ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಸ್ಪರ್ಧಿಸಲು ಟಿಕೆಟ್‌ಗಾಗಿ (Ticket) ಘಟಾನುಘಟಿ ನಾಯಕರುಗಳು ಸೇರಿದಂತೆ 1,250 ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಶುಲ್ಕದ ಬಾಬತ್ತಿನಲ್ಲಿ ಪಕ್ಷದ ನಿಧಿ ತುಂಬಿದ್ದು, ಸುಮಾರು 25 ಕೋಟಿ ರೂಪಾಯಿ ಹಣ ಹರಿದುಬಂದಿದೆ. 2018ರ ಹಿಂದಿನ ಚುನಾವಣೆಯಲ್ಲೂ ಕೆಪಿಸಿಸಿಗೆ (Karnataka Pradesh Congress Committee -KPCC) ) ಸುಮಾರು 1,250 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಬಾರಿ ಟಿಕೆಟ್‌ಗಾಗಿ ಅರ್ಜಿಯನ್ನು ಸಲ್ಲಿಸುವಾಗ ಪ್ರತಿ ಅರ್ಜಿದಾರರು 2 ಲಕ್ಷ ರೂ (ಸಾಮಾನ್ಯ ವರ್ಗಕ್ಕೆ) ಮತ್ತು ರೂ 1 ಲಕ್ಷ (SC/ST) ಮರುಪಾವತಿಸಲಾಗದ, ಪಕ್ಷದ ನಿಧಿಯಾಗಿ ನೀಡಬೇಕಾಗಿತ್ತು. ಇದರ ಜೊತೆಗೆ, ಪ್ರತಿ ಸಂಭಾವ್ಯ ಸ್ಪರ್ಧಿಯು ಅರ್ಜಿ ಶುಲ್ಕವಾಗಿ ರೂ 5,000 ಪಾವತಿಸಬೇಕಾಗಿತ್ತು.
ಸೋಮವಾರದಂದು ಅರ್ಜಿ ಸ್ವೀಕಾರ ಕಾರ್ಯವನ್ನು ಮುಕ್ತಾಯಗೊಳಿಸಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಸುಮಾರು 85 ಸದಸ್ಯರು ಅರ್ಜಿ ಸಲ್ಲಿಸಿದರು. ಆಕಾಂಕ್ಷಿಗಳು ಸಾಲಿನಲ್ಲಿ ನಿಂತು ಅರ್ಜಿಗಳನ್ನು ಸಲ್ಲಿಸಿದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕಾರ್ತಿಕ್ ಹೇಳಿದರು.
ಗಮನಾರ್ಹವೆಂದರೆ ಅರ್ಜಿ ಸಲ್ಲಿಸಿರುವ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಾವು ಸ್ಪರ್ಧಿಸಲು ಉದ್ದೇಶಿಸಿರುವ ಕ್ಷೇತ್ರದ ಹೆಸರನ್ನು ಉಲ್ಲೇಖಿಸಿಲ್ಲ. ಕ್ಷೇತ್ರ ಯಾವುದು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿಯಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿ ಅಭ್ಯರ್ಥಿಯು ತಮ್ಮ ಆಯ್ಕೆಯ ಕ್ಷೇತ್ರದ ಹೆಸರನ್ನು ನಮೂದಿಸಬೇಕು. ಆದರೆ ಹಾಗೆ ಕ್ಷೇತ್ರದ ಹೆಸರು ಹೇಳದೇ ಇರುವ ಏಕೈಕ ಅಭ್ಯರ್ಥಿ ಸಿದ್ದರಾಮಯ್ಯ ಅವರೊಬ್ಬರೇ ಎಂದು ಮೂಲಗಳು ತಿಳಿಸಿವೆ. ಆದರೆ ತಾತ್ಕಾಲಿಕವಾಗಿ ಅವರು ತಮ್ಮ ಆಯ್ಕೆಯ ಕ್ಷೇತ್ರ ಹೆಸರಿನ ಮುಂದೆ ಬಾದಾಮಿ, ಕೋಲಾರ ಮತ್ತು ವರುಣಾ ಕ್ಷೇತ್ರವನ್ನು ಪೆನ್ಸಿಲ್ ನಲ್ಲಿ ಮಾರ್ಕ್ ಮಾಡಿದ್ದಾರೆ.
ಅರ್ಜಿದಾರರಲ್ಲಿ ಹಲವಾರು ಶಾಸಕರ ಪುತ್ರರು ಮತ್ತು ಪುತ್ರಿಯರು ಸೇರಿದ್ದಾರೆ. ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ಬಸವನ ಬಾಗೇವಾಡಿಯಿಂದ ಟಿಕೆಟ್ ಬಯಸಿದ್ದಾರೆ. ಪ್ರಸ್ತುತ ಶಿವಾನಂದ ಪಾಟೀಲ್ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇನ್ನು ಮಾಜಿ ಸಚಿವ ಹೆಚ್ ಮಹದೇವಪ್ಪ ಮತ್ತು ಅವರ ಪುತ್ರ ಸುನೀಲ್ ಬೋಸ್ ಅವರು ಕ್ರಮವಾಗಿ ಮೈಸೂರಿನ ನಂಜನಗೂಡು ಮತ್ತು ಟಿ ನರಸೀಪುರದಿಂದ ಟಿಕೆಟ್ ಬಯಸಿದ್ದಾರೆ. ಬಳ್ಳಾರಿ ನಗರ ಸ್ಥಾನಕ್ಕೆ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಹಾಗೂ ಮಾಜಿ ಸಚಿವ ದಿವಾಕರ್ ಬಾಬು ಹಾಗೂ ಅವರ ಪುತ್ರ ಹನುಮ ಕಿಶೋರ್ ಅರ್ಜಿ ಸಲ್ಲಿಸಿದ್ದಾರೆ.
Also read: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಶಾಮನೂರು ಶಿವಶಂಕರಪ್ಪ ಒಲವು, ಕೆಪಿಸಿಸಿಗೆ ಅರ್ಜಿ ಸಲ್ಲಿಕೆ
Also read: ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ, ಮಲ್ಲಿಕಾರ್ಜುನ ಖರ್ಗೆ ಘೋಷಿಸಬಹುದು: ಡಿಕೆ ಶಿವಕುಮಾರ್