ಕಿತ್ತೂರಿನಲ್ಲಿ ಬಂಡಾಯದ ಬಾವುಟ ಹಾರಿಸಲು ಸಜ್ಜಾದ ಡಿಬಿ ಇನಾಮದಾರ್ ಸೊಸೆ ಲಕ್ಷ್ಮೀ
ಕಿತ್ತೂರು ಕ್ಷೇತ್ರದಲ್ಲಿ ಡಿಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್ ಬದಲಾಗಿ ಬಾಬಾಸಾಹೇಬ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ ಬಂಡಾಯದ ಬಾವುಟ ಹಾರಿಸಲು ಲಕ್ಷ್ಮೀ ಇನಾಮದಾರ್ ಮುಂದಾಗಿದ್ದಾರೆ.
ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟಿಕೆಟ್ ಫೈಟ್ ಕೂಡ ಜೋರಾಗಿಯೇ ನಡೆಯುತ್ತಿದೆ. ಕಿತ್ತೂರು ಕ್ಷೇತ್ರದಲ್ಲಿ ಡಿಬಿ ಇನಾಮದಾರ್ (DB Inamdar) ಸೊಸೆ ಲಕ್ಷ್ಮೀ ಇನಾಮದಾರ್ (Lakshmi Inamdar) ಬದಲಾಗಿ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ್ ಪಾಟೀಲ್ (Babasaheb Patil) ಅವರಿಗೆ ಮಣೆ ಹಾಕಿದೆ. ಹೀಗಾಗಿ ಬಿಡಿ ಇನಾಮದಾರ್ ಬಿಟ್ಟು ಉಳಿದ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ನಡುವೆ ಲಕ್ಷ್ಮೀ ಇನಾಮದಾರ್, ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಸ್ವಾಭಿಮಾನದ ಹೆಸರಲ್ಲಿ ಸಿಡಿದೆದ್ದ ಲಕ್ಷ್ಮೀ ಇನಾಮದಾರ್, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ರಾಜಕೀಯ ಪೋಸ್ಟ್ ಕಿತ್ತೂರು ಕ್ಷೇತ್ರದಾದ್ಯಂತ ಚರ್ಚೆ ಹುಟ್ಟು ಹಾಕಿದೆ.
ಕಿತ್ತೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀವೆ ಒಂದು ಪಕ್ಷ, ನೀವೆ ಒಂದು ಚಿನ್ಹೆ. ಈ ಚುನಾವಣೆ ಪ್ರತಿಷ್ಠೆಗಾಗಿ ಅಲ್ಲ ಚೆನ್ನಮ್ಮನ ಕಿತ್ತೂರು ಜನತೆಯ ಸ್ವಾಭಿಮಾನಕ್ಕೆ ಎಂದು ಹೇಳಿ ಕಿತ್ತೂರು ಕ್ಷೇತ್ರದ ಮನೆಮಗಳು ಲಕ್ಷ್ಮಿ ಇನಾಮದಾರ್ ಎಂದು ಫೋಸ್ಟ್ ಮಾಡಿದ್ದಾರೆ. ಸದ್ಯ ಲಕ್ಷ್ಮೀ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಆರಂಭವಾಗಿದ್ದು, ಕ್ಷೇತ್ರದ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಸಚಿವ ಡಿ.ಬಿ ಇನಾಮದಾರ್ ಅವರು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಬೆಂಬಲಿಗರು ಇನಾಮದಾರ್ ಸೊಸೆ ಲಕ್ಷ್ಮಿ ಇನಾಮದಾರ್‌ಗೆ ಟಿಕೆಟ್ ನೀಡಲು ಆಗ್ರಹಿಸಿದ್ದರು. ಆದರೆ ತೀವ್ರ ಪೈಪೋಟಿ ನಡುವೆ ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಮಿ ಇನಾಮದಾರ್ ಬದಲಿಗೆ ಬಾಬಾಸಾಹೇಬ್ ಪಾಟೀಲ್ಗೆ ಮಣೆ ಹಾಕಿದ್ದಾರೆ. ಸದ್ಯ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ: Karnataka Election: ಕಾಂಗ್ರೆಸ್ಗೆ ಬಂಡಾಯದ ಬೇಗುದಿ; ಎಲ್ಲೆಲ್ಲಿ ಯಾರೆಲ್ಲ ಸಿಡಿದೆದ್ದರು? ಇಲ್ಲಿದೆ ಪೂರ್ಣ ವಿವರ
ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಲಕ್ಷ್ಮೀ ಇನಾಮದಾರ್, 40 ವರ್ಷಗಳಿಂದ ಡಿ.ಬಿ.ಇನಾಮದಾರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಅವರಿಗೆ ಹುಷಾರಿಲ್ಲ, ಇಂತಹ ಕಷ್ಟದ ಸಮಯದಲ್ಲಿ ಪಕ್ಷ ಕೈಬಿಟ್ಟಿದೆ. ಈಗ ಯಾರು ನಮಗೆ ಕೈಹಿಡಿತಾರೆ ಅಂಥವರು ದೇವರಾಗುತ್ತಾರೆ. ಡಿ.ಬಿ.ಇನಾಮದಾರ್ ಬಿಟ್ಟು ಕುಟುಂಬಸ್ಥರು ರಾಜೀನಾಮೆ ನೀಡುತ್ತಿವೆ. ಸದ್ಯದಲ್ಲೇ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವ ನೀಡಿದೆ. ಡಿ.ಬಿ ಇನಾಮದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು ಎಂದಿದ್ದರು.
ಹೈಕಮಾಂಡ್ನಿಂದ ಪೋನ್ ಬಂತು ನನ್ನ ಕನ್ವಿನ್ಸ್ ಮಾಡಿದರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೆ ಅದಕ್ಕೆ ನಾನು ಬದ್ಧವಾಗಿದ್ದೆನೆ ಎಂದು ತಿಳಿಸಿದ್ದಾಗಿ ಲಕ್ಷ್ಮೀ ಹೇಳಿಕೆ ನೀಡಿದ್ದರು. ಏನೇ ನಿರ್ಧಾರ ಮಾಡಿರು ಸಹ ಕುಟುಂಬಸ್ಥರು, ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ. ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ, ಆದರೆ ಹೈಕಮಾಂಡ್ಗೆ ತೋರಿಸಿದ್ದೇ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ