ಚಿಕ್ಕಮಗಳೂರು: ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯ ಮೇಲೆ ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತಾ (YSV Datta) ಅವರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದೆ. ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ನಡುವೆ ದತ್ತಾ ವಿರುದ್ಧ ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಕಡೂರಿನಲ್ಲಿ 2-5 ಚೆಕ್ ತೆಗೆದುಕೊಳ್ಳುವುದಿಲ್ಲ, ಅದಕ್ಕೆ ನಾನು ಬಂದಿಲ್ಲ, ಆ ಚೆಕ್ಗಳು ಎಷ್ಟು ಮನೆಯಲ್ಲಿ, ಎಲ್ಲೆಲ್ಲಿ ಇವೆಯೋ ಗೊತ್ತಿಲ್ಲ, ಆ ಚೆಕ್-ಹಣ ವಾಪಸ್ ಬರಲ್ಲ ಎಂದು ವ್ಯಂಗ್ಯವಾಡಿದರು.
ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಮಾತನಾಡಿದ ಅವರು, ನಮ್ಮ ಹಳೇ ಲೀಡರ್ ನನ್ನ ಬಗ್ಗೆ ಬಹಳ ಚಾರ್ಜ್ ಮಾಡಿದ್ದಾರೆ, ಈಗ ಅದು ಬೇಡ. ವೈಎಸ್ವಿ ದತ್ತಾ ಜೆಡಿಎಸ್ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ. ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡರು. ವೈಎಸ್ವಿ ದತ್ತಾರನ್ನು ಎಂಎಲ್ಸಿ ಮಾಡದಿದ್ದರೆ ಕಡೂರು ಜನ ಗುರುತಿಸುತ್ತಿದ್ದರೇ? ಯಾರು ಇಲ್ಲದಾಗ ಪಕ್ಷದ ಗೌರವ ಉಳಿಸಲು ಧನಂಜಯ್ ಬಂದಿದ್ದಾರೆ ಎಂದರು. ಅಲ್ಲದೆ, ವಿಧಾನಸೌಧದಲ್ಲಿ 2ನೇ ಸೀಟಲ್ಲಿ ನನ್ನ ಪಕ್ಕ ಕೂರುತ್ತಿದ್ದರು. ನಾನು ಮಾಡಿದ ಅನ್ಯಾಯವಾದರೂ ಏನು? ಎಂದರು.
ಇದನ್ನೂ ಓದಿ: HD Kumaraswamy: ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲಿಸಿಕೊಡಲು ಬಿಜೆಪಿ ನೆರವು; ಹೆಚ್ಡಿ ಕುಮಾರಸ್ವಾಮಿ
ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂದು ಬಹಳ ನಿರೀಕ್ಷೆಗಳೊಂದಿಗೆ ದತ್ತಾ ಜೆಡಿಎಸ್ ಬಿಟ್ಟುಬಂದಿದ್ದರು. ಅಂತಿಮವಾಗಿ ಕಾಂಗ್ರೆಸ್, ಆನಂದ್ ಅವರಿಗೆ ಮಣೆ ಹಾಕಿದೆ. ಟಿಕೆಟ್ ಆಕಾಂಕ್ಷಿಗಳಾಗಿ ಕಾಂಗ್ರೆಸ್ ಸೇರ್ಪಡೆಯಾದ ಎನ್ ವೈ ಗೋಪಾಲಕೃಷ್ಣ, ದೇವರಾಜ್, ಗುಬ್ಬಿ ಶ್ರೀನಿವಾಸ್, ಪುಟ್ಟಣ್ಣ, ಎಚ್ ನಾಗೇಶ್, ವೀರೇಂದ್ರ ಪಪ್ಪಿ, ಬಾಬುರಾವ್ ಚಿಂಚನಸೂರು, ಕಾಂತರಾಜು, ಎಂಸಿ ಸುಧಾಕರ್, ಕಿರಣ್ ಕುಮಾರ್ಗೆ ಟಿಕೆಟ್ ನೀಡಲಾಗಿದೆ. ಆದರೆ ಈ ಪೈಕಿ ವೈಎಸ್ ವಿ ದತ್ತಾ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರೂ ಅವರಿಗೆ ಟಿಕೆಟ್ ಕೈತಪ್ಪಿದೆ.
ದತ್ತಾ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅವರ ಸಲಹೆಯಂತೆ ದತ್ತಾ ಕೈ ಪಡೆ ಸೇರಿದ್ದರು. ಆದರೆ ಟಿಕೆಟ್ ಕೈತಪ್ಪಿದ್ದು, ಇದಕ್ಕೆ ಕಾರಣ ಡಿಕೆ ಶಿವಕುಮಾರ್ ಜೊತೆಗಿನ ಒಳಮುನಿಸು ಎನ್ನಲಾಗುತ್ತಿದೆ. ಟಿಕೆಟ್ ಕೈ ತಪ್ಪಿದ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ದತ್ತಾ ಅವರು, ಬೆಂಬಲಿಗರ ಸಭೆಯ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ಒಂದೆಡೆ ರೇವಣ್ಣ ಮತ್ತು ಪ್ರಜ್ವಲ್ ಅವರು ದತ್ತಾ ಅವರನ್ನು ಮರಳಿ ಜೆಡಿಎಸ್ಗೆ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ದತ್ತಾ ಅವರು ಯಾವುದೇ ಪಕ್ಷಕ್ಕೆ ಸೇರದೆ ಪಕ್ಷೇತರವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದಾಗ್ಯೂ, ಅವರು ಯಾವ ಕಡೆ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ