ಕಾಂಗ್ರೆಸ್ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ: ಡಿಕೆ ಶಿವಕುಮಾರ್ ಘೋಷಣೆ
ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಇನ್ನಿಲ್ಲದ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಭರವಸೆಯ ಮೇಲೆ ಭರವಸೆಗಳನ್ನು ನೀಡುತ್ತಿದೆ. ಇದೀಗ ರಾಜ್ಯದಲ್ಲಿ ನಿರುದ್ಯೋಗ ನಿವಾರಿಸಲು ಸರ್ಕಾರಿ ಹುದ್ದೆಗಳ ಭರ್ತಿಯೊಂದಿಗೆ ಖಾಸಗಿ ಉದ್ಯೋಗದ ವಿನಿಮಯ ಕೇಂದ್ರ ಸ್ಥಾಪಿಸುವುದಾಗಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಶತಾಯ ಗತಾಯವಾಗಿ ಪ್ರಯತ್ನಿಸುತ್ತಿರುವ ಕಾಂಗ್ರೆಸ್ (Congress) ಭರವಸೆಯ ಮೇಲೆ ಭರವಸೆಗಳನ್ನು ನೀಡುತ್ತಿದೆ. ಇದೀಗ ರಾಜ್ಯದಲ್ಲಿ ನಿರುದ್ಯೋಗ (Unemployment) ನಿವಾರಿಸಲು ಸರ್ಕಾರಿ ಹುದ್ದೆಗಳ ಭರ್ತಿಯೊಂದಿಗೆ ಖಾಸಗಿ ಉದ್ಯೋಗದ ವಿನಿಮಯ ಕೇಂದ್ರ ಸ್ಥಾಪಿಸುವುದಾಗಿ ಡಿಕೆ ಶಿವಕುಮಾರ್ (DK Shivakumar) ಘೋಷಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ (BJP) ಸರ್ಕಾರದಿಂದ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ, ಕಾಂಗ್ರೆಸ್ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಉದ್ಯೋಗ ವಿನಿಮಯ ಕೇಂದ್ರ (Private employment exchange) ಸ್ಥಾಪಿಸಲಾಗುವುದು. ನಿರುದ್ಯೋಗಿಗಳು ಈ ವಿನಿಯಮ ಕೇಂದ್ರದ ಮೂಲಕ ಉದ್ಯೋಗದ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದರು.
ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ಅವಧಿವರೆಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ವ್ಯಾಸಂಗ ಮಾಡಿದರೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇದಕ್ಕಾಗಿ ಶೀಘ್ರದಲ್ಲೇ ನಾವು ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡುತ್ತೇವೆ. ಎಲ್ಲಾ ನಿರುದ್ಯೋಗಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಿ. ಯಾರಿಗೆ 3ಸಾವಿರ ಬೇಕೋ, ಯಾರಿಗೆ ಒಂದೂವರೆ ಸಾವಿರ ಬೇಕೋ ಇವರೆಲ್ಲರೂ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂಬ ವಿಶ್ವಾಸ ಬಿಜೆಪಿಗೂ ಇದೆ: ಡಿಕೆ ಶಿವಕುಮಾರ್
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ನನಗೂ ಇದೆ. ಬಿಜೆಪಿಯವರಗೂ ಇದೆ ಎಂದು ಹೇಳಿದ ಡಿಕೆ ಶಿವಕುಮಾರ್, ಟಿಕೆಟ್ ವಂಚಿತ ಮುಖಂಡರಿಗೆ ಸಮಾಧಾನಪಡಿಸುತ್ತಿದ್ದೇವೆ ಎಂದರು. ಅಲ್ಲದೆ, ಎಸ್ಸಿ ಎಸ್ಟಿ ಪರಿಶಿಷ್ಟ ಒಂಗಡಕ್ಕೆ ನಮ್ಮ ಬದ್ಧದೆ ತೋರಿಸಿದ್ದೇವೆ. ದೇಶದಲ್ಲಿ ಆಂಧ್ರದಲ್ಲಿ ಒಮ್ಮೆ ಪ್ರಯತ್ನ ನಡೆಯಿತು. ಆನಂತರ ಕರ್ನಾಟಕದಲ್ಲಿ ನಮ್ಮ ಸರ್ಕಾರವು ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಮತ್ತು ಹಣ ಕೊಡಲು ಕಾನೂನನ್ನು ತಂದು ಹೆಚ್ಚಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆವು. ಆದರೆ ಇವತ್ತು ಬಿಜೆಪಿಯವರು 9ನೇ ಶೆಡ್ಯೂಲ್ಗೆ ಸೇರಿಸುತ್ತೇವೆ ಎಂದು ಹೇಳಿದ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಆದರೆ 9ನೇ ಶೆಡ್ಯೂಲ್ಗೆ ಹೋಗಿಲ್ಲ. ಪಾರ್ಲಿಮೆಂಟ್ಗೆ ಹೋಗುತ್ತದೆ ಅಂತ ಅಂದೊಕೊಂಡಿದ್ದೆ. ಆದರೆ ಎಲ್ಲಿಗೂ ಹೋಗಿಲ್ಲ. ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರದ ಸಚಿವರು ಹೇಳುತ್ತಾರೆ. ಮತ್ತೆ ಯಾಕೆ ಈ ವಿಚಾರ ತಂದರು? ಎಂದು ಪ್ರಶ್ನಿಸಿದರು.
ಅಮುಲ್, ಮಹಾರಾಷ್ಟ್ರ ಗಡಿ ವಿಚಾರವಾಗಿ ಕೆಲವರು ಮಾತಾಡುತ್ತಿಲ್ಲ: ಡಿಕೆ ಶಿವಕುಮಾರ್
ಅಮುಲ್, ಮಹಾರಾಷ್ಟ್ರ ಗಡಿ ವಿಚಾರವಾಗಿ ಕೆಲವರು ಮಾತಾಡುತ್ತಿಲ್ಲ. ಹೋರಾಟಗಾರರು ಹಾಗೂ ಕಲಾವಿದರೆಲ್ಲರೂ ಸುಮ್ಮನೇ ಇದ್ದಾರೆ. ಅಮುಲ್, ಮಹಾರಾಷ್ಟ್ರ ಗಡಿ ವಿಚಾರವಾಗಿ ಯಾರೂ ಮಾತಾಡುತ್ತಿಲ್ಲ. ಗಡಿ ಭಾಗದ ನಮ್ಮ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ ಘೋಷಿಸಿದೆ. ಇತಿಹಾಸದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ನೈತಿಕಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ತ್ಯಾಗಕ್ಕೆ ಸಿದ್ಧ: ಡಿಕೆ ಶಿವಕುಮಾರ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆದರೆ ತ್ಯಾಗಕ್ಕೆ ಸಿದ್ಧ ಎಂದು ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಹೇಳಿದರು. ಖರ್ಗೆ ಏನು ಇಚ್ಛೆ ಪಡುತ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು. ಖರ್ಗೆ ಕೈಕೆಳಗೆ ಕೆಲಸ ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ. ಖರ್ಗೆ ನಮ್ಮ ಪಕ್ಷದ ಆಸ್ತಿ, ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ನನಗಿಂತ ರಾಜಕೀಯದಲ್ಲಿ ದೊಡ್ಡವರು ಎಂದು ಹೇಳಿದರು.
ವಿಧಾನಸಭಾ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sat, 8 April 23