ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕ್ಷಣಗಣನೆ ಶುರುವಾಗಿದೆ. ರಾಜಕೀಯ ಗರಿಗೆದರಿದೆ. ಬಿಜೆಪಿ ಲಿಸ್ಟ್ ಬಿಡುಗಡೆಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಅಲರ್ಟ್ ಆಗಿವೆ. ಅಸಲಿ ಆಟ ಈಗ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್(Congress) 2 ಪಟ್ಟಿ, ಜೆಡಿಎಸ್(JDS) ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬಿಜೆಪಿಯು(BJP) 2ನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಹೆಸರು ಪ್ರಕಟಿಸಿತ್ತು. ಸದ್ಯ ಉಳಿದ 12 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಹೆಸರು ಘೋಷಣೆ ಬಾಕಿ ಇದೆ. ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಬನ್ನಿ ರಾಜಕೀಯ ಕುರುಕ್ಷೇತ್ರದಲ್ಲಿ ನಡೆಯುವ ಕ್ಷಣ ಕ್ಷಣದ ಬದಲಾವಣೆ, ಬೆಳವಣಿಗೆಯ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಬೆಂಗಳೂರು: ಪ್ರಚಾರ ನಡೆಸುತ್ತಿದ್ದ ಆಪ್ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ರಘು ಬೆಂಬಲಿಗರಿಂದ ಹಲ್ಲೆ ಆರೋಪ ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲು ಮಾಡಲಾಗಿದೆ. ಮನೋಜ್ ಮತ್ತು ಶಿವಕುಮಾರ್ ಮೇಲೆ ಹಲ್ಲೆ ನಡೆಸಿರುವ ಆರೋಪ ಮಾಡಿದ್ದು, ಮೋಹನ್, ನಾಗರಾಜ್ ಮತ್ತು ಬಿಜೆಪಿ ಬೆಂಬಲಿಗರಿಂದ ಹಲ್ಲೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರು: ಸೋಮಣ್ಣ ಹೆಸರು ಘೋಷಣೆ ಬಳಿಕ ನಿಲುವು ಬದಲಿಸಿದ ಸಿದ್ದರಾಮಯ್ಯ, ವರುಣದಲ್ಲಿ 1 ದಿನ 4 ಕಡೆಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಸೋಮಣ್ಣನಾದ್ರೂ ಬರಲಿ, ಯಾರಾದರೂ ಬರಲಿ ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎದುರಾಳಿ ಯಾರು ಅಂಥಾ ನಾನು ನೋಡಲ್ಲ. ಮತದಾರರ ಮೇಲೆ ನಾನು ವಿಶ್ವಾಸ ಇಟ್ಟಿದ್ದೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ ಎಂದರು.
ಹುಬ್ಬಳ್ಳಿ: ನನಗೆ ಟಿಕೆಟ್ ಸಿಗತ್ತೆ ನೋಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿ ಏರಪೋರ್ಟ್ನಲ್ಲಿ ಮಾತನಾಡಿದ ಅವರು, ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ, ನನ್ನ ಮಗನ ಹೆಸರು ಹೇಳಿಲ್ಲ. ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಜೊತೆ ಸುದೀರ್ಘ ಮೀಟಿಂಗ್ ಆಗಿದೆ.
ನಡ್ಡಾ ಜೊತೆ ಮಾತ್ರ ಮೀಟಿಂಗ್ ಆಗಿದ್ದು, ಒಪನ್ ಆಗಿ ಎಲ್ಲವನ್ನೂ ಹೇಳಿದ್ದೇನೆ. ನಡ್ಡಾ ಅವರು ಬಹಳ ಸಾಂತ್ವನದಿಂದ ಕೇಳಿದ್ದಾರೆ. ಎರಡು ದಿನ ಅವಕಾಶ ಕೊಡಿ ಎಂದಿದ್ದಾರೆ ಎಂದರು.
ಚಿತ್ರದುರ್ಗ: ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಶಿರಸಿಗೆ ತೆರಳಿ ಸ್ಪೀಕರ್ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವಇಚ್ಛೆಯಿಂದ ಬಿಜೆಪಿಗೆ ರಾಜೀನಾಮೆ ಎಂದು ಗೂಳಿಹಟ್ಟಿ ಪತ್ರ ಬರೆದಿದ್ದಾರೆ.
ಬೆಂಗಳೂರು: ಕೆಲವೇ ಹೊತ್ತಿನಲ್ಲಿ ಬಿಜೆಪಿ ಮೂರನೇ ಪಟ್ಟಿ ಪ್ರಕಟ ಸಾಧ್ಯತೆ ಇದೆ. ಈಗಾಗಲೇ 2 ಪಟ್ಟಿಯಲ್ಲಿ 212 ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಿದ್ದು, 3ನೇ ಪಟ್ಟಿಯಲ್ಲಿ 12 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಲಿದೆ.
ಧಾರವಾಡ: ನವಲಗುಂದದಲ್ಲಿ ವಿನೋದ್ ಅಸೂಟಿ ಬೆಂಬಲಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ವಿನೋದ್ಗೆ ಕಾಂಗ್ರೆಸ್ ಟಿಕೆಟ್ ತಪ್ಪುವ ಭೀತಿ ಹಿನ್ನೆಲೆ ಬೆಂಬಲಿಗರಿಂದ ಪ್ರತಿಭಟನೆ ಮಾಡಲಾಗಿದೆ. ವಿನೋದ್ ಅಸೂಟಿ ನವಲಗುಂದ ‘ಕೈ’ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಬ್ರಾಹಿಂಪುರ ರಸ್ತೆ ಬಂದ್ ಮಾಡಿ ‘ಕೈ’ ಕಚೇರಿ ಬಳಿ ಪ್ರತಿಭಟನೆ ಮಾಡಲಾಗಿದೆ.
ಬೆಂಗಳೂರು: ನಾಳೆಯಿಂದ ನಟ ಕಿಚ್ಚ ಸುದೀಪ್ ರಾಜಕೀಯ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮೂಲಗಳ ಪ್ರಕಾರ ನಾಳೆಯಿಂದ ಅಲ್ಲ, ಇನ್ನು ಮೂರ್ನಾಲ್ಕು ದಿನಗಳ ಬಳಿಕ ಪ್ರಚಾರಕ್ಕೆ ತೆರಳುವುದಾ ಮಾಹಿತಿ ನೀಡಲಾಗಿದೆ. ಎರಡನೇ ಪಟ್ಟಿ ಬಿಡುಗಡೆಯ ಬಳಿಕ ಪ್ರಚಾರಕ್ಕೆ ತೆರಳುವ ಸಾಧ್ಯತೆ ಇದೆ.
ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ.ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ನಿವಾಸದ ಬಳಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವುದಾಗಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲೇ ಘೋಷಣೆ ಮಾಡಿದರು.
ಮೈಸೂರು: ಎದುರಾಳಿ ಯಾರು ಅಂತಾ ನಾನು ಯೋಚನೆಯೇ ಮಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ. ನನ್ನ ಕಂಡರೆ ಭಯ ಇರುವುದರಿಂದ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುತ್ತೇನೆ. ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.
ಬೆಳಗಾವಿ: ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಪಕ್ಷ ಬಿಡುತ್ತಿಲ್ಲ. ಅನೇಕ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರವಾಗಿದೆ ಎಂದು ಎಂಎಲ್ಸಿ ಲಕ್ಷ್ಮಣ ಸವದಿ ಹೇಳಿದರು. ನನಗೆ ಆಂತರಿಕವಾಗಿ ಬಹಳಷ್ಟು ನೋವು ಮತ್ತು ಹಿಂಸೆ ಆಗಿದೆ. ಪಕ್ಷ ನನ್ನ ತಾಯಿ ಅಂತಾ ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲು ಆಗಿಲ್ಲ. ಯಾವುದೆ ಸೂಚನೆ ನೀಡದೆ ಡಿಸಿಎಂ ಸ್ಥಾನದಿಂದ ತೆಗೆದ್ರೂ ಸುಮ್ಮನಿದ್ದೆ. ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಟಿಪ್ಪಣಿ ಮಾಡಿಲ್ಲ. ಪಕ್ಷದಿಂದ ಹೊರ ಹೋಗಲು ತೀರ್ಮಾನ ಮಾಡಿದ್ದೇನೆ ಎಂದರು.
ಬೆಳಗಾವಿ: ನಾಳೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಂಎಲ್ಸಿ ಲಕ್ಷ್ಮಣ ಸವದಿ ಹೇಳಿದರು. ನಾಳೆ ಬೆಳಗ್ಗೆ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ವಿಧಾನ ಪರಿಷತ್ ಸಭಾಪತಿಗೆ ಈಗಾಗಲೇ ಸಮಯ ಕೇಳಿದ್ದೇನೆ. ನಾಳೆ ಮಧ್ಯಾಹ್ನ ಸಭಾಪತಿ ಹೊರಟ್ಟಿ ಸಮಯ ಕೊಟ್ಟಿದ್ದಾರೆ. ಇಂದು ರಾತ್ರಿ ಬೆಂಗಳೂರಿಗೆ ಹೋಗಿ, ನಾಳೆ ರಾಜೀನಾಮೆ ಕೊಡ್ತೀನಿ ಎಂದು ಹೇಳಿದರು.
ಚಿಕ್ಕಮಗಳೂರು: ದತ್ತ ಜೆಡಿಎಸ್ ಸೇರ್ಪಡೆ ಏನಿಲ್ಲ, ಅದು ಅವರಿದ್ದ ಮನೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದರು. ಇದು ಅವರ ಕಳೆದ 50 ವರ್ಷದ ಮನೆ, ಅವರಿಗೆ ಅವರ ಮನೆಗೆ ಬರೋದಕ್ಕೆ ಏನು. ದತ್ತ ಅವರಿಗೆ ಜೆಡಿಎಸ್ ತಂದೆ-ತಾಯಿ ಮನೆ ತರ ಬೇರೆ ಏನು ಅಲ್ಲ. ಪಕ್ಷಕ್ಕೆ ಸೇವರು ಕಾರ್ಯಕ್ರಮ ಏನಿಲ್ಲ, ಅವರ ಮನೆಗೆ ಅವರು ಬಂದಿದ್ದಾರೆ. ದೇವೇಗೌಡರೇ ಹೇಳಿದ ಮೇಲೆ ಎಲ್ಲಾ ಮುಗಿಯಿತು ಎಂದರು.
ಬಾಗಲಕೋಟೆ: ಜಿಲ್ಲೆಯ ಬೀಳಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಮುರುಗೇಶ್ ನಿರಾಣಿ ನಾಮಪತ್ರ ಸಲ್ಲಿಸಿದ್ದಾರೆ. 27.22 ಕೋಟಿ ಚರಾಸ್ತಿ, 8.60 ಕೋಟಿ ಸ್ಥಿರಾಸ್ತಿ, ಮುರುಗೇಶ್ ಪತ್ನಿ ಕಮಲಾ ₹38.35 ಕೋಟಿ ಚರಾಸ್ತಿ, ಕಮಲಾ ನಿರಾಣಿ ಒಟ್ಟು ₹23.85 ಕೋಟಿ ಸ್ಥಿರಾಸ್ತಿ, ಮುರುಗೇಶ್ ನಿರಾಣಿ ಹೆಸರಿನಲ್ಲಿ 22.62 ಕೋಟಿ ರೂಪಾಯಿ ಸಾಲ, ಪತ್ನಿ ಕಮಲಾ ನಿರಾಣಿ ಹೆಸರಿನಲ್ಲಿ 47.56 ಕೋಟಿ ರೂಪಾಯಿ ಸಾಲ, ಮುರುಗೇಶ್ ಹೆಸರಲ್ಲಿ ಮೂರು ಕಾರು, ಪತ್ನಿ ಹೆಸರಲ್ಲಿ ಒಂದು ಕಾರು, ಚರಾಸ್ತಿಯಲ್ಲಿಯೇ ಮುರುಗೇಶ್ ನಿರಾಣಿ 350 ಗ್ರಾಂ ಚಿನ್ನ ಹಾಗೂ ಪತ್ನಿ ಕಮಲಾ 1150 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.
ಬಾಗಲಕೋಟೆ: ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸ್ತಿದ್ದ 30 ಲಕ್ಷ ರೂ. ಹಣವನ್ನು ನಗರದ ಹೊಸ ಪ್ರವಾಸಿಮಂದಿರದ ಬಳಿ ಜಪ್ತಿ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ನ ಇತರ ಶಾಖೆಗಳಿಗೆ ಹಣ ಸಾಗಾಟ ಶಂಕೆ ವ್ಯಕ್ತವಾಗಿದೆ. ಶಾಖೆಗಳಿಗೆ ಹಣ ಸಾಗಿಸಲು ಹೊರಟಿದ್ದಾಗಿ ಕಾರು ಚಾಲಕ ಹೇಳಿಕೆ ನೀಡಿದ್ದಾರೆ. ಚುನಾವಣಾ ವೆಚ್ಚ ನಿಗಾ ಸಮಿತಿಯ ಆ್ಯಪ್ನಲ್ಲಿ ದಾಖಲಿಸದ ಹಿನ್ನೆಲೆ ಜಿಲ್ಲಾ ಹಣಕಾಸು ಸಮಿತಿಯಿಂದ ಹಣ ಮುಟ್ಟುಗೋಲು ಹಾಕಲಾಗಿದೆ.
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹಲಸೂರು ಗೇಟ್ ಚೆಕ್‌ಪೋಸ್ಟ್‌ನಲ್ಲಿ ಆಟೋದಲ್ಲಿ 1 ಕೋಟಿ ನಗದು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಚಿಕ್ಕಮಗಳೂರು: ಕಡೂರು ಜೆಡಿಎಸ್ ಅಭ್ಯರ್ಥಿಯಾಗಿ ದತ್ತಾ ನಾಮಪತ್ರ ಸಲ್ಲಿಸ್ತಾರೆ ಎಂದು ದತ್ತಾ ನಿವಾಸದಲ್ಲಿ ರೇವಣ್ಣ ಘೋಷಣೆ ಮಾಡಿದರು. ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ದತ್ತಾ ನಾಮಪತ್ರ ಸಲ್ಲಿಕೆ ದಿನ ದೇವೇಗೌಡರು ಆಗಮಿಸಲಿದ್ದಾರೆ. ಹೆಚ್.ಡಿ.ದೇವೇಗೌಡರ ಮಾತಿಗೆ ನಾವೆಲ್ಲರೂ ಬೆಲೆ ಕೊಡಬೇಕು. ಈ ಹಿಂದೆ ನಡೆದಿದ್ದನ್ನು ಮರೆತು ಹೊಸದಾಗಿ ಪಕ್ಷ ಕಟ್ಟೋಣ ಎಂದು ರೇವಣ್ಣ ಹೇಳಿದರು.
ಬೆಂಗಳೂರು: ಪದ್ಮನಾಭನಗರ ಅಭ್ಯರ್ಥಿಗೆ ಇನ್ನೂ ಬಿ ಫಾರಂ ನೀಡದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆ ಕುತೂಹಲ ಕೆರಳಿಸಿದೆ. ಬಿ ಫಾರಂ ಪಡೆಯಲು ಕಚೇರಿಗೆ ಅಭ್ಯರ್ಥಿ ರಘುನಾಥ್ ನಾಯ್ಡು ಆಗಮಿಸಿದ್ದರು. ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ವದಂತಿ ಬೆನ್ನಲ್ಲೇ ಬಿ ಫಾರಂ ನೀಡದಿರುವುದರಿಂದ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಗದಗ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಭರ್ಜರಿ ಬೇಟೆಯಾಡಿದ್ದು, 8.27 ಲಕ್ಷ ರೂಪಾಯಿ ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ ಪಡೆಯಲಾಗಿದೆ. ಗದಗ ಅಬಕಾರಿ ಉಪ ಆಯುಕ್ತ ಭರತೇಶ್ ನೇತೃತ್ವದಲ್ಲಿ ಏಪ್ರಿಲ್ 12 ರಂದು ರಾತ್ರಿ ಗದಗ ನಗರದ ತಿಲಕ ಪಾರ್ಕ ರಸ್ತೆಯಲ್ಲಿರುವ ಕಬಾಡಿ ವೈನ್ ಲ್ಯಾಂಡ್‍ಗೆ ಅನೀರಿಕ್ಷಿತ ದಾಳಿ ವೇಳೆ ಜರುಗಿದ ತಪಾಸಣಾ ಸಮಯದಲ್ಲಿ ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ದಾಸ್ತಾನು ಮಾಡಿರುವದು ಕಂಡು ವಶಕ್ಕೆ ಪಡೆಯಲಾಗಿದೆ. ತಪಾಸಣಾ ಸಮಯದಲ್ಲಿ ವಿವಿಧ ಬ್ರ್ಯಾಂಡನ್ 1,53,931 ರೂ. ಮೌಲ್ಯದ 796 ಲೀ. ಬಿಯರ್ ಭೌತಿಕ ದಾಸ್ತಾನು ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಹಾಗೂ ರೂ. 6,73,102 ರೂ. ಮೌಲ್ಯದ 1139 ಲೀ. ಮದ್ಯ ಒಟ್ಟಾರೆ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ಹಾಗೂ ಬಿಯರ ದಾಸ್ತಾನನ್ನು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.
ಬೆಂಗಳೂರು: ದೆಹಲಿಯಿಂದ ವಾಪಸಾದ ಬಳಿಕ ನೇರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಗೆ ಜಗದೀಶ್ ಶೆಟ್ಟರ್ ತೆರಳಿದ್ದಾರೆ. ಕಾವೇರಿ ನಿವಾಸದಲ್ಲಿ ಬಿಎಸ್ವೈ ಜೊತೆ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದ್ದಾರೆ. ದೆಹಲಿ ಭೇಟಿ ಬಗ್ಗೆ ಆಶಾವಾದ ಹೊಂದಿರುವ ಜಗದೀಶ್ ಶೆಟ್ಟರ್, ತಮಗೆ ಅಥವಾ ಪುತ್ರನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಮೈಸೂರು: ಜಿ.ಟಿ.ದೇವೇಗೌಡ ನಮಗೆ ಮುಖ್ಯ ಅಲ್ಲ. ನನ್ನ ಮೇಲೆ ಗೌರವ ಇದ್ದರೆ ಜಿಟಿಡಿಗೆ ಒಂದು ಮತ ಹಾಕಬೇಡಿ. ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಅವರನ್ನು ಸೋಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ನನಗೆ ರಾಜಕೀಯವಾಗಿ ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ ಎಂದರು.
ಆನೇಕಲ್: ಮತದಾನಕ್ಕೆ ಐಟಿಬಿಟಿ ಉದ್ಯೋಗಿಗಳ ಅಸಡ್ಡೆ ಹಿನ್ನೆಲೆ ಮುಖ್ಯ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ದಾಖಲೆಯ ಮತದಾನ ಮಾಡಿಸಲು ಮುಂದಾಗಿದ್ದೇವೆ. ಮತದಾನದಲ್ಲಿ ಐಟಿಬಿಟಿ ಉದ್ಯೋಗಿಗಳ ಜಾಗೃತಿ ಮೂಡಿಸುತ್ತಿದ್ದೇವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಮಾರು 2 ಲಕ್ಷ ಐಟಿಬಿಟಿ ಮತದಾರರಿದ್ದಾರೆ. ಮತದಾನದ ದಿನ ಕಂಪನಿಯ ಕೆಲಸ ಬಿಟ್ಟು ರಜೆಯನ್ನು ಮತದಾನಕ್ಕೆ ಬಳಕೆಗೆ ಮನವಿ ಮಾಡಿದ್ದೇವೆ. ಅತ್ತಿಬೆಲೆ, ಜಿಗಣಿ ಇಂಡಸ್ಟ್ರೀಯಲ್ ಏರಿಯಾ, ವಸತಿ ಸಮುಚ್ಚಯಗಳಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ರಾಮನಗರ: ನೂರಕ್ಕೆ ನೂರರಷ್ಟು ಕನಕಪುರದಲ್ಲಿ BJP ಗೆಲುವು ಸಾಧಿಸಲಿದೆ ಎಂದು ಅಶ್ವತ್ಥ್ ನಾರಾಯಣ ಹೇಳಿದರು. ಮಾಗಡಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಗಡಿಯ ಅಭಿವೃದ್ಧಿ ಮಾಡಿದ್ದೇವೆ. ಕನಕಪುರದಿಂದ ಸ್ವರ್ಧೆ ವಿಚಾರವಾಗಿ ನಾವು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಂದಿದ್ದೇವೆ ಎಂದರು.
ಚಿಕ್ಕಬಳ್ಳಾಪುರ: ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕಾಂಗ್ರೆಸ್ನವರು ರಾಜ್ಯದ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಕೆಲವು ಸರ್ವೆಗಳ ಮೂಲಕ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಕುತಂತ್ರ ಚುನಾವಣೆಯಲ್ಲಿ ಸಫಲವಾಗಲ್ಲ. ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪ ಇದ್ದಂತೆ ಎಂದು ಹೇಳಿದರು.
ನನಗೆ ಟಿಕೆಟ್ ಕೈತಪ್ಪಿದ್ದು ಅಥಣಿ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಟಿವಿ9ಗೆ MLC ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಆಹ್ವಾನ ಬಂದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಲಕ್ಷ್ಮಣ ಸವದಿ, ಬಿಜೆಪಿ ಬಿಡುವುದು ನಿರ್ಣಯ ಆದ ಮೇಲೆ ಬರಲಿ ಅಂತಾ ಕೇಳ್ತಿದ್ದಾರೆ. ಹಳೆಯ ನಮ್ಮ ಸ್ನೇಹಿತರು ಕೂಡ ಕರೆಯುತ್ತಿದ್ದಾರೆ. ಬಿಜೆಪಿಯಲ್ಲಿ ನಾನು ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಚುನಾವಣೆ ಹೊರತುಪಡಿಸಿ ಪಕ್ಷಾತೀತವಾಗಿ ಉತ್ತಮ ಸಂಪರ್ಕ ಇದೆ. ಬಹಳಷ್ಟು ಜನ ಬೇರೆ ಬೇರೆ ಕಡೆಯಿಂದ ನನ್ನನ್ನು ಸಂಪರ್ಕ ಮಾಡ್ತಿದ್ದಾರೆ. ಇಂದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಾಳೆಯೇ ತೀರ್ಮಾನ ಮಾಡ್ತೇನೆ ಎಂದರು.
ಮೈಸೂರಿನಲ್ಲಿರುವ ಸಂಸದ ಶ್ರೀನಿವಾಸ್ ಪ್ರಸಾದ್ರನ್ನು ಸಚಿವ ಸೋಮಣ್ಣ ಭೇಟಿಯಾಗಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆ ಹಿನ್ನೆಲೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮೈಸೂರು: ಸಿದ್ದರಾಮಯ್ಯ ನನ್ನ ದೇವರು. ಸಿದ್ದರಾಮಯ್ಯ ಆಣೆ ನಾನು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತೇನೆ ಎಂದು ಭಾಷಣದಲ್ಲಿ ಕೆ ಮರೀಗೌಡ ಸಿದ್ದರಾಮಯ್ಯರನ್ನು ಹೊಗಳಿ ಮಾತನಾಡಿದರು. ನಾನು ಅಪ್ಪಟ ಸಿದ್ದರಾಮಯ್ಯ ಬೆಂಬಲಿಗ. ಬೀರಿಹುಂಡಿ ಬಸವಣ್ಣ ಹಾಗೂ ಮಾವನಹಳ್ಳಿ ಸಿದ್ದೇಗೌಡ ನನ್ನ ಆತ್ಮೀಯರು. ಜಿ.ಟಿ. ದೇವೇಗೌಡರನ್ನು ಈ ಚುನಾವಣೆಯಲ್ಲಿ ಸೋಲಿಸಲೇ ಬೇಕು. ನಾವು ಪಕ್ಷ ಸಂಘಟನೆ ಮಾಡಿದ್ದೇವೆ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ. ಸಿದ್ದೇಗೌಡ ಅಲ್ಲ ಇಲ್ಲಿ ಸಿದ್ದರಾಮಯ್ಯ ಅಭ್ಯರ್ಥಿ ಎಂದರು.
ಬೀದರ್: ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ಚಂದ್ರಾಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ. ಅಪಾರ ಬೆಂಬಲಿಗರೊಂದಿಗೆ ಚಕ್ಕಡಿ ಬಂಡಿಯಲ್ಲಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ಗೆ ಕುಟುಂಬಸ್ಥರು ಸಾಥ್ ನೀಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಗಿದೆ. ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಅವರು ಬೀಳಗಿ ಮಿನಿವಿಧಾನಸೌಧದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಹಾಗೂ ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಕೂಡ ಬನಹಟ್ಟಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಚಿತ್ರದುರ್ಗ ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಮನೆಗೆ ಮಾಜಿ MLC ರಘು ಆಚಾರ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ.ಹೆಚ್.ತಿಪ್ಪಾರೆಡ್ಡಿ, ರಘು ಆಚಾರ್ ನಮ್ಮ ಮನೆಗೆ ಬಂದಿದ್ದರು. ನಮ್ಮೊಂದಿಗೆ ತಿಂಡಿ ಸೇವಿಸಿ ಹಿಂದಿರುಗಿದರು. ಯಾವ ಕಾರಣಕ್ಕೆ ಬಂದಿದ್ದು, ಏನು ಹೇಳುತ್ತಾರೋ ಗೊತ್ತಿಲ್ಲ. ಆಗಾಗ ರಘು ಆಚಾರ್ ನಮ್ಮ ಮನೆಗೆ ಬರುತ್ತಾರೆ ಎಂದರು.
MLC ಸ್ಥಾನಕ್ಕೆ ರಾಜೀನಾಮೆ ನೀಡಲು ಲಕ್ಷ್ಮಣ ಸವದಿ ನಿರ್ಧಾರ ಮಾಡಿದ್ದಾರೆ. ನಾಳೆ ಸಭಾಪತಿ ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ನನಗೆ ಆಹ್ವಾನ ಬರುತ್ತಿದೆ. ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಅಥಣಿಯಲ್ಲಿ ಟಿವಿ9ಗೆ ಎಂಎಲ್ಸಿ ಲಕ್ಷ್ಮಣ ಸವದಿ ಮಾಹಿತಿ ನೀಡಿದರು.
ಕೋಲಾರ ಕ್ಷೇತ್ರದಲ್ಲಿ ಮೊದಲ ನಾಮಪತ್ರ ಸಲ್ಲಿಸಲಾಗಿದೆ. ಕೆ.ಆರ್.ಎಸ್ ಪಕ್ಷದ ಇಂದಿರಾ ರೆಡ್ಡಿ ಅವರು ಚುನಾವಣಾಧಿಕಾರಿ ವೆಂಕಟಲಕ್ಷ್ಮಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೋಲಾರ ತಾಲೂಕು ಕಚೇರಿಯಲ್ಲಿ ಪ್ರಥಮ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಅರಸೀಕೆರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ಸಂತೋಷ್, ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಣ್ಣೀರಿಟ್ಟಿದ್ದಾರೆ. 3 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಸಂತೋಷ್ ಅವರು ಟಿಕೆಟ್ ಕೈತಪ್ಪಿದ ಹಿನ್ನೆಲೆ ಅರಸೀಕೆರೆ ನಿವಾಸದಲ್ಲಿ ಬೃಹತ್ ಸಭೆ ಕರೆದಿದ್ದರು. ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದು ಬೇರೆ ಪಕ್ಷ ಸೇರಬೇಕಾ ಅಥವಾ ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್ ನೀಡಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ನೀಡಲಾಗಿದೆ. ಅಸಮಾಧಾನಗೊಂಡವರನ್ನು ಕರೆದು ನಮ್ಮ ನಾಯಕರು ಚರ್ಚಿಸುತ್ತಾರೆ. ಲಕ್ಷ್ಮಣ ಸವದಿಗೆ ಪಕ್ಷ ಏನೇನು ನೀಡಿದೆ ಅಂತ ಎಲ್ಲರಿಗೂ ಗೊತ್ತಿದೆ. ಸಿಎಂ ಬೊಮ್ಮಾಯಿ, ಬಿಎಸ್ವೈ, ಪಕ್ಷದ ಅಧ್ಯಕ್ಷರು ಕರೆದು ಚರ್ಚಿಸುತ್ತಾರೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ಕವಿತಾ,ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಜೊತೆ ತೆರಳಿ ಕಡೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಕನಿಷ್ಠ ಒಂದು ಲಕ್ಷ ಮತ ಪಡೆಯುತ್ತೇನೆ. ಒಳ್ಳೆಯ ದಿನ ನೋಡಿ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ.ನಾವು ಬೇರೆ ಯಾವುದೇ ವಿಶ್ಲೇಷಣೆ ಮಾಡುವುದಕ್ಕೆ ಹೋಗುವುದಿಲ್ಲ. ಅನುಮಾನವಿದ್ರೆ ಈಗಲೇ ಇವಿಎಂ ಮಷಿನ್ ಪರಿಶೀಲನೆ ಮಾಡಿಕೊಳ್ಳಿ. ಒಂದು ಲಕ್ಷ ಮತ ಹೇಗೆ ಬಂತು ಎಂದು ಅನುಮಾನ ಪಡಬೇಡಿ ಎಂದು ಹಾಸನ ನಗರದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೈಂದೂರು ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದು ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರಿಗೆ ಸಿಎಂ ಆಗಮಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಟ್ಟಸ್ವಾಮಿಗೆ ಲಘು ಹೃದಯಾಘಾತವಾಗಿದೆ. ದಿಲೀಪ್ ಕುಮಾರ್ಗೆ ಗುಬ್ಬಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿದೆ. ರಾತ್ರಿ 11.30ರ ಸಮಯದಲ್ಲಿ ಬೆಟ್ಟಸ್ವಾಮಿಗೆ ಲಘು ಹೃದಯಾಘಾತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ನಾಳೆ ಹಲವು ನಾಯಕರು ಜೆಡಿಎಸ್ ಸೇರುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಮುಳುಗೆ ಹೋಗಿದೆ ಅಂತ ಹೇಳ್ತಿದ್ದರು. ಆದ್ರೆ ಇದೀಗ ನಲವತ್ತು ಜನ ಗೆಲ್ಲೋ ವಿಶ್ವಾಸವಿದೆ. ಮತಪರಿವರ್ತನೆ ಮಾಡೋ ಅನೇಕ ಮೇಟಿಗಳು ಜೆಡಿಎಸ್ ಸೇರ್ತಿದ್ದಾರೆ. ನಾಳೆ ಬೆಂಗಳೂರು ಪಕ್ಷದ ಕಚೇರಿಯಲ್ಲಿ ಅನೇಕರು ಜೆಡಿಎಸ್ ಸೇರ್ತಿದ್ದಾರೆ ಎಂದು ಕಲಬುರಗಿ ನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದ ವೇಳೆಯೇ ನಟ ರಿಷಬ್ ಶೆಟ್ಟಿ ಕೂಡ ಕುಟುಂಬ ಸಮೇತ ದೇವಿಯ ದರ್ಶನ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ನಟ ರಿಷಬ್ ಒಟ್ಟಿಗೆ ತಾಯಿ ದರ್ಶನ ಮಾಡಿದ್ದು ಬಿಜೆಪಿ ಪರ ನಟ ರಿಷಬ್ ಶೆಟ್ಟಿ ಪ್ರಚಾರ ಮಾಡ್ತಾರೆಂದು ಹೇಳಲಾಗುತ್ತಿತ್ತು. ಆದ್ರೆ ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈವರೆಗೆ ನಟ ರಿಷಬ್ ಶೆಟ್ಟಿ ಜತೆ ಯಾವುದೇ ಮಾತುಕತೆ ನಡೆದಿಲ್ಲ. ಮೂಕಾಂಬಿಕೆ ಏನು ಎಂಬ ಆಶೀರ್ವಾದ ಕೊಡುತ್ತಾಳೆ ನೋಡೋಣ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಆಕಸ್ಮಿಕವಾಗಿ ದೇವಸ್ಥಾನದಲ್ಲಿ ನನಗೆ ನಟ ರಿಷಬ್ ಶೆಟ್ಟಿ ಸಿಕ್ಕಿದ್ದಾರೆ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಈ ಹಿಂದೆ ಕೂಡ ನಮ್ಮ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ದಾರೆ. ಬಿಜೆಪಿ, ನಾಯಕತ್ವ ಬಗ್ಗೆ ರಿಷಬ್ ಒಲವಿರುವ ಮಾತಾಡಿದ್ದಾರೆ ಎಂದು ಕೊಲ್ಲೂರು ಮೂಕಾಂಬಿಕಾ ದೇಗುಲ ಬಳಿ ಸಿಎಂ ಬೊಮ್ಮಾಯಿ ತಿಳಿಸಿದರು.
ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಸ್ಟಿ ಸೋಮಶೇಖರ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಚುನಾವಣಾ ಪ್ರಚಾರದ ಭಾಷಣದಲ್ಲಿ ಬಿರಿಯಾನಿ ಊಟದ ವ್ಯವಸ್ಥೆ ಇದೆ ಎಂದು ಸೋಮಶೇಖರ್ ಹೇಳಿದ್ದರು. ಹೀಗಾಗಿ ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವರುಣ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನನ್ನ ರಾಜಕೀಯ ಅನುಭವಕ್ಕೆ 2 ಕ್ಷೇತ್ರಗಳ ಜವಾಬ್ದಾರಿ ಕೊಟ್ಟಿದ್ದಾರೆ. 2 ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಮೈಸೂರಿನಲ್ಲಿ ಟಿವಿ9ಗೆ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ತಿಳಿಸಿದರು. ಸಿದ್ದರಾಮಯ್ಯ ಬಗ್ಗೆ ವರುಣ ಕ್ಷೇತ್ರದ ಜನರಿಗೆ ಈಗಾಗಲೇ ಗೊತ್ತಿದೆ. ವರುಣ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಹೈಕಮಾಂಡ್ ವರುಣ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ಘೋಷಣೆ ಆಗಿದೆ. ಅಸಮಾಧಾನಗೊಂಡವರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಬಿಜೆಪಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ವಿಚಾರಕ್ಕೆ ಕುಮಾರಸ್ವಾಮಿಗೆ ಪಕ್ಷ ಎಲ್ಲಾ ಕೊಟ್ಟಿದೆ, ಏನು ಕಡಿಮೆ ಮಾಡಿದ್ದೇವೆ? ಎಂ.ಪಿ.ಕುಮಾರಸ್ವಾಮಿ ಕರೆದು ಮಾತನಾಡುತ್ತೇನೆ. MLC ಲಕ್ಷ್ಮಣ ಸವದಿರನ್ನೂ ಕೂಡ ಕರೆದು ಮಾತಾಡುತ್ತೇನೆ ಎಂದರು.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮುನೀಂದ್ರ ಕುಮಾರ್ ಅವರು ತಮ್ಮ ಪಕ್ಷ ತಮ್ಮೇಶ್ ಗೌಡ ಹೆಸರು ಘೋಷಣೆ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಮುನೀಂದ್ರ ಕುಮಾರ್ ಬೆಂಬಲಿಗರಿಂದ ಬಿಜೆಪಿ ಸದಸ್ವತ್ಯಕ್ಕೆ ರಾಜೀನಾಮೆ.
ತುಮಕೂರು BJP ಟಿಕೆಟ್ ಸಿಗದಿದ್ದಕ್ಕೆ ಸೊಗಡು ಶಿವಣ್ಣ ತೀವ್ರ ಅಸಮಾಧಾನಗೊಂಡಿದ್ದು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಕಟೀಲುಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇ-ಮೇಲ್ ಮೂಲಕ ರಾಜೀನಾಮೆ ನೀಡಿದ್ದೇನೆ. ತುಮಕೂರು ನಗರ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ. ನಮ್ಮ ಕಾರ್ಯಕರ್ತರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇನೆ. ಪಕ್ಷೇತರ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸಬೇಕಾ ಎಂಬ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ತುಮಕೂರು ನಗರದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಎರಡು ದಿನದಲ್ಲಿ ಗೊಂದಲ ಬಗೆಹರಿಯಲಿದೆ ಎಂದು ಕಲಬುರಗಿ ನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಾಳೆ ಜೆಡಿಎಸ್ 2ನೇ ಪಟ್ಟಿ ಪ್ರಕಟಿಸುತ್ತೇವೆ ಎಂದರು.
ಬಿಎಸ್ವೈ ಆಪ್ತ ರುದ್ರೇಶ್ ವಿರುದ್ಧ ಸೋಮಣ್ಣ ಪುತ್ರ ಅರುಣ್ ದೂರು ನೀಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ಗೆ ದೂರು ನೀಡಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರುದ್ರೇಶ್ ವಾಗ್ದಾಳಿ ನಡೆಸಿದ್ದರು. ಹೀಗಾಗಿ ರುದ್ರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರುಣ್ ಸೋಮಣ್ಣ ಮನವಿ ಮಾಡಿದ್ದಾರೆ.
ಲಕ್ಷ್ಮಣ ಸವದಿ ಮನೆಗೆ ಮನವೊಲಿಸಲು ಹೋದ ಚಿಕ್ಕೋಡಿ ಜಿಲ್ಲಾಧ್ಯಕ್ಷನಿಗೆ ಘೇರಾವ್. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಲಕ್ಷ್ಮಣ ಸವದಿ ನಿವಾಸದ ಮುಂದೆ ರಾಜೇಶ್ ನೇರ್ಲೆ ಅವರಿಗೆ ಸವದಿ ಬೆಂಬಲಿಗರು ಘೇರಾವ್ ಹಾಕಿದರು. ಈ ವೇಳೆ ಬೆಂಬಲಿಗರನ್ನ ಸಮಾಧಾನಪಡಿಸಿ ರಾಜೇಶ್ ನೇರ್ಲೆ ಅವರನ್ನ ಲಕ್ಷ್ಮಣ ಸವದಿ ಕಾರು ಹತ್ತಿಸಿದರು. ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿ, ಜಿಜೆಪಿ ವಿರುದ್ಧ ಧಿಕ್ಕಾರ ಕೂಗಿದ ಬೆಂಬಲಿಗರು.
ಬಿಜೆಪಿ ಟಿಕೆಟ್ ವಂಚಿತರಿಗೆ ಗಾಳ ಹಾಕಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ಟಿಕೆಟ್ ವಂಚಿತ ಆಕಾಂಕ್ಷಿಗಳನ್ನು ಪಕ್ಷಕ್ಕೆ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಹಲವು ನಾಯಕರ ಸಂಪರ್ಕ ಮಾಡಿರುವ ಕುಮಾರಸ್ವಾಮಿ, ಬೆಳಗಾವಿಯ ಪ್ರಬಲ ನಾಯಕ ಲಕ್ಷ್ಮಣ್ ಸವದಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಸವದಿ ಸಂಪರ್ಕ ಮಾಡಿದ್ದಾರೆ. ಆಪ್ತರ ಮೂಲಕ ಸವದಿಯನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ. ಈ ಬಾರಿ ನಾವೇ ಸರ್ಕಾರ ರಚನೆಯನ್ನ ಮಾಡುತ್ತೇವೆ. ಸರ್ಕಾರದಲ್ಲಿ ಉತ್ತಮ ಸ್ಥಾನ ಮಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರಂತೆ.
ನನಗೆ ಮೂಡಿಗೆರೆ ಕ್ಷೇತ್ರದ ಟಿಕೆಟ್ ಕೈತಪ್ಪಲು ಸಿ.ಟಿ.ರವಿ ಕಾರಣ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರಿಗೆ ನಿಷ್ಠರಾಗಿ ಹೋಗಬೇಕು, ಅದು ನನ್ನಿಂದ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಲು ಸಿ.ಟಿ.ರವಿ ಕಾರಣ ಆಗುತ್ತಾರೆ. ದೆಹಲಿಯಲ್ಲಿ ಶಾಸಕ ಸಿ.ಟಿ.ರವಿ ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ. BSY ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡ್ರೆ 50 ಸ್ಥಾನವೂ ಬರಲ್ಲ. ಪಕ್ಷಕ್ಕೆ ನಾನು ಏನು ಅನ್ಯಾಯ ಮಾಡಿದ್ದೇನೆ. ಜನರ ಸೇವೆ ಮಾಡುವ ಶಕ್ತಿ ಇನ್ನೂ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ಗಳ ಪ್ರಚಾರ. ಮಂಡ್ಯ ರಣಾಂಗಣದಲ್ಲಿ ಜ್ಯೂನಿಯರ್ ರೆಬಲ್ ಅಬ್ಬರಿಸಲಿದ್ದಾರೆ. ಸಕ್ಕರೆ ನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಭಿಷೇಕ್ ಅಂಬರೀಶ್ ಪ್ರಚಾರ ಮಾಡಲಿದ್ದಾರೆ. ನಾಮಿನೇಷನ್ ನಂತ್ರ ಪ್ರಚಾರಕ್ಕೆ ತೆರಳಲಿದ್ದಾರೆ . ಏಳು ಕ್ಷೇತ್ರದಲ್ಲೂ ಪ್ರಚಾರ ಮಾಡಲಿದ್ದಾರೆ. ಮುಖ್ಯವಾಗಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ್ಣದಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ ,ಎಸ್.ಪಿ.ಸ್ವಾಮಿ ಪರ ಪ್ರಚಾರ ಮಾಡಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆ ಮುಂದುವರಿದಿದೆ. ಬಿಜೆಪಿ ಕಚೇರಿಗೆ 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಬಿ ಫಾರಂ ಪಡೆಯಲು ಬರುವ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು ಟಿಕೆಟ್ ವಂಚಿತರ ಬೆಂಬಲಿಗರು, ಕಾರ್ಯಕರ್ತರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಚುನಾವಣೆಯಲ್ಲಿ ಒಳ ಮೀಸಲಾತಿ ಕಿಚ್ಚು ಹೆಚ್ಚಾಗಿದ್ದು ಬಿಜೆಪಿಗೆ ಮತ ಹಾಕದಂತೆ ಸಾರ್ವಜನಿಕರಿಂದ ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಿ, ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕಿ ಎಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜ ಅವರು ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಮೂಡಿಗೆರೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ಎಂ.ಪಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಟಿಕೆಟ್ ಕೈ ತಪ್ಪಿದಕ್ಕೆ ಶಾಸಕ ನೆಹರು ಓಲೇಕಾರ ಕೆಂಡಾಮಂಡಲವಾಗಿದ್ದು ಸಿಎಂ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನನ್ನ ಟಿಕೆಟ್ ತಪ್ಪಲು ಸಿಎಂ ಬಸವರಾಜ್ ಬೊಮ್ಮಾಯಿ ಕಾರಣ. ವೈಯಕ್ತಿಕವಾಗಿ ದ್ವೇಷ ಸಾಧಿಸ್ಕೊಂತ ಬಂದಿದ್ದರು. ನನ್ನ ಬೆಳವಣಿಗೆಯನ್ನು ಸಹಿಸದೆ ಟಿಕೆಟ್ ತಪ್ಪಿಸಿದ್ದಾರೆ. ಟಿಕೆಟ್ ಕೊಟ್ಟಿರುವ ಅಭ್ಯರ್ಥಿ ಎಂದು ಕೂಡ ಸಾರ್ವಜನಿಕರ ಜೊತೆ ಬೆರತಿಲ್ಲ. ಎಂದೂ ಪಕ್ಷದ ಧ್ವಜ ಹಿಡಿದು ಕೆಲಸ ಮಾಡಿದವನಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅವರು ಆ ವ್ಯಕ್ತಿಯನ್ನ ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾದ್ಯಕ್ಷ ಸಿದ್ದರಾಜ್ ಮತ್ತು ಬೊಮ್ಮಾಯಿ ಇಬ್ರು ನೇರ ಕಾರಣ. ನಾನು ಬೆಳೆದೆ ಎಂದ್ರೆ ಅವರಿಗೆ ಜಿಲ್ಲೆಯಲ್ಲಿ ಸಮಸ್ಯೆ ಆಗಬಹುದೆಂದು ಟಿಕೆಟ್ ತಪ್ಪಿಸಿದ್ರು. ದಮ್ ತಾಕತ್ ಬಗ್ಗೆ ಮೊನ್ನೆ ಟಿವಿಯಲ್ಲಿ ಮಾತನಾಡಿದನ್ನ ನೋಡಿದ್ದೆನೆ. ಬೊಮ್ಮಾಯಿಗೆ ದಮ್ ತಾಕತ್ ಎಷ್ಟ್ ಇದೆ ಅನ್ನೊದನ್ನ ಈ ಬಾರಿ ತೋರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಟಿಕೆಟ್ ಘೋಷಣೆಯಾಗಿರುವ ಅಭ್ಯರ್ಥಿಗಳಿಗೆ ಇಂದಿನಿಂದ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಿದ್ದಾರೆ. ಈಗಾಗಲೇ 166 ಅಭ್ಯರ್ಥಿಗಳ ಹೆಸರು ಘೋಷಿಸಿರುವ ಕಾಂಗ್ರೆಸ್.
ಬೆಳಗಾವಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ಹೈಕಮಾಂಡ್ ವಿರುದ್ಧ ಆಕಾಂಕ್ಷಿಗಳು ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿ ಉತ್ತರದಲ್ಲಿ ಶಾಸಕ ಅನಿಲ್ ಬೆನಕೆ ಬಂಡಾಯವೆದ್ದಿದ್ದಾರೆ. ಬೈಲಹೊಂಗಲದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ವಿಶ್ವನಾಥ್ ಪಾಟೀಲ್ ಸಜ್ಜಾಗಿದ್ದಾರೆ. ಸವದತ್ತಿಯಲ್ಲಿ ರತ್ನಾ ಮಾಮನಿಗೆ ಟಿಕೆಟ್ ಸಿಕ್ಕಿದ್ದಕ್ಕೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಜಗದೀಶ್ ಶೆಟ್ಟರ್ಗೆ ಟಿಕೆಟ್ ಸಿಕ್ಕೆ ಸಿಗುತ್ತೆ ಎಂದುಕೊಂಡು ಹುಬ್ಬಳ್ಳಿಯ ಕೆಲ ಕಡೆ ಪತ್ನಿ ಶಿಲ್ಪಾ ಶೆಟ್ಟರ್ ಪ್ರಚಾರ ಆರಂಭಿಸಿದ್ದರು. ಆದ್ರೆ ಬಿಜೆಪಿಯ ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಘೋಷಣೆಯಾಗಿಲ್ಲ. ಟಿಕೆಟ್ ಘೋಷಣೆಗೂ ಮುನ್ನವೇ ಜಗದೀಶ್ ಶೆಟ್ಟರ್ ಪರ ವಿವಿಧ ವಾರ್ಡ್ ಗಳಲ್ಲಿ ಶಿಲ್ಪಾ ಶೆಟ್ಟರ್ ಪ್ರಚಾರ ಮಾಡಿದ್ದಾರೆ. ಪ್ರಚಾರ ಮಾಡಿದ್ದ ಶೆಟ್ಟರ್ ಪತ್ನಿಗೂ ಅಸಮಾಧಾನವಾಗಿದೆ.
ಮಂಗಳೂರು: ಟಿಕೆಟ್ ಘೋಷಣೆ ಬಳಿಕ ಸಿಎಂ ಬೊಮ್ಮಾಯಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ಇಂದು ಎರಡನೇ ದಿನದ ಟೆಂಪಲ್ ರನ್ ನಡೆಸಲಿದ್ದಾರೆ. ಸಿಎಂ ಇಂದು ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ಬಳಿಕ ದಕ್ಷಿಣಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸದ್ಯ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ದಾವಣಗೆರೆ ಉತ್ತರ ಕ್ಷೇತ್ರದ ಎಸ್ ಎ. ರವೀಂದ್ರನಾಥ, ಮಾಯಕೊಂಡ ಕ್ಷೇತ್ರದ ಪ್ರೊ. ಲಿಂಗಣ್ಣ ಹಾಗೂ ಚನ್ನಗಿರಿ ಕ್ಷೇತ್ರದ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಕೈತಪ್ಪಿದೆ. ಎಸ್ ಎ ರವೀಂದ್ರನಾಥ್ ಸ್ಪರ್ಧೆಗೆ ನಿರಾಕರಿಸಿದ್ದು ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಸರ್ವೇನಲ್ಲಿ ಹಿನ್ನೆಡೆಯಾದ ಹಿನ್ನೆಲೆ ಮಾಯಕೊಂಡ ಕ್ಷೇತ್ರದ ಹಾಲಿ ಶಾಸಕ ಪ್ರೊ ಲಿಂಗಣ್ಣಗೆ ಟಿಕೆಟ್ ನಿರಾಕರಿಸಲಾಗಿದೆ.
ದೀಪಕ್ ದೊಡ್ಡಯ್ಯಗೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ. ಉತ್ತರಪ್ರದೇಶ, ಗುಜರಾತ್ ಮಾದರಿಯಲ್ಲಿ ಟಿಕೆಟ್ ಘೋಷಣೆಯಾಗಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ. ಮೂಡಿಗೆರೆ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದು ಟಿವಿ9ಗೆ ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದರು.
ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಮಿಸ್ ಆಗಿದ್ದು ಹೈಕಮಾಂಡ್ ವಿರುದ್ಧ ಶಾಸಕ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಹಿರಿಯ ಬಿಜೆಪಿ ಕಾರ್ಯಕರ್ತ ದೀಪಕ್ ದೊಡ್ಡಯ್ಯನಿಗೆ ಹೈಕಮಾಂಡ್ ಮಣೆ ಹಾಕಿದೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಕ್ರೋಶ ಹೊರ ಹಾಕಿದ್ದಾರೆ.
ವರುಣ ಕ್ಷೇತ್ರದಿಂದ ಸಚಿವ ವಿ.ಸೋಮಣ್ಣಗೆ ಟಿಕೆಟ್ ಘೋಷಣೆ ಹಿನ್ನೆಲೆ ಇಂದು ಮೈಸೂರಿನಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಕಾರ್ಯಕರ್ತರ ಸಭೆಗೂ ಮುನ್ನ ಸಚಿವ ವಿ.ಸೋಮಣ್ಣ ಟೆಂಪಲ್ ರನ್ ಮಾಡಲಿದ್ದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 10ಕ್ಕೆ ನಂಜನಗೂಡು ಮಲ್ಲನಮೂಲೆ ಮಠಕ್ಕೆ ಸೋಮಣ್ಣ ಭೇಟಿ ನೀಡಲಿದ್ದು ಬಳಿಕ ನಂಜನಗೂಡು ಶ್ರೀಕಂಠೇಶ್ವರ ದರ್ಶನ ಪಡೆಯಲಿದ್ದಾರೆ. ಟೆಂಪಲ್ ರನ್ ಬಳಿಕ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸಂಸದ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಬೆಳಗ್ಗೆ 11.15ಕ್ಕೆ ಚಾಮರಾಜಪುರ ಬಿಜೆಪಿ ಕಚೇರಿಗೆ ಆಗಮಿಸಿ ಮಧ್ಯಾಹ್ನ 1 ಗಂಟೆಗೆ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಲಿದ್ದಾರೆ.
ಚುನಾವಣೆ ಹಿನ್ನಲೆ ಸರಿಯಾಗಿ ವಾಹನ ತಪಾಸಣೆ ಆಗ್ತಿಲ್ಲ ಎಂದು ಕಮಿಷನರ್ ಗರಂ ಆಗಿದ್ದಾರೆ. ಹೀಗಾಗಿ ಪ್ರತಿನಿತ್ಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಒಂದೊಂದು ದಿನ ಒಂದೊಂದು ಡಿವಿಷನ್ನ ಪೊಲೀಸರ ಜೊತೆ ಮೀಟಿಂಗ್ ನಡೆಸುತ್ತಿದ್ದಾರೆ. ಆಯಾ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗಳ ಜೊತೆ ಸಭೆ ನಡೆಸಿದ್ದು ಈ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ವೈಖರಿ ಮೇಲೆ ಗರಂ ಆಗಿದ್ದಾರೆ.
ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು ಇಂದು ವಿವಿಧ ಪಕ್ಷಗಳ ನಾಯಕರು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬೆಳಗ್ಗೆ 10.45ಕ್ಕೆ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುರುಗೇಶ್ ನಿರಾಣಿ ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ನರಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಿ.ಸಿ.ಪಾಟೀಲ್ ನಾಮಪತ್ರ ಸಲ್ಲಿಸಲಿದ್ದಾರೆ.
Published On - 8:15 am, Thu, 13 April 23