ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು, ನಗದು ಹಾಗೂ ಉಡುಗೊರೆಗಳ ಹಂಚಿಕೆ ಜೋರಾಗಿದೆ. ಈ ಮಧ್ಯೆ, ರಾಜ್ಯದಾದ್ಯಂತ ಕಳೆದ ಒಂದು ವಾರದ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳು, ಪೊಲೀಸರು 69.36 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ನೀತಿನ ಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ನಂತರ ಇಷ್ಟೊಂದು ಮೊತ್ತದ ನಗದು, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ನೀತಿ ಸಂಹಿತೆ ಜಾರಿಯಾದ ನಂತರ ಈವರೆಗೆ ವಶಪಡಿಸಿಕೊಂಡಿರುವುದರಲ್ಲಿ 22.75 ಕೋಟಿ ರೂ. ನಗದು, 12 ಕೋಟಿ ರೂ. ಮೌಲ್ಯದ ಉಡುಗೊರೆ ವಸ್ತುಗಳು ಸೇರಿವೆ. ನಗದು, ಇತರೆ ವಸ್ತುಗಳು, ಮದ್ಯ, ಮಾದಕ ದ್ರವ್ಯ ಸೇರಿದಂತೆ ಒಟ್ಟು 69,36,17,467 ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸುಮಾರು 526 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದೂ ತಿಳಿಸಿದೆ.
ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಟೋಲ್ ಬಳಿ ಸುಮಾರು 56 ಲಕ್ಷ ರೂ. ದಾಖಲೆ ಇಲ್ಲದ ನಗದು ವಶಪಡಿಸಿಕೊಳ್ಳಲಾಗಿದೆ. ಎಟಿಎಂಗಳಿಗೆ ತುಂಬಿಸಲು ಹಣ ಕೊಮಡೊಯ್ಯುವ ವಾಹನಗಳಲ್ಲಿ ಈ ನಗದನ್ನು ಕೊಂಡೊಯ್ಯಲಾಗುತ್ತಿತ್ತು. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಈ ನಗದು ಸಾಗಾಟ ನಡೆದಿತ್ತು. ಅನುಮಾನ ಬಂದ ಕಾರಣ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದು, ಚಾಲಕ, ಗನ್‌ಮ್ಯಾನ್ ಮತ್ತು ಮೇಲ್ವಿಚಾರಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಈ ಮಧ್ಯೆ, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಅಧಿಕಾರಿಗಳು ಬುಧವಾರ 3.6 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ವಾಹನದಿಂದ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಟಾಟಾ ಏಸ್ ಮಿನಿ ಗೂಡ್ಸ್ ಟ್ರಕ್‌ನಿಂದ 7 ಲಕ್ಷ ರೂಪಾಯಿ ಮೌಲ್ಯದ ಉಚಿತ ವಸ್ತುಗಳು ಮತ್ತು ಉಡುಗೊರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಕುಕ್ಕರ್, ಗಡಿಯಾರಗಳು, ವಾಲೆಟ್ಗಳು ಹಾಗೂ ಹ್ಯಾಂಡ್ಬ್ಯಾಗ್ಗಳು ಸೇರಿವೆ. ಚಾಲಕ ಗುರುರಾಜ್ನನ್ನು ವಿಚಾರಣೆಗೊಳಪಡಿಸಿದಾಗ ಯಾವುದೇ ದಾಖಲೆ ಇಲ್ಲದಿರುವುದು ತಿಳಿದು ಬಂದಿದೆ.
ಗದಗ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.45 ಕೋಟಿ ಹಣ ಜಪ್ತಿ ಮಾಡಲಾಗಿದೆ. ಗದಗ ಹೊರವಲಯದ ದಂಡಿನ ದುರ್ಗಮ್ಮ ದೇಗುಲ ಬಳಿ 95 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಗದಗ ತಾಲೂಕಿನ ದುಂದೂರು ಚೆಕ್ಪೋಸ್ಟ್ನಲ್ಲಿ 50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಇದನ್ನು ಹುಬ್ಬಳ್ಳಿಯಿಂದ ಗಜೇಂದ್ರಗಡಕ್ಕೆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ‘ಟಿವಿ9’ ಗೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಆರ್ಟಿ ನಗರದಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 231 ಕುಕ್ಕರ್ಗಳ ಜಪ್ತಿ ಮಾಡಿದ್ದಾರೆ. ಇವುಗಳನ್ನು ಮತದಾರರಿಗೆ ಹಂಚುವುದಕ್ಕಾಗಿ ಖಾಲಿ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಪೈಕಿ ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾವಚಿತ್ರವಿರುವ 60 ಕುಕ್ಕರ್ಗಳನ್ನೂ ಜಪ್ತಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 11.49 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಧಾರವಾಡ ತಾಲೂಕಿನ ತೇಗೂರು ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 710 ಗ್ರಾಂ ಚಿನ್ನಾಭರಣ ವಶಡಿಸಿಕೊಳ್ಳಲಾಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ನಲ್ಲಿ ರಮೇಶ್ ನಾಯಕ್ ಎಂಬವರು ಚಿನ್ನಾಭರಣ ತೆಗೆದುಕೊಂಡು ಪ್ರಯಾಣಿಸುತ್ತಿದ್ದರು. ಸುಮಾರು 44 ಲಕ್ಷ ಮೌಲ್ಯದ ಆಭರಣಗಳನ್ನು ಗರಗ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Wed, 5 April 23