Karnataka Polls 2023: ಪಕ್ಷ ಬದಲಾಯಿಸಿದವರ ನಡುವೆ ಯಲ್ಲಾಪುರದಲ್ಲಿ ಹೈವೋಲ್ಟೇಜ್​ ಕದನ, ಕ್ಷೇತ್ರದ ಜನರ ಒಲವು ಯಾರ ಕಡೆ?

|

Updated on: Apr 28, 2023 | 10:10 AM

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾದ ಕ್ಷೇತ್ರಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರವೂ ಒಂದು. ಇಲ್ಲಿಂದಲೇ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಕಾರಣ ಸರ್ಕಾರ ಉದಯವಾಗಿತ್ತು. ಇದರಿಂದ ಹೆಬ್ಬಾರ್ ಅವರನ್ನು ಸೋಲಿಸಲು ಕಾಂಗ್ರೆಸ್ ಸರ್ವ ಪ್ರಯತ್ನಗಳನ್ನೂ ನಡೆಸಿದ್ದು, ಈ ಹಿಂದೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರನ್ನ ಹೆಬ್ಬಾರ್ ವಿರುದ್ಧ ಕಣಕ್ಕಿಳಿಸಲಾಗಿದೆ.

Karnataka Polls 2023: ಪಕ್ಷ ಬದಲಾಯಿಸಿದವರ ನಡುವೆ ಯಲ್ಲಾಪುರದಲ್ಲಿ ಹೈವೋಲ್ಟೇಜ್​ ಕದನ, ಕ್ಷೇತ್ರದ ಜನರ ಒಲವು ಯಾರ ಕಡೆ?
ವಿಎಸ್​ ಪಾಟೀಲ್​, ಶಿವರಾಮ ಹೆಬ್ಬಾರ್​
Follow us on

ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ ಶಿವರಾಮ ಹೆಬ್ಬಾರ್(Arbail Shivaram Hebbar) ಸತತವಾಗಿ ಎರಡು ಬಾರಿ ಕಾಂಗ್ರೆಸ್​ನಿಂದ ಶಾಸಕರಾಗಿ ಆಯ್ಕೆಯಾಗಿ, ನಂತರ 2019ರಲ್ಲಿ ಬಿಜೆಪಿಗೆ ಸೇರಿದ ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿದ್ದರು. ಇದರಿಂದ ಅಂದಿನ ಸರ್ಕಾರವೇ ಉರುಳಿತ್ತು. ಇದೇ ಕಾರಣಕ್ಕಾಗಿ ಯಲ್ಲಾಪುರ(Yellapur) ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಹೇಗಾದರೂ ಹೆಬ್ಬಾರ್ ಅವರನ್ನ ಸೋಲಿಸಲೇಬೇಕೆಂಬ ಹಠಕ್ಕೆ ಕಾಂಗ್ರೆಸ್ ಬಿದ್ದಿದ್ದು, ಬಿಜೆಪಿಯಿಂದ ಇದೇ ಹೆಬ್ಬಾರ್ ವಿರುದ್ಧ ಸೋತಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್(V S Patil) ಸಹ ಹಿಂದೆ ಉಪಚುನಾವಣೆಯಲ್ಲಿ ಹೆಬ್ಬಾರ್ ಅವರನ್ನು ಬೆಂಬಲಿಸಿದ್ದರು. ಈಗ ಅದೇ ವಿ.ಎಸ್.ಪಾಟೀಲ್ ಕಳೆದ ವರ್ಷ ಕಾಂಗ್ರೆಸ್ ಸೇರಿದ್ದು, ಹೆಬ್ಬಾರ್ ವಿರುದ್ಧ ಸ್ಪರ್ಧಿಸಲು ಅವರಿಗೆ ಟಿಕೆಟ್ ಅಂತಿಮವಾಗಿದೆ. ಇದರಿಂದ ಮತ್ತೊಮ್ಮೆ ಅದೇ ಹಿಂದಿ‌ನ ಜಿದ್ದಾಜಿದ್ದಿ ಕಾಣಲಿದ್ದು, ಅದೇ ಹಳೆ ವೈರಿಗಳ ನಡುವೆ ಚುನಾವಣಾ ರಾಜಕಾರಣ ನಡೆಯಲಿದೆ.

ಯಲ್ಲಾಪುರ ಕ್ಷೇತ್ರ ಮರುವಿಂಗಡನೆ ಆದ ನಂತರ ನಾಲ್ಕು ಚುನಾವಣೆ ಎದುರಿಸಿದೆ. ಇದರಲ್ಲಿ ಮೂರು ಬಾರಿ ಹೆಬ್ಬಾರ್ ವರ್ಸಸ್ ಪಾಟೀಲ್ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ನಡೆದುಕೊಂಡು ಬಂದಿದ್ದಾರೆ. ಅದರಲ್ಲಿ 2008ರಲ್ಲಿ ಒಮ್ಮೆ ಬಿಜೆಪಿಯಿಂದ ವಿ.ಎಸ್.ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರೆ, ನಂತರದ ಮೂರು ಚುನಾವಣೆಯಲ್ಲಿ ಹಾಲಿ ಸಚಿವ ಹೆಬ್ಬಾರ್ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಉಪ ಚುನಾವಣೆಯಲ್ಲಿ ಮಾತ್ರ ಹಿಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಹೆಬ್ಬಾರ್ ಎದುರಾಳಿಯಾಗಿದ್ದರು.

ಇದನ್ನೂ ಓದಿ:ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ: ಸಿದ್ದರಾಮಯ್ಯಗೆ ಸಂಸದ ಪ್ರತಾಪ್​ ಸಿಂಹ​ ಎಚ್ಚರಿಕೆ

ಶಿವರಾಮ ಹೆಬ್ಬಾರ್ , ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ನಡುವೆ ಶೀತಲ ಸಮರ

ಶಿವರಾಮ ಹೆಬ್ಬಾರ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ನಡುವೆ ಮೊದಲಿನಿಂದಲೂ ಶೀತಲ ಸಮರವಿದ್ದು, ರಾಜಕೀಯವಾಗಿ ಇಬ್ಬರಿಗೂ ಅಷ್ಟಕ್ಕಷ್ಟೇ. ಇದೇ ಕಾರಣಕ್ಕೆ ಉಪ ಚುನಾವಣೆಯಲ್ಲಿ ಹೆಬ್ಬಾರ್ ಅವರನ್ನು ಸೋಲಿಸಲು ದೇಶಪಾಂಡೆ ಸಾಕಷ್ಟು ಶ್ರಮಪಟ್ಟಿದ್ದರಾದ್ರೂ, ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ವಿ.ಎಸ್.ಪಾಟೀಲ್ ಅವರನ್ನ ಪಕ್ಷಕ್ಕೆ ಕರೆತಂದು ಅವರನ್ನು ಹುರಿಗೊಳಿಸುವ ಕೆಲಸ ನಡೆದಿದೆ.

ಕ್ಷೇತ್ರದಲ್ಲಿ ಬ್ರಾಹ್ಮಣ, ನಾಮಧಾರಿ, ಲಿಂಗಾಯತ ಮತಗಳು ನಿರ್ಣಾಯಕ

ಹೌದು ಕ್ಷೇತ್ರದಲ್ಲಿ ಬ್ರಾಹ್ಮಣ, ನಾಮಧಾರಿ, ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದು, ಇಲ್ಲಿ ಅಲ್ಪ ಸಂಖ್ಯಾತರು, ದಲಿತ ಮತಗಳೂ ಸಾಕಷ್ಟಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ ಸೇರಿದ ವಿ.ಎಸ್. ಪಾಟೀಲ್​ಗೆ ಟಿಕೆಟ್ ನೀಡಿ, ಹವ್ಯಕ ಮತಗಳನ್ನೂ ಪಡೆದು ಉಳಿದ ಸಾಂಪ್ರದಾಯಿಕ ಮತಗಳೊಂದಿಗೆ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ಇಲ್ಲಿನ ಜಾತಿವಾರು ಲೆಕ್ಕಾಚಾರ ನೋಡಿದರೆ ಲಿಂಗಾಯತ-19,614, ಹವ್ಯಕ ಬ್ರಾಹ್ಮಣ- 29,211, ನಾಮಧಾರಿ- 24,716, ಮುಸ್ಲಿಂ- 23,617, ಮರಾಠ- 21,654, ಗೌಳಿಗಳು-13,365, ಸಿದ್ದಿಗಳು-10,000, ಕ್ರಿಶ್ಚಿಯನ್ – 6383, ಎಸ್‌ಸಿ/ ಎಸ್‌ಟಿ- 12,326, ಇತರೆ-18,588 ಇದ್ದು, ಒಟ್ಟು 1,79,474 ಮತಗಳು ಕ್ಷೇತ್ರದಲ್ಲಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ: ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು

ಇನ್ನು ಯಲ್ಲಾಪುರದಲ್ಲಿ ಕಾಂಗ್ರೆಸ್ ಕೂಡ ಉತ್ತಮ ಹಿಡಿತ ಹೊಂದಿದ್ದು, ಹೆಬ್ಬಾರ್ ಅವರನ್ನು ಸೋಲಿಸಲೇ ಬೇಕು ಎಂಬ ಪಣತೊಟ್ಟಿದೆ.‌ ಇಲ್ಲಿ ಜೆಡಿಎಸ್ ಅಥವಾ ಪಕ್ಷೇತರರು ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ.‌ ಯಲ್ಲಾಪುರ ಕ್ಷೇತ್ರದಲ್ಲಿ ಹೆಬ್ಬಾರ್ ಪ್ರಭಾವ ಸಾಕಷ್ಟಿದ್ದು, ಸತತ ಮೂರು ಬಾರಿ ಗೆದ್ದಿರುವ ಕಾರಣ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಇದರಿಂದ ಹಳೇ ಎರಡು ಹುಲಿಗಳ ನಡುವಿನ ಕದನದಿಂದ ಕ್ಷೇತ್ರ ಸಾಕಷ್ಟು ಗಮನ ಸೆಳೆದಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಸೇರುತ್ತದೆ ಎಂಬುದು ಕಾದು ನೋಡಬೇಕಿದೆ.

ಮತದಾರರ ಒಲವು ಯಾರ ಕಡೆ?

ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಒಲವು ಇದೆ. ಇದಕ್ಕೆ ಕಾರಣ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್. ಪ್ರವಾಹ ಪರಿಸ್ಥಿತಿ, ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರೊಂದಿಗೆ ಬೆರೆತಿದ್ದು, ಹಿಂದುತ್ವ, ಹೆಬ್ಬಾರ್ ಸರಳತೆ ಜತೆಗೆ ಚುನಾವಣೆ ಸಂದರ್ಭದಲ್ಲಿ ಚೆಲ್ಲುವ ಹಣ ಕೂಡ ಇವರಿಗೆ ಪ್ಲಸ್ ಆಗಲಿದೆ. ಇನ್ನು ಬಿಜೆಪಿಗೆ ಮೈನಸ್ ನೋಡುವುದಾದರೆ ಪಕ್ಷದ ಮುಖಂಡರ ಒಳ ಜಗಳ ಹೆಚ್ಚಿದ್ದು, ಹಿರಿಯ ನಾಯಕರಿಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ.

ಇದನ್ನೂ ಓದಿ:ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಡಿಎಂಕೆ ಫೈಲ್ಸ್ ; ಇದರಲ್ಲೇನಿದೆ?

ಕಾಂಗ್ರೆಸ್​ನ ಪ್ಲಸ್ ಮತ್ತು ಮೈನಸ್

ಬಿಜೆಪಿಯಲ್ಲಿದ್ದ ಮಾಜಿ ಶಾಸಕ ವಿ.ಎಸ್ ಪಾಟೀಲ್ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿರುವುದು, ಜೊತೆಗೆ ಹಾಲಿ ಸಚಿವ ಹೆಬ್ಬಾರ್ ಮೇಲೆ ಮೂಲ ಬಿಜೆಪಿಗರು ಮುನಿಸಿಕೊಂಡಿರುವುದು ಕಾಂಗ್ರೆಸ್​ಗೆ ಪ್ಲಸ್​ ಆಗಲಿದೆ. ಇನ್ನು ಮೈನಸ್​ ನೋಡುವುದಾದರೆ ಕಾಂಗ್ರೆಸ್​ ಪಕ್ಷ ಸಂಘಟನೆಯಲ್ಲಿ ಸೋತಿದೆ, ಪ್ರತಿ ಬಾರಿ ಹೊಸಬರನ್ನು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು, ಉತ್ತಮ ನಾಯಕನನ್ನು ಹುಟ್ಟುಹಾಕದಿರುವುದು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಇಲ್ಲದಿರುವುದು ಕಾಂಗ್ರೆಸ್​ಗೆ ಮುಳುವಾಗಿದೆ. ಒಟ್ಟಿನಲ್ಲಿ ಈ ಬಾರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಿದ್ದು, ಹಳೇ ಹುಲಿಗಳೇ ಪಕ್ಷಗಳನ್ನು ಬದಲಾಯಿಸಿಕೊಂಡು ಮತ್ತೆ ಗುದ್ದಾಡಲು ನಿಂತಿವೆ.‌ ವಿಜಯ ದೇವತೆ ಯಾರ ಪಾಲಿಗೆ ಒಲಿಯುವಳು ಎಂದು ಕಾದು ನೋಡಬೇಕಷ್ಟೇ.

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ