Karnataka Assembly Elections 2023 Highlights: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಬೆನ್ನಲ್ಲೆ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಎರಡು ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ಮತ್ತು 2.30ಕ್ಕೆ ಬೆಂಗಳೂರಿನ 2 ಖಾಸಗಿ ಹೋಟೆಲ್‌ಗಳಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಯಲಿದೆ. ಇದರ ಜೊತೆಗೆ ನಟ ಸುದೀಪ್ (Actor Sudeep) ಕೂಡ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗುತ್ತಿದ್ದು, ತೀವ್ರ ಕುತೂಹಲ ಮನ ಮಾಡಿದೆ. ಮತ್ತೊಂದೆಡೆ ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಬೇಕಿದೆ. ಇನ್ನು ಏಪ್ರಿಲ್ 8ರಂದು ಬಿಜೆಪಿ (BJP) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಬನ್ನಿ ಟಿವಿ9 ಡಿಜಿಟಲ್ ಮೂಲಕ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಿರಿ.
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ನಿಂದ ಉಳಿದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಇಂದು (ಏ.05) ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಅಪೂರ್ಣಗೊಂಡಿದೆ. ಹೀಗಾಗಿ ನಾಳೆ (ಏ.6) ರಂದು 2.30ಕ್ಕೆ ಎಐಸಿಸಿ ಕಚೇರಿಯಲ್ಲಿ ಮತ್ತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಮೈಸೂರು: ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ ಮನೆಗೆ ಮಾಜಿ ಶಾಸಕ ಚಿಕ್ಕಣ್ಣ ಭೇಟಿ ನೀಡಿದ್ದಾರೆ. ಮಾಜಿ ಶಾಸಕ ಚಿಕ್ಕಣ್ಣ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಸದ ಶ್ರೀನಿವಾಸ ಪ್ರಸಾದ ಜೊತೆ ಮಾತುಕತೆ ನಡೆಸಿದ್ದಾರೆ. ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಹೆಚ್.ಡಿ ಕೋಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಕೃಷ್ಣನಾಯಕ ಹಾಗೂ ಜಯಪ್ರಕಾಶ್ ನಡುವೆ ಟಿಕೆಟ್ ವಿಚಾರವಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಕೃಷ್ಣ ನಾಯಕ ಜೆಡಿಎಸ್ನಲ್ಲಿ ಟಿಕೆಟ್ ಸಿಗದಿದ್ರೆ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಈ ನಡುವೆ ಮಾಜಿ ಶಾಸಕ ಚಿಕ್ಕಣ್ಣ ಹಾಗೂ ಶ್ರೀನಿವಾಸ ಪ್ರಸಾದ್ ಭೇಟಿ ತೀವ್ರ ಕೂತುಹಲ ಮೂಡಿಸಿದೆ.
ಬೆಂಗಳೂರು: ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಸಿನಿಮಾ ತಾರೆಯರಲ್ಲ. ನಟರು ಯಾರನ್ನು ಬೆಂಬಲಿಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಕೆಲವೊಮ್ಮೆ IT, ED ಅಥವಾ ಬೇರೆ ರೀತಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ಕರ್ನಾಟಕದಲ್ಲಿ ಬಿಜೆಪಿಯ ದಿವಾಳಿತನ ಸ್ಪಷ್ಟವಾಗಿದೆ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಾತನ್ನು ಯಾರೂ ಕೇಳುತ್ತಿಲ್ಲ. ಈಗ ಪ್ರೇಕ್ಷಕರನ್ನು ಸೆಳೆಯಲು ಸಿನಿ ತಾರೆಯರನ್ನು ಅವಲಂಬಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. 2ನೇ ಪಟ್ಟಿ ಬಿಡುಗಡೆ ಆಗಿದೆ ಅಂತಾ ಹೇಳ್ತಿರೋದು ಸುಳ್ಳು. ಸಂಜೆ 4.30ಕ್ಕೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಇದೆ. ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದಾವಣಗೆರೆ: ಬಿಜೆಪಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಭಜನೆ ಬಿಟ್ಟು ಬೇರೆ ಎನು ಗೊತ್ತಿಲ್ಲ. ಅವರಿಗೆ ಕಾಮನ್ ಸೆನ್ಸ್ ಇಲ್ಲ. ಕಟ್ಟಿ ಮೇಲೆ ಕುಳಿತು ಹರಟೆ ಹೊಡಿಯೊರ ಕೈಗೆ ಅಧಿಕಾರ ಕೊಟ್ಟಹಾಗೆ ಆಗಿದೆ. ಬರೀ ಲೂಟಿ ಮಾಡುತ್ತಾರೆ ಎಂದು ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬೇಕಿದ್ದರೇ ನೀವು ಪ್ರಧಾನಿ ಮೋದಿಯವರ ಹೆಸರೇಳದೆ ಮತ ಕೇಳಿ. ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರು ಹೇಳದೆ ಚುನಾವಣಾ ಮೈದಾನಕ್ಕೆ ಬರುವೆ. ಜನ ಯಾರಿಗೆ ಮತ ಹಾಕುತ್ತಾರೆ ನೋಡೋಣ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೋಡಿ ಲೂಟಿ. ಇಲ್ಲಿ ಕೋಟ್ಯಾಂತರ ರೂಪಾಯಿ ಹಣ ಬರುತ್ತದೆ. ಅದರ ಬಳಕೆಗೆ ಸೂಕ್ತ ವ್ಯವಸ್ಥೆ ಇಲ್ಲ. ಬರೀ ಲೂಟಿ ಹೊಡೆಯುವುದರಲ್ಲಿಯೇ ಬಿಜೆಪಿ ಆಡಳಿತ ಆಗಿದೆ ಎಂದು ಆರೋಪ ಮಾಡಿದರು.
ಮಡಿಕೇರಿ: ನಟ ಕಿಚ್ಚ ಸುದೀಪ್ ಪಕ್ಷ ಸೇರುವುದು ಅವರ ವೈಯಕ್ತಿಕ ವಿಚಾರ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಒಂದು ವೇಳೆ ಬಿಜೆಪಿ ಸೇರಿದರೂ ಅದರಿಂದ ಏನೂ ಲಾಭವಿಲ್ಲ ಎಂದು ಕೊಡಗಿನ ಸಿದ್ದಾಪುರದಲ್ಲಿ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರು: ನಾನು ಹೇಳಿದ ಕಡೆ ನಟ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಮಾಡ್ತಾರೆ. ನಟ ಸುದೀಪ್ ಪ್ರಚಾರದಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತೆ ಎಂದು ಹೇಳಿದರು.
ಬೆಂಗಳೂರು: ನಾನು ಭಾರತೀಯನಾಗಿ ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಯಗಳ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಅವರ ನಿರ್ಣಯಗಳ ಬಗ್ಗೆ ಹೆಮ್ಮ ಇದೆ. ಆದ್ರೆ ನಾನಿವತ್ತು ಬಂದಿರುವುದು ಕಂಪ್ಲೀಟ್ ಆಗಿ ವಿಭಿನ್ನ. ನಾನು ಕೇವಲ ಬಂದಿರೋದು ವ್ಯಕ್ತಿಗೋಸ್ಕರ ಅಷ್ಟೇ ಎಂದು ಸುದೀಪ್ ಸ್ಪಷ್ಟನೆ ನೀಡಿದರು.
ಬೆಂಗಳೂರು: ನಾನು ಸಿಎಂರವರನ್ನ ಮಾಮಾ ಅಂತಾನೇ ಕರೆಯೋದು. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ರು. ಅಂಥಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಾನು ನಿಲ್ತೀನಿ ಅಂತಾ ಬಂದೇ. ನಾನು ಚಿತ್ರರಂಗಕ್ಕೆ ಗಾಡ್ ಫಾದರ್ ಅಂತಾ ಯಾರು ಇರಲಿಲ್ಲ. ಆ ಟೈಮ್ಲ್ಲಿ ಅವರು ನನ್ನ ಪರ ಇದ್ರು. ಅವರು ಆಗ್ತಾನೆ ರಾಜಕೀಯ ಬರ್ತಿದ್ರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ ಎಂದು ನಟ ಸುದೀಪ್ ಹೇಳಿದರು.
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ ಎಂದು ನಟ ಸುದೀಪ್ ಹೇಳಿದರು.
ಬೆಂಗಳೂರು: ನನ್ನ ಜೊತೆಗೆ ಪಕ್ಷದ ಪರ ನಟ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸುದೀಪ್ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಟ ಸುದೀಪ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ ನಟ ಸುದೀಪ್ ನನಗೆ ಬೆಂಬಲ ಕೊಡುತ್ತಿದ್ದಾರೆ. ಪಕ್ಷಕ್ಕೆ ಸೇರದೆ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದಿದ್ದೇನೆ ಎಂದು ಹೇಳಿದರು.
ಬೆಂಗಳೂರು: ಕಷ್ಟ ಕಾಲದಲ್ಲಿ ನನ್ನ ಜೊತೆ ಕೆಲವರು ಇದ್ದರು. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಕಷ್ಟದ ಸಮಯದಲ್ಲಿ ಸಿಎಂ ಬೊಮ್ಮಾಯಿ ಸಪೋರ್ಟ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಸಿಎಂ ಬೊಮ್ಮಾಯಿಗೆ ನಾನು ಬೆಂಬಲ ಕೊಡಲು ಇಷ್ಟಪಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಬೆಂಗಳೂರು: ತಾವೆಲ್ಲ ನಿನ್ನೆ ಸುದ್ದಿ ಮಾಧ್ಯಮದಲ್ಲಿ ನಿರೀಕ್ಷೆ ಮಾಡಿ ಸುದ್ದಿ ಮಾಡಿದ್ದೀರಿ. ನಿಮ್ಮ ನಿರೀಕ್ಷೆ ನಿಜವಾಗಿದೆ. ಕಿಚ್ಚ ಸುದೀಪ್ ಅವರು ತಮ್ಮ ನಿಲುವನ್ನ ಪ್ರಕಟಣೆ ಮಾಡಲು ನಾವೆಲ್ಲ ಸೇರಿದ್ದೇವೆ. ಅವರು ಮೊದಲು ತಮ್ಮ ನಿಲುವನ್ನ ಪ್ರಕಟಣೆ ಮಾಡುತ್ತಾರೆ. ಆಮೇಲೆ ನಾನು ಮಾತನಾಡುತ್ತೇನೆ. ಅವರು ರಾಜಕೀಯದಲ್ಲಿಲ್ಲ ಅವರು ಚಲನಚಿತ್ರದಲ್ಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಸುದ್ದಿಗೋಷ್ಠಿಗೂ ಮುನ್ನ ಸಿಎಂ ಬೊಮ್ಮಾಯಿ ಹಾಗೂ ನಟ ಸುದೀಪ್ ಪ್ರತ್ಯೇಕ ಮಾತುಕತೆ ಮುಗಿಸಿ ಸುದ್ದಿಗೋಷ್ಠಿಗೆ ಆಗಮಿಸಿದ್ದು ಸುದ್ದಿಗೋಷ್ಠಿ ಆರಂಭವಾಗಿದೆ.
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ಮಾಡಲಿದ್ದು, ನಟ ಸುದೀಪ್ ಕೂಡ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು,
ಚುನಾವಣಾಧಿಕಾರಿಗಳ ಕಣ್ಗಾವಲಿನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಬೆಂಗಳೂರು: ಅನಾಮಧೇಯ ಬೆದರಿಕೆಗಳಿಗೆಲ್ಲಾ ನಾನು ಹೆದರುವುದಿಲ್ಲ ಎಂದು ನಟ ಸುದೀಪ್ ಹೇಳಿದ್ದಾರೆ. ಇಂತಹ ಬೆದರಿಕೆ ಪತ್ರಕ್ಕೆ ನಾನು ಉತ್ತರ ನೀಡೇ ನೀಡುತ್ತೇನೆ. ಪತ್ರ ಬರೆದವರು ಯಾರು ಎಂದೂ ಸಹ ನನಗೆ ಗೊತ್ತಿದೆ. ಆದ್ರೆ ಅವರ ಬಗ್ಗೆ ನಾನು ಈಗ ಮಾತನಾಡಲ್ಲ. ಚಿತ್ರರಂಗದಲ್ಲಿ ನನ್ನ ಕಂಡರೆ ಆಗದವರು ಕೂಡ ಇದ್ದಾರೆ. ಅವರಿಗೆ ಅವರ ಮಾರ್ಗದಲ್ಲೇ ನಾನು ಉತ್ತರ ಕೊಡುತ್ತೇನೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರು: ಸಿನಿಮಾ ಸ್ಟಾರ್ಗಳನ್ನು ಕರೆಸಿ ಬಿಜೆಪಿಯವರು ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ ಎಂದು ಹೇಳಿದರು.
ಸಿಎಂ ಸುದ್ದಿಗೋಷ್ಠಿಗೆ ಹೋಗ್ತಿರೋದು ಸತ್ಯ. ನಾನು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಬಿಜೆಪಿ ಸೇರ್ಪಡೆ ವಿಚಾರಕ್ಕೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲೇ ಎಲ್ಲದನ್ನೂ ನಾನು ಉತ್ತರ ಕೊಡುತ್ತೇನೆ. ನಾನು ಯಾರ ಪರ ಕೂಡ ಟಿಕೆಟ್ ಕೇಳಿಲ್ಲ. ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ನಾನು ದೊಡ್ಡವನಲ್ಲ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ನಟ ಸುದೀಪ್ ಪಕ್ಷ ಸೇರ್ಪಡೆ ವಿಚಾರ ಗೊತ್ತಿಲ್ಲ. ನಟ ಸುದೀಪ್ ಬಂದು ಪಕ್ಷದ ಪರ ಪ್ರಚಾರ ಮಾಡಿದರೆ ಸ್ವಾಗತಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸಿನಿಮಾ ತಾರೆಯರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಹೊಸದಲ್ಲ. ಸುದೀಪ್ ಬಂದು ನಮ್ಮ ಪಕ್ಷದ ಪರ ಪ್ರಚಾರ ಮಾಡಿದರೆ ಸ್ವಾಗತ ಮಾಡುವೆ. ಅಪರಿಚಿತನಿಂದ ನಟ ಸುದೀಪ್ಗೆ ಬೆದರಿಕೆ ಪತ್ರ ರವಾನೆಯಾಗಿದೆ. ಹತಾಶ ಮನೋಭಾವನೆ ಇರುವವರು ಈ ರೀತಿ ಮಾಡುತ್ತಾರೆ. ಇಷ್ಟೂ ದಿನ ಸುಮ್ಮನಿದ್ದು ಈಗ ಆರೋಪ ಮಾಡಿದ್ದಾರೆಂದರೆ ಏನರ್ಥ. ಇಂತಹ ಬೆದರಿಕೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿಗೆ ಬಿಜೆಪಿ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ನೇತೃತ್ವದಲ್ಲಿ ತೇರದಾಳ ಕ್ಷೇತ್ರದ BJP ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ರೆಸಾರ್ಟ್ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೆಸಾರ್ಟ್ನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ.
ಕಾಂಗ್ರೆಸ್ ನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನನೂ ಇಲ್ಲ ಎಂದು ಆನಂದ ಸಿಂಗ್ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ವಾಗ್ದಾಳಿ ನಡೆಸಿದ್ದಾರೆ. ಅವರು ಕಾಂಗ್ರೆಸ್ ನಲ್ಲೆ ಇದ್ದವರೂ ಅವಾಗ ಅವರಿಗೆ ಗಂಡಸ್ತನ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 40% ಸರ್ಕಾರದ ಕಳಂಕದಿಂದ ಹೊರಬರಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಗರು ಬರೀ ಅಸಂವಿಧಾನಿಕ ಪದಬಳಕೆ ಮಾಡುತ್ತಾರೆ. ಈ ಹಿಂದೆ ಸಚಿವ ಅಶ್ವಥ್ ನಾರಾಯಣ, ಈಗ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ಎಲ್ಲದಕ್ಕೂ ಈ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.
ನಟ ಸುದೀಪ್ ಬಿಜೆಪಿ ಸೇರ್ಪಡೆಯಾದ್ರೆ ಆನೆ ಬಲ ಬಂದಂತಾಗುತ್ತೆ ಎಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ನಲ್ಲಿ ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದರು. ಸುದೀಪ್ ಪಕ್ಷ ಸೇರಿದ್ರೆ ಅಥವಾ ಬೆಂಬಲ ಕೊಟ್ರೂ ಲಾಭ ಆಗುತ್ತೆ. ಸುದೀಪ್ ಬಿಜೆಪಿ ಸೇರಿದರೆ ನಮಗೆ ಮತ್ತು ಪಕ್ಷಕ್ಕೆ ಖುಷಿ ವಿಚಾರ. ಸುದೀಪ್ ಪಕ್ಷಕ್ಕೆ ಸೇರುವ ಸುಳಿವು ಇತ್ತು, ನಾನೇ ಹೇಳಲು ಹೋಗಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ಸುದೀಪ್ ತುಂಬಾ ಆತ್ಮೀಯರು. ಅವರ ಮಧ್ಯೆ ನಾನು ಪ್ರವೇಶ ಮಾಡಬಾರದು ಅಂತಾ ಸುಮ್ಮನಿದ್ದೆ. ಸುದೀಪ್ ಒಳ್ಳೆಯ ನಟ, ಒಳ್ಳೆಯ ಆಲೋಚನೆ ಇರುವ ವ್ಯಕ್ತಿ. ಸುದೀಪ್ ಅಭಿವೃದ್ಧಿ ಹಾಗೂ ಬಡವರ ಪರ ಕಾಳಜಿ ಇರುವ ವ್ಯಕ್ತಿ ಎಂದರು.
ಮುಸ್ಲಿಮರ ಮತ ಸೆಳೆಯಲು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಅವರು ನಮಾಜ್ ಮಾಡಲು ಬೇಕಾದ ಜಾನಿಮಾಸ್ ಮತ್ತು ಆಹಾರ ಕಿಟ್ಗಳನ್ನು ನೀಡಿ ಆಮೀಷವೊಡ್ಡಲಾಗುತ್ತಿದ್ದು ಮತದಾರರಿಗೆ ಹಂಚುತ್ತಿದ್ದ ಕಿಟ್ ಜಪ್ತಿ ಮಾಡಲಾಗಿದೆ. ಬಾಗೇಪಲ್ಲಿ ಪಟ್ಟಣದ 18ನೇ ವಾರ್ಡ್ನಲ್ಲಿ ಸೈಯದ್ ಖಲೀಲ್ ಮನೆಯಲ್ಲಿದ್ದ 90 ಕಿಟ್ ಜಪ್ತಿ ಮಾಡಲಾಗಿದೆ. ಒಣ ಖರ್ಜೂರ, ತಜ್ಬಿ ಸರ, ಜಾನಿಮಾಸ್ ಸೇರಿದಂತೆ ಪ್ರಾರ್ಥನೆಗೆ ಬೇಕಾದ ಸಾಮಾಗ್ರಿಗಳು ಕಿಟ್ನಲ್ಲಿದ್ದವು.
ಎಷ್ಟೇ ಪ್ರಯತ್ನ ಮಾಡಿದ್ರೂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಹೋಗಲ್ಲ ಎಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವರ್ತೂರು ಪ್ರಕಾಶ್ ಕಿಡಿಕಾರಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ವರುಣದಿಂದ ಟಿಕೆಟ್ ಘೋಷಣೆಯಾಗಿದೆ. ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರದ ಟಿಕೆಟ್ ಸಹ ಸಿಗಬಹುದು. ಆದ್ರೆ 2 ಕ್ಷೇತ್ರಗಳಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಸೋಲುತ್ತಾರೆ. ವರುಣ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಹುಡುಕಿದ್ದೇವೆ. ಇನ್ನೆರಡು ದಿನಗಳಲ್ಲಿ ಬಿಜೆಪಿಯ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯರ ವರ್ಚಸ್ಸು ಮುಗಿದು ಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಅವರಲ್ಲಿ ಒಗ್ಗಟ್ಟು ಇಲ್ಲ. ಸಿದ್ದರಾಮಯ್ಯ ಸಿಎಂ ಆಗುತ್ತಾರೆಂದು ಕುರುಬರು ಬೆಂಬಲಿಸಿದ್ದರು. ಆದರೆ ಈಗ ಕುರುಬ ಸಮುದಾಯ ಬಿಜೆಪಿ ಪರವಿದೆ ಎಂದರು.
ನಟ ಕಿಚ್ಚ ಸುದೀಪ್ ಬಿಜೆಪಿಗೆ ಸೇರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಸುದೀಪ್ ಬಿಜೆಪಿ ಸೇರುವ ವಿಚಾರದ ಬಗ್ಗೆ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸೋಲುವ ಭಯದಲ್ಲಿ ಈ ರೀತಿಯ ಸುದ್ದಿ ಹರಡುತ್ತಿದೆ. ಭ್ರಷ್ಟ BJP ಹರಡುತ್ತಿರುವ ಸುದ್ದಿ ಸುಳ್ಳು ಅಂತಾ ನಾನು ನಂಬುತ್ತೇನೆ. ನಮ್ಮ ಕಿಚ್ಚ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂದು ಟ್ವೀಟ್ ಮಾಡಿದ್ದಾರೆ.
I strongly believe this is a Fake news spread by the desperate ,loosing BJP in Karnataka. @KicchaSudeep is far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ #justasking https://t.co/kIRmFczTIO
— Prakash Raj (@prakashraaj) April 5, 2023
ನಟ ಸುದೀಪ್ ಬಿಜೆಪಿ ಸೇರ್ಪಡೆಯಾದ್ರೆ ಸ್ವಾಗತ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ನಟ ಸುದೀಪ್ ಪಕ್ಷ ಸೇರ್ಪಡೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸುದೀಪ್ ಸೇರ್ಪಡೆಯಿಂದ ಬಿಜೆಪಿಗೆ ಅನುಕೂಲ ಆಗುತ್ತದೆ. ಸುದೀಪ್ ಬಿಜೆಪಿ ಸೇರಿದರೆ ಸ್ವಾಗತ ಮಾಡುತ್ತೇನೆ. ಸಮುದಾಯದ ನಾಯಕ ಅಂತೇನು ಅಲ್ಲ, ನನಗೆ ಪಕ್ಷ ಮುಖ್ಯ ಎಂದರು.
ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹಿನ್ನೆಲೆ ದೆಹಲಿಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಆರಂಭವಾಗಿದೆ. ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಗೊಂದಲವಿರುವ ಕ್ಷೇತ್ರಗಳ ಬಗ್ಗೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಯಲಿದೆ. ಕಾಂಗ್ರೆಸ್‌ನ ವಾರ್‌ರೂಂನಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ.
ಮಾಜಿ ಸಂಸದ ಶಿವರಾಮೇಗೌಡ, ಪುತ್ರ ಚೇತನ್ಗೌಡ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಕಲಬುರಗಿ ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೈದ್ಯ ಯೋಗೇಶ್ ಬೆಸ್ತರ್ ಹಾಗೂ ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಕ್ಕರೇವಣ್ಣ ಸಹ ಬಿಜೆಪಿ ಸೇರಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ.ಸುಧಾಕರ್, ಗೋಪಾಲಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನೆಲಮಂಗಲ ಟಿಕೆಟ್ ಆಕಾಂಕ್ಷಿ ನಾಗರಾಜ್ ಜೊತೆ ರಮೇಶ್ ಜಾರಕಿಹೊಳಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದಾರೆ. ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಭೇಟಿ ನೀಡಿ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಒತ್ತಡ ಮುಂದುವರಿಸಿದ್ದಾರೆ.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯರ ನಡೆಗೆ ಬೇಸತ್ತು ಮುಖಂಡರು ರಾಜೀನಾಮೆ ನೀಡಿದ್ದಾರೆ. ಮೂಲ ಜೆಡಿಎಸ್ ಕಾರ್ಯಕರ್ತರನ್ನ ಕಡೆಗಣಿಸಿದ ಹಿನ್ನಲೆ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ. ಮಾಜಿ ತಾ.ಪಂ. ಅಧ್ಯಕ್ಷ ಮಹದೇವಸ್ವಾಮಿ, KRS ಪಂ ಅಧ್ಯಕ್ಷ ಕುಮಾರ್ ಜೆಡಿಎಸ್ಗೆ ಗುಡ್ ಬೈ ಹೇಳಿದ್ದಾರೆ.
ದಾವಣಗೆರೆ ನಗರದ ಹಳೇಪೇಟೆಯಲ್ಲಿ ಇರುವ ವೀರಭದ್ರೇಶ್ವರ ರಥೋತ್ಸವದ ಪ್ರಯುಕ್ತ ನಡೆದ ಕೆಂಡೋತ್ಸವದಲ್ಲಿ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಕೆಂಡ ತುಳಿದು ಹರಕೆ ತೀರಿಸಿದ್ದಾರೆ. ಹಿರಿಯ ಪುತ್ರ ಸಮರ್ಥ ಶಾಮನೂರ ಜೊತೆಗೆ ಕೆಂಡ ತುಳಿದಿದ್ದಾರೆ. ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಸಹಿತ ಕುಟುಂಬ ಸದಸ್ಯರೊಂದಿಗೆ ವೀರಭದ್ರೇಶ್ವರನ ದರ್ಶನ ಪಡೆದಿದ್ದಾರೆ. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಎಸ್ಎಸ್ ಮಲ್ಲಿಕಾರ್ಜುನ ಅವರು ಕೆಂಡ ತುಳಿದ ಬಳಿಕ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
‘ಐಟಿ, ಇಡಿ ಮೂಲಕ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಲಾಗ್ತಿದೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಚುನಾವಣಾ ಆಯೋಗವೇ ಐಟಿ ಅಧಿಕಾರಿಗಳ ನೇಮಕ ಮಾಡಿದೆ. ಎಲ್ಲಾ ಜಿಲ್ಲೆಗಳಿಗೂ ಐಟಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ನವರು ಚುನಾವಣಾ ಭಯದಿಂದ ಆರೋಪ ಮಾಡ್ತಿದ್ದಾರೆ. ಬ್ಲ್ಯಾಕ್ ಮನಿ ಇಲ್ಲದೆ ಇದ್ರೆ ಕಾಂಗ್ರೆಸ್ನವರಿಗೆ ಭಯ ಯಾಕೆ? ಅನಗತ್ಯ ಗೊಂದಲ ಸೃಷ್ಟಿ ಮಾಡಲು ಈ ರೀತಿ ಹೇಳುತ್ತಿದ್ದಾರೆ ಎಂದರು.
ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಿಷೇಧ. ಹೀಗೆ ಪ್ರಚಾರ ಮಾಡಿದ್ದು ಕಂಡು ಬಂದ್ರೆ ಆಯಾ ಮಂದಿರ ಮಸೀದಿ ಹಾಗೂ ಚರ್ಚ್ಗಳ ಆಡಳಿತ ಮಂಡಳಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಧಾನ ಸಭೆ ಚುನಾವಣೆ ಹಿನ್ನೆಲೆ ದಾವಣಗೆರೆ ಜಿಲ್ಲೆ ವ್ಯಾಪ್ತಿ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಿಷೇಧ ಹೇರಲಾಗಿದೆ. ಜೊತೆಗೆ ಆಯಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಸಮುದಾಯ ಭವನ, ಯಾತ್ರಿ ನಿವಾಸ ಹಾಗೂ ಕಲ್ಯಾಣ ಮಂಟಪಗಳಲ್ಲಿ ರಾಜಕೀಯ ಸಭೆ ನಡೆಸುವಂತಿಲ್ಲ.
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ತುಮಕೂರು ಜಿಲ್ಲೆ ಗುಬ್ಬಿ ‘ಕೈ’ ಮುಖಂಡ ಪ್ರಸನ್ನಕುಮಾರ್ ಉಚ್ಚಾಟನೆ ಮಾಡಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ ಆದೇಶ ಹೊರಡಿಸಿದ್ದಾರೆ. ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನಕುಮಾರ್, S.R.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧಿಸಿದ್ರು. ತಾವೇ ಅಭ್ಯರ್ಥಿ ಎಂದು ಚುನಾವಣಾ ಪ್ರಚಾರ ಮಾಡಲು ನಿರ್ಧರಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟನೆ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಕೆಎ 70 1459 ಸಂಖ್ಯೆಯ ಖಾಸಗಿ ಬಸ್ ತಪಾಸಣೆ ಮಾಡಲಾಗಿದ್ದು ಬಸ್ನಲ್ಲಿದ್ದ 2 ಕೋಟಿ ಹಣ ಜಪ್ತಿ ಮಾಡಲಾಗಿದೆ. ಹಣ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಮಹೇಂದ್ರ ಕುಮಾರ್ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಹಣ ಜಪ್ತಿ ಬಳಿಕ ಮಹಜರು ನಡೆಸಿ ಬಸ್ ಕಳುಹಿಸಿದ್ದಾರೆ. ಅನಧಿಕೃತ ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 8 ಮತ್ತು 9ರಂದು ಪ್ರಧಾನಿ ಮೋದಿ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮ ಹಿನ್ನೆಲೆ ಏಪ್ರಿಲ್ 8ರ ರಾತ್ರಿ 8 ಗಂಟೆಗೆ ಮೈಸೂರಿಗೆ ಮೋದಿ ಆಗಮಿಸಲಿದ್ದಾರೆ. ಱಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏ.9ರ ಬೆಳಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಬಳಿಕ ಚಾಮರಾಜನಗರ ಜಿಲ್ಲೆ ಬಂಡೀಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಏ.9ರ ಬೆಳಗ್ಗೆ 7.30ಕ್ಕೆ ಬಂಡೀಪುರ ಉದ್ಯಾನವನಕ್ಕೆ ಮೋದಿ ಭೇಟಿ ನೀಡಿ ಬಳಿಕ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಡಾ.ಅಜಯಸಿಂಗ್ ಅವರು ತನ್ನ ಎದುರಾಳಿಯಾಗಿದ್ದ ವ್ಯಕ್ತಿಯನ್ನು ಕೈಗೆ ಸೆಳೆದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಮಾಪ್ತ ಕೈ ತೆಕ್ಕೆಗೆ. ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಇಂದು ಕಾಂಗ್ರೆಸ್ ಗೆ ಸೇರಲಿದ್ದಾರೆ. ಇವರು ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ದಿಸಿ 35 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇದಾರಲಿಂಗಯ್ಯ ಹಿರೇಮಠ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ 17 ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. 17 ಆಕಾಂಕ್ಷಿಗಳ ಪೈಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಒಂದು ಲೋಕಸಭಾ ಕ್ಷೇತ್ರಕ್ಕೆ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಮಾನದಂಡ ಹಿನ್ನೆಲೆ ಅದೇ ಆಧಾರದ ಮೇಲೆ ಯಾದಗಿರಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡೋ ಸಾಧ್ಯತೆ ಇದೆ. ಯಾದಗಿರಿ ವಿಧಾನಸಭೆ ಕ್ಷೇತ್ರಕ್ಕೆ ಎ.ಸಿ ಕಾಡ್ಲೂರ್ ಗೆ ಟಿಕೆಟ್ ಸಿಗೋ ಸಾಧ್ಯತೆ ಇದೆ. ರಾಯಚೂರು ನಗರ ಕ್ಷೇತ್ರಕ್ಕೆ ಎನ್ ಎಸ್ ಬೋಸರಾಜುಗೆ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿದೆ. ಇದುವರೆಗೂ ರಾಯಚೂರಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲಾಗ್ತಿತ್ತು. ಆದ್ರೆ ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಹೀಗಾಗಿ ಯಾದಗಿರಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದ ಎ.ಸಿ ಕಾಡ್ಲೂರ್ ಗೆ ಟಿಕೆಟ್ ನೀಡಲು ಹೈಕಮಾಂಡ್ ಚಿಂತನೆ.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ. ಹರೀಶ್ ಗೌಡ ಪರ ಮತ ಕೇಳಲು ಬಂದ ಕುರುಬ ಸಮಾಜದ ಮುಖಂಡರಿಗೆ ಬೀರತಮ್ಮನಹಳ್ಳಿ ಗ್ರಾಮದಲ್ಲಿ ಯುವಕ ತರಾಟೆಗೆ ತೆಗೆದುಕೊಂಡಿದ್ದು ವಿಡಿಯೋ ವೈರಲ್ ಆಗಿದೆ. ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಗೆಲುವಿಗೆ ಸ್ಪಂದಿಸದ ಮುಖಂಡರಿಗೆ ಯುವಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಕುರುಬ ಸಮಾಜದ ಕೆಲ ಮುಖಂಡರು ಪ್ರಚಾರಕ್ಕೆ ಗ್ರಾಮಕ್ಕೆ ಬಂದಿದ್ದು, ಈ ವೇಳೆ ಮುಖಂಡರ ವಿರುದ್ಧ ಗರಂ ಆದ ಯುವಕ ಮಹೇಶ್ ಬುದ್ಧಿವಾದ ಹೇಳಿದ್ದಾನೆ.
ಟಿಕೆಟ್ಗಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಚನ್ನಗಿರಿ ತಾಲೂಕಿನ ಬಹುತೇಕ ಕಡೆ ಹತ್ತಾರು ಗುಂಪುಗಳನ್ನ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ್ದಾರೆ.
ನೆಲಮಂಗಲದ ಖಾಸಗಿ ರೆಸಾರ್ಟ್ನಲ್ಲಿ ಇಂದು 2ನೇ ದಿನದ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು, ಕೇಂದ್ರ ಸಚಿವ ಜೋಶಿ, ಮಾಜಿ ಸಿಎಂಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
Published On - 9:31 am, Wed, 5 April 23