100 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ, ಇಂದೇ ಒಂದೇ ಹಂತದಲ್ಲಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಲಿದ್ಯಾ?
ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಎರಡನೇ ಹಂತದ ಕಸರತ್ತು ಮುಂದುವರೆದಿದೆ. 100 ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಇಂದು ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಒಂದೇ ಹಂತದಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ಯಾ ಎನ್ನುವುದು ಕುತೂಹಲ ಮೂಡಿಸಿದೆ.
ನವದೆಹಲಿ/ಬೆಂಗಳೂರು: ಕರ್ನಾಟ ವಿಧಾನಸಭೆ ಚುನಾವಣೆ (Karnataka Assembly Elections 2023) ಕದನ ಕಣ ರಂಗೇರಿದೆ. ಬಿಜೆಪಿಗಿಂತ (BJP) ಒಂದು ಕೈಮುಂದಿರುವ ಕಾಂಗ್ರೆಸ್ (Congress) ಚುನಾವಣೆ ಘೋಷಣೆಗೂ ಮುಂಚೆಯೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದೀಗ ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಎರಡನೇ ಹಂತದ ಕಸರತ್ತು ಮುಂದುವರೆದಿದೆ. 100 ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಇಂದು(ಏಪ್ರಿಲ್ 04) ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯ ನೇತೃತ್ವ ವಹಿಸಲಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಡಾ. ಜಿ ಪರಮೇಶ್ವರ್ ಸೇರಿದಂತೆ ಕೇಂದ್ರ ಚುನಾವಣಾ ಸಮಿತಿ ಮತ್ತು ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಎದುರಾಳಿಯ ಆಟ ನೋಡಿಕೊಂಡು ಹಂತ ಹಂತವಾಗಿ ಪ್ರಕಟ?
ಇಂದಿನ ಚುನಾವಣಾ ಸಮಿತಿ ಸಭೆಯಲ್ಲಿ ಎಲ್ಲಾ 100 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಆದರೆ ಸಭೆ ಮುಗಿದ ಬಳಿಕ ಎಲ್ಲಾ 100 ಕ್ಷೇತ್ರಗಳಿಗೆ ಒಮ್ಮೆಲೆ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ತೀರ ಕಡಿಮೆ ಇದೆ. ಹಂತ ಹಂತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಮುಖ ಕ್ಷೇತ್ರಗಳ ಆಯ್ಕೆ ಉಳಿಸಿಕೊಳ್ಳಲಿದೆ. ಸಿಇಸಿ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಡುವೆ ಜುಗಲ್ಬಂದಿ ನಡೆಯುವ ಸಾಧ್ಯತೆ ಇದೆ. ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ತೀವ್ರ ಪೈಪೋಟಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 30 ಕ್ಷೇತ್ರಗಳಿಗೆ ಒಂದೇ ಅಭ್ಯರ್ಥಿ ಹೆಸರು ಶಿಫಾರಸು ಮಾಡಲಾಗಿದೆ. ಇನ್ನುಳಿದ 70 ಕ್ಷೇತ್ರಗಳಲ್ಲಿ ಟೈಟ್ ಫೈಟ್ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗಿದೆ. ಆದರೆ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಟಿಕೆಟ್‌ಗಾಗಿ ಕಿತ್ತಾಟ ನಡೆಯುತ್ತಿದೆ.
ಚಿಕ್ಕಮಗಳೂರಿನಲ್ಲಿ ಮೂಲ VS ವಲಸಿಗ ಕಾಂಗ್ರೆಸ್ ಫೈಟ್
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲ, ವಲಸಿಗ ಫೈಟ್ ಜೋರಾಗಿದೆ. ಇತ್ತೀಚೆಗೆ ಬಿಜೆಪಿಯಿಂದ ಬಂದಿರುವ ತಮ್ಮಯ್ಯಗೆ ಟಿಕೆಟ್ ನೀಡದಂತೆ ಮೂಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಇನ್ನು ಕಡೂರಿನಲ್ಲಿ ವೈಎಸ್‌ವಿ ದತ್ತಾ ಹಾಗೂ ಆನಂದ್ ನಡುವೆ ತೀವ್ರ ಪೈಪೊಟಿ ಇದೆ. ಇನ್ನು ತರೀಕೆರೆ ಕ್ಷೇತ್ರದಲ್ಲಿ ಗೋಪಿಕೃಷ್ಣ ಹಾಗೂ ಶ್ರೀನಿವಾಸ್ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಎದುರಾಗಿದೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಚಿಕ್ಕಮಗಳೂರಿನ ಟಿಕೆಟ್ ಆಕಾಂಕ್ಷಿಗಳಿಗೆ ಎರಡು ದಿನ ಕಾಯುವಂತೆ ಸೂಚನೆ ನೀಡಿದ್ದಾರೆ..
ತೇರದಾಳದಲ್ಲಿ ಉಮಾಶ್ರೀ, ಸಿದ್ದು ಕೊಣ್ಣೂರು ನಡುವೆ ಟಿಕೆಟ್ ಫೈಟ್
ಇನ್ನು ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ಹಾಗೂ ಸಿದ್ದು ಕೊಣ್ಣೂರ್ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ಹಾಲಿ ಶಾಸಕರು ಇದ್ದರೂ ಬೆಂಗಳೂರಿನ ಪುಲಕೇಶಿ ನಗರ ಹಾಗೂ ಲಿಂಗಸಗೂರು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಆಗಿರಲಿಲ್ಲ. ಈ ಸಭೆಯಲ್ಲಿ ಯಾರು ಅಭ್ಯರ್ಥಿಗಳು ಎನ್ನುವುದನ್ನು ಕೇಂದ್ರ ಚುನಾವಣಾ ಸಮಿತಿ ಸಭೆ ಇಂದು ನಿರ್ಧಾರ ಮಾಡಲಿದೆ.
ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ್ರಾ ಮಾಜಿ ಸಚಿವ ವಿನಯ್ ಕುಲಕರ್ಣಿ?
ಹಾವೇರಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಸ್ಪರ್ಧೆ ಮಾಡೋದು ಕನ್ಫರ್ಮ್ ಆಗಿದೆ. ಇದೀಗ ಸಿಎಂ ಕಟ್ಟಿಹಾಕಲು ಕಾಂಗ್ರೆಸ್ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಲು ಕಸರತ್ತು ಮಾಡ್ತಿದೆ. ಇಂದಿನ ಸಿಇಸಿ ಸಭೆಯಲ್ಲಿ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯೆ ಟಿವಿ9ಗೆ ಪ್ರತಿಕ್ರಿಯೆ ನೀಡಿರೋ ವಿನಯ್ ಕುಲಕರ್ಣಿ, ನಾನು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್ ಕೇಳಿದ್ದು ನಿಜ. ಆದ್ರೆ ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಯಲು ಕೂಡ ರೆಡಿ ಇರೋದಾಗಿ ಈಗಾಗಲೇ ಹೇಳಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿರುವ ಇನ್ನೊಂದು ಕ್ಷೇತ್ರದ ಬಗ್ಗೆಯೂ ಖಚಿತತೆ ಸಿಗಲಿದೆ.
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 am, Tue, 4 April 23