AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ; ಖಾಸಗಿ ಬಸ್​ನಲ್ಲಿ ಬರುತ್ತಿದ್ದ ವ್ಯಕ್ತಿಯ ಬ್ಯಾಗ್​​ನಲ್ಲಿತ್ತು 2 ಕೋಟಿ ರೂ!

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್​​ನಲ್ಲಿ ಬುಧವಾರ ಬೆಳಗಿನಜಾವ ನಾಲ್ಕು ಗಂಟೆ ಸುಮಾರಿಗೆ ಪೊಲೀಸರು ಖಾಸಗಿ ಬಸ್ ತಪಾಸಣೆ ನಡೆಸಿದ್ದು, ಪ್ರಯಾಣಿಕರೊಬ್ಬರ ಬ್ಯಾಗ್​ನಲ್ಲಿ 2 ಕೋಟಿ ರೂ. ನಗದು ದೊರೆತಿದೆ.

ಬೆಳಗಾವಿ; ಖಾಸಗಿ ಬಸ್​ನಲ್ಲಿ ಬರುತ್ತಿದ್ದ ವ್ಯಕ್ತಿಯ ಬ್ಯಾಗ್​​ನಲ್ಲಿತ್ತು 2 ಕೋಟಿ ರೂ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Apr 05, 2023 | 7:12 PM

Share

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣಾ (Karnataka Assembly Election) ಅಖಾಡ ರಂಗೇರುತ್ತಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಯಾವುದೇ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ನಗದು ರಾಜ್ಯಕ್ಕೆ ಬರುತ್ತಿದೆ. ಬೆಳಗಾವಿ (Belagavi) ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಕೋಟ್ಯಂತರ ರೂಪಾಯಿ ನಗದು ಈಗಾಗಲೇ ಜಪ್ತಿ ಮಾಡಿದ್ದಾರೆ. ಅಡ್ಡ ದಾರಿ ಹಿಡಿದು ಪ್ರಯಾಣಿಕರ ಸೊಗಿನಲ್ಲಿ ಬಸ್​​ಗಳಲ್ಲಿ ಹಣ ಸಾಗಿಸುತ್ತಿರುವ ಕಿರಾತಕರಿಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ. ಅಭ್ಯರ್ಥಿಗಳು ಮತದಾರರಿಗೆ ಆಮಿಷಗಳನ್ನು ಒಡ್ಡುವುದು, ಉಡುಗೊರೆಗಳನ್ನು ನೀಡುವುದು, ಹಣ ಕೊಡುವುದನ್ನು ಮಾಡುತ್ತಾರೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಚೆಕ್ ಪೋಸ್ಟ್​​ಗಳಲ್ಲಿ ತಪಾಸಣೆ ಜೋರಾಗಿ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಅಪಾರ ಪ್ರಮಾಣದಲ್ಲಿ ನಗದು ಬರುತ್ತಿದ್ದು ಇದರ ಮೇಲೆಯೂ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಈಗಾಗಲೇ ಕೋಟ್ಯಂತರ ರೂಪಾಯಿ ಜಪ್ತಿ ಮಾಡಿಕೊಂಡಿದ್ದಾರೆ.

ಚೆಕ್​ಪೋಸ್ಟ್​​ಗಳಲ್ಲಿ ಪೊಲೀಸರ ಕಣ್ಣುತಪ್ಪಿಸಿ ನಗದು ಒಯ್ಯಲು ಖದೀಮರು ಕಳ್ಳ ದಾರಿ ಹಿಡಿದಿದ್ದಾರೆ. ಬಸ್​ಗಳಲ್ಲಿ ದಾಖಲೆ ಇಲ್ಲದ ಹಣ ಸಾಗಿಸುವ ಕೃತ್ಯ ಎಸಗುತ್ತಿದ್ದಾರೆ. ಆದರೆ, ಖದೀಮರು ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಕಳ್ಳಾಟಕ್ಕೆ ತಡೆಯೊಡ್ಡುವ ಕೆಲಸ ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್​​ನಲ್ಲಿ ಬುಧವಾರ ಬೆಳಗಿನಜಾವ ನಾಲ್ಕು ಗಂಟೆ ಸುಮಾರಿಗೆ ಪೊಲೀಸರು ಖಾಸಗಿ ಬಸ್ ತಪಾಸಣೆ ನಡೆಸಿದ್ದಾರೆ. ಮುಂಬೈನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್​​ನಲ್ಲಿ ಪ್ರಯಾಣಿಕರ ಸೊಗಿನಲ್ಲಿದ್ದ ರಾಜಸ್ಥಾನ ಮೂಲದ ಮಹೇಂದ್ರ ಕುಮಾರ್ ಎಂಬುವವರ ಬ್ಯಾಗ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್​ನಲ್ಲಿ ಎರಡು ಕೋಟಿ ರೂ. ನಗದು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಕೂಡಲೇ ಆತನನ್ನ ವಶಕ್ಕೆ ಪಡೆದು ನಗದು ಜಪ್ತಿ ಮಾಡಿ ವಿಚಾರಣೆ ನಡೆಸಿದ್ದಾರೆ. ಯಾವುದೇ ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿರುವುದು ಖಚಿತವಾಗುತ್ತಿದ್ದಂತೆ ಖುದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆ ಇಬ್ಬರು ಐಟಿ ಅಧಿಕಾರಿಗಳು ಬೆಳಗಾವಿಯಲ್ಲಿ ಠೀಕಾಣಿ ಹೂಡಿದ್ದು ಅವರಿಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: Karnataka Election; ದಾಖಲೆ ಇಲ್ಲದ ಲಕ್ಷ ಲಕ್ಷ ನಗದು, ಚಿನ್ನ ವಶ; ಇಂದು ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ಕಿತು? ಇಲ್ಲಿದೆ ನೋಡಿ

ಮಂಗಳವಾರವಷ್ಟೇ ಹಳಿಯಾಳದಿಂದ ಬೆಳಗಾವಿಗೆ ಯಾವುದೇ ದಾಖಲೆ ಇಲ್ಲದೆ ಒಯ್ಯುತ್ತಿದ್ದ 53 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ಖಾನಾಪುರ ತಾಲೂಕಿನ ಲಿಂಗನಮಠ ಚೆಕ್ ಪೋಸ್ಟ್​​​ನಲ್ಲಿ ಪೊಲೀಸರು ಜಪ್ತಿ ಮಾಡಿಕೊಂಡು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜತೆಗೆ, ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 7.70 ಲಕ್ಷ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ ಒಂಬತ್ತು ಕೋಟಿ ರೂಪಾಯಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಎರಡೂವರೆ ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

-ಸಹದೇವ ಮಾನೆ ಟಿವಿ9 ಬೆಳಗಾವಿ