅದಕ್ಕಾಗಿಯೇ ಇಂದು ಮಧ್ಯಾಹ್ನ ಕಲಬುರಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿಯ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಬೂತ್ ನ ಪ್ರಮುಖರು, ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಇನ್ನು ಕೋರ್ ಕಮಿಟಿ ಸಭೆ ಕೂಡಾ ಇರುವುದರಿಂದ, ಜಿಲ್ಲೆಯ ಎಲ್ಲಾ ಬಿಜೆಪಿ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಭಾಗದಲ್ಲಿ ಕಮಲವನ್ನು ಮತ್ತಷ್ಟು ಅರಳಿಸೋದು ಹೇಗೆ ಅನ್ನೋದರ ಬಗ್ಗೆ ಮುಖಂಡರಿಗೆ ಸಂತೋಷ್ ಅವರು ಪಾಠ ಮಾಡಲಿದ್ದಾರೆ.

ತವರು ಜಿಲ್ಲೆಯಲ್ಲಿಯೇ ಖರ್ಗೆ ಅವರಿಗೆ ಟಕ್ಕರ್ ಕೊಡಲು ಬಿಜೆಪಿ ತಂತ್ರ

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಬಿಜೆಪಿ ಚಿತ್ತ ಕಲಬುರಗಿ ಮೇಲೆ ಹೆಚ್ಚಾಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿರೋ ಬಿಜೆಪಿ ನಾಯಕರು, ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಪಡೆದು, ಸ್ವಂತ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಮಖಾಡೆ ಮಲಗಿದೆ ಅನ್ನೋದನ್ನು ತೋರಿಸಿ, ರಾಷ್ಟ್ರಮಟ್ಟದಲ್ಲಿ ಖರ್ಗೆ ಅವರ ವರ್ಚಸ್ಸು ಕುಗ್ಗಿಸಬೇಕು ಅನ್ನೋ ಲೆಕ್ಕಾಚಾರವನ್ನು ಹೊಂದಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ, ಪ್ರಿಯಾಂಕ್ ಖರ್ಗೆಗೆ ಸೋಲಿನ ರುಚಿ ತೋರಿಸಬೇಕು. ಆ ಮೂಲಕ ತಂದೆ ಮತ್ತು ಮಗನಿಗೆ ಹಿನ್ನಡೆಯುಂಟು ಮಾಡಬೇಕು ಅನ್ನೋ ತಂತ್ರವನ್ನು ಬಿಜೆಪಿ ನಾಯಕರು ಹೆಣೆದಿದ್ದಾರೆ.

ಕಲ್ಯಾಣ ಕರ್ನಾಟಕದ ಮೇಲೆ ಕೈ, ಕಮಲದ ಕಣ್ಣು

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಬೇಕು ಅನ್ನೋ ಲೆಕ್ಕಾಚಾರವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಹೊಂದಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಹಿಂದೆ ಜನತಾದಳ ಕೂಡಾ ಕೆಲ ವರ್ಷಗಳ ಕಾಲ ಹಿಡಿತ ಹೊಂದಿತ್ತು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಭದ್ರಕೋಟೆಯನ್ನು ಬೇಧಿಸುವಲ್ಲಿ ಬಿಜೆಪಿ ಸಫಲವಾಗಿತ್ತು. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಎಂಟು ಜಿಲ್ಲೆಗಳಲ್ಲಿ 41 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳ ಪೈಕಿ ಸದ್ಯ 20 ಜನ ಬಿಜೆಪಿ ಶಾಸಕರಿದ್ದರೆ, 17 ಜನ ಕಾಂಗ್ರೆಸ್ ಶಾಸಕರಿದ್ದಾರೆ, ನಾಲ್ವರು ಜೆಡಿಎಸ್ ಶಾಸಕರೂ ಇದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಕಲ್ಯಾಣ ಕರ್ನಾಟಕದಲ್ಲಿ ತನ್ನ ಹಿಡಿತ ಸಾಧಿಸಬೇಕು ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ. ಇನ್ನು ಎಐಸಿಸಿ ಅಧ್ಯಕ್ಷರಾಗಿ ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವದರಿಂದ, ಈ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಅನಕೂಲವಾಗುತ್ತದೆ ಅನ್ನೋ ಲೆಕ್ಕಾಚಾರದಲ್ಲಿ ಕೈ ನಾಯಕರು ಇದ್ದಾರೆ. ಅದಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಕ್ರಾಂತಿ ಸಮಾವೇಶವನ್ನು ಮಾಡಿ, ಕೈ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಇನ್ನೊಂದಡೆ ಕೈ ನಾಯಕರು ಈಗಾಗಲೇ ಕಲ್ಯಾಣ ಕ್ರಾಂತಿ ಸಮಾವೇಶ ಮಾಡಿ, ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ, ಇತ್ತ ಜನವರಿ ತಿಂಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಕಲಬುರಗಿ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ಆ ಮೂಲಕ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂರು ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ ಮಾಡುವದರ ಜೊತೆಗೆ, ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಲೆಕ್ಕಾಚಾರ ಆರಂಭಿಸಿವೆ.

ಕಲ್ಯಾಣ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಆ ಕೋಟೆಯನ್ನು ಮತ್ತಷ್ಟು ಭದ್ರಪಡಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇಂದು ಸಂತೋಷ್ ಜಿ ಅವರು ಜಿಲ್ಲೆಯ ಪ್ರಮುಖರ ಸಭೆ ಕರೆದಿದ್ದು, ಚುನಾವಣೆ ಮತ್ತು ಸಂಘಟನೆಯ ಪಾಠ ಮಾಡಲಿದ್ದಾರೆ -ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಿಜೆಪಿ ವಿಭಾಗೀಯ ಪ್ರಮುಖ 

Published On - 12:37 pm, Fri, 30 December 22