ಬೆಂಗಳೂರು ಈಗ ಗುಂಡಿಗಳೂರು, ಅಧ್ವಾನ ನಗರವಾಗಲು ಪರ್ಸೆಂಟೇಜ್ ಅಕ್ರಮವೇ ಕಾರಣ: ಎಚ್ಡಿ ಕುಮಾರಸ್ವಾಮಿ
ಕಾಮಗಾರಿಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯೇ ಇಂಥ ಕುಖ್ಯಾತಿಗೆ ಕಾರಣ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ದುರವಸ್ಥೆ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಈವರೆಗೆ ಪಿಂಚಣಿದಾರರೂರು, ಉದ್ಯಾನ ನಗರ, ಸಿಲಿಕಾನ್ ವ್ಯಾಲಿ ಎಂಬೆಲ್ಲಾ ಹೆಸರುಗಳಿದ್ದವು. ಆದರೆ ಈಗ ಗುಂಡಿಗಳೂರು, ಅಧ್ವಾನ ನಗರ, ಗುಂಡಿಗಳ ವ್ಯಾಲಿ ಎಂದಾಗಿದೆ. ಕಾಮಗಾರಿಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯೇ ಇಂಥ ಕುಖ್ಯಾತಿಗೆ ಕಾರಣ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೆಂಗಳೂರಿನ ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾಗಿದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ? ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ. ರಾಜ್ಯ ಬಿಜೆಪಿ ಸರಕಾರಕ್ಕೆ ರಸ್ತೆ ಗುಂಡಿಗಳು ಎಂದರೆ ಬಲು ಇಷ್ಟ. ಗುಂಡಿಗಳು ಬಿದ್ದಷ್ಟೂ ಕಿಸೆಗೆ ಹರಿದು ಬರಲಿದೆ ದುಡ್ಡು. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ, ಸಂಕೋಚ ಎನ್ನುವುದಿಲ್ಲ. ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ಕೊಟ್ಟರೂ ಅಧಿಕಾರಿಗಳು ಭಂಡತನ ಬಿಡುತ್ತಿಲ್ಲ’ ಎಂದು ಅವರು ದೂರಿದ್ದಾರೆ.
‘ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರಕಾರ ಜಾಗತಿಕ ಹೂಡಿಕೆದಾರರ ಸಮಾವೇಶ, ಜಾಗತಿಕ ತಂತ್ರಜ್ಞಾನ ಶೃಂಗ ನಡೆಸುತ್ತಿದೆ. ಇದರ ಜೊತೆಗೆ ‘ರಸ್ತೆ ಗುಂಡಿಗಳ ಶೃಂಗ’ವನ್ನೂ (Potholes Summit) ನಡೆಸಿದರೆ ಇನ್ನೂ ಚೆನ್ನಾಗಿರುತ್ತದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ. ‘ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರಕಾರವೇ ನೇರ ಕಾರಣ. ಮುಗ್ಧ ಜನರ ಸಾವುನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ. ಸಂಬಂಧಿಸಿದ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಅವರು ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಮೃತ ಮಹಿಳೆ ಶ್ರೀಮತಿ ಉಮಾದೇವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ರಾಜ್ಯ ಸರಕಾರ ಅವರಿಗೆ ಸುಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂಬುದು ನನ್ನ ಒತ್ತಾಯ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಫೀಲ್ಡ್ಗಿಳಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಾಲ್ನಡಿಗೆ ಮೂಲಕ ನಗರ ಪರಿಶೀಲನೆ
Published On - 9:56 am, Wed, 19 October 22