ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿಯೂ ನಾವು ಸ್ಪರ್ಧಿಸುತ್ತೇವೆ. ನವೆಂಬರ್ 1ರಂದು 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಘೋಷಿಸಿದರು. ಜೆಡಿಎಸ್‌ಗೆ ಚುನಾವಣಾ ಅಭ್ಯರ್ಥಿಗಳಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮಗೆ ಅಭ್ಯರ್ಥಿಗಳಿಲ್ಲ ಎಂದಾದರೆ ಬಿಜೆಪಿ ಮತ್ತು ಕಾಂಗ್ರೆಸ್ನವರು ನಮ್ಮ ನಾಯಕರ ಮನೆಬಾಗಿಲು ಬಡಿಯುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.
ಬೇರೆ ಪಕ್ಷಕ್ಕೆ ನಮ್ಮ ಪಕ್ಷದಿಂದ ಹೋಗುವವರು ಯಾರೂ ಇಲ್ಲ. ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರುವವರ ಬಗ್ಗೆಯೂ ನಾನು ಏನೂ ಹೇಳುವುದಿಲ್ಲ. ಶಾಸಕ ಜಿ.ಟಿ.ದೇವೇಗೌಡರು ದೊಡ್ಡಮಟ್ಟದ ಕಾರ್ಯಕ್ರಮ ನಡೆದ ಪಾಲ್ಗೊಳ್ಳುತ್ತಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಡೆಸಿದ ಭಾರತ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಭಾರತ್ ಜೋಡೋ ಯಾತ್ರೆ ಅಲ್ಲ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೋ ಯಾತ್ರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ದೇ ಅವರಿಬ್ಬರನ್ನು ಒಂದು ಮಾಡಲು. ಈ ಅಂಶವು ಗುಂಡ್ಲುಪೇಟೆಯಲ್ಲಿಯೇ ಸಾಬೀತಾಯಿತು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂದಿಗೂ ಒಂದಾಗುವುದಿಲ್ಲ ಎಂದರು.
ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ಅವರ ಅವಧಿಗೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ. ಮೀಸಲಾತಿ ಬಗ್ಗೆ ಹಲವು ಸ್ವಾಮೀಜಿಗಳನ್ನು ರಾಜಕಾರಣಿಗಳೇ ಬೀದಿಗಿಳಿಸಿದ್ದಾರೆ. ಮೀಸಲಾತಿ ಮೂಲಕ ಅಸಮಾನತೆ ದೂರ ಮಾಡಲು ಆಗುವುದಿಲ್ಲ. ಅಂತಿಮವಾಗಿ ಇದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ. ಪ್ರತಿ ಕುಟುಂಬವು ಸ್ವಾಭಿಮಾನದಿಂದ ಬದುಕುವ ಆರ್ಥಿಕ, ಶೈಕ್ಷಣಿಕ ಶಕ್ತಿ ನೀಡುವುದು ನಮ್ಮ ಗುರಿ ಎಂದು ಅವರು ಘೋಷಿಸಿದರು.
ಕೋಲಾರದಲ್ಲಿ ನ 1ರಂದು ಪಂಚರತ್ನ ಯೋಜನೆ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಗಣಪತಿ, ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿ ಯೋಜನೆ ಬಗ್ಗೆ ಮನೆಮನೆಗೆ ಮಾಹಿತಿ ತಲುಪಿಸುವ ಕೆಲಸ ಮಾಡುತ್ತೇವೆ. 4 ಹಂತದಲ್ಲಿ ನಿರಂತರವಾಗಿ ಪಂಚರತ್ನ ಯೋಜನೆ ಕಾರ್ಯಕ್ರಮ ನಡೆಯಲಿದೆ. ಕೆಲವರು ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ ಮಾತನಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪರ್ಯಾಯ ಶಕ್ತಿ ಬಗ್ಗೆ ಜನರಿಗೆ ಒಲವಿದೆ. 2023ಕ್ಕೆ ಕನ್ನಡಿಗರ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಕೆಸಿಆರ್ ಅವರ ದಲಿತ ಬಂಧು ಕಾರ್ಯಕ್ರಮ ಇಷ್ಟ ಆಯಿತು. ರಾಜ್ಯದಲ್ಲಿ ಆ ಯೋಜನೆ ಜಾರಿಗೆ ತರುವ ಕೆಲಸ ಮಾಡುತ್ತೇನೆ ಎಂದು ಅವರು ಇದೇ ಸಂದರ್ಭ ಘೋಷಿಸಿದರು.
ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಗಾರ, ಪಂಚರತ್ನ ಯೋಜನೆಯ ವೆಬ್ಸೈಟ್ ಹಾಗೂ ವಿಡಿಯೊ ಬಿಡುಗಡೆ ಮಾಡಿದರು. ಕಾರ್ಯಾಗಾರದಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಸಾರಾ ಮಹೇಶ್, ಸಿ.ಎಸ್.ಪುಟ್ಟರಾಜು, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಸಿ.ಎನ್.ಮಂಜೇಗೌಡ, ಸರವಣ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು ಈಗ ಗುಂಡಿಗಳೂರು, ಅಧ್ವಾನ ನಗರವಾಗಲು ಪರ್ಸೆಂಟೇಜ್ ಅಕ್ರಮವೇ ಕಾರಣ: ಎಚ್ಡಿ ಕುಮಾರಸ್ವಾಮಿ
Published On - 12:48 pm, Wed, 19 October 22