AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ-ತಾಯಿಯನ್ನು ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್‌ಗೆ ಜೆಡಿಎಸ್ ಬೆಂಬಲ

ದರ್ಶನ್​ ಧ್ರುವನಾರಾಯಣಗೆ ಅನುಕಂಪದ ಅಲೆ ಎದ್ದಿದೆ. ಮಹಾದೇವಪ್ಪ ಟಿಕೆಟ್​ ಬಿಟ್ಟು ಕೊಟ್ಟ ಬೆನ್ನಲ್ಲೇ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದರ್ಶನ್

ತಂದೆ-ತಾಯಿಯನ್ನು ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್‌ಗೆ ಜೆಡಿಎಸ್ ಬೆಂಬಲ
ರಮೇಶ್ ಬಿ. ಜವಳಗೇರಾ
|

Updated on: Apr 07, 2023 | 12:50 PM

Share

ಮೈಸೂರು: ನಂಜನಗೂಡು(nanjangud) ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ (darshan dhruvanarayan) ಅವರು ಕಳೆದ ತಿಂಗಳು ತಂದೆ ಆರ್​ ಧ್ರುವನಾರಾಯಣ(R Dhruvanarayan) ಅವರನ್ನು ಕಳೆದುಕೊಂಡ ನೋವಿನಲ್ಲಿ ಚುನಾವಣೆ ಪ್ರಚಾರಕ್ಕಿಳಿದಿದ್ದರು. ಆದ್ರೆ, ಇದೀಗ ದರ್ಶನ್ ತಾಯಿ ವೀಣಾರನ್ನು ಸಹ ಕಳೆದುಕೊಂಡು ಅನಾಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ವಿರುದ್ಧ ಜೆಡಿಎಸ್(JDS)​ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವರಿಗೆ ಬೆಂಬಲಿಸಲು ದಳಪತಿಗಳು ಮುಂದಾಗಿದೆ. ಈ ಬಗ್ಗೆ ಜೆಡಿಎಸ್​ ನಾಯಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್​ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಅನುಕಂಪದ ಅಲೆಯ ಅಬ್ಬರ, ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ ಭಾವನಾತ್ಮಕ ಪೋಸ್ಟ್​ಗೆ ಭಾರೀ ಮೆಚ್ಚುಗೆ

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತೆನಾಡಿದ ಜಿ.ಟಿ.ದೇವೇಗೌಡ, ದಿವಂಗತ ಆರ್​​.ಧ್ರುವನಾರಾಯಣ ಮಕ್ಕಳು ಅನಾಥರಾಗಿದ್ದಾರೆ. ಧ್ರುವನಾರಾಯಣರ ಇಬ್ಬರು ಮಕ್ಕಳು ಲವ ಕುಶ ರೀತಿ ಕಾಣುತ್ತಿದ್ದಾರೆ. ತಂದೆ ಕಳೆದುಕೊಂಡ ನೋವು ಇರುವಾಗಲೇ ತಾಯಿ ಕಳೆದುಕೊಂಡಿದ್ದಾರೆ. ಇಂತಹ ದುಃಖದಲ್ಲಿರುವವರ ಎದುರು ಸ್ಪರ್ಧಿಸಲು ನಮಗೆ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಸ್ಪರ್ಧೆ ಮಾಡಬೇಕಾ ಬೇಡ್ವಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಮತ್ತೋರ್ವ ಜೆಡಿಎಸ್​ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದ್ದು, ಧ್ರುವನಾರಾಯಣ್ ಅಗಲಿಕೆ ಹಿನ್ನೆಲೆ ದರ್ಶನ್‌ಗೆ ಬೆಂಬಲ ಕೊಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಮೈಸೂರು ಭಾಗದ ಶಾಸಕರು ಮುಖಂಡರ ಜೊತೆ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಕಳೆದ ವಾರ ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ‌ ಚರ್ಚೆ ಮಾಡಿದ್ದರು. ತಂದೆ ಕಳೆದುಕೊಂಡ ಹಿನ್ನೆಲೆ ಬೆಂಬಲ ಕೊಡುವ ಬಗ್ಗೆ ಚರ್ಚೆಯಾಗಿತ್ತು. ಇದೀಗ ದರ್ಶನ್ ತಾಯಿ ಸಹಾ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಖಂಡಿತಾ ಬೆಂಬಲ ನೀಡುತ್ತಾರೆ. ಅವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತಾರೆ. ಖುದ್ದು ಕುಮಾರಸ್ವಾಮಿ ಅವರು ದರ್ಶನ್‌‌ಗೆ ಸಾಂತ್ವನ ಹೇಳಿ ಬೆಂಬಲ‌ ಘೋಷಿಸುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ಈ ಬಾರಿ ನಂಜನಗೂಡು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದರು. ಇನ್ನು ಡಾ. ಹೆಚ್​.ಸಿ ಮಹಾದೇವಪ್ಪ ಸಹ ಇದೇ ನಂಜನಗೂಡ ಕ್ಷೇತ್ರದ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟಿಕೆಟ್​ಗಾಗಿ ಈ ಇಬ್ಬರು ನಾಯಕರು ಭಾರಿ ಕಸರತ್ತು ನಡೆಸಿದ್ದರು. ಮಹಾದೇವಪ್ಪ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಧ್ರುವನಾರಾಐನ ಡಿಕೆ ಶಿವಕುಮಾರ್​ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ, ದುರದೃಷ್ಟವಶಾತ್ ಅವರು ಮಾರ್ಚ್​ 11 ರಂದು ಅಕಾಲಿಕ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಂಜನಗೂಡು ಕಾಂಗ್ರೆಸ್​ ಟಿಕೆಟ್ ಮಹಾದೇವಪ್ಪ ಅವರಿಗೆ ಖಚಿತ ಎನ್ನಲಾಗಿತ್ತು.

ಆದ್ರೆ, ಧ್ರುವನಾರಾಯಣ ಅವರ ಅಭಿಮಾನಿಗಳು ​ಪುತ್ರ ದರ್ಶನ್​ ಅವರಿಗೆ ಟಿಕೆಟ್​ ನಿಡಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಟಿಕೆಟ್​ ಆಕಾಂಕ್ಷಿಯಾಗಿದ್ದ ಮಹಾದೇವಪ್ಪ ಅವರ ಬಳಿ ಮನವಿ ಮಾಡಿದ್ದರು. ಅಂತಿಮವಾಗಿ ಮಾನವೀಯತೆ ಆಧಾರದ ಮೇಲೆ ಮಹಾದೇವಪ್ಪ ಅವರು ಟಿಕೆಟ್​ ರೇಸ್​ನಿಂದ ಹಿಂದೆ ಸರಿದು ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್​ ನೀಡಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾಂಗ್ರೆಸ್​ ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್​ ಘೋಷಣೆ ಮಾಡಿದೆ. ಇದೀಗ ಜೆಡಿಎಸ್​ ಸಹ ದರ್ಶನ್ ಧ್ರುವನಾರಾಯಣ ಅವರ ಬೆಂಬಲಿಸಲು ಮುಂದಾಗಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ