ಸಿಎಂ ಆಯ್ಕೆ ಕಗ್ಗಂಟಿಗೆ ಮುಕ್ತಿ, ಈಗ ಸಚಿವ ಸ್ಥಾನಕ್ಕಾಗಿ ಲಾಬಿ ಶುರು: ತಂಡೋಪತಂಡವಾಗಿ ದೆಹಲಿಗೆ ತೆರಳಿದ ಶಾಸಕರು

ಸಿಎಂ ಆಯ್ಕೆ ಕಗ್ಗಂಟು ಬಿಡಿಸಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹೈಕಮಾಂಡ್​ಗೆ ಸಂಪುಟ ರಚನೆ ಸವಾಲ್ ಎದುರಾಗಿದೆ. ಸಚಿವ ಸ್ಥಾನಕ್ಕಾಗಿ ಭರ್ಜರಿ ಲಾಬಿ ನಡೆಸುತ್ತಿರುವ ಶಾಸಕರು ತಂಡೋಪತಂಡವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಸಿಎಂ ಆಯ್ಕೆ ಕಗ್ಗಂಟಿಗೆ ಮುಕ್ತಿ, ಈಗ ಸಚಿವ ಸ್ಥಾನಕ್ಕಾಗಿ ಲಾಬಿ ಶುರು: ತಂಡೋಪತಂಡವಾಗಿ ದೆಹಲಿಗೆ ತೆರಳಿದ ಶಾಸಕರು
ಕರ್ನಾಟಕ ಕಾಂಗ್ರೆಸ್ ಶಾಸಕರು
Follow us
|

Updated on: May 19, 2023 | 8:31 AM

ಬೆಂಗಳೂರು:  ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೆಗಲಿಗೆ ಕಾಂಗ್ರೆಸ್ ಹೈಕಮಾಂಡ್​ ಕರ್ನಾಟಕ ಆಡಳಿತದ ನೊಗ ಕಟ್ಟಿದ್ದಾರೆ. ನಾಳೆಯಿಂದಲೇ (ಮೇ 20) ರಾಜ್ಯದಲ್ಲಿ ಕಾಂಗ್ರೆಸ್ ಆಡಳಿ ಶುರುವಾಗಲಿದೆ. ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ ಕಸರತ್ತು ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಂಪುಟದಲ್ಲಿ ಯಾರ್ಯಾರಿಗೆ ಮಂತ್ರಿ ಭಾಗ್ಯ ಎನ್ನುವ ಕುತೂಹಲ ಮನೆ ಮಾಡಿದೆ. ಯಾರಿಗೆಲ್ಲ ಮಂತ್ರಿ ಸ್ಥಾನ ಕೊಡಬೇಕೆಂದು ಅಂತಿಮಗೊಳಿಸಲು ಸಿದ್ದರಾಮಯ್ಯ ಅವರು ಇಂದು(ಮೇ 19) ದೆಹಲಿಗೆ ತೆರಳಿ ಹೈಕಮಾಂಡ್​ ಜೊತೆ ಚರ್ಚಿಸಲಿದ್ದಾರೆ. ಆದ್ರೆ, ಸಿದ್ದರಾಮಯ್ಯ ದಿಲ್ಲಿಗೆ ಹೋಗುವ ಮೊದಲೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ತಂಡೋಪತಂಡವಾಗಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ಸಿಎಂ ಆಯ್ಕೆ ಮಧ್ಯೆ ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ಧ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಹೌದು…ಸಚಿವ ಸಂಪುಟ ರಚನೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಮೂರು ತಂಡಗಳಾಗಿ ಬೆಳ್ಳಂ ಬೆಳಗ್ಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 06 ರಿಂದ 7 ಗಂಟೆ ಮೂರು ವಿಮಾನಗಳಲ್ಲಿ ಒಟ್ಟು 22 ಶಾಸಕರು ದಹಲಿಗೆ ಹೋದರು.

ಮೊದಲ ಗುಂಪಿನಲ್ಲಿ ಬೆಳಗ್ಗೆ 06:05 ರ ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು 09 ಶಾಸಕರು ದೆಹಲಿಗೆ ತೆರಳಿದ್ದಾರೆ. ಶಾಸಕರಾದ ಕೆಸಿ‌ ವಿರೇಂದ್ರ, ಗೋವಿಂದಪ್ಪ, ಡಿ.ಸುಧಾಕರ್, ರಘುಮೂರ್ತಿ ಟಿ, ಅಜಯ್ ಸಿಂಗ್, ಯಶ್ವಂತ್ ರಾಜ್ ಗೌಡ ಪಾಟೀಲ್, ಎಂಸಿ ಸುಧಾಕರ್, ಪ್ರದೀಪ್ ಈಶ್ವರ್ ಮತ್ತು ಬೆಲೂರು ಗೋಪಾಲಕೃಷ್ಣ ದೆಹಲಿಗೆ ತೆರಳಿದರು.

ಇನ್ನು ಎರಡನೇ ಗುಂಪಿನಲ್ಲಿ 06 ಜನ ಶಾಸಕರು 06:15 ರ ಸ್ಪೈಸ್ ಜೆಟ್ ವಿಮಾನದ ಮೂಲಕ ದೆಹಲಿಗೆ ಹಾರಿದ್ದಾರೆ. ಶಾಸಕರಾದ ಕೃಷ್ಣಬೈರೆಗೌಡ, ಎನ್ಎ ಹ್ಯಾರೀಸ್, ಶ್ರೀನಿವಾಸ್ ಮಾನೆ, ರಿಜ್ಚಾನ್ ಹರ್ಷದ್, ಈಶ್ವರ್ ಖಂಡ್ರೆ, ರಹಿಂ ಖಾನ್ ತೆರಳಿದ್ದಾರೆ.

ಬೆಳಗ್ಗೆ 07:20 ರ ಏರ್ ಇಂಡಿಯಾ ವಿಮಾನದಲ್ಲಿ ಮೂರನೇ ತಂಡ ಹೋಗಿದೆ. ಕೆಹೆಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಸಿಎಸ್ ನಾಡಗೌಡ, ಅಶೋಕ್ ರೈ, ಕೆಎನ್ ರಾಜಣ್ಣ,ಕೆಆರ್ ರಾಜೇಂದ್ರ, ಎಂಎಲ್ಸಿ ಅರವಿಂದ ಅರಳಿ ಸಹ ದೆಹಲಿಗೆ ಪ್ರಯಾಣಗೆ ಹೋಗಿದ್ದಾರೆ.

ಮುಖ್ಯಮಂತ್ರಿ ಹಗ್ಗಜಗ್ಗಾಟದ ಬಳಿಕ ಇದೀಗ ಕಾಂಗ್ರೆಸ್ ಹೈಕಮಾಂಡ್​ಗೆ ಸಂಪುಟ ರಚನೆ ಮಾಡುವ ದೊಡ್ಡ ಸವಾಲ್ ಎದುರಾಗಿದೆ. ಜಾತಿವಾರು, ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಬೇಕಿದೆ. ಆದ್ರೆ, ಇಡೀ ಶಾಸಕರ ದಂಡೇ ನನಗೆ ಸಚಿವ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್​ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.