ಕೈತಪ್ಪಿದ ಟಿಕೆಟ್: ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಿಗೊಂದು ಮನವಿ ಮಾಡಿದ ದತ್ತಾ
ಕಡೂರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ವೈಎಸ್ವಿ ದತ್ತಾ ಇದೀಗ ಸಿಡಿದೆದ್ದಿದ್ದಾರೆ. ಅಲ್ಲದೇ ಅಭಿಮಾನಿಗಳಗೊಂದು ಬಹಿರಂಗ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು: ಟಿಕೆಟ್ ಖಚಿತ ಎಂದು ಭರವಸೆ ಸಿಕ್ಕ ಮೇಲೆಯೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈಎಸ್ವಿ(YSV Datta) ದತ್ತಾಗೆ ಕಾಂಗ್ರೆಸ್ (Congress) ಟಿಕೆಟ್ ತಪ್ಪಿದೆ. ಕಾಂಗ್ರಸ್ ಸಿಗುತ್ತೆ ಎಂದು ಬಹಳ ನಿರೀಕ್ಷೆಗಳೊಂದಿಗೆ ದತ್ತಾ ಜೆಡಿಎಸ್ (JDS) ಬಿಟ್ಟುಬಂದಿದ್ದರು. ಆದ್ರೆ, ಅಂತಿಮವಾಗಿ ಕಾಂಗ್ರೆಸ್, ಆನಂದ್ ಅವರಿಗೆ ಮಣೆ ಹಾಕಿದೆ. ಇದರಿಂದ ದತ್ತಾ ಅಸಮಾಧಾನಗೊಂಡಿದ್ದು, ಅಭಿಮಾನಿಗಳಿಗೆ ಒಂದು ಬಹಿರಂಗಪತ್ರ ಬರೆದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲು ಅಭಿಮಾನಿಗಳ ಸಭೆ ಕರೆದಿದ್ದಾರೆ.
ಹೌದು…ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ದತ್ತಾ, ಪರ್ಯಾವಾಗಿ ಮಾರ್ಗ ಕಂಡುಕೊಳ್ಳಲು ಬಹಿರಂಗ ಪತ್ರದ ಮೂಲಕ ಅಭಿಮಾನಿಗಳ ಸಭೆ ಕರೆದಿದ್ದಾರೆ. ನನ್ನ ಮತ್ತು ಬೆಂಬಲಿಗರ ಆತ್ಮಗೌರವ ಸ್ವಾಭಿಮಾನಕ್ಕೆ ಅಪಮಾನವಾಗಿದೆ. ಇದೇ ಭಾನುವಾರ(ಏಪ್ರಿಲ್ 09) ಬೆಳಗ್ಗೆ 11ಕ್ಕೆ ಅಭಿಮಾನಿಗಳ ಸಭೆ ಕರೆದಿದ್ದೇನೆ. ಹಣವಿಲ್ಲದ ಜಾತಿ ಇಲ್ಲದ ನನ್ನನ್ನು ದತ್ತಣ್ಣ ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿರುವ ಬೆಂಬಲಿಗರು ಬಂದು ನಿರ್ಧಾರ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ದತ್ತಾ ಅಭಿಮಾನಿಗಳಿಗೆ ಪತ್ರದ ಮೂಲಕ ಸಭೆಗೆ ಆಹ್ವಾನಿಸಿದಿದ್ದಾರೆ.
ಟಿಕೆಟ್ ಆಕಾಂಕ್ಷಿಗಳಾಗಿ ಕಾಂಗ್ರೆಸ್ ಸೇರ್ಪಡೆಯಾದ ಎನ್ ವೈ ಗೋಪಾಲಕೃಷ್ಣ, ದೇವರಾಜ್, ಗುಬ್ಬಿ ಶ್ರೀನಿವಾಸ್, ಪುಟ್ಟಣ್ಣ, ಎಚ್ ನಾಗೇಶ್, ವೀರೇಂದ್ರ ಪಪ್ಪಿ, ಬಾಬುರಾವ್ ಚಿಂಚನಸೂರು, ಕಾಂತರಾಜು, ಎಂಸಿ ಸುಧಾಕರ್, ಕಿರಣ್ ಕುಮಾರ್ಗೆ ಟಿಕೆಟ್ ನೀಡಲಾಗಿದೆ. ಆದರೆ ಈ ಪೈಕಿ ವೈಎಸ್ ವಿ ದತ್ತಾ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರೂ ಅವರಿಗೆ ಟಿಕೆಟ್ ಕೈತಪ್ಪಿದೆ.
ದತ್ತಾ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಸಿದ್ದರಾಮಯ್ಯ ಸಲಹೆಯಂತೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಬಂದಿದ್ದರು. ಕಡೂರು ಕ್ಷೇತ್ರಕ್ಕೆ ಸಹಜವಾಗಿ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವೈಎಸ್ ವಿ ದತ್ತಾ ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ