Congress Candidates List: ಕಾಂಗ್ರೆಸ್ ಮೊದಲ ಪಟ್ಟಿ; 9 ಪ್ರಮುಖ ಅಂಶಗಳುವ ಇಲ್ಲಿವೆ ನೋಡಿ

|

Updated on: Mar 25, 2023 | 11:48 AM

ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಪ್ರಕಟಿಸಿರುವ ಕೆಲವು ಮಂದಿ ಹಿರಿಯ ನಾಯಕರ ವಿವರ ಹಾಗೂ ಕೆಲವು ಅಚ್ಚರಿಯ ಆಯ್ಕೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

Congress Candidates List: ಕಾಂಗ್ರೆಸ್ ಮೊದಲ ಪಟ್ಟಿ; 9 ಪ್ರಮುಖ ಅಂಶಗಳುವ ಇಲ್ಲಿವೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಸಿದ್ದರಾಮಯ್ಯ ಅವರ ಕ್ಷೇತ್ರದ ಕುರಿತಾಗಿದ್ದ ಪ್ರಶ್ನೆಗೂ ಉತ್ತರ ದೊರೆತಿದೆ. ಆದರೆ, ಅವರು ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ವರುಣಾ ಕ್ಷೇತ್ರವನ್ನು ಸದ್ಯ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಪ್ರತಿನಿಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಅಲ್ಲಿ ಪ್ರಚಾರವನ್ನೂ ಆರಂಭಿಸಿದ್ದ ಅವರು ಪ್ರಚಾರ, ಓಡಾಟ ಇತ್ಯಾದಿ ಚಟುವಟಿಕೆಗಳು ಸುಲಭವಾಗಲೆಂದು ಕೋಲಾರದಲ್ಲಿ ಮನೆಯನ್ನೂ ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಹೈಕಮಾಂಡ್ ಸೂಚನೆ ಮೇರೆಗೆ ದಿಢೀರಾಗಿ ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಕೊನೇ ಕ್ಷಣದಲ್ಲಿ ಸಿದ್ದರಾಮಯ್ಯ ಅವರು ಈ ನಿಲುವು ವ್ಯಕ್ತಪಡಿಸಿದ್ದಕ್ಕೆ ಅವರ ಅಭಿಮಾನಿ ವಲಯದಿಂದ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ವಿಶೇಷವೆಂದರೆ, ಮೊದಲ ಪಟ್ಟಿಯಲ್ಲಿ ಕೋಲಾರದ ಅಭ್ಯರ್ಥಿ ಯಾರೆಂಬುದನ್ನು ಕಾಂಗ್ರೆಸ್ ಪ್ರಕಟಿಸಿಲ್ಲ.

ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಪ್ರಕಟಿಸಿರುವ ಕೆಲವು ಮಂದಿ ಹಿರಿಯ ನಾಯಕರ ವಿವರ ಹಾಗೂ ಕೆಲವು ಅಚ್ಚರಿಯ ಆಯ್ಕೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ಶಾಮನೂರು ಶಿವಶಂಕರಪ್ಪ

91 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿದ್ದು, ಸಮುದಾಯದವರಿಗೆ 60ಕ್ಕೂ ಹೆಚ್ಚು ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಶಿವಶಂಕರಪ್ಪ ಅವರು ಕಾಂಗ್ರೆಸ್‌ನಲ್ಲಿ ಪಕ್ಷದ ಟಿಕೆಟ್ ಪಡೆದ ಅತಿ ಹಿರಿಯ ನಾಯಕರಾಗಿದ್ದಾರೆ.

ಕೆಹೆಚ್ ಮುನಿಯಪ್ಪ

ಕೇಂದ್ರದ ಮಾಜಿ ಸಚಿವ ಹಾಗೂ ಕೋಲಾರದಿಂದ 7 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿರುವ ಕೆಹೆಚ್ ಮುನಿಯಪ್ಪ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಉಮೇದುವಾರಿಕೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಮುನಿಯಪ್ಪ ಅವರಿಗೆ ಟಿಕೆಟ್ ಸಿಗಲಿದೆ ಎಂಬ ವದಂತಿ ಈ ಹಿಂದೆಯೇ ಹರಿದಾಡಿತ್ತು. ಇದನ್ನು ವಿರೋಧಿಸಿ ಹಲವು ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ದೇವನಹಳ್ಳಿ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತ್ ಕುಮಾರ್, ನಾಲ್ವರು ಬ್ಲಾಕ್ ಅಧ್ಯಕ್ಷರು, ನಗರಸಭೆ ಸದಸ್ಯರು ಹಾಗೂ ಇತರರು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಾಮೂಹಿಕ ರಾಜೀನಾಮೆ ಪತ್ರ ರವಾನಿಸಿದ್ದರು.

ಇದನ್ನೂ ಓದಿ: Congress Candidates First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಸಿದ್ಧರಾಮಯ್ಯಗೆ ವರುಣಾ ಫೈನಲ್

ಕ್ಷೇತ್ರದಿಂದ ಒಟ್ಟು 15 ಸ್ಥಳೀಯ ಮುಖಂಡರು ಟಿಕೆಟ್ ಬಯಸಿದ್ದು, ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಪಕ್ಷವನ್ನು ಒತ್ತಾಯಿಸಿದ್ದರು. ಪಕ್ಷಕ್ಕೆ ನೀಡಿರುವ ರಾಜೀನಾಮೆ ಪತ್ರದಲ್ಲಿ ಸ್ಥಳೀಯ ಮುಖಂಡರು ಮುನಿಯಪ್ಪ ಅವರನ್ನು ‘ಹೊರಗಿನವರು’ ಎಂದು ಉಲ್ಲೇಖಿಸಿದ್ದರು.

ದರ್ಶನ್ ಧ್ರುವನಾರಾಯಣ

ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ಪುತ್ರ ದರ್ಶನ್ ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧ್ರುವನಾರಾಯಣ ಅವರು ಮಾರ್ಚ್ 11 ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ನಿಧನರಾಗಿದ್ದರು. ಧ್ರುವನಾರಾಯಣ ಇದ್ದಾಗ ಅವರೂ ನಂಜನಗೂಡು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್‌ಗೆ ಟಿಕೆಟ್ ಬಯಸಿದ್ದರು. ಆದರೆ ಧ್ರುವನಾರಾಯಣ ವಿಧಿವಶರಾದ ಬಳಿಕ ಮಹದೇವಪ್ಪ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಎಚ್​ಸಿ ಮಹದೇವಪ್ಪ

ಮೈಸೂರು ಜಿಲ್ಲೆಯ ಟಿ ನರಸೀಪುರದಿಂದ ಸಿದ್ದರಾಮಯ್ಯ ಆಪ್ತ ಮಹದೇವಪ್ಪಗೆ ಟಿಕೆಟ್ ಸಿಕ್ಕಿದೆ. ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್‌ಗೆ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದರು, ಆದರೆ ಕಾಂಗ್ರೆಸ್ ಅದನ್ನು ತಿರಸ್ಕರಿಸಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಪರಿಗಣಿಸುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.

ಪುಟ್ಟಣ್ಣ

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಬಿಜೆಪಿಯ ಮಾಜಿ ಎಂಎಲ್ಸಿ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಪುಟ್ಟಣ್ಣ ಅವರು ಪಕ್ಷಕ್ಕೆ ಸೇರಿದ ದಿನದಿಂದಲೂ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವಿರೋಧ ಎದುರಿಸಿದ್ದರು. ಪ್ರಸ್ತುತ ಕ್ಷೇತ್ರವನ್ನು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪ್ರತಿನಿಧಿಸುತ್ತಿದ್ದಾರೆ.

ಶರತ್ ಬಚ್ಚೇಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಬಿಜೆಪಿ ಮಾಜಿ ಮುಖಂಡ, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರ ಪುತ್ರ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಶರತ್ ಬಚ್ಚೇಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂಟಿಬಿ ನಾಗರಾಜ್ ವಿರುದ್ಧ ಗೆದ್ದ ನಂತರ 2019 ರಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರು.

ಹೆಚ್ ನಾಗೇಶ್

ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದವರು ಹೆಚ್ ನಾಗೇಶ್. ಇವರು ಸದ್ಯ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲಿನ ಸ್ವತಂತ್ರ ಶಾಸಕರಾಗಿದ್ದ ನಾಗೇಶ್, ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಪ್ರಸ್ತುತ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇಕ್ಬಾಲ್ ಹುಸೇನ್

ತಮ್ಮ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರನ್ನು ರಾಮನಗರದಿಂದ ಕಣಕ್ಕಿಳಿಸುವ ಪ್ರಸ್ತಾವನೆ ಹೈಕಮಾಂಡ್‌ನಿಂದ ಇದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಇಕ್ಬಾಲ್ ಹುಸೇನ್ ಅವರನ್ನು ಕಣಕ್ಕಿಳಿಸಿದೆ.

ಎಚ್ ವಿಶ್ವನಾಥ್

ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಜೆಪಿ ಎಂಎಲ್‌ಸಿ ಎ.ಎಚ್.ವಿಶ್ವನಾಥ್ ಹುಣಸೂರು ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು, ಬದಲಿಗೆ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಆಯ್ಕೆ ಮಾಡಿದೆ.

ರಾಜ್ಯದ ಮತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ