ಯಾರಾಗ್ತಾರೆ ಮುಖ್ಯಮಂತ್ರಿ? 1 ಸಿಎಂ, 3 ಡಿಸಿಎಂ: ಕಾಂಗ್ರೆಸ್​ನಲ್ಲಿ ಏನಿದು ಸಿದ್ಧ ಸೂತ್ರ?

|

Updated on: May 14, 2023 | 10:54 AM

ಭಾರಿ ಬಹುಮತದಿಂದ ಗೆದ್ದು ಸರ್ಕಾರ ರಚನೆಗೆ ಕಾಂಗ್ರೆಸ್‌ ಮುಂದಾಗಿದೆ. ಆದರೆ, ಮುಖ್ಯಮಂತ್ರಿ ಯಾರು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ಮಧ್ಯೆ ಕಾಂಗ್ರೆಸ್​ ಸಹ ಹೊಸ ಸೂತ್ರ ಹೆಣೆದಿದೆ.

ಯಾರಾಗ್ತಾರೆ ಮುಖ್ಯಮಂತ್ರಿ? 1 ಸಿಎಂ, 3 ಡಿಸಿಎಂ: ಕಾಂಗ್ರೆಸ್​ನಲ್ಲಿ ಏನಿದು ಸಿದ್ಧ ಸೂತ್ರ?
ಸಂಗ್ರಹ ಚಿತ್ರ
Follow us on

ಬೆಂಗಳೂರು: ಜಿದ್ದಾಜಿದ್ದಿನಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ದಿಗ್ವಿಜಯ ಸಾಧಿಸಿದೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್​ ಜೋಡೆತ್ತುಗಳ ಎದುರು, ಬಿಜೆಪಿ, ಜೆಡಿಎಸ್ ಮಕಾಡೆ ಮಲಗಿವೆ.. 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್​​ ಪಾಳೆಯ 135 ಸ್ಥಾನ ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.. ಬಿಜೆಪಿ ಪಡೆ ಬರೀ 66 ಸ್ಥಾನ ಮಾತ್ರಗಳಿಸಿದೆ.. ಜೆಡಿಎಸ್ ಪಕ್ಷ ವಂತೂ 19 ಸ್ಥಾನಕ್ಕೆ ತೃಪ್ತಿಕೊಟ್ಟಕೊಳ್ಳಬೇಕಾಗಿದೆ.. ನಾಲ್ಕು ಸ್ಥಾನಗಳು ಇತರರ ಪಾಲಾಗಿವೆ.. ಅಂದಹಾಗೇ, ಸರ್ಕಾರ ರಚಿಸಲು ಯಾವುದೇ ಪಕ್ಷ 113 ಸ್ಥಾನಗಳನ್ನು ಪಡೆಯಬೇಕು.. ಸದ್ಯ ಕೈ ಪಾಳೆಯ ಮ್ಯಾಜಿಕ್ ನಂಬರ್​ ಗಡಿದಾಟಿ 135 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದ್ರೆ, ಇದೀಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಮಾಸ್ಟರ್‌ ಮೈಂಡ್‌ ಸುನಿಲ್ ಕುನಗೋಳು: ಯಾರು ಈ ಸ್ಟ್ರ್ಯಾಟಜಿ ಸ್ಟಾರ್?

ಕಾಂಗ್ರೆಸ್ ಸೂತ್ರವೇನು?

  • ಐದು ವರ್ಷದ ಆಡಳಿತವನ್ನು ಶೇ.50ರ ಆಧಾರದ (ತಲಾ ಎರಡೂವರೆ ವರ್ಷ) ಹಂಚುವ ಫಾರ್ಮುಲಾ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಇದನ್ನು ಡಿ.ಕೆ.ಶಿವಕುಮಾರ್‌ ಪಾಳೆಯ ಒಪ್ಪುತ್ತಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
  • ಸಿದ್ದರಾಮಯ್ಯ ಮೊದಲು ಸಿಎಂ ಆದ್ರೆ ಎರಡು ವರ್ಷಕ್ಕೆ ಮಾತ್ರ. ನಂತರ ಡಿಕೆ ಶಿವಕುಮಾರ್​ ಸಿಎಂ ಆದ್ರೆ ಮೂರು ವರ್ಷಗಳು ಅನ್ನೋ ಲೆಕ್ಕಾಚಾರ ಕಾಂಗ್ರೆಸ್‌ ಬಳಿ ಇದೆ ಎನ್ನಲಾಗುತ್ತಿದೆ.
  • ಡಿಕೆ ಶಿವಕುಮಾರ್​​ಗೆ ಸಿಎಂ ಹುದ್ದೆ ನೀಡಿದರೆ ಅವರ ಜೊತೆಗೆ ಮೂವರು ಡಿಸಿಎಂಗಳುನ್ನು ಮಾಡುವ ಪ್ಲಾನ್ ಕಾಂಗ್ರೆಸ್​ ಹೈಕಮಾಂಡ್ ಮಾಡಿದೆ.
  • ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಟ್ಟಿಕೊಂಡು ಹಿಂದುಳಿದ ವರ್ಗದ ಒಬ್ಬರು, ದಲಿತ ಸಮುದಾಯದ ಒಬ್ಬರು, ಲಿಂಗಾಯತ ಸಮುದಾಯದ ಒಬ್ಬರು ಡಿಸಿಎಂ ಮಾಡುವ ಸಾಧ್ಯತೆ.

ಮುಂಚೂಣಿಯಲ್ಲಿ ಸಿದ್ದರಾಮಯ್ಯ

ಸದ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಎಂದು ಭಾವಿಸಲಾಗಿದೆ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಗೊಂದಲಗಳಿದ್ದವು. ನಂತರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿಯ ವಿ ಸೋಮಣ್ಣ ಅವರನ್ನು ಸೋಲಿಸಿದ್ದಾರೆ. ಕುರುಬ ಸಮುದಾಯದ ಪ್ರಬಲ ವ್ಯಕ್ತಿಯಾಗಿರುವ ಸಿದ್ದರಾಮಯ್ಯ, ಹಿಂದೂಳಿದ ಎಲ್ಲಾ ಸಮುದಾಯದ ಅಂದರೆ ಅಹಿಂದ ನಾಯಕ ಎಂದು ಹೆಸರಾಗಿದ್ದಾರೆ. ಇನ್ನು 75ರ ಹರೆಯದ ಸಿದ್ದರಾಮಯ್ಯನವರು ಇದು ತಮ್ಮ ಕೊನೆಯ ಚುನಾವಣಾ ಕದನ ಎಂದು ಘೋಷಿಸಿದ್ದಾರೆ. ಹೀಗಾಗಿ ಇವರಿಗೆ ಸಿಎಂ ಹುದ್ದೆ ನೀಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವುದು ಹೈಕಮಾಂಡ್​ನ ಲೆಕ್ಕಾಚಾರವಾಗಿದೆ.

ರೇಸ್​ನಲ್ಲಿ ಡಿಕೆ ಶಿವಕುಮಾರ್

ಇನ್ನು ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿರುವ 60ರ ಹರೆಯದ ಡಿಕೆ ಶಿವಕುಮಾರ್ ಅವರು ಬಿಜೆಪಿಯ ಕಂದಾಯ ಸಚಿವ ಆರ್.ಅಶೋಕ ಅವರನ್ನು ನಿರಾಯಾಸವಾಗಿ ಸೋಲಿಸುವ ಮೂಲಕ ತಮ್ಮ ಭದ್ರಕೋಟೆ-ಕನಕಪುರವನ್ನು ಉಳಿಸಿಕೊಂಡಿದ್ದಾರೆ. ‘ಕನಕಪುರ ಬಂಡೆ’ ಎಂದೇ ಖ್ಯಾತರಾಗಿರುವ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. 1980 ರ ದಶಕದಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತನಿಂದ ಸಚಿವ ಸ್ಥಾನದ ವರೆಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಲು ಪ್ರಮುಖ ಕಾರಣವೆಂದರೆ ಅವರ ಸಮಸ್ಯೆ ನಿವಾರಣಾ ಸಾಮರ್ಥ್ಯ. ಪಕ್ಷಾಂತರದಂಥ ಪಿಡುಗಿನ ಸಂದರ್ಭದಲ್ಲಿ ರೆಸಾರ್ಟ್‌ಗಳಲ್ಲಿ ಶಾಸಕರು ಮತ್ತು ಸಂಸದರನ್ನು ರಕ್ಷಿಸುವ ಮೂಲಕ ಪಕ್ಷದ ನೆರವಿಗೆ ಬಂದಿರುವುದು ಅವರ ಪ್ಲಸ್ ಪಾಯಿಂಟ್ ಆಗಿದೆ.

ಇದನ್ನೂ ಓದಿ: ಕರುನಾಡಲ್ಲೇ ಆವರಿಸಿದ ಕಾಂಗ್ರೆಸ್‌ ಸುನಾಮಿ, ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ

ಪಕ್ಷ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಗಾದಿಯೇರಿ ಆಡಳಿತಾರೂಢ ಬಿಜೆಪಿ ಒಡ್ಡಿದ್ದ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮ ಪಾತ್ರ ಹಿರಿದು ಎಂಬ ಭಾವನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಇದೆ. ಇದೇ ವೇಳೆ ಜನನಾಯಕರಾದ ಸಿದ್ದರಾಮಯ್ಯ ತಮ್ಮ ಬೆನ್ನಿಗಿರುವ ದೊಡ್ಡ ಸಮೂಹವು ಪಕ್ಷಕ್ಕೆ ಬೆಂಬಲ ಧಾರೆಯೆರೆದಿರುವ ಕಾರಣದಿಂದಲೇ ಪಕ್ಷಕ್ಕೆ ಈ ಮಟ್ಟದ ಯಶಸ್ಸು ದೊರಕಿದೆ ಎಂಬ ಪ್ರತಿಪಾದನೆಗೆ ಮುಂದಾಗುತ್ತಾರೆ. ಹೀಗಾಗಿ, ಕೇವಲ ಶಾಸಕರ ಅಭಿಪ್ರಾಯದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸರಳ ಅವಕಾಶ ಹೈಕಮಾಂಡ್‌ಗೆ ದೊರೆಯುವುದಿಲ್ಲ. ಸಂಘರ್ಷವಿಲ್ಲದೆ ಈ ಸಮಸ್ಯೆಯನ್ನು ನಿಭಾಯಿಸಬೇಕಾದರೆ ಕಾಂಗ್ರೆಸ್‌ ಹೈಕಮಾಂಡ್‌ ನೇರ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ತನ್ಮೂಲಕ ಉಭಯ ನಾಯಕರನ್ನು ಒಗ್ಗೂಡಿಸಿ ಸರ್ವ ಸಮ್ಮತ ಅಭಿಪ್ರಾಯ ರೂಪಿಸಬೇಕಾಗುತ್ತದೆ.

ಸಭೆಯಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ?

ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಯಾರು ಮುಂದಿನ ಸಿಎಂ ಅಭ್ಯರ್ಥಿ ಎನ್ನುವುದು ಕೂಡ ಚರ್ಚೆಯಾಗಲಿದೆ. ಯಾರಿಗೆ ಹೆಚ್ಚು ಶಾಸಕರ ಬಲ ಇದೆಯಾ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡುವ ಸಾಧ್ಯತೆಯಿದೆ. ಹೈಕಮಾಂಡ್ ನಿರ್ಧಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ನೂತನ ಶಾಸಕಾಂಗ ನಾಯಕ ಯಾರಾಗುತ್ತಾರೆ ಎನ್ನುವುದು ಕೌತುಕಕ್ಕೆ ಕಾರಣವಾಗಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ